ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಬೆಲೆ ಕೃತಿಯಲ್ಲಿ ನೋಡಾ!

ಅಕ್ಷರ ಗಾತ್ರ

ಮಾತಿನ ಬೆಲೆಯನ್ನು ಕೃತಿಯಲ್ಲಿ ನೋಡಾ! ಮಹಾಭಾರತದ ಉದ್ದಕ್ಕೂ ರಾಜಕೀಯದ ಹಲವು ಸಿದ್ಧಾಂತಗಳು ಪ್ರತಿಪಾದಿತವಾಗಿವೆ. ಇಡಿಯ ಮಹಾಭಾರತವೇ ಒಂದು ರಾಜಕೀಯಪಠ್ಯದಂತೆ ಇದೆ ಎಂದರೂ ತಪ್ಪಲ್ಲ. ಧರ್ಮಕ್ಕೂ ಅಧಿಕಾರಕ್ಕೂ ನಡೆಯುವ ನಿರಂತರ ಸಂಘರ್ಷವನ್ನು ಅದು ಬೇರೆ ಬೇರೆ ನೆಲೆಗಳಲ್ಲಿ ನಿರೂಪಣೆ ಮಾಡಿದೆ. ‘ಉದ್ಯೋಗಪರ್ವ’ದಲ್ಲಿ ಬರುವ ಮಾತೊಂದು ಹೀಗಿದೆ:

ನ ಸಾ ಸಭಾ ಯತ್ರ ನ ಸಂತಿ ವೃದ್ಧಾ
ನ ತೇ ವೃದ್ಧಾ ಯೇ ನ ವದಂತಿ ಧರ್ಮಂ |
ನಾಸೌ ಧರ್ಮೋ ಯತ್ರ ನ ಸತ್ಯಮಸ್ತಿ
ನ ತತ್‌ ಸತ್ಯಂ ಯತ್‌ ಛಲೇನಾಭ್ಯುಪೇತಮ್‌ ||

ಇದರ ಸರಳವಾದ ಅರ್ಥ ಹೀಗೆ: ‘ಎಲ್ಲಿ ವೃದ್ಧರಿಲ್ಲವೋ ಅದು ಸಭೆಯಲ್ಲ. ಯಾರು ಧರ್ಮವನ್ನು ನುಡಿಯುವುದಿಲ್ಲವೋ ಅವರು ವೃದ್ಧರಲ್ಲ. ಎಲ್ಲಿ ಸತ್ಯವಿಲ್ಲವೋ ಅದು ಧರ್ಮವಲ್ಲ; ಯಾವುದು ಹಟದಿಂದ ಕೂಡಿದ್ದೋ ಅದು ಸತ್ಯವಲ್ಲ.’

ರಾಜನ ಸಭೆ ಹೇಗೆ ನಡೆಯಬೇಕು – ಎನ್ನುವುದನ್ನು ಈ ಶ್ಲೋಕ ಹೇಳುತ್ತಿದೆ. ವೃದ್ಧರಿಲ್ಲದ ಸಭೆ ಅದು ಸಭೆಯೇ ಅಲ್ಲ – ಎನ್ನುವುದು ಇಲ್ಲಿಯ ನಿಲುವು. ವೃದ್ಧರು ಎಂದರೆ ವಯಸ್ಸಾದವರು ಎಂದು ತಾನೆ? ವಯಸ್ಸಾದವರು ಎಂದರೆ ವಯಸ್ಸಿನಿಂದ ದೊಡ್ಡವರು ಎನ್ನುವುದನ್ನು ಮಹಾಭಾರತ ನಿರಾಕರಿಸುತ್ತಿದೆ; ಯಾರು ಧರ್ಮವನ್ನು ನುಡಿಯುತ್ತಾರೆಯೋ ಅವರು ವೃದ್ಧರು ಎನ್ನುವ ಮೂಲಕ ಸುಲಭವಾಗಿ ಕಾಣುತ್ತಿದ್ದ ವ್ಯಾಖ್ಯಾನವನ್ನು ಅದು ಗಂಭೀರವಾಗಿಸಿದೆ. ವಯಸ್ಸಿನ ಹಿರಿತನಕ್ಕಿಂತಲೂ ಧರ್ಮದ ನಡೆವಳಿಕೆಯಿಂದ ಒದಗುವ ಹಿರಿತನ ಮುಖ್ಯ. ಇನ್ನೂ ಮುಂದುವರೆದು ಧರ್ಮ ಎಂದರೇನು – ಎನ್ನುವುದನ್ನೂ ಹೇಳುತ್ತಿದೆ. ಧರ್ಮ ಎಂದರೆ ಸತ್ಯ – ಎಂದು ಸಮೀಕರಿಸಿದೆ. ಹಾಗಾದರೆ ಸತ್ಯ ಎಂದರೇನು? ಯಾವುದು ಹಟದಿಂದ ಕೂಡಿರುವುದಿಲ್ಲವೋ ಅದೇ ಸತ್ಯ!

ಈ ಶ್ಲೋಕದ ಮೊದಲನೆಯ ಸಾಲು ಸುಲಭವಾಗಿ ಕಂಡಷ್ಟು ಅನಂತರದ ಸಾಲುಗಳು ಸುಲಭವಾಗಿಲ್ಲ; ಕ್ರಮೇಣ ಒಂದೊಂದೇ ಸಾಲು ಹೆಚ್ಚೆಚ್ಚು ಜಟಿಲವಾಗುತ್ತಹೋಗಿವೆ. ಹಿರಿಯರು ಇಲ್ಲದ ಸಭೆ ಅದು ಸಭೆಯೇ ಅಲ್ಲ ಎಂದಾಗ ಅದು ಸುಲಭವಾಗಿ ಅರ್ಥವಾಗುತ್ತದೆ. ಆದರೆ ವಯಸ್ಸಿಗೂ ಧರ್ಮಕ್ಕೂ ಸಂಬಂಧವಿಲ್ಲ ಎಂದಾಗ ಈ ಮಾತು ಜಟಿಲವಾಯಿತು. ಸತ್ಯ ಎಂದರೇನು ಎಂದೂ ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳಬಹುದು; ಆದರೆ ಹಟದಿಂದ ಕೂಡಿರುವುದು ಸತ್ಯವಲ್ಲ ಎಂದಾಗ ಈ ಮಾತಿನ ಅರ್ಥವನ್ನು ಗ್ರಹಿಸುವುದು ಸುಲಭವಲ್ಲವಷ್ಟೆ!

ಕೆಲವೊಂದು ಸಂಸ್ಥೆಗಳು ಕೆಲವೊಂದು ನಿಯಮಗಳ ಪ್ರಕಾರ ನಡೆಯುತ್ತವೆ. ಅದು ಹಿಂದಿನ ರಾಜಸಭೆ ಇರಬಹುದು; ಅಥವಾ ಇಂದಿನ ಶಾಸನಸಭೆ ಇರಬಹುದು. ಆದರೆ ಈ ನಿಯಮಗಳ ದಿಟವಾದ ತಾತ್ಪರ್ಯ ಏನೆಂದು ತಿಳಿದುಕೊಳ್ಳದಿದ್ದರೆ ಆ ಸಂಸ್ಥೆಗಳು ಅವುಗಳ ಮೌಲ್ಯವನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಹಿರಿಯರು ಸಭೆಯಲ್ಲಿರಬೇಕು – ಎಂದು ನಿರೀಕ್ಷಿಸುವುದು ಅವರ ಅನುಭವದ ಕಾರಣಕ್ಕಾಗಿ. ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ವಿಚಕ್ಷಣತೆ ಅವರಲ್ಲಿ ಇರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ‘ಹಿಂದೆ ಇಂಥದೇ ಸಂದರ್ಭದಲ್ಲಿ ಹೀಗೆ ನಡೆದುಕೊಂಡಿದ್ದರಿಂದ ಹೀಗಾಯಿತು, ಹೀಗಾಗಲಿಲ್ಲ’ ಎಂಬ ಆತ್ಮಾವಲೋಕನಕ್ಕೂ ಅವರಿಗೆ ಹೆಚ್ಚಿನ ಅವಕಾಶ ಇರುತ್ತದೆ. ಹೀಗಾಗಿ ಮೌಲ್ಯಾಮೌಲ್ಯಗಳು, ಸರಿ–ತಪ್ಪುಗಳ ವಿಚಾರಣೆ ನಡೆಯುವ ಸಭೆಗಳಲ್ಲಿ ಅನುಭವಸ್ಥ ಹಿರಿಯರು ಇರಲಿ ಎನ್ನುವುದು ಅಪೇಕ್ಷಣೀಯ. ಆದರೆ ಎಲ್ಲ ಹಿರಿಯರಿಗೂ ಇಂಥದೊಂದು ಮೌಲ್ಯಮೀಮಾಂಸೆಯ ಶಕ್ತಿ ಇರುತ್ತದೆ ಎನ್ನುವಂತಿಲ್ಲ. ಈ ವಿವೇಕ ಅನುಭದಿಂದಲೂ ಬರಬಹುದು, ಅಧ್ಯಯನದಿಂದಲೂ ಬರಬಹುದು, ಲೋಕಜ್ಞಾನದಿಂದಲೂ ಬರಬಹುದು. ಆದುದರಿಂದಲೇ ವಯಸ್ಸಿನಿಂದ ಹಿರಿಯರಾದವರು ಹಿರಿಯರಲ್ಲ, ಧರ್ಮವನ್ನು ಬಲ್ಲವರೇ ದಿಟವಾದ ಹಿರಿಯರು ಎನ್ನುತ್ತದೆ, ಮಹಾಭಾರತ. ಧರ್ಮಬುದ್ಧಿಯೇ ಹಿರಿತನ; ಹಿರಿತನವೇ ಧರ್ಮಬುದ್ಧಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಆದರೆ ಇಂದಿನ ಎಲ್ಲ ಸಂಸ್ಥೆಗಳು ಕೂಡ ಕೇವಲ ವಾಚ್ಯಾರ್ಥವನ್ನು ಮಾತ್ರವೇ ನಂಬಿಕೊಂಡಂತಿವೆ. ಶಾಸನಸಭೆಯನ್ನು ಪ್ರವೇಶಿಸುವ ರಾಜಕಾರಣಿಗಳು ಸಂವಿಧಾನವನ್ನು ಉಳಿಸುತ್ತೇವೆಂದೂ ದೇಶದ ಉದ್ಧಾರಕ್ಕಾಗಿ ಶ್ರಮಿಸುತ್ತೇವೆಂದೂ ಪ್ರತಿಜ್ಞೆಮಾಡಿ, ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಆದರೆ ಅವರು ಆ ಪ್ರತಿಜ್ಞೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆಯೆ? ಇದು ಪ್ರಶ್ನೆ! ವೈದ್ಯರು ಕೂಡ ವೃತ್ತಿಗಿಳಿಯುವ ಮೊದಲು ಪ್ರಮಾಣವನ್ನು ಮಾಡುತ್ತಾರೆ; ಅವರೂ ತಮ್ಮ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆಯೆ? ಮದುವೆಯ ಸಮಯದಲ್ಲಿ ದಂಪತಿಗಳೂ ಪ್ರತಿಜ್ಞೆಮಾಡುತ್ತಾರೆ; ಅವರೂ ಅದನ್ನು ಉಳಿಸಿಕೊಳ್ಳುತ್ತಿದ್ದಾರೆಯೆ? ನಮ್ಮ ಮಾತು ಕ್ರಿಯೆಯ ಹಾದಿಯಲ್ಲಿ ನಡೆದಾಗ ಮಾತೆಲ್ಲವೂ ಬೆಳಕಾಗುತ್ತದೆ; ಹೀಗೆ ಮಾತಿಗೂ ಕೃತಿಗೂ ಬೆಳಕನ್ನು ಕೊಡಬೇಕಾದವರು ನಾವೇ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT