ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ ಅರಳಿದರೂ ಕೈಗೆಟುಕದ ಅಧಿಕಾರ

ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ, ಜೆಡಿಎಸ್‌, ಕಾಂಗ್ರೆಸ್‌ ಪಾಳಯದಲ್ಲಿ ಸಂಭ್ರಮ
Last Updated 25 ಮೇ 2018, 4:28 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಮಲ ಅರಳಿದೆ. ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಆದರೆ, ಆ ಸಂಭ್ರಮವನ್ನು ಹಂಚಿಕೊಳ್ಳಲಾಗದಂತಹ ಸ್ಥಿತಿ ಇಲ್ಲಿನ ಬಿಜೆಪಿ ಮುಖಂಡರದ್ದು ಹಾಗೂ ಕಾರ್ಯಕರ್ತರದ್ದು.

ರಾಜ್ಯದಲ್ಲಿ ಬಿಜೆಪಿಯ ಸಂಖ್ಯಾಬಲ ಹೆಚ್ಚಾಗಲು ಉಡುಪಿ ಜಿಲ್ಲೆಯ ಕೊಡುಗೆ ದೊಡ್ಡದು. ಈ ಬಾರಿ ಬಿಜೆಪಿ ಸರ್ಕಾರ ರಚಿಸಿದ್ದರೆ, ಜಿಲ್ಲೆಗೆ ಸಚಿವ ಸ್ಥಾನ ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ, ಪರಿಸ್ಥಿತಿ ಭಿನ್ನವಾಗಿದೆ. ಗೆದ್ದರೂ ಸಚಿವ ಸ್ಥಾನ ಇಲ್ಲಿನ ನಾಯಕರ ಕೈಗೆಟುಕುತ್ತಿಲ್ಲ.

ಬುಧವಾರ (ಮೇ 23) ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೂತನ ಮುಖ್ಯಮಂತ್ರಿಯಾಗಿ ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ಜಿಲ್ಲಾ ಬಿಜೆಪಿ ಪಾಳಯದಲ್ಲಿ ನಿರಾಶೆಯ ಕಾರ್ಮೋಡ ಕವಿದಿತ್ತು. ಮುಖಂಡರ ಹಾಗೂ ಕಾರ್ಯಕರ್ತರ ಮೊಗದಲ್ಲಿ ಸಂತಸ ಮಾಯವಾಗಿತ್ತು. ಜಿಲ್ಲೆಯನ್ನು ಗೆದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಕಾಣುತ್ತಿತ್ತು.

‘ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರವಲ್ಲಿ ಯಶಸ್ವಿಯಾದರೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿಲ್ಲ ಎಂಬ ಕೊರಗು ಕಾಡುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದ್ದೆವು. ಜಿಲ್ಲೆಗೆ ಖಚಿತವಾಗಿ ಸಚಿವ ಸ್ಥಾನವೂ ಸಿಗುತ್ತಿತ್ತು. ಈಗ ಕೈಕಟ್ಟಿ ಕೂರಬೇಕಾದ ಸ್ಥಿತಿ ಬಂದೊಂದಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ತಟಸ್ಥ: ಅನಿರೀಕ್ಷಿತ ಫಲಿತಾಂಶದಿಂದ ಆಘಾತಕ್ಕೊಳಗಾಗಿರುವ ಕಾಂಗ್ರೆಸ್‌ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಸೋಲಿನ ನೋವು ಬಾಧಿಸುತ್ತಿದ್ದರೂ, ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಎಂಬ ಸಮಾಧಾನ ಒಂದೆಡೆ ಇದೆ. ಒಂದೆರಡು ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇತ್ತು ಎಂದು ‘ಕೈ’ ಹಿಸುಕಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಸರ್ಕಾರ ಅಸ್ತಿತ್ವದಲ್ಲಿದೆ. ಹಾಗಾಗಿ, ಜಿಲ್ಲೆಯ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯರೂ ಆಗಿರುವ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ಸಿಗಬಹುದು ಎಂಬ ಆಶಾಭಾವ ವ್ಯಕ್ತಪಡಿಸುತ್ತಾರೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜನಾರ್ದನ ತೋನ್ಸೆ.

ಜೆಡಿಎಸ್‌ನಲ್ಲಿ ಸಂಭ್ರಮ: ಜಿಲ್ಲೆಯಲ್ಲಿ ಜೆಡಿಎಸ್‌ಗೆ ಭದ್ರ ನೆಲೆ ಇಲ್ಲದಿದ್ದರೂ ರಾಜ್ಯದಲ್ಲಿ ಸರ್ಕಾರ ರಚಿಸಿರುವುದು ಕಾರ್ಯಕರ್ತರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಮುಂದೆ ಯಾರಿಗಾದರೂ ಅಧಿಕಾರ ಸಿಗಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸಲು ಅಧಿಕಾರ ಅಗತ್ಯ ಎನ್ನುವುದು ಜೆಡಿಎಸ್‌ ಮುಖಂಡರ ವಾದ.

ಐದರಲ್ಲೂ ಕಮಲ

2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮೂರು ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿ ಕೇವಲ ಒಂದು ಸ್ಥಾನ ಪಡೆದರೆ, ಒಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದೂ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಐದು ಕ್ಷೇತ್ರಗಳು ಬಿಜೆಪಿ ಪಾಲಾಗಿವೆ.

**
ಜೆಡಿಎಸ್‌ ಸರ್ಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಚುನಾವಣೆಯ ಸೋಲು ಪಾಠ ಕಲಿಸಿದ್ದು, ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇವೆ 
ಯೋಗೀಶ್‌ ಶೆಟ್ಟಿ, ಜೆಡಿಎಸ್‌ ಜಿಲ್ಲಾಧ್ಯಕ್ಷ
**

ಜಿಲ್ಲೆಯಲ್ಲಿ ಐದೂ ಕ್ಷೇತ್ರಗಳನ್ನು ಗೆದ್ದರೂ ಕೈಕಟ್ಟಿ ಕೂರುವಂತಾಗಿದೆ. ಆದರೂ ಲಭ್ಯ ಅನುದಾನವನ್ನೇ ಬಳಸಿಕೊಂಡು ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ
 ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ

**
ಪಕ್ಷದಲ್ಲಿ ಸೋಲಿನ ಪರಾಮರ್ಶೆ ನಡೆಯುತ್ತಿದೆ. ಜತೆಗೆ ಪರಿಷತ್ ಚುನಾವಣೆಗೆ ತಯಾರಿ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಸುತ್ತೇವೆ 
ಜನಾರ್ದನ ತೋನ್ಸೆ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT