ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಅಗೆಯಲು ಮೂತಿಯೇ ಓಕೆ!

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಆರ್ಡ್‌ವರ್ಕ್‌ ಎಂಬುದು ಗೆದ್ದಲು ಬಾಕ ಸಸ್ತನಿ. ಈಡೆಂಟೇಟ ಉಪವರ್ಗದ, ಆರಿಕ್ಟೆ ರೊಪೋಡಿಡೀ ಕುಟುಂಬಕ್ಕೆ ಸೇರಿದೆ. ಆರಿಕ್ಟೊರೊಪಸ್ ಏಫರ್ ಇದರ ಶಾಸ್ತ್ರೀಯ ಹೆಸರು. ಇದು ದಕ್ಷಿಣ ಆಫ್ರಿಕ ಖಂಡಕ್ಕೆ ಮಾತ್ರ ಸೀಮಿತವಾದ ಪ್ರಭೇದ. ಆಫ್ರಿಕಾದ ಸಹರಾನ್‌ ಮತ್ತು ಆಫ್ರಿಕಾ ಉದ್ದಕ್ಕೂ ವಿವಿಧ ಆವಾಸ ಸ್ಥಾನಗಳಲ್ಲಿ ಕಂಡು ಬರುತ್ತದೆ. ‘ಆಫ್ರಿಕಾ ಭಾಷೆಯಲ್ಲಿ ಇದನ್ನು ಅರ್ಥ್ ಪಿಗ್‌’ ಎಂದು ಕರೆಯಲಾಗುತ್ತದೆ. ಉದ್ದನೆಯ ಮೂಗು ಮತ್ತು ಹಂದಿಯ ದೇಹಾಕೃತಿ ಹೊಂದಿರುವುದರಿಂದ ಈ ಹೆಸರು ಬಂದಿದೆ.

ಇವು ಒರ್ಕ್ಟೆರೋಪೊಡಿಡೆ (Orycteropodidae) ಕುಟುಂಬದ ಸಸ್ತನಿ ವರ್ಗಕ್ಕೆ ಸೇರಿದ್ದು, ಇದರ ವೈಜ್ಞಾನಿಕ ಹೆಸರು ಒರಿಕ್ಟೆರೋಪಸ್ ಅಫೇರ್ (Orycteropus afer) ಸಾಮಾನ್ಯವಾಗಿ ಇದನ್ನು ಆರ್ಡ್‌ವರ್ಕ್‌, ಆಂಟಿಬಿಯರ್, ಅರ್ಥ್‌ ಪಿಗ್ ಎಂಬ ಹೆಸರುಗಳಲ್ಲಿ ಕರೆಯುತ್ತಾರೆ. ಇತ್ತೀಚೆಗೆ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ.

ದೊಡ್ಡ ಶರೀರ, ಉದ್ದದ ಮೂತಿ ಹೊಂದಿದ್ದು, ಕಂದು, ಬೂದು ಮತ್ತು ಹಳದಿ ಬಣ್ಣದಲ್ಲಿರುತ್ತವೆ. ಶರೀರದಲ್ಲಿ ತೆಳುವಾಗಿ ರೋಮಗಳು ಹರಡಿಕೊಂಡಿವೆ. ಕಿವಿಗಳು ಉದ್ದ‌ವಾಗಿದ್ದು, ಬೆನ್ನು ಕಮಾನಿನಂತೆ ಬಾಗಿರುತ್ತದೆ. ಇವುಗಳ ದಪ್ಪನೆಯ ಚರ್ಮ ಸೂರ್ಯನ ಶಾಖದಿಂದ ರಕ್ಷಿಸುತ್ತದೆ ಮತ್ತು ಕೀಟ ಕಡಿತಗಳಿಂದ ಕಾಪಾಡುತ್ತದೆ. ಮೂಗಿನೊಳಗೆ ಧೂಳು ಮತ್ತು ಕೀಟಗಳು ಪ್ರವೇಶಿಸಿದರೆ ಸುಲಭವಾಗಿ ಮೂಗಿನ ಹೊಳ್ಳೆಗಳಿಂದ ಮುಚ್ಚಿ ಕೊಳ್ಳುತ್ತವೆ. ಕಿವಿಗಳು ಕೊಳವೆಯಾಕಾರದಲ್ಲಿದ್ದು ಮೊಲದ ಕಿವಿಗಳನ್ನು ಹೋಲುತ್ತವೆ. ಸುಮಾರು 60ರಿಂದ 80 ಕೆ.ಜಿ ತೂಗುವ ಈ ಹಂದಿಗಳು ಗಂಟೆಗೆ 40 ಕೀ.ಮಿ ವೇಗದಲ್ಲಿ ಓಡಬಲ್ಲವು.

ಆರ್ಡ್‌ವರ್ಕ್ ಪ್ರಾಣಿಗಳ ಹಿಂದಿನ ಕಾಲುಗಳು ಮುಂಭಾಗದ ಕಾಲುಗಳಿಗಿಂತ ಉದ್ದವಾಗಿರುತ್ತವೆ. ಮುಂದಿನ ಕಾಲುಗಳಲ್ಲಿ 4 ಬೆರಳು, ಹಿಂದಿನ ಕಾಲುಗಳಲ್ಲಿ 5 ಬೆರಳುಗಳು ಇವೆ. ಬಲಿಷ್ಠ ಉಗುರುಗಳನ್ನು ಹೊಂದಿದ್ದು, ಇವುಗಳ ಸಹಾಯದಿಂದ ನೆಲವನ್ನು ಸುಲಭವಾಗಿ ಅಗೆಯಬಲ್ಲವು ಮತ್ತು ಉಗುರುಗಳ ಸಹಾಯದಿಂದ  ತಮ್ಮ ದೇಹವನ್ನು ಹೂತಿಟ್ಟುಕೊಳ್ಳುತ್ತವೆ. ಹಲ್ಲುಗಳಿಗೆ ಬೇರುಗಳಿಲ್ಲ. ಮೇಲ್ದವಡೆಯಲ್ಲಿ 8-10 ಹಲ್ಲುಗಳು ಇವೆ. ಹಗಲು ವೇಳೆಯಲ್ಲಿ ಚಿಕ್ಕ ಚಿಕ್ಕ ಗುಹೆಗಳಲ್ಲಿ ನಿದ್ರಿಸುತ್ತವೆ. ರಾತ್ರಿಯ ಸಮಯದಲ್ಲಿ ಮಾತ್ರ ಹೊರಗೆ ಬಂದು ಗೆದ್ದಲು ಮತ್ತು ಇರುವೆಗಳನ್ನು ತಿಂದು ಬದುಕುತ್ತದೆ.

ಭೂಗತವಾಗಿ ಅಥವಾ ಕರಾಳ ರಾತ್ರಿಯಲ್ಲಿ ಬೇಟೆಯಾಡುತ್ತವೆ. ತಮ್ಮ ಸುತ್ತಮುತ್ತಲಿನ ವಾಸನೆಯನ್ನು ಸುಲಭವಾಗಿ ಗ್ರಹಿಸಬಲ್ಲವು ಮತ್ತು ಸಂಭವನೀಯ ಅಪಾಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. 

ಸಂತಾನೋತ್ಪತ್ತಿ ಮತ್ತು ಜೀವನಶೈಲಿ: ಇವು ಅಕ್ಟೋಬರ್ ಮತ್ತು ನವೆಂಬರ್ ಅಥವಾ ಮೇ ಮತ್ತು ಜೂನ್ ತಿಂಗಳಲ್ಲಿ ಸಂತಾನೋತ್ಪತ್ತಿ ಕ್ರಿಯೆ ನಡೆಸುತ್ತವೆ. 7 ತಿಂಗಳು ಗರ್ಭ ಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಮರಿಯು ತಿಳಿ ಗುಲಾಬಿ ಬಣ್ಣದಲ್ಲಿದ್ದು, ದೇಹದ ಮೇಲೆ ಕೂದಲುಗಳನ್ನು ಹೊಂದಿರುವುದಿಲ್ಲ, ಕೇವಲ 2 ಕೆ.ಜಿ ತೂಕವನ್ನು ಹೊಂದಿರುತ್ತದೆ.

ತಮ್ಮ ಬಲಿಷ್ಠ ಉಗುರುಗಳಿಂದ ಕೇವಲ 15 ಸೆಕೆಂಡುಗಳಲ್ಲಿ ಮರಳು ನೆಲವನ್ನು 2 ಅಡಿ ಆಳದವರೆಗೆ ಅಗೆಯಬಲ್ಲ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು  ನೆಲ ಅಗೆಯಬಲ್ಲ ವಿಶ್ವದ ಬಲಿಷ್ಠ ಪ್ರಾಣಿಗಳಲ್ಲಿ ಒಂದು ಎಂಬ ಪ್ರಸಿದ್ಧಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT