ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫಾ ವೈರಸ್‌ ಭೀತಿ–ಆತಂಕ ಬೇಡ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಮನವಿ
Last Updated 25 ಮೇ 2018, 3:16 IST
ಅಕ್ಷರ ಗಾತ್ರ

ಮಂಗಳೂರು: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಕಂಡುಬಂದಿರುವ ನಿಫಾ ವೈರಾಣು ಸೋಂಕಿನ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಧಿಕೃತ ಮಾಹಿತಿಯನ್ನು ಜನರು ನಂಬಬಾರದು ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಮನವಿ ಮಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಫಾ ವೈರಾಣು ಸೋಂಕು ಗಾಳಿ ಅಥವಾ ನೀರಿನ ಮೂಲಕ ಹರಡುವುದಿಲ್ಲ. ಸೋಂಕು ತಗುಲಿರುವ ವ್ಯಕ್ತಿಯನ್ನು ಸ್ಪರ್ಶಿಸಿದರೆ ಮಾತ್ರವೇ ಹರಡಲು ಸಾಧ್ಯ. ಸೋಂಕು ತಗುಲಿರುವ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಜನರು ಆತಂಕಕ್ಕೆ ಒಳಗಾಗುವಂತಹ ಯಾವುದೇ ಸ್ಥಿತಿಯೂ ಜಿಲ್ಲೆಯಲ್ಲಿ ಇಲ್ಲ’ ಎಂದರು.

ಕೇರಳದಲ್ಲೂ ಕೋಯಿಕ್ಕೋಡ್‌ ಹೊರತಾದ ಪ್ರದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ನೀರಿನಿಂದ, ಗಾಳಿಯಿಂದ ಸೋಂಕು ಹರಡುತ್ತದೆ ಎಂಬ ಸುಳ್ಳು ಸುದ್ದಿಗಳು ವಾಟ್ಸ್‌ ಆ್ಯಪ್‌ ಮೂಲಕ ಹರಿದಾಡುತ್ತಿವೆ. ಖಚಿತವಲ್ಲದ ಈ ಮಾಹಿತಿಯನ್ನು ಯಾರೂ ನಂಬಬಾರದು ಎಂದು ಹೇಳಿದರು.

ಮಲೇಷ್ಯಾದಲ್ಲಿ 1998ರಲ್ಲಿ ಮೊದಲ ಬಾರಿಗೆ ನಿಫಾ ವೈರಾಣು ಸೋಂಕು ಪತ್ತೆಯಾಗಿತ್ತು. ಆಗ ಪ್ರಾಣಿಗಳಿಂದ ಪ್ರಾಣಿಗಳಿಗೆ ಮಾತ್ರ ಸೋಂಕು ಹರಡುತ್ತಿತ್ತು. 2002 ಮತ್ತು 2004ರಲ್ಲಿ ಬಾಂಗ್ಲಾದೇಶದಲ್ಲಿ ಮನುಷ್ಯರಿಂದ ಮನುಷ್ಯರಿಗೂ ಹರಡಿತ್ತು. ಆ ಬಳಿಕ ಕೇರಳದಲ್ಲಿ ಪತ್ತೆಯಾಗಿದೆ. ಸೋಂಕು ಹರಡುವುದನ್ನು ತಡೆಯಲು ಕೋಯಿಕ್ಕೋಡ್ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅದು ರಾಜ್ಯದವರೆಗೂ ಹಬ್ಬುವ ಸಾಧ್ಯತೆಯೇ ಕಡಿಮೆ ಇದೆ ಎಂದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮಾನಗಳಿದ್ದರೆ ನೇರವಾಗಿ ತಮ್ಮ ಕಚೇರಿ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಯಾವುದೇ ರೀತಿಯ ಪ್ರಶ್ನೆಗಳಿದ್ದರೂ ಉತ್ತರ ನೀಡಲು ಜಿಲ್ಲಾಡಳಿತ ಸನ್ನದ್ಧವಾಗಿರುತ್ತದೆ ಎಂದು ತಿಳಿಸಿದರು.

ಎಚ್ಚರ ವಹಿಸಲು ಸಲಹೆ: ಪ್ರಾಣಿಗಳಿಂದ ಈ ವೈರಾಣು ಮನುಷ್ಯರ ದೇಹ ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರಾಣಿಗಳ ಜೊತೆ ನಿಕಟ ಸಂಪರ್ಕದಲ್ಲಿ ಇರುವವರು ಎಚ್ಚರಿಕೆಯಿಂದ ಇರಬೇಕು. ಪ್ರಾಣಿಗಳೊಂದಿಗೆ ಇರುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಹಣ್ಣು ಬಳಕೆಯಲ್ಲೂ ಎಚ್ಚರಿಕೆ ವಹಿಸಬೇಕು. ಪ್ರಾಣಿ ಮತ್ತು ಪಕ್ಷಿಗಳು ತಿಂದ ಹಣ್ಣನ್ನು ಸೇವಿಸಬಾರದು. ಹಣ್ಣಿನ ಸಿಪ್ಪೆ ತೆಗೆದು ಅಥವಾ ಬೇಯಿಸಿ ಬಳಕೆ ಮಾಡುವುದು ಒಳ್ಳೆಯದು. ಹಣ್ಣುಗಳನ್ನು ತಿನ್ನುವ ಮೊದಲು ತೊಳೆಯುವುದು ಉತ್ತಮ ಎಂದು ಹೇಳಿದರು.

ಡೆಂಗೆ ಪ್ರಕರಣ ಇಳಿಕೆ: ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ‘ಜಿಲ್ಲೆಯಲ್ಲಿ ಡೆಂಗೆ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಮುಖವಾಗಿದೆ. 2017ರಲ್ಲಿ ಜಿಲ್ಲೆಯಲ್ಲಿ 163 ಪ್ರಕರಣ
ಗಳು ವರದಿಯಾಗಿದ್ದವು. 2018ರಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ 40 ಪ್ರಕರಣಗಳು ಮಾತ್ರ ಪತ್ತೆಯಾಗಿವೆ’ ಎಂದರು.

ಜಿಲ್ಲಾ ಮಲೇರಿಯ ನಿಯಂತ್ರಣ ಅಧಿಕಾರಿ ಡಾ.ರಾಜೇಶ್‌, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಿಕಂದರ್ ಪಾಷಾ ಇದ್ದರು.

ಆಸ್ಪತ್ರೆಗಳಿಗೆ ಮಾರ್ಗಸೂಚಿ

‘ನಿಫಾ ವೈರಾಣು ಸೋಂಕು ತಗುಲಿರುವ ಶಂಕೆ ಇರುವವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಈ ಕುರಿತು ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೂ ಜಿಲ್ಲಾಡಳಿತದಿಂದ ಮಾರ್ಗಸೂಚಿ ರವಾನಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT