ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ಶಿಕ್ಷಕರ ಕ್ಷೇತ್ರ; ಪಕ್ಷೇತರರದೇ ಕಲರವ

ಕಣದಲ್ಲಿ ಶಿವಮೊಗ್ಗ ಜಿಲ್ಲೆಯ ಐವರು, ಪಕ್ಷದ ಅಭ್ಯರ್ಥಿಗಳಿಗೆ ಈ ಬಾರಿ ಪ್ರಬಲ ಪೈಪೋಟಿ
Last Updated 25 ಮೇ 2018, 3:54 IST
ಅಕ್ಷರ ಗಾತ್ರ

ಶಿವಮೊಗ್ಗ: ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈ ಬಾರಿ ಪಕ್ಷೇತರರ ಕಲರವವೇ ಹೆಚ್ಚಾಗಿದೆ. ಅದರಲ್ಲೂ ಈ ಬಾರಿ ಶಿವಮೊಗ್ಗ ಜಿಲ್ಲೆಯ ಐವರು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿ ಇರುವುದು ವಿಶೇಷ.

ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಎಂ. ರಮೇಶ್, ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನ ಎಚ್‌.ಟಿ. ಅರುಣ್‌ ಹೊಸಕೊಪ್ಪ, ಶಿವಮೊಗ್ಗ ರಾಜೇಂದ್ರ ನಗರದ ಕೆ.ಸಿ. ಬಸವರಾಜಪ್ಪ, ವಿನೋಬನಗರದ ಎ. ಚಂದ್ರೋಜಿ ರಾವ್, ಭದ್ರಾವತಿ ತಾಲ್ಲೂಕು ಕಡದಕಟ್ಟೆಯ ತುಳಸಪ್ಪ ದಾಸರ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಮೂರು ಪಕ್ಷಗಳ ಪ್ರಮುಖ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಈ ಬಾರಿ 11 ಕ್ಷೇತರರು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಮಂಗಳೂರಿನ ಅಭ್ಯರ್ಥಿ ಡಾ.ಶಿವಶರಣ್ ಅವರ ನಾಮಪತ್ರ ತಿರಸ್ಕೃತವಾಗಿದೆ. ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಇದ್ದಾರೆ. ಅವರಲ್ಲಿ 10 ಅಭ್ಯರ್ಥಿಗಳು ಪಕ್ಷೇತರರು.

ಕೊಡಗಿನ ಎಚ್‌.ಎನ್. ದೇವರಾಜು, ಉಡುಪಿಯ ನಿತ್ಯಾನಂದ ಶೆಟ್ಟಿ, ಚಿಕ್ಕಮಗಳೂರಿನ ಬಿ.ಆರ್. ಪ್ರಭುಲಿಂಗ, ಮಂಗಳೂರಿನ ಅಲೋಶಿಯಸ್ ಡಿಸೋಜ, ಕೆ.ಪಿ. ರಾಜೇಂದ್ರಕುಮಾರ್ ಕಣದಲ್ಲಿ ಇರುವ ಇತರೆ ಪಕ್ಷೇತರರು.

ಮೂರು ಪಕ್ಷಗಳೂ ಈ ಬಾರಿ ಶಿವಮೊಗ್ಗ ಜಿಲ್ಲೆಗೆ ಪ್ರಾತಿನಿಧ್ಯ ನೀಡಿಲ್ಲ. ಆದರೆ, ಪಕ್ಷೇತರ ಅಭ್ಯರ್ಥಿಗಳಲ್ಲಿ ಜಿಲ್ಲೆಯ ಹಲವರು ಈ ಬಾರಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಕುವೆಂಪು ವಿಶ್ವವಿದ್ಯಾಲಯದಲ್ಲೇ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪಡೆದಿರುವ ಡಾ. ಅರುಣ್ ಹೊಸಕೊಪ್ಪ ಹಲವು ವರ್ಷ ಉಪನ್ಯಾಸಕರಾಗಿ, ಪತ್ರಿಕೋದ್ಯಮಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಾಕಷ್ಟು ಮತಗಳನ್ನು ಪಡೆದಿದ್ದರು. ಸೋಲು ಕಂಡರೂ  6 ವರ್ಷಗಳಿಂದ ಕ್ಷೇತ್ರದ ಶಿಕ್ಷಕರ ಜತೆ ನಂಟು ಬೆಳೆಸಿಕೊಂಡಿದ್ದು, ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಇದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗೆ ಹಲವು ವರ್ಷ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡಿರುವ ರಮೇಶ್ ಅವರು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಈ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ವರ್ಷದ ಮೊದಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಎರಡು ಮೂರು ಬಾರಿ 6 ಜಿಲ್ಲೆಗಳನ್ನು ಸುತ್ತಿ ಬಂದಿದ್ದಾರೆ.

ಜಿಲ್ಲಾ ಸ್ವಯಂ ಸೇವಾ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ಶಿವಮೊಗ್ಗದ ಕೆ.ಸಿ. ಬಸವರಾಜ್ ಹಲವು ವರ್ಷಗಳಿಂದ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಪರ್ಕ ಬಳಸಿಕೊಂಡು ಚುನಾವಣೆಯಲ್ಲಿ ಮತಗಳಿಸಲು ಮುಂದಾಗಿದ್ದಾರೆ.

ಪ್ರಮುಖ ಪಕ್ಷಗಳ ಅಭ್ಯರ್ಥಿಗಳು:

ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ವಿಧಾನ ಪರಿಷತ್ ಸದಸ್ಯ ಕಾರ್ಕಳದ ಗಣೇಶ್ ಕಾರ್ಣಿಕ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಕುಶಾಲನಗರದ ಕೆ.ಕೆ. ಮಂಜುನಾಥ್ ಕುಮಾರ್, ಜೆಡಿಎಸ್‌ನಿಂದ ಚಿಕ್ಕಮಗಳೂರಿನ ಭೋಜೇಗೌಡ ನಾಮಪತ್ರ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡದಲ್ಲೇ ಹೆಚ್ಚು ಮತದಾರರು:

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 6,694 ಶಿಕ್ಷಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 4,592, ಚಿಕ್ಕಮಗಳೂರಿನಲ್ಲಿ 2,816, ಕೊಡಗಿನಲ್ಲಿ 1,004, ಉಡುಪಿಯಲ್ಲಿ 2,585 ಹಾಗೂ ಚನ್ನಗಿರಿ, ಹೊನ್ನಾಳಿ ಮಾತ್ರ ಒಳಗೊಂಡ ದಾವಣಗೆರೆ ಜಿಲ್ಲೆಯಲ್ಲಿ 995 ಮತದಾರರು ಪಟ್ಟಿಯಲ್ಲಿ ಇದ್ದಾರೆ. ಇವರಲ್ಲಿ ಎಷ್ಟು ಶಿಕ್ಷಕರು ಮತಗಟ್ಟೆಗೆ ಬಂದು ಮತಚಲಾಯಿಸುತ್ತಾರೆ ಎನ್ನುವುದರ ಮೇಲೆ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರ ನಿಂತಿದೆ.

ಶಿಕ್ಷಕರಲ್ಲೇ ಹೆಚ್ಚು ನಿರಾಸಕ್ತಿ

ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರ 6 ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಿದೆ. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹೊರತುಪಡಿಸಿದರೆ ಉಳಿದ ಎಲ್ಲ ಶಿಕ್ಷಕರು ಮತ ಚಲಾಯಿಸಲು ಹೆಸರು ನೋಂದಾಯಿಸಿಕೊಳ್ಳಬಹುದು.

ಈ ಕ್ಷೇತ್ರದಲ್ಲಿ 30 ಸಾವಿರದಿಂದ 35 ಸಾವಿರ ಶಿಕ್ಷಕರು ಅರ್ಹರಿದ್ದಾರೆ. ಆದರೆ, ಈವರೆಗೂ ಶೇ 60ರಷ್ಟು ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡಿಲ್ಲ. ಇದುವರೆಗೆ ಹೆಸರು ನೊಂದಾಯಿಸಿದವರ ಸಂಖ್ಯೆ 19 ಸಾವಿರ ದಾಟಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT