ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯ ಬಹುಮತ ಸಾಬೀತು ಅಧಿವೇಶನದತ್ತ ಎಲ್ಲರ ಚಿತ್ತ

Last Updated 24 ಮೇ 2018, 11:38 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಸರ್ಕಾರ ಮೇ 25ರಂದು(ಶುಕ್ರವಾರ) ಬಹುಮತ ಸಾಬೀತು ಪಡಿಸಬೇಕಿದೆ. ಆದ್ದರಿಂದ, ಎಲ್ಲರ ಚಿತ್ತ ನಾಳೆ ನಡೆಯುವ ಅಧಿವೇಶನದತ್ತ ನೆಟ್ಟಿದೆ.

ಈ ಸಂಬಂಧ ವಿಧಾನಸಭಾ ಅಧಿವೇಶನ ಕರೆಯಲಾಗಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ.

ಶುಕ್ರವಾರ ಬೆಳಿಗ್ಗೆ 12.15ಕ್ಕೆ ಅಧಿವೇಶನ ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ಸ್ಪೀಕರ್‌ ಆಯ್ಕೆ ನಡೆಯಲಿದೆ. ಸ್ಪೀಕರ್‌ ಸ್ಥಾನಕ್ಕೆ ಬಿಜೆಪಿಯಿಂದ ಎಸ್‌.ಸುರೇಶ್‌ಕುಮಾರ್‌, ಮೈತ್ರಿಕೂಟದಿಂದ ಕೆ.ಆರ್‌.ರಮೇಶ್‌ಕುಮಾರ್‌ ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣೆ ನಡೆಯಲಿದೆ. ಈ ಸ್ಥಾನ ಯಾರ ಪಾಲಾಗಲಿದೆ ಎಂಬುದು ಸಂಖ್ಯಾಬಲದ ಮೇಲೆ ನಿಂತಿದೆ ಹಾಗೂ ಕುತೂಹಲ ಕೆರಳಿಸಿದೆ.

ಅತ್ಯಂತ ಕಡಿಮೆ 37 ಸ್ಥಾನ ಪಡೆದ ಜೆಡಿಎಸ್, ಕಾಂಗ್ರೆಸ್‌ನ ಬೆಂಬಲ ಪಡೆದು ಮೈತ್ರಿ ಸರ್ಕಾರ ರಚನೆ ಮಾಡುತ್ತಿದೆ. ಇತ್ತ 104 ಸ್ಥಾನ ಪಡೆದ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಸದನದಲ್ಲಿ ಬಹುಮತಯಾಚಿಸಿ ಅಗ್ನಿಪರೀಕ್ಷೆಗೊಡ್ಡುವ ಮುನ್ನವೇ ವಿಧಾಯ ಭಾಷಣ ಮಾಡಿ, ರಾಜೀನಾಮೆ ಇತ್ತಿದ್ದರು. ಕೇವಲ 55 ತಾಸಿನ ಮುಖ್ಯಮಂತ್ರಿಯಾದರು.

ಈಗ ಬಹುಮತ ಯಾಚಿಸಿ, ಅದನ್ನು ಸಾಬೀತು ಪಡಿಸುವ ಅಗ್ನಿಪರೀಕ್ಷೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಮುಂದಿದೆ.

ಮೈತ್ರಿ ಕೂಟದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರನ್ನು ಪಕ್ಷದ ವರಿಷ್ಠರು ರೆಸಾರ್ಟ್‌ನಲ್ಲಿ ಇರಿಸಿದ್ದು ‘ಆಪರೇಷನ್‌ ಕಮಲ’ದ ಭೀತಿಯಿಂದ ಅವರ ಕಾವಲು ಕಾಯುತ್ತಿದ್ದಾರೆ.

ಇತ್ತ ಉಪ ಮುಖ್ಯಮಂತ್ರಿ ಸ್ಥಾನ ಸಿಗದೆ ಶಾಸಕ ಡಿ.ಕೆ.ಶಿವಕುಮಾರ್‌ ಅವರು ಮುನಿಸಿಕೊಂಡಿದ್ದು, ನಿನ್ನೆ ಪಕ್ಷದ ರಾಷ್ಟ್ರೀಯ ನಾಯಕರ ಮುಂದೆ ಅಸಮಾಧಾನ ಹೊರ ಹಾಕಿದ್ದಾರೆ. ಇಂಧನ ಸಚಿವ ಖಾತೆ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡನ್ನೂ ನೀಡಬೇಕು ಎಂದು ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಾಳೆ ಸದನದಲ್ಲಿ ಏನು ಬೇಕಾದರು ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT