ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರದ ಸಂಧಾನ ಸಭೆ ವಿಫಲ

ರಾಜರಾಜೇಶ್ವರಿನಗರ: ಕಣದಿಂದ ಹಿಂದೆ ಸರಿಯಲು ಅಭ್ಯರ್ಥಿಗಳ ನಕಾರ
Last Updated 24 ಮೇ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣಾ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಜೆಡಿಎಸ್–ಕಾಂಗ್ರೆಸ್ ನಾಯಕರು ಗುರುವಾರ ಸಂಜೆ ನಡೆಸಿದ ಸಂಧಾನಸಭೆ ವಿಫಲವಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸುಮಾರು ಒಂದೂವರೆ ತಾಸು ಸಂಧಾನ ಸಭೆ ನಡೆಯಿತು. ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಅವರ ಸೋದರ ಡಿ.ಕೆ.ಸುರೇಶ್, ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ, ಜೆಡಿಎಸ್ ಅಭ್ಯರ್ಥಿ ಜಿ.ಎಚ್.ರಾಮಚಂದ್ರ ಸೇರಿದಂತೆ ಉಭಯ ಪಕ್ಷಗಳ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಕಣದಿಂದ ಹಿಂದೆ ಸರಿಯಲು ಮುನಿರತ್ನ ಹಾಗೂ ರಾಮಚಂದ್ರ ಇಬ್ಬರೂ ನಿರಾಕರಿಸಿದರು.

‘ರಾಜರಾಜೇಶ್ವರಿನಗರ ಹಾಗೂ ಜಯನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಈಗಾಗಲೇ ಪ್ರಚಾರದ ಮೂಲಕ ಮತದಾರರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಹೀಗಾಗಿ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕು. ಅವರಿಗೆ ಜೆಡಿಎಸ್ ನಾಯಕರು ಬೆಂಬಲ ಸೂಚಿಸಬೇಕು. ಎರಡೂ ಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿದರೆ, ಮತಗಳ ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿಗೆ ಲಾಭವಾಗುತ್ತದೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

‘ರಾಮನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ನಮ್ಮದು. ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಇಲ್ಲಿ ನಮಗೆ ಸಹಕಾರ ನೀಡಿ’ ಎಂದೂ ಮನವಿ ಮಾಡಿದರು.

ಮುನಿರತ್ನ ಅವರನ್ನು ಕಣಕ್ಕಿಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ನಾಯಕರು, ‘ರಾಜರಾಜೇಶ್ವರಿನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಿಸಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ನಿಲುವು ಬದಲಿಸಬಾರದು’ ಎಂದು ಮನವಿ ಮಾಡಿದರು.

ಈ ವೇಳೆ ಕುಮಾರಸ್ವಾಮಿ, ‘ಟಿಕೆಟ್‌ ನೀಡಿ ಗೆಲ್ಲಿಸುತ್ತೇನೆ ಎಂಬ ಭರವಸೆ ನೀಡಿ ರಾಮಚಂದ್ರ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಕಾಂಗ್ರೆಸ್‌ ಅಭ್ಯ
ರ್ಥಿಗೆ ಬೆಂಬಲ ನೀಡಿದರೆ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅವ
ರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವುದಾದರೆ ಸಹಕಾರ ನೀಡಲು ಸಿದ್ಧ. ಕಾಂಗ್ರೆಸ್‌ನ ಒಂದು ಸ್ಥಾನ ಬಿಟ್ಟುಕೊಡಿ’ ಎಂದು ವಿನಂತಿಸಿದರು.

ಇದಕ್ಕೆ ಶಿವಕುಮಾರ್‌, ‘ಈ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ. ನಾವು ಭರವಸೆ ನೀಡಲು ಸಾಧ್ಯವಿಲ್ಲ’ ಎಂದರು.

ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಕಾರಣ, ಶುಕ್ರವಾರ ವಿಶ್ವಾಸ ಮತಯಾಚನೆ ಮುಗಿದ ಬಳಿಕ ಮತ್ತೊಂದು ಸಭೆ ನಡೆಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

‘ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮುಖ್ಯವಲ್ಲ. ಇಲ್ಲಿ ಬಿಜೆಪಿಯವರು ಗೆಲ್ಲಬಾರದು. ಮೈತ್ರಿಕೂಟದ ಅಭ್ಯರ್ಥಿಗಳ ಗೆಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮತದಾರರಿಗೆ ಮನವಿ ಮಾಡಿದರು.

ಗುರುತಿನ ಚೀಟಿ ಅಕ್ರಮದಿಂದಾಗಿ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯನ್ನು ಮೇ 28ಕ್ಕೆ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯ್‌ಕುಮಾರ್ ನಿಧನ ಹೊಂದಿದ ಕಾರಣಕ್ಕೆ ಜಯನಗರ ಕ್ಷೇತ್ರದ ಚುನಾವಣೆಯನ್ನು ಜೂನ್ 11ಕ್ಕೆ ಮುಂದೂಡಲಾಗಿತ್ತು.

ಚುನಾವಣಾಧಿಕಾರಿಗಳ ಬದಲಾವಣೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಪರವಾಗಿ ಕೆಲಸ ಮಾಡುತ್ತಿರುವ ಕೆಲವು ಚುನಾವಣಾ ಅಧಿಕಾರಿಗಳನ್ನು ತೆಗೆದು ಹಾಕಿ, ಪ್ರಾಮಾಣಿಕರನ್ನು ನೇಮಿಸಬೇಕು’ ಎಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಇದೇ 28 ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಇತ್ತೀಚೆಗೆ ಫ್ಲ್ಯಾಟ್‌ವೊಂದರಲ್ಲಿ 9 ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಕಾರಣ ಚುನಾವಣಾ ಆಯೋಗವು ಮತದಾನವನ್ನು ಮುಂದೂಡಿತ್ತು.

ಈ ಕ್ಷೇತ್ರದಲ್ಲಿ ವ್ಯಾಪಕವಾಗಿ ಅಕ್ರಮ ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಬಿಜೆಪಿ, ಎಲ್ಲ ಮತಗಟ್ಟೆಗಳನ್ನೂ ಸೂಕ್ಷ್ಮ ಮತಗಟ್ಟೆಯೆಂದು ಘೋಷಿಸಬೇಕು ಮತ್ತು ವಿಡಿಯೊ ಚಿತ್ರೀಕರಣ ಕಡ್ಡಾಯವಾಗಿ ಮಾಡಬೇಕು ಎಂದು ಆಗ್ರಹಿಸಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದ ನಿಯೋಗ ಗುರುವಾರ ಮುಖ್ಯಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರನ್ನು ಭೇಟಿ ಮಾಡಿ, ಮತದಾನದ ಸಂದರ್ಭ ಅಕ್ರಮ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕಾಗಿ ಮುನಿರತ್ನ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ನ್ಯಾಯಸಮ್ಮತ ಚುನಾವಣೆ ನಡೆಯುವುದು ಕಷ್ಟ ಎಂದು ಹೇಳಿದ್ದಾರೆ.

ಕ್ಷೇತ್ರದಲ್ಲಿ ಶೇ 5 ರಷ್ಟು ಬೋಗಸ್‌ ಗುರುತಿನ ಚೀಟಿಗಳಿವೆ. ಖಾಲಿ ನಿವೇಶನಗಳ ವಿಳಾಸಗಳನ್ನು ನೀಡಿ ಮತದಾರರ ಗುರುತಿನ ಚೀಟಿ ಸೃಷ್ಟಿಸಲಾಗಿದೆ. ನಕಲಿ ಮತದಾರರನ್ನು ಪತ್ತೆ ಹಚ್ಚಿ, ಮತದಾನ ಮಾಡುವುದನ್ನು ತಡೆಯಬೇಕು ಎಂದೂ ಒತ್ತಾಯಿದರು.

‘ಮತದಾನದ ಉಸ್ತುವಾರಿಯನ್ನು ಸ್ಥಳೀಯ ಅಧಿಕಾರಿಗಳಿಗೆ ನೀಡದೇ, ಹೊರಗಿನವರನ್ನು ನಿಯೋಜಿಸಬೇಕು. ಮತದಾರರನ್ನು ಬೆದರಿಸುವ ಉದ್ದೇಶದಿಂದ ಗೂಂಡಾಗಿರಿ ನಡೆಯುವ ಸಾಧ್ಯತೆಯೂ ಇರುವುದರಿಂದ, ಭದ್ರತೆಗಾಗಿ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಬೇಕು. ವಾಹನಗಳಲ್ಲಿ ಜನರನ್ನು ಕರೆ ತರುವುದಕ್ಕೆ ಕಡಿವಾಣ ಹಾಕಬೇಕು’ ಎಂದೂ ಒತ್ತಾಯಿಸಿದರು.

ನಿಯೋಗದಲ್ಲಿ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ, ಸಹವಕ್ತಾರರಾದ ಎಸ್‌.ಪ್ರಕಾಶ್‌, ಎ.ಎಚ್‌.ಆನಂದ, ಮಾಜಿ ಮೇಯರ್‌ ಹರೀಶ್ ಇದ್ದರು.

ಒಟ್ಟು ಮತದಾರರು; 4,71,900

ಪುರುಷ ಮತದಾರರು; 2,46,548

ಮಹಿಳಾ ಮತದಾರರು; 2,25,274

ಇತರ; 78

ಕಣದಲ್ಲಿರುವ ಅಭ್ಯರ್ಥಿಗಳು–14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT