ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ – ರಷ್ಯಾ ಬಾಂಧವ್ಯ ಪುನರ್‌ವ್ಯಾಖ್ಯಾನಕ್ಕೆ ಮುನ್ನುಡಿ

Last Updated 23 ಮೇ 2018, 19:30 IST
ಅಕ್ಷರ ಗಾತ್ರ

‘ಮೊದಲು ಅಮೆರಿಕ’ ಎಂಬಂಥ ಸ್ವರಕ್ಷಣಾತ್ಮಕ ನಿಲುವು ಪ್ರತಿಪಾದಿಸುತ್ತಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಈ ನಿಲುವಿಗೆ ಪೂರಕವಾಗಿ, ನಿರ್ಬಂಧಗಳನ್ನು ಹೇರುವ ಮೂಲಕ ಅಮೆರಿಕ ವಿರೋಧಿಗಳನ್ನು ಪ್ರತಿರೋಧಿಸುವ ಕಾಯ್ದೆಯನ್ನು (ಕಾಟ್ಸಾ) ಟ್ರಂಪ್ ಆಡಳಿತ ಜಾರಿ ಮಾಡಿದೆ. ಈ ಕಾಯ್ದೆ ವ್ಯಾಪ್ತಿಗೆ ರಷ್ಯಾ, ಇರಾನ್‌ ಮತ್ತು ಉತ್ತರ ಕೊರಿಯಾ ಒಳಪಟ್ಟಿವೆ.

ಇದರಿಂದಾಗಿ, ಈ ರಾಷ್ಟ್ರಗಳ ಜೊತೆಗೆ ಭಾರತದ ವಾಣಿಜ್ಯ ವ್ಯವಹಾರಗಳಿಗೆ ಉಂಟಾಗುವ ಅಡೆತಡೆ ಕಳವಳಕಾರಿಯಾದುದು. ರಷ್ಯಾ ಜೊತೆಗಿನ   ರಕ್ಷಣಾ ಸಹಕಾರ ಹಾಗೂ ಇರಾನ್ ಜೊತೆಗಿನ ನಮ್ಮ ಆರ್ಥಿಕ ಪಾಲುದಾರಿಕೆಗಳಿಗೆ ಈ ನಿರ್ಬಂಧಗಳಿಂದಾಗಿ ಸೃಷ್ಟಿಯಾಗುವ ಇರಿಸುಮುರಿಸು ತೀವ್ರವಾದದ್ದು. ಈ ರಾಷ್ಟ್ರಗಳೊಂದಿಗೆ ವ್ಯವಹಾರ ಮುಂದುವರಿಸಿದಲ್ಲಿ ಭಾರತವೂ ಅಮೆರಿಕದ ನಿರ್ಬಂಧಗಳಿಗೆ ಒಳಗಾಗಬೇಕಾದ ಬೆದರಿಕೆ ಇದೆ.

ಇಂತಹ ಸಂದರ್ಭದಲ್ಲಿ ರಷ್ಯಾದ ನಗರ ಸೋಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಧ್ಯೆ ಅನೌಪಚಾರಿಕ ಶೃಂಗಸಭೆ ನಡೆದಿದೆ. ಪಶ್ಚಿಮ ರಾಷ್ಟ್ರಗಳಲ್ಲಿನ ಚುನಾವಣಾ ಪ್ರಚಾರಗಳಲ್ಲಿ ರಷ್ಯಾ ಹಸ್ತಕ್ಷೇಪದ ವರದಿ, ಬ್ರಿಟನ್‍ನ ನಗರವೊಂದರಲ್ಲಿ ರಷ್ಯಾದ ಮಾಜಿ ಗೂಢಚಾರನ ಮೇಲೆ ನಡೆದ ವಿಷದ ರಾಸಾಯನಿಕ ದಾಳಿ ಹಾಗೂ ರಷ್ಯಾದೊಂದಿಗೆ ಕ್ರಿಮಿಯಾ ವಿಲೀನ ಪ್ರಕರಣಗಳು– ಪಶ್ಚಿಮ ರಾಷ್ಟ್ರಗಳ ಜೊತೆಗಿನ ರಷ್ಯಾದ ಬಾಂಧವ್ಯವನ್ನು ಹದಗೆಡಿಸಿವೆ.

ಇಂತಹ ಸನ್ನಿವೇಶದಲ್ಲಿ ಚೀನಾಗೆ ಹತ್ತಿರವಾಗಿದೆ ರಷ್ಯಾ. ಇದು ಕೂಡ ಭಾರತಕ್ಕೆ ಆತಂಕ ತರುವ ಸಂಗತಿ. ಅಷ್ಟೇ ಅಲ್ಲ, ಪಾಕಿಸ್ತಾನದ ಜೊತೆಗೂ ರಷ್ಯಾದ ಬಾಂಧವ್ಯ ಬೆಳೆಯುತ್ತಿರುವುದನ್ನು ಭಾರತ ಪರಿಗಣಿಸದೇ ಇರುವುದು ಅಸಾಧ್ಯ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಡೆದಿರುವ ಮೋದಿ– ಪುಟಿನ್ ಅನೌಪಚಾರಿಕ ಶೃಂಗಸಭೆ ಮಹತ್ವದ್ದು.

ಕಳೆದ ತಿಂಗಳು ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್‍ ಜೊತೆ ವುಹಾನ್‍ನಲ್ಲಿ ಎರಡು ದಿನಗಳ ಅನೌಪಚಾರಿಕ ಶೃಂಗಸಭೆ ನಡೆಸಿದ ನಂತರ ಮೋದಿಯವರು ಪುಟಿನ್ ಜೊತೆ ಈ ಅನೌಪಚಾರಿಕ ಶೃಂಗಸಭೆ ನಡೆಸಿದ್ದಾರೆ.

ಟ್ರಂಪ್ ತುಳಿದಿರುವ ಮಾರ್ಗದಿಂದಾಗಿ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸಲು ಅಡೆತಡೆ ಅನುಭವಿಸುತ್ತಿರುವ ರಷ್ಯಾ, ಚೀನಾ ಹಾಗೂ ಭಾರತ-  ಈ ಮೂರೂ ರಾಷ್ಟ್ರಗಳು ಅನೌಪಚಾರಿಕ ಮಾತುಕತೆಗಳಿಗೆ ತೋರಿರುವ ಉತ್ಸಾಹ ಎದ್ದು ಕಾಣಿಸುವಂತಹದ್ದು.

ರಷ್ಯಾ ಹಾಗೂ ಚೀನಾ ಜೊತೆ ಏಕಕಾಲಕ್ಕೆ ಭಾರತ ಸ್ಪಂದಿಸಿರುವುದು ಅಪರೂಪದ ವಿದ್ಯಮಾನ. ಈ ಎರಡೂ ರಾಷ್ಟ್ರಗಳೊಂದಿಗೆ ಭಾರತ ವಾಣಿಜ್ಯ ವ್ಯವಹಾರ ಸಂಬಂಧ ಹೊಂದಿದೆ. ವಿಶೇಷವಾಗಿ ರಷ್ಯಾದ ಜೊತೆ ನೂರಾರು ಕೋಟಿ ರೂಪಾಯಿಗಳ ಶಸ್ತ್ರಾಸ್ತ್ರ ಒಪ್ಪಂದ ಇದೆ.

ಇಂಧನ ಸಹಕಾರ ಸಂಬಂಧಗಳೂ ಇವೆ. ನಿರ್ಬಂಧಗಳನ್ನು ಹೇರುವ ಅಮೆರಿಕದ ಹೊಸ ಕಾಯ್ದೆಯಿಂದಾಗಿ ಈ ಬಾಂಧವ್ಯಗಳಿಗೆ ಒದಗಲಿರುವ ಧಕ್ಕೆ ಬಗ್ಗೆ ಮೋದಿ– ಪುಟಿನ್ ಶೃಂಗಸಭೆಯಲ್ಲಿ ಚರ್ಚಿಸಲಾಯಿತು ಎನ್ನಲಾಗಿದೆ. ಅಲ್ಲದೆ ಅಮೆರಿಕದ ಹಸ್ತಕ್ಷೇಪ ಮೀರುವಂತಹ  ಹೊಸ ಭೌಗೋಳಿಕ ರಾಜಕೀಯ ಮಾದರಿಗೂ ಈ ಶೃಂಗಸಭೆ ಪ್ರೇರಕವಾಗುವಂತಿದೆ. ಅಂತರರಾಷ್ಟ್ರೀಯ ಬಾಂಧವ್ಯಗಳಲ್ಲಿ

ಟ್ರಂಪ್ ಪ್ರೇರಿತ ನಿಲುವುಗಳ ಅಸಮಂಜಸತೆಯ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶ ಇಲ್ಲಿದೆ. ಚೀನಾ ಜೊತೆಗಿನ ಸಂಬಂಧದಲ್ಲಿ ನಮಗೆ ಒಂದಿಷ್ಟು ಇರಿಸುಮುರಿಸು ಇರಬಹುದು. ಆದರೆ, ಭಾರತ ಹಾಗೂ ರಷ್ಯಾ ಮಧ್ಯದ ಸಂಬಂಧದಲ್ಲಿ ಈ ಬಗೆಯ ತಿಕ್ಕಾಟ ಅಷ್ಟೇನೂ ಇಲ್ಲ. ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯದಲ್ಲಿ ಸೋವಿಯತ್ ಯುಗದಲ್ಲಿದ್ದಂತಹ ಹೊಳಪು ಈಗ ಇಲ್ಲದೇ ಇರಬಹುದು.

ಆದರೆ ಎರಡೂ ರಾಷ್ಟ್ರಗಳು ಸ್ನೇಹದಿಂದಲೇ ಇವೆ. ಹೀಗಿದ್ದೂ ಈ ಬಾಂಧವ್ಯಕ್ಕೆ ನಿರಂತರ ಗಮನ ಬೇಕು. ಬಾಂಧವ್ಯ ವೃದ್ಧಿಯ ಪ್ರಯತ್ನಗಳಾಗುತ್ತಲೇ ಇರಬೇಕು. ಅನೇಕ ಜಾಗತಿಕ ವೇದಿಕೆಗಳಲ್ಲಿ ರಷ್ಯಾ ಹಾಕುವ ಮತವೂ ಭಾರತಕ್ಕೆ ಮುಖ್ಯ. ಭಾರತ ಮತ್ತು ರಷ್ಯಾ ಮಧ್ಯದ ದೀರ್ಘಕಾಲೀನ ಬಾಂಧವ್ಯವನ್ನು ಸದ್ಯದ ಜಾಗತಿಕ ರಾಜಕೀಯ ಸಂದರ್ಭದಲ್ಲಿ ಪುನರ್‌ ವ್ಯಾಖ್ಯಾನಿಸಬೇಕಾಗಿರುವುದು ಸದ್ಯದ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT