ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಷಾ ಪಿ. ರೈ ಗೆ ‘ಅನುಪಮ’ ಗರಿ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಕ ರ್ನಾಟಕ ಲೇಖಕಿಯರ ಸಂಘದ ವತಿಯಿಂದ ನೀಡಲಾಗುವ ಅನುಪಮ ಪ್ರಶಸ್ತಿ ಈ ಬಾರಿ ಲೇಖಕಿ ಉಷಾ ಪಿ ರೈ ಅವರಿಗೆ ದೊರೆತಿದೆ.

‘ಕಲೇಸಂ’ ನಿಂದ ನೀಡಲಾಗುವ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಅನುಪಮಾ ಪ್ರಶಸ್ತಿಯೂ ಒಂದು. ಉಷಾ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕಥೆ, ಕಾದಂಬರಿ, ಕವಿತೆ, ಹನಿಗವಿತೆ, ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರ ಹಾಗೂ ಆತ್ಮ ಕಥೆ ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದೊಂದಿಗೆ ತುಳುವಿನಲ್ಲೂ ಕೆಲವು ಕೃತಿಗಳನ್ನು ರಚಿಸಿರುವ ಉಷಾ ಅವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಂಗ್ಲ ಭಾಷೆಯ ಲೇಖನಗಳು ಫೆಮಿನಾದಲ್ಲೂ, ಆಂಗ್ಲ ಭಾಷೆಯ ಕವನಗಳು ಮ್ಯೂಸ್ ಇಂಡಿಯಾ (ಇ -ಪತ್ರಿಕೆ )ದಲ್ಲೂ ಪ್ರಕಟವಾಗಿವೆ. ಕನ್ನಡದ ಹೆಸರಾಂತ ಕವಿ ಕೆ. ಎಸ್‌. ನರಸಿಂಹ ಸ್ವಾಮಿಯವರ ಕೆಲವು ಕವಿತೆಗಳನ್ನು ತುಳು ಭಾಷೆಗೆ ಅನುವಾದಿಸಿದ್ದಾರೆ.

ಚಿಕ್ಕಂದಿನಲ್ಲಿಯೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡ ಉಷಾ ಪಿ. ರೈ ಅವರು ಲೇಖಕರಾದ ಪ್ರಭಾಕರ ರೈ ಅವರ ಜೊತೆಗೆ ವಿವಾಹವಾದ ನಂತರ ಮತ್ತಷ್ಟು ಸಾಹಿತ್ಯ ಕೃಷಿಯಲ್ಲಿ ಮುಂದುವರೆದರು. ವಿಜಯಾ ಬ್ಯಾಂಕ್ ನಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.

2000-2005ರ ಅವಧಿಯಲ್ಲಿ ಕಲೇಸಂ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದರು. ಈ ಅವಧಿಯಲ್ಲಿ ಲೇಖಕಿಯರಿಗೆ ಉಪಯುಕ್ತವೆನಿಸುವ ಕೆಲವು ಕೃತಿಗಳನ್ನು ಸಂಘದ ಮೂಲಕ ಪ್ರಕಟಿಸಿದರು. ಜೊತೆಗೆ, ‘ನಮ್ಮ ನಮ್ಮಲ್ಲಿ’ ಎನ್ನುವ ಶೀರ್ಷಿಕೆಯಡಿಯಲ್ಲಿ, ಲೇಖಕಿಯರ ಕೃತಿಗಳ ಬಗ್ಗೆ ವಿಮರ್ಶಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಅಲ್ಲದೇ, ’ಎಪ್ಪತ್ತರ ವಯಸ್ಸು ಇಪ್ಪತ್ತರ ಮನಸ್ಸು’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿ, ಹಿರಿಯ ಲೇಖಕಿಯರ ಜೊತೆ ಮಾತುಕತೆ ಕಾರ್ಯಕ್ರಮವನ್ನು ನಡೆಸಿದರು. ಇದೇ ಕಾರ್ಯಕ್ರಮ 18–20ಲೇಖಕಿಯರ ಜೊತೆ, ಚಂದನ ವಾಹಿನಿಯಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿತು.

ನಾಡಿನ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಗೌರವ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬೆಂಗಳೂರು ಬಂಟರ ಸಂಘ, ತುಳುವೆರೆಂಕುಲು, ತುಳು ಕೂಟ, ದಕ್ಷಿಣಕನ್ನಡಿಗರ ಸಂಘ, ವನಿತಾ ಸಹಾಯವಾಣಿ ಮೊದಲಾದ ಸಮಾಜಮುಖಿ ಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿದ್ದರೆ.

ಉಷಾ ಅವರ ಪ್ರತಿಭೆಗೆ ಹಲವಾರು ಪ್ರಶಸ್ತಿ, ಬಹುಮಾನಗಳು ಸಂದಿವೆ. ಪದ್ಮಭೂಷಣ ಬಿ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ನೀಲಗಂಗಾ ದತ್ತಿನಿಧಿ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಕರಾವಳಿ ರತ್ನ ಪ್ರಶಸ್ತಿ, ಬಲಿಯೇಂದ್ರ ಪುರಸ್ಕಾರ, ಪಂಕಜಶ್ರೀ, ಆರ್ಯಭಟ, ‘ಯಾವ ನಾಳೆಯೂ ನಮ್ಮದಲ್ಲ’ ಕೃತಿಗೆ ಎಂ. ಜಿ. ರಂಗನಾಥನ್ ಸ್ಮಾರಕ ವಿಶೇಷ ಪುಸ್ತಕ ಬಹುಮಾನ ದೊರೆತಿದೆ. ಅಮೆರಿಕದ ‘ಅಕ್ಕ’ ಸಂಸ್ಥೆ ಮತ್ತು ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಷಾರನ್ನು ಸನ್ಮಾನಿಸಲಾಗಿದೆ. 2010ರಲ್ಲಿ ‘ಸಮೃದ್ಧಿ’ ಎಂಬ ಅಭಿನಂದನಾ ಗ್ರಂಥ ಇವರಿಗೆ ಸಮರ್ಪಿತವಾಗಿದೆ.

ಉಷಾ ಅವರು ಜೀವನದಲ್ಲಿ ಬಹಳ ನೋವುಂಡಿದ್ದಾರೆ. ಆ ನೋವಿನ ಮುಸುಕು ಸರಿಸಲು ಅವರಿಗೆ ನೆರವಾದದ್ದು, ಚಿತ್ರಕಲೆ. ಮೊದಲೇ ಚಿತ್ರಕಲೆಯಲ್ಲಿ ಆಸಕ್ತಿ ಇದ್ದರೂ, ಅದನ್ನೊಂದು ಗಂಭೀರ ಪ್ರವೃತ್ತಿಯಾಗಿ ಪರಿಗಣಿಸಿದ್ದು, ಅಪಘಾತವಾಗಿ ಮನೆಯಲ್ಲೇ ಕುಳಿತಿರಬೇಕಾದ ಸಂದರ್ಭ ಬಂದಾಗ. ಆ ಚಿತ್ರಕಲೆಯೂ ಅವರಿಗೆ ಅನೇಕ ಗೌರವ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಫೈನ್ ಆರ್ಟ್ ಅಮೆರಿಕ . ಕಾಮ್ ನವರು ನಡೆಸಿದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.
-ಆಶಾ ಹೆಗಡೆ

2018ರ ಅನುಪಮಾ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪ್ರದಾನ– ಡಾ. ಕಮಲಾ ಹಂಪನಾ, ಪ್ರಶಸ್ತಿ ಪುರಸ್ಕೃತರು– ಉಷಾ ಪಿ.ರೈ, ಅಭಿನಂದನಾ ನುಡಿ– ಎಸ್‌.ಆರ್‌.ವಿಜಯಶಂಕರ್‌, ಅಧ್ಯಕ್ಷತೆ– ವನಮಾಲಾ ಸಂಪನ್ನಕುಮಾರ. ಆಯೋಜನೆ– ಕರ್ನಾಟಕ ಲೇಖಕಿಯರ ಸಂಘ. ಸ್ಥಳ– ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಬೆಳಿಗ್ಗೆ 10.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT