ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕನ ಕೊಂದಿದ್ದ 14 ಮಂದಿ ಜೈಲಿಗೆ

ಮಕ್ಕಳ ಕಳ್ಳನೆಂದು ಭಾವಿಸಿ ಥಳಿಸಿದ್ದ ಪ್ರಕರಣ * ಠಾಣೆ ಎದುರು ಬಂಧಿತರ ಸಂಬಂಧಿಕರ ಪ್ರತಿಭಟನೆ
Last Updated 24 ಮೇ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಕಳ್ಳನೆಂದು ಭಾವಿಸಿ, ಮನುಷ್ಯತ್ವವನ್ನೇ ಮರೆತು ಕಾಲುರಾಮ್‌ ಬಚ್ಚನ್‌ರಾಮ್ (26) ಎಂಬುವರನ್ನು ಥಳಿಸಿ ಕೊಂದಿದ್ದ ಆರೋಪದಡಿ ಮಹಿಳೆಯರು ಸೇರಿದಂತೆ 14 ಮಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಚಾಮರಾಜಪೇಟೆಯ ನಿವಾಸಿಗಳಾದ ಅನುಷಾ (30), ಸುಶೀಲಾ, ಇಂದ್ರಾ, ವಾಣಿ, ಆಂಥೋನಿ, ಅನ್‌ಬೂ, ವಸಂತ್‌ಕುಮಾರ್, ಗೋಪಿ, ಬಾಲನ್‌, ನಂದ, ತಿರುಮಲೇಶ್, ರಾಜೇಶ್ ಬಂಧಿತರು. ಇಬ್ಬರು ಬಾಲಕರೂ ಇದ್ದು, ಅವರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

‘ರಾಜಸ್ಥಾನ ನಿವಾಸಿಯಾಗಿದ್ದ ಕಾಲುರಾಮ್‌ ಅವರ ಕೈ– ಕಾಲುಗಳನ್ನು ಕಟ್ಟಿಹಾಕಿದ್ದ ಆರೋಪಿಗಳು, ಮನಬಂದಂತೆ ಥಳಿಸಿದ್ದರು. ತೀವ್ರ ರಕ್ತಸ್ರಾವವಾಗಿದ್ದ
ರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕಾಲುರಾಮ್‌ ಮೃತಪಟ್ಟಿದ್ದರು. ಅವರನ್ನು ಥಳಿಸುತ್ತಿದ್ದ ದೃಶ್ಯಗಳನ್ನು ಕೆಲವರು ಮೊಬೈಲ್‌ಗಳಲ್ಲಿ ಚಿತ್ರೀಕರಿ
ಸಿಕೊಂಡಿದ್ದರು. ಆ ದೃಶ್ಯಾವಳಿಗಳ ಆಧಾರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.

ಪೆನ್‌ಷನ್ ಮೊಹಲ್ಲಾದ ರಸ್ತೆಯಲ್ಲಿ ಸುತ್ತಾಡುತ್ತಿದ್ದ ವೇಳೆಯಲ್ಲೇ ಕಾಲುರಾಮ್‌ರನ್ನು ಬೆನ್ನಟ್ಟಿ ನಿವಾಸಿಗಳು ಕೃತ್ಯ ಎಸಗಿದ್ದಾರೆ. ಮರದ ದೊಣ್ಣೆ ಹಾಗೂ ಕ್ರಿಕೆಟ್‌ ಬ್ಯಾಟ್‌ಗಳಿಂದಲೂ ಹೊಡೆದಿರುವುದು ಅಮಾನವೀಯ. ಘಟನೆ ಬಗ್ಗೆ ನಿಯಂತ್ರಣ ಕೊಠಡಿಗೆ ಬಂದ ಮಾಹಿತಿ ಆಧರಿಸಿ ಹೊಯ್ಸಳ ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋದಾಗ, ಅವರಿಗೂ ಕೆಲವರು ಬೆದರಿಕೆ ಹಾಕಿದ್ದಾರೆ. ಅಂಥವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದರು.

ಟೈಲ್ಸ್‌ ಕೆಲಸಕ್ಕೆ ಬಂದಿದ್ದರು: ಮೃತ ಕಾಲುರಾಮ್‌ ಅವರಿಗೆ ತಂದೆ–ತಾಯಿ ಇರಲಿಲ್ಲ. ಟೈಲ್ಸ್‌ ಜೋಡಣೆ ಕೆಲಸ ಮಾಡುತ್ತಿದ್ದ ಅವರು, ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನೆಲೆಸಿರುವ ದೊಡ್ಡಪ್ಪನ ಮನೆಯಲ್ಲೇ ಬೆಳೆದಿದ್ದರು ಎಂದು ಪೊಲೀಸರು ಹೇಳಿದರು.

ರಾಜಸ್ಥಾನದಿಂದ ಪುಣೆಗೆ ಹೋಗಿದ್ದ ಅವರು, ಅಲ್ಲಿಯೇ ಕೆಲ ತಿಂಗಳು ಟೈಲ್ಸ್‌ ಜೋಡಣೆ ಕೆಲಸ ಮಾಡಿಕೊಂಡಿದ್ದರು. ಎರಡು ತಿಂಗಳ ಹಿಂದಷ್ಟೇ, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಸ್ನೇಹಿತರ ಕೊಠಡಿಯಲ್ಲಿ ಉಳಿದುಕೊಂಡು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ಹೇಳಿದರು.

’ಅವರ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಿದ್ದೇವೆ. ಘಟನೆ ಬಗ್ಗೆ ದೊಡ್ಡಪ್ಪ ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ನಗರಕ್ಕೆ ಬಂದ ಬಳಿಕವೇ ಮರಣೋತ್ತರ ಪರೀಕ್ಷೆ ಮಾಡಿಸಲಿದ್ದೇವೆ‘ ಎಂದು ಪೊಲೀಸರು ತಿಳಿಸಿದರು.

ಸಂಬಂಧಿಕರ ಪ್ರತಿಭಟನೆ: ಪ್ರಕರಣದ ಆರೋಪಿಗಳನ್ನು ಬಂಧಿಸುತ್ತಿದ್ದಂತೆ, ಅವರ ಸಂಬಂಧಿಕರು ಠಾಣೆಯ ಎದುರು ಸೇರಿ ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

‘ಯುವಕನ ಮೇಲೆ ನೂರಾರು ಜನ ಹಲ್ಲೆ ಮಾಡಿದ್ದಾರೆ. ಆದರೆ, ಪೊಲೀಸರು ನಮ್ಮ ಹುಡುಗರನ್ನಷ್ಟೇ ಬಂಧಿಸಿದ್ದಾರೆ. ಮಕ್ಕಳ ಕಳ್ಳರ ಬಗ್ಗೆ ಹಲವು ದಿನಗಳಿಂದ ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ನಲ್ಲಿ ಎಚ್ಚರಿಕೆ ಸಂದೇಶಗಳು ಬರುತ್ತಿವೆ. ಇದರಿಂದ ಹೆದರಿರುವ ಜನ, ಮಕ್ಕಳನ್ನು ಕದ್ದುಕೊಂಡು ಹೋಗಬಹುದು ಎಂದು ಭಾವಿಸಿ ಈ ರೀತಿ ಮಾಡಿದ್ದಾರೆ’ ಎಂದು ಪ್ರತಿಭಟನಾನಿರತ ಶೋಭಾ ಹೇಳಿದರು.

ಬಂಧಿತರ ಪೈಕಿ ಒಬ್ಬಾತನ ಪತ್ನಿ ಲಾವಣ್ಯ, ಗರ್ಭಿಣಿ. ಅವರು ಸಹ ಠಾಣೆ ಎದುರು ನಿಂತು ಪ್ರತಿಭಟಿಸಿದರು.

‘ನನ್ನ ಪತಿಯ ತಪ್ಪಿಲ್ಲದಿದ್ದರೂ ಪೊಲೀಸರು ಬಂಧಿಸಿದ್ದಾರೆ. ಆಟೊ ಚಾಲಕರೇ ಮೊದಲಿಗೆ ಯುವಕನನ್ನು ಥಳಿಸಿದ್ದರು. ನಂತರ, ರಂಗನಾಥ್ ಚಿತ್ರಮಂದಿರ ಬಳಿ ಕರೆತಂದಿದ್ದರು. ನಂತರವೇ ಯುವಕ ಮೃತಪಟ್ಟಿದ್ದಾನೆ’ ಎಂದು ಲಾವಣ್ಯ ಹೇಳಿದರು.

ಪ್ರತಿಭಟನೆ ವೇಳೆಯಲ್ಲೇ ಸಂಬಂಧಿಕರು, ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದರು. ಬಿಎಂಟಿಸಿ ಬಸ್‌ ಎದುರು ಮಲಗಿ ಘೋಷಣೆ ಕೂಗಿದರು. ಆಗ ಪೊಲೀಸರು, ಪ್ರತಿಭಟನಾಕಾರರನ್ನು ಚದುರಿಸಿದರು. ಈ ವೇಳೆ ತಳ್ಳಾಟ ಉಂಟಾಯಿತು. ವಾಹನಗಳ ದಟ್ಟಣೆಯೂ ಕಂಡುಬಂತು. ‌

‘ಸ್ವಯಂಪ್ರೇರಿತ ಪ್ರಕರಣ ದಾಖಲು’

‘ಯುವಕನನ್ನು ಕೊಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಡಿಸಿಪಿ ರವಿ ಚನ್ನಣ್ಣನವರ ತಿಳಿಸಿದರು.

‘ರಾಜ್ಯದ ಎಲ್ಲಿಯೂ ಮಕ್ಕಳ ಕಳ್ಳರು ಇಲ್ಲ. ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಅದಕ್ಕೆ ಸಾರ್ವಜನಿಕರು ಕಿವಿಗೊಡಬಾರದು. ಆಕಸ್ಮಾತ್, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ’ ಎಂದರು.

‘ಸುಳ್ಳು ಸಂದೇಶಗಳನ್ನು ಕಳುಹಿಸಿದ ಅಪರಿಚಿತರ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ, ಅಂಥ ಸಂದೇಶಗಳನ್ನು ವರ್ಗಾಯಿಸುವವರ (ಫಾರ್ವರ್ಡ್‌) ವಿರುದ್ಧವೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅವರು ಎಚ್ಚರಿಸಿದರು.

ಮಾನಸಿಕ ಅಸ್ವಸ್ಥೆ ಸೇರಿ ಮೂವರ ಮೇಲೆ ಹಲ್ಲೆ

ಕಾಲುರಾಮ್‌ ಅವರನ್ನು ಹೊಡೆದು ಕೊಂದ ಬೆನ್ನಲೇ ಮಾನಸಿಕ ಅಸ್ವಸ್ಥ ಮಹಿಳೆ ಸೇರಿದಂತೆ ಮೂವರನ್ನು ಮನಬಂದಂತೆ ಥಳಿಸಲಾಗಿದೆ.

ಶ್ರೀನಗರದಲ್ಲಿ ಬುಧವಾರ ರಾತ್ರಿ ಸುತ್ತಾಡುತ್ತಿದ್ದ ಮಹಿಳೆಯನ್ನು ಮಕ್ಕಳ ಕಳ್ಳಿ ಎಂದು ಭಾವಿಸಿದ್ದ ನಿವಾಸಿಗಳು, ಅವರನ್ನು ಬೆನ್ನಟ್ಟಿ ಹೊಡೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಶ್ರೀರಾಮಪುರ ಪೊಲೀಸರು, ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಾಕೊಲೇಟ್‌ ಕೊಟ್ಟು ಮಕ್ಕಳನ್ನು ಅಪಹರಿಸಲು ಮಹಿಳೆ ಬಂದಿದ್ದರು ಎಂದು ಅನುಮಾನಿಸಿದ್ದ ನಿವಾಸಿಗಳು, ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯ ಮುಖ ಹಾಗೂ ತಲೆಗೆ ಪೆಟ್ಟು ಬಿದ್ದಿದೆ. ಅವರ ವಿಚಾರಣೆ ನಡೆಸಿದಾಗ ಮಾನಸಿಕ ಅಸ್ವಸ್ಥೆ ಎಂಬುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದರು.

ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಮಂಜುನಾಥ್‌ ಹಾಗೂ ರಾಜ್‌ಕುಮಾರ್‌ ಎಂಬುವರ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ.

ಉದ್ದ ಗಡ್ಡ ಹಾಗೂ ಮೀಸೆ ಬಿಟ್ಟಿದ್ದ ಅವರಿಬ್ಬರು, ತಮ್ಮ ಪಾಡಿಗೆ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಮಕ್ಕಳ ಕಳ್ಳರೆಂದು ಭಾವಿಸಿ ಅವರನ್ನು ಬೆನ್ನಟ್ಟಿದ್ದ ಜನ, ಮನಬಂದಂತೆ ಥಳಿಸಿದ್ದಾರೆ. ಹೊಯ್ಸಳ ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಅವರಿಬ್ಬರನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜಮ್ಮು–ಕಾಶ್ಮೀರದ ವ್ಯಕ್ತಿಗೆ ಗಾಯ

ಮಕ್ಕಳ ಕಳ್ಳರೆಂದು ಭಾವಿಸಿ ಜಮ್ಮು ಮತ್ತು ಕಾಶ್ಮೀರ ಮೂಲದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದ ಪ್ರಕರಣ ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಗರದ ಅಲ್‌ ಮುಜಾಮಿಲ್‌ ಟ್ರಸ್ಟ್‌ ಸದಸ್ಯ ಝಹೂರ್‌ ಅಹಮ್ಮದ್‌ ಖಾನ್‌ (40) ಹಲ್ಲೆಗೊಳಗಾಗಿದ್ದಾರೆ. ಟ್ರಸ್ಟ್‌ಗೆ ದೇಣಿಗೆ ಸಂಗ್ರಹಿಸಲು ಬೆಂಗಳೂರಿಗೆ ಬಂದಿದ್ದ ಝಹೂರ್‌ ಇದೇ 23ರಂದು ಕೆ.ಜಿ ಹಳ್ಳಿಯ ಡೆವಿಸ್‌ ರಸ್ತೆಯಲ್ಲಿರುವ ಮನೆಗಳಲ್ಲಿ ದೇಣಿಗೆ ಸಂಗ್ರಹಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ರಮ್ಜಾನ್‌ ಹಬ್ಬದ ಸಂದರ್ಭವಾಗಿದ್ದರಿಂದ ದೇಣಿಗೆ ಸಂಗ್ರಹಕ್ಕೆ ಝಹೂರ್‌ ಅವರು ಕುಟುಂಬದೊಂದಿಗೆ ನಗರಕ್ಕೆ ಬಂದಿದ್ದಾರೆ. ಸ್ಥಳೀಯ ನಿವಾಸಿ
ಗಳು ಅವರನ್ನು ತಡೆದು, ಮಕ್ಕಳ ಕಳ್ಳರು ಎಂದು ಅನುಮಾನ ವ್ಯಕ್ತಪಡಿಸಿ, ಥಳಿಸಲು ಮುಂದಾಗಿದ್ದಾಗ ಅವರ ಪತ್ನಿ ಮತ್ತು ಮಗಳು ಅಲ್ಲಿಂದ ಓಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಪತ್ನಿ, ಮಗಳು ಓಡಿಹೋಗಿದ್ದರಿಂದ ಮತ್ತಷ್ಟು ಅನುಮಾನಗೊಂಡ ಸಾರ್ವಜನಿಕರು ದೊಣ್ಣೆ, ಕಲ್ಲುಗಳಿಂದ ಝಹೂರ್‌ ಅವರಿಗೆ ಹೊಡೆದಿದ್ದಾರೆ. ಬಳಿಕ ಕೆಲ ಸ್ಥಳೀಯರೇ ಅವರನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಝಹೂರ್‌ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರ ಕುಟುಂಬದವರಿಗೆ ಒಪ್ಪಿಸಲಾಗಿದೆ. ತಪ್ಪು ತಿಳಿವಳಿಕೆಯಿಂದ ಘಟನೆ ನಡೆದಿದೆ ಎಂದು ಅವರಿಗೆ ವಿವರಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT