ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಎಲ್ಲೆಲ್ಲೂ ಫಿಟ್‌ನೆಸ್ ಮಾತು

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಫಿಟ್‌ ಆಂಡ್ ಫೈನ್ ಆಗಿರಬೇಕು ಎನ್ನುವುದು ಹೊಸ ತಲೆಮಾರಿನ ಆಸೆ. ಆದರೆ ಫಿಟ್‌ನೆಸ್‌ ಸುಖಾಸುಮ್ಮನೆ ಬರುವುದಿಲ್ಲ ಎಂಬುದು ಕೂಡ ಒಪ್ಪಿಕೊಳ್ಳಲೇಬೇಕಾದ ಸಂಗತಿ. ಫಿಟ್‌ನೆಸ್ ಕಾಯ್ದುಕೊಳ್ಳಲು ಕೊಂಚ ವ್ಯಾಯಾಮ, ಮಿತಾಹಾರ, ಪೌಷ್ಟಿಕಾಂಶಭರಿತ ಆಹಾರ ಇರಲೇ ಬೇಕು.

ಫಿಟ್‌ನೆಸ್ ಮಾತು ಈಗ ಯಾಕೆ ಗೊತ್ತೆ? ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ‘ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌’ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಫಿಟ್‌ನೆಸ್ ಬಗ್ಗೆ ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ರಾಥೋಡ್ ಬಿತ್ತಿದ ಫಿಟ್‌ನೆಸ್ ಸವಾಲಿನ ಬೀಜ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮೂಲಕ ಮೊಳಕೆಯೊಡೆದು ಪತ್ನಿ ಅನುಷ್ಕಾ ಶರ್ಮ ಅವರ ಆರೈಕೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಮ್ಮರವಾಗಿ ಬೆಳೆಯಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಈ ಸವಾಲನ್ನು ಸ್ವೀಕರಿಸಿ ಸುದ್ದಿಯಾಗಿದ್ದಾರೆ.

ರಾಥೋಡ್‌ ಅಭಿಯಾನ
‘ಎಲ್ಲ ಭಾರತೀಯರು ತಮ್ಮ ಫಿಟ್‌ನೆಸ್‌ ಮಂತ್ರದ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳಬೇಕು’ ಎಂದು ರಾಥೋಡ್ ಅವರು #ಫಿಟ್‌ನೆಸ್‌ಚಾಲೆಂಜ್ ಎಂದು ವಿರಾಟ್ ಕೊಹ್ಲಿ, ಸೈನಾ ನೆಹವಾಲ್, ಹೃತಿಕ್ ಅವರಿಗೆ ಸವಾಲು ಹಾಕಿದ್ದರು. ಹೀಗೆ ಆರಂಭವಾದ ಅಭಿಯಾನಕ್ಕೆ ಸಾಮಾನ್ಯರಿಂದ ಹಿಡಿದು ಖ್ಯಾತ ಕ್ರೀಡಾಪಟುಗಳು, ನಟನಟಿಯರು, ರಾಜಕಾರಣಿಗಳವರೆಗೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಹವಾ ಎಬ್ಬಿಸಿದೆ.‌

ಮೊದಲು ಸ್ವೀಕರಿಸಿದವರು ವಿರಾಟ್
ರಾಥೋಡ್ ನೀಡಿದ ಸವಾಲನ್ನು ಅನಾಯಾಸವಾಗಿ ಸ್ವೀಕರಿಸಿದ ವಿರಾಟ್, ಬಟ್‌ ಪ್ಲ್ಯಾಂಕ್‌ ವ್ಯಾಯಾಮ ಮಾಡಿದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದೇ ವೇಳೆ ಅವರು ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮ, ಪ್ರಧಾನಿ ನರೇಂದ್ರ ಮೋದಿ, ಹೃತಿಕ್ ಹೆಸರನ್ನು ನಮೂದಿಸಿದ್ದರು.

ಮೋದಿ ಸಮ್ಮತಿ
ವಿರಾಟ್ ಅವರ ಸವಾಲು ಸ್ವೀಕರಿಸಿದವರ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರ ಹೆಸರೂ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಸವಾಲಿಗೆ ತಲೆಕೆಡಿಸಿಕೊಳ್ಳದ ಮೋದಿ, ವಿರಾಟ್ ಮಾತನ್ನು ಒಪ್ಪಿಕೊಂಡು ಆದಷ್ಟು ಬೇಗ ನನ್ನ ಫಿಟ್‌ನೆಸ್ ಗುಟ್ಟು ಬಿಟ್ಟುಕೊಡುವೆ ಎಂದು ಟ್ವಿಟ್ ಮಾಡಿದ್ದರು.

*

ಫಿಟ್‌ನೆಸ್‌ನಲ್ಲೂ ಪ್ರೀತಿ
ಇನ್ನು ವಿರಾಟ್ ಸವಾಲಿಗೆ ಪ್ರೀತಿಯಿಂದ ತಲೆದೂಗಿದವರು ಪತ್ನಿ ಅನುಷ್ಕಾ ಶರ್ಮ. ಇಲ್ಲಿಯೂ ಪ್ರೀತಿಯ ಮಳೆಗರೆದ ಅನುಷ್ಕಾ, ‘ಬೇಬ್ಸ್ ನೀನು ನೀಡಿದ ಆಹ್ವಾನವನ್ನು ನಾನು ಒಪ್ಪಿಕೊಂಡಿದ್ದೇನೆ’ ಎಂದ ಅನುಷ್ಕಾ, ವಿರಾಟ್‌ಗೆ AWW-Dorable ಎಂದು ಅಡ್ಡ ಹೆಸರು ಇಟ್ಟು ತಮ್ಮ ಇಷ್ಟದ ಭಾರ ಎತ್ತುವ (wrestling) ವ್ಯಾಯಾಮದ ವಿಡಿಯೊ ಶೇರ್ ಮಾಡಿದ್ದಾರೆ. ಜತೆಗೆ ನಟ ವರುಣ್ ಧವನ್, ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಹೆಸರನ್ನು ಸೂಚಿಸಿದ್ದಾರೆ.

*

ಹೃತಿಕ್ ಸೈಕ್ಲಿಂಗ್
ನಟ ಹೃತಿಕ್ ರೋಶನ್ ಸಹ ವಿರಾಟ್ ಮಾತಿಗೆ ಓಗೊಟ್ಟ ತಮ್ಮ ಫಿಟ್‌ನೆಸ್‌ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಸೈಕ್ಲಿಂಗ್ ಮಾಡುವ ಮೂಲಕ ಫಿಟ್‌ನೆಸ್ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಕಾರಿನಲ್ಲಿ ಓಡಾಡುವುದು ಸುಮ್ಮನೆ ವ್ಯರ್ಥ. ನಡಿಗೆ, ಸೈಕಲ್, ಓಟ, ಪರಿಸರವನ್ನು ಅನುಭವಿಸಿ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT