ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವನ್ನೂ ಲೆಕ್ಕಿಸದ ವಲಸೆಯ ಕಥನ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಉತ್ತರ ಕೊರಿಯಾದಲ್ಲಿರುವ ಸಹೋದರಿ ಬಗ್ಗೆ ಚೋಯ್‍ಗೆ ಚಿಂತೆಯಾಗಿದೆ. ಎರಡು ತಿಂಗಳ ಹಿಂದೆ ಕೊನೆಯ ಬಾರಿ ಮಾತನಾಡಿದ್ದಾಗ ಆಕೆಯ ಧ್ವನಿಯಲ್ಲಿ ಹತಾಶೆ ಇತ್ತು. ತನ್ನನ್ನು ಸೆರೆಮನೆಗೆ ತಳ್ಳಿ ಥಳಿಸಲಾಗಿದೆ. ಇದನ್ನು ಸಹಿಸಿಕೊಂಡು ಹೋಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಆಕೆ ಹೇಳಿದ್ದಳು. ದಕ್ಷಿಣ ಕೊರಿಯಾಕ್ಕೆ ಪರಾರಿಯಾಗಿ ಚೋಯ್‍ಯನ್ನು ಸೇರಿಕೊಳ್ಳಲು ಬಯಸುವುದಾಗಿ ಆಕೆ ಹೇಳಿದ್ದಳು. ತನ್ನೊಂದಿಗೆ ಸದಾ ವಿಷವನ್ನು ಒಯ್ಯುತ್ತಿದ್ದೇನೆ. ಇನ್ನೊಂದು ಬಾರಿ ಸೆರೆಯಾದರೆ ಅದನ್ನು ಕುಡಿದು ಜೀವ ಕಳೆದುಕೊಳ್ಳುತ್ತೇನೆ ಎಂದು ಬೇಸರ ತೋಡಿಕೊಂಡಿದ್ದಳು.

ಕಂದು ಬಣ್ಣದ ಬಟ್ಟಲು ಕಣ್ಣುಗಳ, ಉಕ್ಕಿನ ದೃಢತೆಯ 63ರ ಅಜ್ಜಿ ಚೋಯ್‍ಗೆ ಜೀವನದಲ್ಲಿ ಉಳಿದಿರುವ ಏಕೈಕ ಅತಿ ಮಹತ್ವದ ಕೆಲಸವೆಂದರೆ ಕುಟುಂಬದ ಉಳಿದ ಸದಸ್ಯರನ್ನು ದಕ್ಷಿಣ ಕೊರಿಯಾಕ್ಕೆ ಕರೆಸಿಕೊಳ್ಳುವುದು. ಆಕೆ ಹತ್ತು ವರ್ಷಗಳ ಹಿಂದೆಯೇ ಉತ್ತರ ಕೊರಿಯಾದಿಂದ ಪರಾರಿಯಾದವರು. ಆಕೆಯ ಮಗ, ತಂಗಿಯ ಮಗಳು ಕೂಡ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಂಗಿಯ ಮಗಳು ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‍ನಲ್ಲಿ ಸೆಲೂನ್‌
ನಲ್ಲಿ ಕೆಲಸ ಮಾಡುತ್ತಿದ್ದಾಳೆ.

ಮನೆಯಲ್ಲಿಯೇ ಕುಳಿತು ಟೈಲರಿಂಗ್‍ ಕೆಲಸ ಮಾಡುವ 50 ವರ್ಷ ವಯಸ್ಸಿನ  ತನ್ನ ತಂಗಿ ಮತ್ತು ಆಕೆಯ ಮಗನನ್ನು ಜತೆಯಾಗಲು ಚೋಯ್‍ ಕಾತರಳಾಗಿದ್ದಾರೆ. ದೇಶ ತೊರೆಯಲು ನೆರವಾಗಿದ್ದಾರೆ ಎಂಬ ಶಂಕೆಯಲ್ಲಿ ಆಕೆಯ ಗಂಡ, ಗಂಡನ ತಮ್ಮ ಮತ್ತು ಅಳಿಯನನ್ನು ಬಂಧಿಸಲಾಗಿದೆ.
‘ಸರ್ಕಾರದ ವಿರೋಧಿಗಳು’ ಎಂದು ಇವರಿಗೆ ಹಣೆಪಟ್ಟಿ ಕಟ್ಟಲಾಗಿದೆ. ಬಂಧನದ ಬಳಿಕ ಅವರನ್ನು ಕಂಡವರಿಲ್ಲ. ಹಾಗಾಗಿ ಸರ್ಕಾರದ ಗಮನಕ್ಕೆ ಬಾರದಂತೆ ತಂಗಿಯನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಚೋಯ್‍ ಯೋಚಿಸುತ್ತಿದ್ದಾರೆ.

ಚೋಯ್‍ ಬಹುಕಾಲದಿಂದ ಕಾಯುತ್ತಿದ್ದ ಸುದ್ದಿ ಒಂದು ಬೇಸಿಗೆಯ ಸಂಜೆ ಅವರಿಗೆ ಸಿಕ್ಕಿತು. ಅಪಾರ್ಟ್‌ಮೆಂಟ್‍ ಬಾಗಿಲು ತೆರೆಯುತ್ತಿದ್ದಂತೆಯೇ ‘ಅಣ್ಣ ಫೋನ್‍ ಮಾಡಿದ್ದ, ನಾವು ಗಡಿ ದಾಟಿದ್ದೇವೆ, ನಾವೀಗ ಚೀನಾದಲ್ಲಿದ್ದೇವೆ, ಕಾರು ತೆಗೆದುಕೊಂಡು ಬನ್ನಿ ಎಂದು ಆತ ಹೇಳಿದ’ ಎಂದು ತಂಗಿಯ ಮಗಳು ಕೂಗಿ ಹೇಳಿದಳು.

ಚೋಯ್‍ ತಮ್ಮ ಕೊನೆಯ ಹೆಸರಿನಿಂದಷ್ಟೇ ಗುರುತಿಸಿಕೊಳ್ಳುತ್ತಾರೆ. ಉತ್ತರ ಕೊರಿಯಾ ಸರ್ಕಾರದ ಪ್ರತೀಕಾರದ ಭಯ ಇರುವುದರಿಂದ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದಾರೆ. ಚೋಯ್‍ ಸಂಭ್ರಮಕ್ಕೆ ಮೇರೆಯೇ ಇರಲಿಲ್ಲ. ಆದರೆ, ಈಗ ಚೋಯ್‍ ಮತ್ತು ಅವರ ತಂಗಿಯ ಮಗಳಿಗೆ ಮತ್ತೊಂದು ಕಳವಳ ಕಾಡತೊಡಗಿತು.

ದೇಶ ತೊರೆಯುವವರು ಸಾಮಾನ್ಯವಾಗಿ ಉತ್ತರ ಕೊರಿಯಾ ಗಡಿದಾಟಿ ಚೀನಾಕ್ಕೆ ಬಂದು ಬಿಡುತ್ತಾರೆ. ಉತ್ತರ ಕೊರಿಯಾ ನಾಯಕ ಕಿಮ್‍ ಜಾಂಗ್‍ ಉನ್‍ ನೇತೃತ್ವದ ಸೇನೆಯ ಯೋಧರು ಗಡಿಯಲ್ಲಿ ಬಿಗಿ ಕಾವಲು ಏರ್ಪಡಿಸಿದ್ದಾರೆ. ಚೀನಾ ನೆಲ ತಲುಪಿದ ಮೇಲೆ ಚೀನಾದ ಭದ್ರತಾ ಪಡೆಗಳು ಮತ್ತು ಕೊರಿಯಾದ ಏಜೆಂಟರ ಕಣ್ಣು ತಪ್ಪಿಸಬೇಕಿದ್ದರೆ ಕಳ್ಳ ಸಾಗಾಟದಾರರ ಮೊರೆಹೋಗಲೇಬೇಕು. ಗಡಿದಾಟಿಸಲು ಅವರು ಬಹಳ ದೊಡ್ಡ ಮೊತ್ತ ಕೇಳುತ್ತಾರೆ.

ದಕ್ಷಿಣ ಕೊರಿಯಾದಿಂದ ತಪ್ಪಿಸಿಕೊಂಡವರು ಸಾಮಾನ್ಯವಾಗಿ ಚೀನಾದ ದಕ್ಷಿಣ ಗಡಿಯತ್ತ ಸಾಗುತ್ತಾರೆ. ಅಲ್ಲಿಂದ ಥಾಯ್ಲೆಂಡ್‍ ಪ್ರವೇಶಿಸುತ್ತಾರೆ. ದಕ್ಷಿಣ ಕೊರಿಯಾ ಸರ್ಕಾರವೇ ಅವರನ್ನು ವಿಮಾನ ಮೂಲಕ ಸೋಲ್‍ಗೆ ಕರೆತರುತ್ತದೆ.

ಚೀನಾ ಸರ್ಕಾರದ ವರ್ತನೆ, ಉತ್ತರ ಕೊರಿಯಾದಿಂದ ತಪ್ಪಿಸಿಕೊಳ್ಳುವ ಪ್ರಯಾಣವನ್ನು ಇನ್ನಷ್ಟು ಅಪಾಯಕಾರಿಯಾಗಿಸುತ್ತದೆ. ಉತ್ತರ ಕೊರಿಯಾ ಜತೆ ಚೀನಾದ ಸಂಬಂಧ ಹಳಸಿದೆ. ಹಾಗಿದ್ದರೂ ಆ ದೇಶವನ್ನು ಸಂಪ್ರೀತಗೊಳಿಸಲು ಯತ್ನಿಸುತ್ತಿರುವ ಚೀನಾ, ದೇಶ ಬಿಟ್ಟು ಪರಾರಿಯಾಗು
ವವರು ಸಿಕ್ಕಿದರೆ ಅವರನ್ನು ಉತ್ತರ ಕೊರಿಯಾಕ್ಕೆ ಹಸ್ತಾಂತರಿಸುತ್ತದೆ. ಅಂಥವರಿಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಚಿತ್ರಹಿಂಸೆ ಬಹುತೇಕ ನಿಶ್ಚಿತ. ಉತ್ತರ ಕೊರಿಯಾದ ಹತ್ತಾರು ಸಾವಿರ ಮಂದಿಯನ್ನು ಚೀನಾ ಹಿಂದಕ್ಕೆ ಕಳುಹಿಸಿದೆ. ಇದು ಅಂದಾಜು ಮಾತ್ರ. ಪರಾರಿಯಾಗುತ್ತಿರುವವರನ್ನು ತನ್ನ ಗಡಿಯೊಳಗಿನಿಂದ ಉತ್ತರ ಕೊರಿಯಾ ಸೈನಿಕರು ಸೆರೆ ಹಿಡಿದರೂ ಚೀನಾ ಸುಮ್ಮನಿರುತ್ತದೆ ಎಂದು ಉತ್ತರ ಕೊರಿಯಾದಲ್ಲಿರುವ ಮಾನವ ಹಕ್ಕುಗಳ ಸಮಿತಿ ಹೇಳುತ್ತದೆ.

ಸುಮಾರು 30 ಸಾವಿರ ಉತ್ತರ ಕೊರಿಯನ್ನರು ದಕ್ಷಿಣ ಕೊರಿಯಾಕ್ಕೆ ತಲುಪಿದ್ದಾರೆ. ಹೀಗೆ ಬರುವವರಿಗೆ ಅಲ್ಲಿ ಆದರದ ಸ್ವಾಗತವಿದೆ. ಉಚಿತ ವಸತಿ, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಮತ್ತು ಸೂಕ್ತ ಉದ್ಯೋಗ ತರಬೇತಿ ನೀಡಲಾಗುತ್ತದೆ.
ಆದರೆ, 2011ರಲ್ಲಿ ಕಿಮ್‍ ಅಧಿಕಾರಕ್ಕೆ ಬಂದ ನಂತರ ತಪ್ಪಿಸಿಕೊಂಡು ಬರುವುದು ದುಸ್ತರವಾಗಿದೆ. ಕಳೆದ ವರ್ಷ ದಕ್ಷಿಣ ಕೊರಿಯಾ ತಲುಪಿದ ಉತ್ತರ ಕೊರಿಯರನ್ನರ ಸಂಖ್ಯೆ 1,127. ಕಿಮ್‍ ಅಧಿಕಾರಕ್ಕೆ ಬರುವುದಕ್ಕಿಂತ ಹಿಂದಿನ ವರ್ಷಗಳಲ್ಲಿ ಇದರ ಮೂರು ಪಟ್ಟು ಜನರು ಪಲಾಯನ ಮಾಡುತ್ತಿದ್ದರು. ನಿರಾಶ್ರಿತರು ಅವರ ದೇಶದಲ್ಲಿ ಶಿಕ್ಷೆಗೆ ಒಳಗಾಗುವಂತಿದ್ದರೆ ಅಂಥವರನ್ನು ಆ ದೇಶಕ್ಕೆ ಹಸ್ತಾಂತರಿಸಬಾರದು ಎಂಬ 1951ರ ವಿಶ್ವಸಂಸ್ಥೆ ಒಪ್ಪಂದಕ್ಕೆ ಚೀನಾ ಸಹಿ ಹಾಕಿದೆ. ಹಾಗಿದ್ದರೂ ಉತ್ತರ ಕೊರಿಯನ್ನರನ್ನು ಹಸ್ತಾಂತರಿಸುತ್ತಿದೆ. ಇಂತಹ ಹಸ್ತಾಂತರವನ್ನು ನಿಲ್ಲಿಸುವಂತೆ ಅಮೆರಿಕ, ಐರೋಪ್ಯ ಒಕ್ಕೂಟ, ದಕ್ಷಿಣ ಕೊರಿಯಾ ಮತ್ತು ವಿಶ್ವಸಂಸ್ಥೆ ಹಲವು ಬಾರಿ ಚೀನಾವನ್ನು ಒತ್ತಾಯಿಸಿದೆ. ಈ ಎಲ್ಲ ದೇಶಗಳು ಉತ್ತರ ಕೊರಿಯಾದಿಂದ ಪರಾರಿಯಾಗುವವರನ್ನು ‘ರಾಜಕೀಯ ನಿರಾಶ್ರಿತರು’ ಎಂದು ಪರಿಗಣಿಸುತ್ತಿವೆ. ಆದರೆ ಇದಕ್ಕೆ ಚೀನಾ ಯಾವ ಬೆಲೆಯನ್ನೂ ಕೊಟ್ಟಿಲ್ಲ. ಈ ಹಸ್ತಾಂತರಕ್ಕೆ ಚೀನಾ ಇನ್ನೊಂದು ಸಮರ್ಥನೆಯನ್ನೂ ನೀಡುತ್ತಿದೆ: ತನ್ನ ದೇಶದ ಈಶಾನ್ಯ ಭಾಗದಲ್ಲಿ ಹೊರಗಿನವರು ತುಂಬಿಕೊಂಡು ಅಸ್ಥಿರತೆ ಉಂಟಾಗುವುದನ್ನು ತಾನು ಬಯಸುವುದಿಲ್ಲ ಎಂಬುದು ಈ ಸಮರ್ಥನೆ.

ಚೋಯ್‍ ಮತ್ತು ಅವರ ತಂಗಿಯ ಮಗಳಿಗೆ ಆರಂಭದಲ್ಲಿ ಸ್ವಲ್ಪ ಅಚ್ಚರಿಯೇ ಆಯಿತು. ದೇಶ ತೊರೆದವರ ಗುಂಪು ಅವರು ನಿರೀಕ್ಷಿಸಿದ್ದಕ್ಕಿಂತ ದೊಡ್ಡದೇ ಇತ್ತು. ಚೋಯ್‍ಯ ತಂಗಿ, ಅವರ 28 ವರ್ಷದ ಮಗ, ಆತನ ಗೆಳತಿ ಮತ್ತು ಇಬ್ಬರು ಗೆಳೆಯರು ಈ ಗುಂಪಿನಲ್ಲಿದ್ದರು. ಈಗ, ಯಾರದ್ದೇ ಗಮನ ಸೆಳೆಯದೆ ಐವರೂ ಚೀನಾ ದಾಟಿ ಹೋಗಬೇಕಿತ್ತು.ಈ ತಪ್ಪಿಸಿಕೊಳ್ಳುವಿಕೆಯನ್ನು ನಿರ್ವಹಿಸಲು ನಿಯೋಜಿಸಲಾಗಿದ್ದ ದಕ್ಷಿಣ ಕೊರಿಯಾದ ವ್ಯಕ್ತಿಗೆ ಚೋಯ್‍ ಕರೆ ಮಾಡಿದರು. ಕಳ್ಳಸಾಗಾಣಿಕೆ ಲೋಕದಲ್ಲಿ ಈತ ದಲ್ಲಾಳಿಯಾಗಿ ಕೆಲಸ ಮಾಡುತ್ತಾನೆ. ಐದು ವರ್ಷಗಳ ಹಿಂದೆ, ಪರಿಸ್ಥಿತಿ ಇಷ್ಟೊಂದು ಕಠಿಣವಾಗಿಲ್ಲದ ಸಂದರ್ಭದಲ್ಲಿ ಆತ ಚೋಯ್‌ನ ತಂಗಿಯ ಮಗಳನ್ನು ಗಡಿದಾಟಿಸಿ ಕರೆತಂದಿದ್ದ.

ಈ ಐವರ ಗುಂಪು ಚೀನಾದ ಮೂಲಕ ಪರಾರಿಯಾಗಲು ಆಯ್ಕೆ ಮಾಡಿಕೊಂಡ ಸಂದರ್ಭ ಅತ್ಯಂತ ಅಪಾಯಕಾರಿಯಾದುದೇ ಆಗಿತ್ತು. ಉತ್ತರ ಕೊರಿಯಾದಿಂದ ದೇಶ ತೊರೆಯುವವರನ್ನು ಹಿಡಿಯುವುದಕ್ಕಾಗಿ ಚೀನಾದಲ್ಲಿ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಈ ಮಧ್ಯೆ, ಚೀನಾದ ನಾಯಕ ಷಿ ಜಿನ್‍ಪಿಂಗ್‍ ಅವರು ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಹೆಚ್ಚು ಕಟ್ಟುನಿಟ್ಟಿನಿಂದ ಜಾರಿಗೊಳಿಸುತ್ತಿದ್ದಾರೆ. ಹಾಗಾಗಿ, ಗಡಿಯಲ್ಲಿ ಸೆರೆಯಾದ ಉತ್ತರ ಕೊರಿಯಾದ ಜನರನ್ನು ಲಂಚ ಪಡೆದು ಬಿಡುಗಡೆ ಮಾಡಲು ಮನಸ್ಸು ಮಾಡುವ ಅಧಿಕಾರಿಗಳ ಸಂಖ್ಯೆ ಬಹಳ ಕಡಿಮೆಯಾಗಿದೆ.

ಚೋಯ್‍ ಮತ್ತು ಅವರ ತಂಗಿಯ ಮಗಳು ದಲ್ಲಾಳಿಗೆ ಒಟ್ಟು 13 ಸಾವಿರ ಡಾಲರ್ (ಸುಮಾರು ₹8.5 ಲಕ್ಷ) ನೀಡಿದ್ದಾರೆ. ತಂಗಿಯ ಮಗಳು ಸೋಲ್‍ನಲ್ಲಿ ಹೊಂದಿದ್ದ ಅಪಾರ್ಟ್‍ಮೆಂಟ್‍ ಮಾರಿಯೇ ಈ ಮೊತ್ತದ ಬಹುಭಾಗವನ್ನು ಅವರು ಹೊಂದಿಸಿದ್ದಾರೆ. ಚೋಯ್‍ ನೇಮಿಸಿರುವ ದಲ್ಲಾಳಿಗೆ ಬಹಳ ಚಾಕಚಕ್ಯತೆಯೇನೂ ಇಲ್ಲ, ಹಾಗೆಯೇ ಆತ ಬಹಳ ದುರಾಸೆಯ ವ್ಯಕ್ತಿಯೂ ಹೌದು. ಚೋಯ್‍ ತಂಗಿಯ ಪ್ರಯಾಣವನ್ನು ತಾನೇ ನಿರ್ವಹಿಸುವ ಬದಲು ಅದನ್ನು ಆತ ಸೋಲ್‍ನಲ್ಲಿರುವ ಉತ್ತರ ಕೊರಿಯಾದ ಮಹಿಳೆಯೊಬ್ಬ ಳಿಗೆ ವಹಿಸಿದ್ದಾನೆ. ಆಕೆ ಚೀನಾದ ವ್ಯಕ್ತಿಯನ್ನು ಮದುವೆಯಾದವಳು. ಚೀನಾದೊಳಗೆ ನುಸುಳಿದ ಬಳಿಕ ಈ ಗುಂಪನ್ನು ಕರೆತರಲು ಚೀನಾದ ತನ್ನ ಸಂಬಂಧಿಕನೊಬ್ಬನನ್ನು ಆಕೆಯ ಗಂಡ ನಿಯೋಜಿಸಿದ್ದಾನೆ. ಈ ವ್ಯಕ್ತಿಯು ಗುಂಪನ್ನು ಈಶಾನ್ಯ ಚೀನಾದ ನಗರ ಶೆನ್‍ಯಾಂಗ್‍ಗೆ ಕರೆತರಬೇಕು. ಉತ್ತರ ಕೊರಿಯಾದಿಂದ ಚೀನಾ ಮೂಲಕ ತಪ್ಪಿಸಿಕೊಳ್ಳುವವರು ಸಾಮಾನ್ಯವಾಗಿ ಈ ಮಾರ್ಗವನ್ನೇ ಅನುಸರಿಸುತ್ತಾರೆ. ಅಲ್ಲಿಂದ ಅವರು ದಕ್ಷಿಣಕ್ಕೆ ಪ್ರಯಾಣಿಸುತ್ತಾರೆ.

ಯಲು ನದಿಯು ಉತ್ತರ ಕೊರಿಯಾ ಮತ್ತು ಚೀನಾವನ್ನು ಪ್ರತ್ಯೇಕಿಸುತ್ತದೆ. ಬೇಸಿಗೆಯಲ್ಲಿ ಈ ನದಿಯಲ್ಲಿ ಹೆಚ್ಚು ನೀರು ಇರುವುದಿಲ್ಲ. ತಂಗಿಯ ಗುಂಪು ನದಿದಾಟಿ ಆಚೆ ಬಂತು. ಆದರೆ, ನದಿ ದಾಟಿದ ಗುಂಪಿಗೆ ಕಾಡಿನ ಮಧ್ಯೆ ದಾರಿತಪ್ಪಿಹೋಯಿತು. ಚೀನಾದ ಪೂರ್ವ ಭಾಗದ ಕೊನೆಯಲ್ಲಿರುವ ಈ ದಟ್ಟ ಅರಣ್ಯದಲ್ಲಿ ಅವರು, ತಮ್ಮನ್ನು ಕರೆದೊಯ್ಯಲು ನಿಯೋಜಿತನಾಗಿದ್ದ ಚಾಲಕನನ್ನು ಹುಡುಕಿ ಎರಡು ದಿನ ಅಲೆದಾಡಿದರು. ಕೊನೆಗೂ ಅವರಿಗೆ ಅರಣ್ಯದಿಂದ ಹೊರಗೆ ಬರಲು ದಾರಿ ಸಿಕ್ಕಿತು.  ಚಾಂಗ್‍ಬಾಯ್‍ ಪಟ್ಟಣದ ಹೊರಭಾಗದಲ್ಲಿ ಚಾಲಕ ಇವರನ್ನು ಗುರುತಿಸಿದ. ‘ಕೊನೆಗೂ ನಾವು ಬಚಾವಾದೆವು, ಇನ್ನು ನಾವು ಬದುಕುತ್ತೇವೆ’ ಎಂಬ ಉದ್ಗಾರ ಚೋಯ್‍ ತಂಗಿಯ ಮಗನ ಬಾಯಿಯಿಂದ ಹೊರಟಿತು. ತಲುಪಬೇಕಾದ ಗುರಿಯ ಸಮೀಪದಲ್ಲಿದ್ದರು ಅವರು. ಆ ನಂತರ ಯಾವುದೇ ಸುದ್ದಿ ಇರಲಿಲ್ಲ.

ಅವರಿಗೆ ಏನಾಯಿತು? ಎಂಬುದು ಸೋಲ್‍ನಲ್ಲಿರುವ ದಲ್ಲಾಳಿ ಹಾಗೂ ಆತ ನೇಮಿಸಿಕೊಂಡ ಉತ್ತರ ಕೊರಿಯಾದ ಮಹಿಳೆಗೆ ಗೊತ್ತಾಗಿರಲಿಲ್ಲ. ‘ನಾವು ಅವರನ್ನು ಹುಡುಕುತ್ತಿದ್ದೇವೆ’ ಎಂದಷ್ಟೇ ಚೋಯ್‍ಗೆ ಮೊದಲು ಆ ಮಹಿಳೆ ಹೇಳಿದ್ದಳು. ಆ ನಂತರ, ‘ಎಲ್ಲ ಐವರನ್ನು ಒತ್ತೆ ಇರಿಸಿಕೊಳ್ಳಲಾಗಿದೆ’ ಎಂದು ಮಹಿಳೆ ವಿವರಣೆ ಕೊಟ್ಟಳು.ಕೆಲವು ದಿನಗಳ ಬಳಿಕ ಆಕೆ ಕತೆ ಬದಲಾಯಿಸಿದಳು: ‘ಅವರೆಲ್ಲರನ್ನೂ ಬಂಧಿಸಲಾಗಿದೆ’. ಅವರನ್ನು ಸೆರೆಯಿಂದ ಬಿಡಿಸಲು ಹೆಚ್ಚು ಹಣ ಬೇಕಾಗಬಹುದು ಎಂಬುದು ಅವಳ ಮಾತಿನ ಅರ್ಥವಾಗಿತ್ತು. ನೋಟಿನ ಕಟ್ಟುಗಳನ್ನು ಎತ್ತಿಕೊಂಡು ಆ ಮಹಿಳೆ ಚಾಂಗ್‍ಬಾಯ್‍ಗೆ ವಿಮಾನ ಹತ್ತಿದಳು. ಗುಂಪನ್ನು ಅಲ್ಲಿ ಹಿಡಿದಿಟ್ಟಿರಬಹುದು ಎಂಬುದು ಅವಳ ಅಂದಾಜಾಗಿತ್ತು. ಅಲ್ಲೆಲ್ಲ ಹುಡುಕಾಡಿದ ಮಹಿಳೆ ಕೆಲದಿನಗಳ ಬಳಿಕ ಬರಿಗೈಯಲ್ಲಿ ಹಿಂದಿರುಗಿದಳು. ಈ ಗುಂಪಿನವರ ಹುಟ್ಟೂರಿನ ನಗರಪಾಲಿಕೆ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಈ ಐವರ ಫೋಟೊ ಅಂಟಿಸಲಾಗಿದೆ ಎಂಬ ಸುದ್ದಿ ಉತ್ತರ ಕೊರಿಯಾದಿಂದ ಬಂತು. ಹೀಗೆ ಫೋಟೊ ಬಂತು ಎಂದರೆ ಎಲ್ಲರೂ ಸತ್ತು ಹೋಗಿದ್ದಾರೆ ಎಂದು ಅರ್ಥ. ಎಲ್ಲ ಐದು ಮೃತದೇಹಗಳನ್ನು ಉತ್ತರ ಕೊರಿಯಾಕ್ಕೆ ಹಸ್ತಾಂತರಿಸಲಾಗಿದೆ ಎಂಬ ವದಂತಿಗಳು ದೇಶ ತೊರೆಯಲು ಕಾತರರಾಗಿದ್ದ ಜನರ ನಡುವೆ ರೆಕ್ಕೆ ಪುಕ್ಕ ಪಡೆದುಕೊಂಡವು. ಆದರೆ ಇದಕ್ಕೆ ಯಾವ ಪುರಾವೆಯೂ ಇರಲಿಲ್ಲ.

ಚೋಯ್‍ಯ ತಂಗಿ ಮತ್ತು ಇತರ ನಾಲ್ವರಿಗೆ ಏನಾಯಿತು ಎಂದು ನೇರವಾಗಿ ಚೀನಾ ವಿದೇಶಾಂಗ ಸಚಿವಾಲಯಕ್ಕೆ ಕೇಳಿದ ಪ್ರಶ್ನೆಗೆ ಸಿದ್ಧ ಉತ್ತರ ಬಂತು: ‘ಉತ್ತರ ಕೊರಿಯಾದಿಂದ ಪರಾರಿಯಾಗುವವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳನ್ನು
ಅಂತರರಾಷ್ಟ್ರೀಯ ಮತ್ತು ದೇಶೀಯ ನಿಯಮಗಳ ಪ್ರಕಾರ ನಿರ್ವಹಿಸಲಾಗುತ್ತದೆ’. ಈ ಐದೂ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ತಮಗೆ ದೊರೆತ ಅಲ್ಪಸ್ವಲ್ಪ ಮಾಹಿತಿಯು ಸೂಚಿಸುತ್ತದೆ ಎಂದು ಮಾನವ ಹಕ್ಕುಗಳ ಸಂಸ್ಥೆ ಹೇಳುತ್ತಿದೆ. ಆದರೆ ಇದಕ್ಕೆ ಯಾವ ಸಾಕ್ಷ್ಯವೂ ಇಲ್ಲ.

ಇದರ ಬಗ್ಗೆ ಚೋಯ್‍ ಅವರ ಅಭಿಪ್ರಾಯ ಏನು? ‘ನನ್ನ ತಂಗಿ ಮತ್ತು ಅವಳ ಮಗ ಆತ್ಮಹತ್ಯೆ ಮಾಡಿಕೊಂಡಿಬೇಕು ಎಂದು ನಾನು ಮತ್ತು ನನ್ನ ತಂಗಿಯ ಮಗಳು ನಂಬಿದ್ದೇವೆ’ ಎಂದು ಚೋಯ್‍ ಹೇಳುತ್ತಾರೆ. ‘ಆದರೆ ಎಲ್ಲ ಐವರೂಆತ್ಮಹತ್ಯೆ ಮಾಡಿಕೊಂಡರೇ ಎಂಬುದು ಸ್ಪಷ್ಟವಿಲ್ಲ’.

-ಜೇನ್‌ ಪರ್ಲೇಜ್‌ ಮತ್ತು ಸು ಹುಯ್ನ್‌ ಲಿ

-ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT