ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದ ಕಲಾಪ: ರಾಜಕೀಯ ಶಿಕ್ಷಣ

ಸಂಸದೀಯ ಕಲಾಪ ಕುರಿತ ಅಂಬೇಡ್ಕರ್‌ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ
Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಬಿ.ಎಸ್‌. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಕೋರುವ (ಮೇ 19) ಕಲಾಪದ ನೇರ ಪ್ರಸಾರಕ್ಕೆ ನಿರ್ದೇಶಿಸಿ ಸುಪ್ರೀಂ ಕೋರ್ಟ್ ಒಳ್ಳೆಯ ಕೆಲಸ ಮಾಡಿತು. ಸಂಸದೀಯ ಪ್ರಜಾಸತ್ತೆಯಲ್ಲಿ ಜನರಿಗೆ ಅದರ ನಡಾವಳಿಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.

ಆ ಕಾರಣಕ್ಕಾಗಿ ನೇರಪ್ರಸಾರ ಮಾಡಿದ್ದು ಅಕ್ಷರಶಃ ಸೂಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪ ಕುರಿತ ಅಂಬೇಡ್ಕರ್‌ ಅವರ ವಿಚಾರಗಳನ್ನು (ಅಂಬೇಡ್ಕರ್ ಬರಹಗಳು, ಇಂಗ್ಲಿಷ್, ಸಂ. 17, ಭಾಗ 3) ತಿಳಿದುಕೊಳ್ಳುವುದು ಅಥವಾ ಮೊನ್ನೆ ನಡೆದ ಅಧಿವೇಶನವನ್ನು ಅಂಬೇಡ್ಕರ್ ಅವರ ಆ ವಿಚಾರಗಳ ಜೊತೆ ಹೋಲಿಸುವುದು ಅತ್ಯಗತ್ಯವಾಗುತ್ತದೆ.

ನೇರಪ್ರಸಾರದ ಬಗ್ಗೆ ಅಂಬೇಡ್ಕರ್‌ ಹೇಳಿರುವುದು: ‘ಎಲ್ಲ ಶಾಸನಸಭೆಗಳು ಮುಚ್ಚಿದ ಗೋಡೆಗಳ ನಡುವೆ ಚರ್ಚೆಗಳನ್ನು ನಡೆಸುವ ನಿಯಮ ಹೊಂದಿವೆ. ಅಲ್ಲಿ ಪ್ರಶ್ನೆಗಳನ್ನು ಹಾಕಲಾಗುತ್ತದೆ. ಹಾಗೆಯೇ ಚರ್ಚೆಗೂ ಅವಕಾಶವಿರುತ್ತದೆ. ಸದನದಲ್ಲಿ ನಡೆದ ಆ ಚರ್ಚೆಯು ಆ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಮಹತ್ವ ಹೊಂದಿರುವುದಿಲ್ಲ. ಬದಲಿಗೆ ಅದು ವ್ಯಾಪಕವಾದ ಮಹತ್ವ ಹೊಂದಿರುತ್ತದೆ, ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತದೆ.

ಆ ಕಾರಣಕ್ಕೆ ಸದನದ ಚರ್ಚೆಗಳು ಉನ್ನತ ಮಟ್ಟದ್ದಾಗಿದ್ದರೆ ಮತ್ತು ಅದು ಸೂಕ್ತವಾಗಿ ಪತ್ರಿಕೆಗಳಲ್ಲಿ ವರದಿಯಾದರೆ ಜನಸಾಮಾನ್ಯರಿಗೆ ಅದಕ್ಕಿಂತ ಶ್ರೇಷ್ಠ ರಾಜಕೀಯ ಶಿಕ್ಷಣ ಮತ್ತೊಂದಿರಲಿಕ್ಕಿಲ್ಲ’. ನಿಜ, ಅಂಬೇಡ್ಕರರು ಅಂದು ಪತ್ರಿಕಾ ವರದಿ ಎಂದಿದ್ದರು. ಆದರೆ ಈಗ ನೇರಪ್ರಸಾರ ಸಾಧ್ಯ ಆಗಿರುವುದರಿಂದ ಅವರು ಹೇಳಿರುವಂತೆ ಅದರ ಮೂಲಕ ಜನರಿಗೆ ಅಗತ್ಯ ರಾಜಕೀಯ ಶಿಕ್ಷಣವಂತೂ ಖಂಡಿತ ದೊರಕಿದೆ.

ಮೊನ್ನೆ ನಡೆದ ಕಲಾಪದಲ್ಲಿ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯನವರು ಆಗಮಿಸುತ್ತಲೇ ಸದನದ ಸದಸ್ಯರೆಲ್ಲರೂ ಎದ್ದು ನಿಂತರು. ಸ್ಪೀಕರ್ ಅವರು ಶಾಸಕರ ಸಮೂಹ ದಿಂದಲೇ ಆಯ್ಕೆಯಾಗಿದ್ದರೂ ಆ ಸ್ಥಾನಕ್ಕೆ ಅದರದೇ ಘನತೆ ಇರುವುದು ಸಾರ್ವಜನಿಕರಿಗೆ ನಿಚ್ಚಳವಾಗಿ ತಿಳಿಯಿತು. ಈ ಬಗ್ಗೆ ಲಂಡನ್‍ನ ಹೌಸ್ ಆಫ್ ಕಾಮನ್ಸ್ ಅನ್ನು ಉಲ್ಲೇಖಿಸಿ ಅಂಬೇಡ್ಕರ್‌ ‘ಸ್ಪೀಕರ್‌ ಸೂಚನೆಗೆ ಸದಸ್ಯರು ಸಂಪೂರ್ಣ ವಿಧೇಯತೆ ತೋರಬೇಕು. ಸ್ಪೀಕರ್‌ ರೂಲಿಂಗ್‌ ಅನ್ನು ಯಾರೂ ಪ್ರಶ್ನಿಸಬಾರದು. ಸ್ಪೀಕರ್‌ ಎದ್ದು ನಿಂತು ಮಾತನಾಡುತ್ತಿದ್ದರೆ ಸದಸ್ಯರು ಕುಳಿತುಕೊಂಡು ಕೇಳಬೇಕು.

ಆಗ ಯಾರೂ ನಿಲ್ಲಬಾರದು. ಸ್ಪೀಕರ್‌ ಅನುಮತಿ ಇಲ್ಲದೆ ಯಾವುದೇ ಸದಸ್ಯ ಮಾತನಾಡಲು ಆರಂಭಿಸುವಂತಿಲ್ಲ. ಅನುಮತಿ ಇಲ್ಲದೆ ಮಾತನಾಡಿದರೆ ಅಂತಹ ಸದಸ್ಯರನ್ನು ಸ್ಪೀಕರ್ ದುರುಗುಟ್ಟಿ ನೋಡಬಹುದು...’ ಎಂದು ಸ್ಪೀಕರ್‌ ಸ್ಥಾನದ ಮಹತ್ವವನ್ನು ವಿವರಿಸಿದ್ದಾರೆ. ಆಶ್ಚರ್ಯವೆಂದರೆ ಮೊನ್ನೆ ಬೋಪಯ್ಯನವರ ನಡವಳಿಕೆಯು ಅಂಬೇಡ್ಕರ್‌ ಅವರ ಆ ಬರಹಗಳಂತೆ ಗಾಂಭೀರ್ಯದಿಂದ ಕೂಡಿತ್ತು! ಸದಸ್ಯರ ವರ್ತನೆ ಕೂಡ ಅದೇ ಮಾದರಿಯಲ್ಲಿತ್ತು!

ಲಾಸ್ಕಿ ಎಂಬುವರ ಹೇಳಿಕೆ ಉಲ್ಲೇಖಿಸುವ ಅಂಬೇಡ್ಕರ್‌ ‘ಸಂಸದೀಯ ಸರ್ಕಾರವೆಂದರೆ ಚರ್ಚೆಯ ಮೂಲಕ ನಡೆಯುವ ಸರ್ಕಾರವೇ ಹೊರತು ಕೈಕೈ ಮಿಲಾಯಿಸುವುದಲ್ಲ’ ಎನ್ನುತ್ತಾರೆ.

ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ಸದಸ್ಯರು ಕೈಕೈ ಮಿಲಾಯಿಸುವ ಹಂತಕ್ಕೆ ಅಪರೂಪಕ್ಕೂ ಹೋಗದೆ ಸದಾ ಚರ್ಚೆಯ ಮೂಲಕವೇ ನಿರ್ಧಾರ ತೆಗೆದುಕೊಳ್ಳುವುದನ್ನು ಮತ್ತು ಫ್ರೆಂಚ್ ಪಾರ್ಲಿಮೆಂಟ್‍ನಲ್ಲಿ ಸದಸ್ಯರು ಕೈಕೈ ಮಿಲಾಯಿಸುತ್ತಿದ್ದುದನ್ನು ಅಂಬೇಡ್ಕರ್‌ ಉಲ್ಲೇಖಿಸುತ್ತಾರೆ. ಮೊನ್ನೆ ಸದನದಲ್ಲಿ ಯಾಕೆ ಅಷ್ಟೊಂದು ಸಂಖ್ಯೆಯ ಮಾರ್ಷಲ್‍ಗಳನ್ನು ನಿಯೋಜಿಸಲಾಗಿತ್ತು ಎಂಬುದನ್ನು ಅಂಬೇಡ್ಕರರ ಈ ಬರಹಗಳ ಹಿನ್ನೆಲೆಯಲ್ಲಿ ಎಂಥವರಾದರೂ ಅರಿತುಕೊಳ್ಳಬಹುದು.

ಮೊನ್ನೆ ಯಡಿಯೂರಪ್ಪನವರಿಗೆ ವಿಶ್ವಾಸಮತದ ಗೊತ್ತುವಳಿ ಮಂಡಿಸಲು ಸ್ಪೀಕರ್‌ ಸೂಚಿಸಿದರು. ಆಗ ಎದ್ದು ನಿಂತ ಯಡಿಯೂರಪ್ಪ ಗೊತ್ತುವಳಿಯ ಬಗ್ಗೆ ಗಮನಿಸದೆ ಭಾಷಣ ಮಾಡಲು ಪ್ರಾರಂಭಿಸಿದರು. ಆಗ ವಿರೋಧ ಪಕ್ಷದ ಸಾಲಿನಲ್ಲಿದ್ದ ಆರ್.ವಿ.ದೇಶಪಾಂಡೆ ಮತ್ತು ಸಿದ್ದರಾಮಯ್ಯನವರು ‘ಮೊದಲು ಗೊತ್ತುವಳಿ ಮಂಡಿಸಿ’ ಎಂದು ಆಗ್ರಹಿಸಿದರು.

ಅವರ ಆಗ್ರಹಕ್ಕೆ ಮಣಿದ ಯಡಿಯೂರಪ್ಪ ವಿಶ್ವಾಸಮತದ ಒಂದು ಸಾಲಿನ ಗೊತ್ತುವಳಿ ಮಂಡಿಸಿ, ಭಾಷಣ ಮುಂದುವರೆಸಿದರು. ಈ ಬಗ್ಗೆ ಅಂಬೇಡ್ಕರ್‌ ‘ಸಂಸದೀಯ ಕಲಾಪ ಕುರಿತು ಅನೇಕ ನಿಯಮಗಳಿವೆ. ಅದರಲ್ಲಿ ಮೇ ಎಂಬುವರ ಸಂಸದೀಯ ನಿಯಮದ ಅಭ್ಯಾಸವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ. ಅದರ ಪ್ರಕಾರ ಗೊತ್ತುವಳಿ ಮಂಡನೆಯಾಗದೆ ಯಾವುದೇ ಚರ್ಚೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ. ಸಿದ್ದರಾಮಯ್ಯ ಮತ್ತು ದೇಶಪಾಂಡೆ ‘ಮೊದಲು ಗೊತ್ತುವಳಿ ಮಂಡನೆಯಾಗಲಿ’ ಎಂದು ಹೇಳಿದ್ದೇಕೆ ಎಂಬುದು ಅಂಬೇಡ್ಕರರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಖಂಡಿತ ಅರ್ಥವಾಗುತ್ತದೆ.

ಇದಲ್ಲದೆ ಮೊನ್ನೆ ನಡೆದ ಅಧಿವೇಶನದಲ್ಲಿ ಯಡಿಯೂರಪ್ಪನವರು ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿದ್ದರು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತಿದ್ದರು. ಇದರಿಂದ ಅರ್ಥವಾಗುವುದು ಸದನದಲ್ಲಿ ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಕ್ಕೂ ಮಹತ್ವವಿದೆ ಎಂಬುದು.

ಈ ಬಗ್ಗೆ ಹೇಳುವ ಅಂಬೇಡ್ಕರ್‌ ‘ಪ್ರತಿ ಪ್ರಶ್ನೆಗೂ ಎರಡು ಮುಖಗಳಿವೆ ಎನ್ನುವುದಾದರೆ ಸಂಸದೀಯ ಪ್ರಜಾಸತ್ತೆಯಲ್ಲಿ ಜನರು ಆ ಪ್ರಶ್ನೆಯ ಅಂತಹ ಮತ್ತೊಂದು ಮುಖವನ್ನು ಅರಿಯುವುದು ಅತ್ಯಗತ್ಯ. ಆದ್ದರಿಂದ ಕ್ರಿಯಾಶೀಲ ವಿರೋಧ ಪಕ್ಷವೊಂದು ಅಗತ್ಯವಾಗಿ ಬೇಕಾಗುತ್ತದೆ ಮತ್ತು ಒಂದು ಮುಕ್ತ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷವೇ ಬಹುಮುಖ್ಯ ಅಂಶವಾಗುತ್ತದೆ. ವಿರೋಧ ಪಕ್ಷ ಇಲ್ಲ ಅಂದರೆ ಪ್ರಜಾಪ್ರಭುತ್ವ ಇರಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ.

ವಿರೋಧ ಪಕ್ಷಗಳು ಏಕಿರಬೇಕು ಎಂಬುದಕ್ಕೆ ಅಂಬೇಡ್ಕರ್‌ ಬ್ರಿಟನ್ ಮತ್ತು ಕೆನಡಾ ಸಂಸತ್‍ಗಳನ್ನು ಉಲ್ಲೇಖಿಸಿ ‘ಸರ್ಕಾರದಂತೆಯೇ ವಿರೋಧ ಪಕ್ಷ ಕೂಡ ಜೀವಂತ ಇರಬೇಕು ಎಂಬುದು ಈ ಎರಡು ದೇಶಗಳ ಜನರ ನಂಬಿಕೆ. ಏಕೆಂದರೆ ಸರ್ಕಾರವು ಸತ್ಯಾಂಶಗಳನ್ನು ಮುಚ್ಚಿಡಬಹುದು, ಸರ್ಕಾರ ಒಮ್ಮುಖ ಪ್ರಚಾರ ತಂತ್ರ ಅನುಸರಿಸಬಹುದು. ಆದರೆ ಪ್ರಬಲ ವಿರೋಧ ಪಕ್ಷವಿದ್ದರೆ ಸರ್ಕಾರದ ಇಂತಹ ತಂತ್ರಗಳನ್ನು ಬಯಲಿಗೆಳೆಯಬಹುದು’ ಎನ್ನುತ್ತಾರೆ.

ವಾಲ್ಟರ್ ಬೇಜ್‍ಹಾಟ್ ಎಂಬುವರು ‘ಸಂಸದೀಯ ಸರ್ಕಾರವೆಂದರೆ ಚರ್ಚೆಯ ಸರ್ಕಾರ’ ಎಂದಿರುವುದನ್ನು ಉಲ್ಲೇಖಿಸಿ ಅಂಬೇಡ್ಕರ್‌ ‘ಬೇಜ್‍ಹಾಟ್‌ ಅವರ ಈ ಹೇಳಿಕೆ ಸತ್ಯ’ ಎನ್ನುತ್ತಾ, ‘ಸಂಸದೀಯ ಸರ್ಕಾರದಲ್ಲಿ ಯಾವುದನ್ನೂ ಪರದೆಯ ಹಿಂದೆ ಅಥವಾ ಯಾವುದೇ ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮಾಡುವುದಿಲ್ಲ. ಪ್ರತಿಯೊಂದನ್ನೂ ಸದನದ ಮುಂದೆ ಒಂದು ಬಿಲ್ ಅಥವಾ ನಿರ್ಣಯ ಅಥವಾ ಗೊತ್ತುವಳಿಯ ರೂಪದಲ್ಲಿ ತರಬೇಕಾಗುತ್ತದೆ. ಚರ್ಚೆಯ ಮೂಲಕ ಒಂದು ನಿರ್ಣಯಕ್ಕೆ ಬರಬೇಕಾಗುತ್ತದೆ’ ಎನ್ನುತ್ತಾರೆ.

ಈ ಅಧಿವೇಶನದಿಂದ ಅರಿವಾದದ್ದು ಏನೆಂದರೆ ಸಂಸದೀಯ ಕಲಾಪ ಕುರಿತ ಅಂಬೇಡ್ಕರರ ಈ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಪ್ರಜಾಪ್ರಭುತ್ವದ ಯಶಸ್ಸಿಗೆ ಅವು ಮಾರ್ಗದರ್ಶಿಯಾಗುತ್ತವೆ ಎಂಬುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT