ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇರಿಯ ತಡೆಗೆ ಆರೋಗ್ಯ ಇಲಾಖೆ ಸಜ್ಜು

ಜಿಲ್ಲೆಗೆ 25,593 ಸೊಳ್ಳೆ ಪರದೆ ಸರಬರಾಜು; 2020ಕ್ಕೆ ಮಲೇರಿಯ ಮುಕ್ತ ಜಿಲ್ಲೆಯಾಗಿಸುವ ಗುರಿ
Last Updated 25 ಮೇ 2018, 4:23 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಗೆ ಮುಂಗಾರು ಕಾಲಿಡುತ್ತಿದ್ದು, ಸಾಂಕ್ರಾಮಿಕ ರೋಗಗಳ ಹಾವಳಿ ತಡೆಗೆ ಆರೋಗ್ಯ ಇಲಾಖೆ ಸಜ್ಜಾಗಿದೆ. ಮಳೆಯ ಆರ್ಭಟ ಆರಂಭವಾಗುತ್ತಿದಂತೆ, ರೋಗಗಳ ಹಾವಳಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣ ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಬೇಸಿಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ಋತುವಿನಲ್ಲಿ ಹೆಚ್ಚಿನ ರೋಗಗಳು ಭಾದಿಸುತ್ತವೆ. ಸ್ವಲ್ಪ ಎಚ್ಚರ ತಪ್ಪಿದರೂ ಜನರು ಪ್ರಾಣವನ್ನೇ ತೆರಬೇಕಾಗುತ್ತದೆ.

ಕರಾವಳಿಯ ಉಷ್ಣ ವಾತಾವರಣ ಸೊಳ್ಳೆಗಳ ಉತ್ಪತ್ತಿ ಹೆಚ್ಚಲು ಪೂರಕವಾಗಿದ್ದು, ಮಲೇರಿಯ ಪ್ರಕರಣಗಳು ಮಾಮೂಲು ಎನ್ನುವಂತಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಕಟ್ಟಡದ ಬಳಿ ನಿಲ್ಲುವ ನೀರು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಲಿದ್ದು ಮಲೇರಿಯ ಪ್ರಕರಣಗಳು ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್‌ ಅವಧಿಯವರೆಗೆ 29 ಮಲೇರಿಯ ಪ್ರಕರಣಗಳು ವರದಿಯಾಗಿದೆ. 2016ರಲ್ಲಿ 1,686 ಪ್ರಕರಣ, 2017ರಲ್ಲಿ 513 ಪ್ರಕರಣ ಹಾಗೂ 2018 (ಏಪ್ರಿಲ್‌ವರೆಗೆ) 29 ಪ್ರಕರಣಗಳು ಪತ್ತೆಯಾಗಿದೆ. 2016ನೇ ಸಾಲಿಗೆ ಹೋಲಿಸಿದರೆ ಶೇ50–60ರಷ್ಟು ಇಳಿಕೆ ಕಂಡುಬಂದಿದೆ. ಅಲ್ಲದೇ ಕಳೆದ 4 ವರ್ಷಗಳಿಂದ ಮಲೇರಿಯ ರೋಗದಿಂದ ಯಾವುದೇ ಮರಣ ಸಂಭವಿಸಿಲ್ಲ ಎನ್ನುತ್ತವೆ ಆರೋಗ್ಯ ಇಲಾಖೆಯ ದಾಖಲೆಗಳು.

ಕಟ್ಟಡ ನಿರ್ಮಾಣಕ್ಕೆ ಬಿಜಾಪುರ, ಕಲಬುರ್ಗಿ, ಬಾಗಲಕೋಟೆ, ಹಾವೇರಿ ಜತೆಗೆ ಹೊರ ರಾಜ್ಯಗಳಾದ ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳದ ಕಟ್ಟಡ ಕಾರ್ಮಿಕರು ಉಡುಪಿಗೆ ಬರುತ್ತಾರೆ. ವಸತಿ ನಿರ್ಮಾಣದ ಹಂತದಲ್ಲಿ ಕಾಮಗಾರಿ ಕಟ್ಟಡಗಳ ಪಕ್ಕದಲ್ಲೇ ಜೋಪಡಿಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಕಾಮಗಾರಿಗೆ ಬಳಸುವ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ಕಾರ್ಮಿಕರ ಮೇಲೆ ದಾಳಿ ಇಡುತ್ತದೆ. ಇದರ ಪರಿಣಾಮ ಬಹಳಷ್ಟು ಮಂದಿ ಮಲೇರಿಯ ರೋಗಕ್ಕೆ ತುತ್ತಾಗುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯನ್ನು 2020 ವೇಳೆಗೆ ಸಂಪೂರ್ಣವಾಗಿ ಮಲೇರಿಯ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಕಟ್ಟಡ ಹಾಗೂ ವಲಸೆ ಕಾರ್ಮಿಕರಿಗೆ ಕಡ್ಡಾಯ ಆರೋಗ್ಯ ತಪಾಸಣೆ, ಅವರು ವಾಸಿಸುವ ಸ್ಥಳದಲ್ಲಿ ನೀರು ನಿಲ್ಲದಂತೆ ಹಾಗೂ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಂತೆ ಮಾಲೀಕರಿಗೆ ಸೂಚಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮಗಳು:
ಜಿಲ್ಲೆಯಲ್ಲಿ ಮಲೇರಿಯ ಹರಡಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಆ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿಯನ್ನು ತಡೆಯಲು ಜನರಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಪ್ರದೇಶದ ಜನರಿಗೆ ಸೊಳ್ಳೆ ಪರದೆ ವಿತರಿಸಲು ಕ್ರಮ ಕೈಗೊಂಡಿದ್ದು, ಈ ಬಾರಿ 25,593 ಸೊಳ್ಳೆ ಪರದೆ ಜಿಲ್ಲೆಗೆ ಸರಬರಾಜು ಆಗಿದೆ. ಮನೆಯ ಪರಿಸರದ ಸುತ್ತಮುತ್ತ ಸೊಳ್ಳೆಗಳು ವೃದ್ಧಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾಗುವ ಸಂಶಯಾಸ್ಪದ ಮಲೇರಿಯಾ ಪ್ರಕರಣಗಳ ವರದಿಯನ್ನು ಆರೋಗ್ಯ ಇಲಾಖೆಗೆ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ತಿಳಿಸಿದ್ದಾರೆ.

ಮಲೇರಿಯಾ ಲಕ್ಷಣ:
ಚಳಿ–ಜ್ವರ ರೋಗದ ಲಕ್ಷಣವಾಗಿದ್ದು, ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದೆ. ಮಾರಾಣಾಂತಿಕವಲ್ಲದಿದ್ದರೂ ರೋಗಕ್ಕೆ ತುತ್ತಾದರೆ, ಆಗಾಗ ಅನಾರೋಗ್ಯ ಕಾಡುತ್ತದೆ. ಜ್ವರ ಹೆಚ್ಚಾದರೆ ಪ್ರಾಣಕ್ಕೆ ಕುತ್ತಾಗುವ ಅಪಾಯ ಹೆಚ್ಚು ಎನ್ನುತ್ತಾರ ವೈದ್ಯರು.

**
ರಾಜ್ಯ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಿದೆ. 2020 ವೇಳೆಗೆ ಉಡುಪಿ ಜಿಲ್ಲೆಯಲ್ಲಿ ಮಲೇರಿಯಾ ಮುಕ್ತಗೊಳಿಸುವ ಗುರಿ ನಿಗದಿ ಪಡಿಸಲಾಗಿದೆ
– ಡಾ.ಪ್ರೇಮಾನಂದ, ಜಿಲ್ಲಾ ಮಲೇರಿಯಾ ಅಧಿಕಾರಿ

ತೃಪ್ತಿ ಎಲ್‌. ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT