ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟದಾಗೆ ಭಾವ ಮೀಟಿ...

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಮೂಕಿ ಚಿತ್ರ ಎಂದಾಕ್ಷಣ ಥಟ್ಟನೆ ನೆನಪಾಗೋದು ಕಮಲ್‌ಹಾಸನ್‌ ನಟಿಸಿದ ‘ಪುಷ್ಪಕ ವಿಮಾನ’. ಮೂರು ದಶಕ ಉರುಳಿದರೂ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ನಂತರ ‘ಮಿರರ್’ ಎಂಬ ಮಾತಿಲ್ಲದ ಚಿತ್ರವೂ ತೆರೆಕಂಡಿತ್ತು. ಆ ಬಳಿಕ ಸಾಕಷ್ಟು ಮೂಕಿ ಚಿತ್ರಗಳು ಬಿಡುಗಡೆಗೊಂಡರೂ ಪ್ರೇಕ್ಷಕರ ಮನತಟ್ಟಿದ್ದು ವಿರಳ. ಈಗ ಇದಕ್ಕೆ ಹೊಸ ಸೇರ್ಪಡೆ ‘ಪರಿಧಿ’ ಚಿತ್ರ. ಎಸ್‌.ಬಿ. ಶ್ರೀನಿವಾಸ್‌ ಈ ಚಿತ್ರದ ನಿರ್ದೇಶಕರು.

ಛಾಯಾಗ್ರಹಣ, ಹಿನ್ನೆಲೆ ಸಂಗೀತವೇ ಮೂಕಿ ಚಿತ್ರಗಳ ಜೀವಾಳ. ದೇಹ ಭಾಷೆಯ ಮೂಲಕ ನೋಡುಗರನ್ನು ಸೆಳೆಯುವುದು ನಿಜಕ್ಕೂ ಸವಾಲು. ಮೂವತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರುವ ರಾಜ್‌ಕಿರಣ್ ‘ಪರಿಧಿ’ ಚಿತ್ರದ ನಾಯಕ ನಟ. ಈ ಸಿನಿಮಾದ ಮೂಲಕ ಚಿತ್ರರಂಗದ ಪರಿಧಿಯಲ್ಲಿ ಭವಿಷ್ಯ ಕಂಡುಕೊಳ್ಳುವ ಉತ್ಸಾಹದಲ್ಲಿದ್ದಾರೆ.

‘ಮೂಕಿ ಚಿತ್ರ ಮಾಡಬೇಕೆಂಬ ಆಲೋಚನೆ ಹೊಳೆದಿದ್ದು ಆಕಸ್ಮಿಕ. ನಿರ್ದೇಶಕ ಶ್ರೀನಿವಾಸ್‌ ಅವರಿಗೆ ಪ್ರಯೋಗಾತ್ಮಕ ಚಿತ್ರ ಮಾಡಬೇಕೆಂಬ ಆಸೆ ಇತ್ತು. ಚಿತ್ರತಂಡದ ಎಲ್ಲರೊಟ್ಟಿಗೆ ಈ ಕುರಿತು ಚರ್ಚಿಸಿದರು. ಇದಕ್ಕೆ ಎಲ್ಲರ ಒಪ್ಪಿಗೆಯೂ ಸಿಕ್ಕಿತು. ಇಂತಹ ಪಾತ್ರದಲ್ಲಿ ನಟಿಸುವುದು ನಿಜಕ್ಕೂ ಸವಾಲು. ಚಿತ್ರಕ್ಕಾಗಿ ಸಿದ್ಧತೆಯ ಅವಶ್ಯಕತೆಯಿತ್ತು. ಹತ್ತು ದಿನಗಳ ಕಾಲ ಪಾತ್ರದ ನಿರ್ವಹಣೆ ಬಗ್ಗೆ ಕಾರ್ಯಾಗಾರವೂ ನಡೆಯಿತು. ಇದು ನನ್ನ ನಟನೆಗೆ ನೆರವಿಗೆ ಬಂತು’ ಎಂದು ಸಿನಿಮಾ ನಿರ್ಮಾಣದ ಹಿಂದಿನ ಕಥೆ ಬಿಚ್ಚಿಡುತ್ತಾರೆ ಅವರು.

ರಾಜ್‌ಕಿರಣ್‌ ಬಿ.ಎಸ್‌.ಸಿ. ಪದವೀಧರ. ಅವರು ಹುಟ್ಟಿ, ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಶಾಲಾ, ಕಾಲೇಜಿನ ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಗೀಳು ಅವರಿಗೆ ಸಿನಿಮಾ ರಂಗದತ್ತ ಕರೆತಂದಿತು. ಸಣ್ಣಪುಟ್ಟ ‍ಪಾತ್ರಗಳಲ್ಲಿ ನಟಿಸಿದ್ದ ಅವರಿಗೆ ಪೂರ್ಣ ಪ್ರಮಾಣದ ನಟನೆಗೆ ಅವಕಾಶ ಸಿಕ್ಕಿದ್ದು ಕಡಿಮೆ. ಈ ನಡುವೆ ಅವರು ನಾಯಕ ನಟನಾಗಿ ಅಭಿನಯಿಸಿದ ‘ಮಿಸ್ಡ್‌ಕಾಲ್’ ಚಿತ್ರ ಅವರ ವೃತ್ತಿಜೀವನಕ್ಕೆ ಹೊಸ ಚೈತನ್ಯ ನೀಡಲಿಲ್ಲ. ಬದುಕಿನ ಸಂಕ್ರಮಣದ ಸ್ಥಿತಿಯಲ್ಲಿ ಅವರ ನಟನೆಗೆ ಅವಕಾಶದ ಬಾಗಿಲು ತೆರೆದಿದ್ದು ‘ಪರಿಧಿ’ ಚಿತ್ರ.

‘ಮೂಕಿ ಚಿತ್ರದಲ್ಲಿ ಹಾವಭಾವ ಅತಿಮುಖ್ಯ. ಚಿತ್ರ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡುವಂತಿರಬೇಕು. ಆಗ ಮಾತ್ರ ಜನರು ಚಿತ್ರಮಂದಿರದತ್ತ ಬರುತ್ತಾರೆ. ನಾವು ಮಾಡಿದ ಪ್ರಯೋಗಕ್ಕೂ ಬೆಲೆ ಸಿಗುತ್ತದೆ’ ಎನ್ನುತ್ತಾರೆ ಅವರು.

‘ಚಿತ್ರದಲ್ಲಿ ನನ್ನದು ಜೀವ ಹೆಸರಿನ ಪಾತ್ರ. ಪಾರ್ಸೆಲ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತೇನೆ. ನನಗೆ ಐಶಾರಾಮಿ ಜೀವನ ನಡೆಸಬೇಕೆಂಬ ದುರಾಸೆ ಬೆಳೆಯುತ್ತದೆ. ತಾನು ಗೊತ್ತಿಲ್ಲದೆಯೇ ಅಪರಾಧ ಜಗತ್ತಿಗೆ ಕಾಲಿಡುತ್ತೇನೆ. ಅಲ್ಲಿಯವರೆಗೆ ನೆಮ್ಮದಿಯಾಗಿದ್ದ ಜೀವನ ಚಿತ್ರವಿಚಿತ್ರ ತಿರುವು ಪಡೆಯುತ್ತದೆ. ಗೊಂದಲದ ಗೂಡಿಗೆ ಬೀಳುತ್ತೇನೆ. ಕೊನೆಗೆ, ಇದಕ್ಕೆ ಕಾರಣವಾಗಿರುವ ಹಿನ್ನೆಲೆಯ ಅರಿವಾಗುತ್ತದೆ. ಆ ಪರಧಿಯಿಂದ ಹೊರಬರುತ್ತೇನೆ. ಇದನ್ನು ನಿರ್ದೇಶಕರು ಸೂಕ್ಷ್ಮವಾಗಿ ತೋರಿಸಿದ್ದಾರೆ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಾರೆ.

‘ವಾರಕ್ಕೆ ಏಳೆಂಟು ಚಿತ್ರಗಳು ತೆರೆಕಾಣುತ್ತಿರುವುದು ನಿಜ. ಸ್ಪರ್ಧೆ ಇರುವುದು ಸಹಜ. ಈ ಪೈಕಿ ನಾವು ಕೂಡ ಸ್ಪರ್ಧೆಗೆ ಜಿಗಿದಿದ್ದೇವೆ. ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎಂಬ ನಂಬಿಕೆ ನಮ್ಮದು’ ಎನ್ನುತ್ತಾರೆ ಅವರು.

ಯಾವುದೇ ಪಾತ್ರ ಸಿಕ್ಕರೂ ನಟಿಸಲು ರಾಜ್‌ಕಿರಣ್‌ ಸಿದ್ಧ. ಹೆಚ್ಚಾಗಿ ನೆಗೆಟಿವ್‌ ಶೇಡ್‌ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅವರಿಗೆ ಇಷ್ಟವಂತೆ. ‘ಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸುವ ಇಚ್ಛೆಯಿದೆ. ಮುಗ್ಧತೆ ಮೇಳೈಸಿದ ಪಾತ್ರಗಳಲ್ಲೂ ನಟಿಸಲು ಇಷ್ಟ’ ಎನ್ನುತ್ತಾರೆ ಅವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT