ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫಾ ವೈರಾಣು ಸೋಂಕು ಹರಡದಂತೆ ಕ್ರಮ: ಶಾಂತಾರಾಮ್

ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ
Last Updated 25 ಮೇ 2018, 6:00 IST
ಅಕ್ಷರ ಗಾತ್ರ

ಬಾಗಲಕೋಟೆ: ನಿಫಾ ವೈರಾಣು ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ನೆರೆಯ ಕೇರಳದಲ್ಲಿ ನಿಫಾ ವೈರಾಣುವಿನಿಂದ 96 ಸಂಶಯಾಸ್ಪದ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಆರು ಮರಣಗಳು ಸಂಭವಿಸಿವೆ. ಇದಕ್ಕೆ ನಿಫಾ ವೈರಸ್ ಕಾರಣ ಎಂದು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ದೃಢಪಡಿಸಿದ್ದು, ಜಿಲ್ಲೆಯಲ್ಲಿಯೂ ಸಹ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಿಫಾ ವೈರಾಣು ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಆರು ತಾಲ್ಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಬೇಕು. ಈ ಸೋಂಕು ಬಾವಲಿಗಳಿಂದ ಹರಡುತ್ತಿದ್ದು, ಬಾವಲಿಗಳು ಹೆಚ್ಚಾಗಿರುವ ಪ್ರವಾಸಿ ಸ್ಥಳಗಳಲ್ಲಿ ಈ ಸೋಂಕಿನ ಕುರಿತು ಮಾಹಿತಿಗಳನ್ನೊಳಗೊಂಡ ಜಾಗೃತಿ ಫಲಕಗಳನ್ನು ಹಾಕಬೇಕು. ಬಾದಾಮಿ ಅಗಸ್ತ್ಯ ಹೊಂಡದಲ್ಲಿ ಬಾವಲಿಗಳು ನೀರು ಕುಡಿಯಲು ಬರುತ್ತವೆ. ಆ ನೀರನ್ನು ಬಳಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಆ ನೀರನ್ನು ಬಳಸದಂತೆ ಜಾಗೃತಿ ಫಲಗಳನ್ನು ಹಾಕಲು ಸೂಚನೆ ನೀಡಿದರಲ್ಲದೇ ಸಿಬ್ಬಂದಿ ತಂಡಗಳನ್ನು ನೇಮಿಸಿ ಅಗಸ್ತ್ಯ ತೀರ್ಥದ ಹೊಂಡಕ್ಕೆ ಜನರು ಬರದಂತೆ ನಿಗಾ ವಹಿಸಲು ತಿಳಿಸಿದರು.

ಸೋಂಕಿತ ಬಾವಲಿಗಳ ಮೂಲಕ ಹರಡುತ್ತಿರುವ ಈ ವೈರಾಣು ಜ್ವರಕ್ಕೆ ಸದ್ಯದ ಮಟ್ಟಿಗೆ ಯಾವುದೇ ರೀತಿಯ ಚಿಕಿತ್ಸೆ ಅಥವಾ ಔಷಧಿ ಲಭ್ಯವಿಲ್ಲ ಎಂದು ತಿಳಿದುಬಂದಿದೆ. ಸೋಂಕು ಹರಡದಂತೆ ಜಾಗೃತಿ ವಹಿಸಬೇಕಾಗಿದೆ. ಆದ್ದರಿಂದ ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು, ಗಿಡಗಳಿಂದ ಕೆಳಗೆ ಬಿದ್ದಿರುವ ಹಣ್ಣುಗಳನ್ನು ತಿನ್ನದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸುವಂತೆ ಶಾಂತಾರಾಮ್ ಸೂಚಿಸಿದರು.

ಮಾಹಿತಿ, ಶಿಕ್ಷಣ ಮತ್ತು ಸಹಭಾಗಿತ್ವದಡಿ ಅರಿವು ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರಪತ್ರ, ಭಿತ್ತಿಪತ್ರ, ಬ್ಯಾನರ್‌ಗಳನ್ನು ಮುದ್ರಿಸಲಾಗುತ್ತಿದೆ. ಆಶಾ ಕಾರ್ಯಕರ್ತರಿಂದ ಮನೆ ಮನೆಗೆ ಭೇಟಿ ನೀಡುವ ಮೂಲಕ ಅರಿವು ಮೂಡಿಸಲಾಗುವುದು. ಸಭೆ, ಸಮಾರಂಭ, ಗುಂಪುಸಭೆ, ಸಮೂಹ ಸಭೆ, ಮುಖಂಡರ ಸಭೆ, ಧ್ವನಿವರ್ಧಕಗಳ ಮೂಲಕ ಜಾಗೃತಿ, ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಧ್ವನಿವರ್ಧಕ ಗಳ ಮೂಲಕ ತಿಳಿವಳಿಕೆ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಸಂಘ ಸಂಸ್ಥೆ, ಚುನಾಯಿತ ಪ್ರತಿನಿಧಿಗಳ ಹಾಗೂ ಇತರೆ ಇಲಾಖೆಗಳ ಸಹಕಾರ ಪಡೆಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸಭೆಗೆ ತಿಳಿಸಿದರು.

ನಿಫಾ ವೈರಾಣು ಸೋಂಕಿನ ಜ್ವರವು ನೇರ ಸಂಪರ್ಕದಿಂದ ಹರಡುವುದರಿಂದ ಸೋಂಕಿತ ವ್ಯಕ್ತಿಯು ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭಗಳಲ್ಲಿ ಕುರಿಗಳಿಂದ ದೂರವಿರುವುದು ಸೂಕ್ತವಾಗಿದೆ. ಸೋಂಕಿತ ಜನರ ಸಂಪರ್ಕಕ್ಕೆ ಬಂದನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು, ಹಸ್ತಲಾಘವ ಮಾಡುವುದನ್ನು ತಪ್ಪಿಸುವುದು, ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಕೈಗವಸನ್ನು ಧರಿಸಬೇಕು. ಹಣ್ಣುಗಳನ್ನು ತಿನ್ನುವಾಗ ಚೆನ್ನಾಗಿ ತೊಳೆದು ಸಿಪ್ಪೆಗಳನ್ನು ಸುಲಿದು ತಿನ್ನಬೇಕು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.

ಈಗಾಗಲೇ ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದೆ. ಇದಕ್ಕೆ ಬಾವಲಿ ತಿಂದ ಹಣ್ಣುಗಳನ್ನು ಸೇವಿಸುವುದರಿಂದ ಈ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಪ್ರಸ್ತುತ ಮಾವು, ದಾಳಿಂಬೆ, ಚಿಕ್ಕು ಮತ್ತು ಪೇರಲ ಹಣ್ಣುಗಳು ಲಭ್ಯವಿದ್ದು, ಗಿಡದಲ್ಲಿ ಪಕ್ಷಿ ಅಥವಾ ಬಾವಲಿಗಳು ತಿಂದು ಹೋದ ಹಾಗೂ ಮರದ ಕೆಳಗೆ ಬಿದ್ದ ಹಣ್ಣುಗಳನ್ನು ಸಾರ್ವಜನಿಕರು ಹಾಗೂ ಜಾನುವಾರುಗಳು ತಿನ್ನದಂತೆ ಮುಂಜಾಗ್ರತಾ ಕ್ರಮ ವಹಿಸಲು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ರವೀಂದ್ರ ಹಕಾಟಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಜಿಲ್ಲಾ ಶಸ್ತ್ರಚಿಕಿತ್ಸಕ ಎ.ಕೆ.ಅನಂತರೆಡ್ಡೇರ, ಡಾ.ಎಮ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕಾಮಾಕ್ಷಿ, ನಗರ ಯೋಜನಾ ಪ್ರಾಧಿಕಾರದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಸೇರಿದಂತೆ ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT