ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಮುಂದುವರಿದ ಗಾಳಿ, ಮಳೆ ಅಬ್ಬರ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಅನೇಕ ಮನೆಗಳು ಹಾಗೂ ಗುಡಿಸಲುಗಳಿಗೆ ಹಾನಿಯಾಗಿದೆ. ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದಲ್ಲಿ ಸೀತಮ್ಮ (25) ಎಂಬುವವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಚಾಮರಾಜನಗರದಲ್ಲಿರುವ ಪುರಾತನ ದೊಡ್ಡ ಅರಸನಕೊಳ ಮಳೆಯಿಂದ ತುಂಬಿದೆ. ಹರದನಹಳ್ಳಿಯ ಬಂಡಿಗೆರೆ, ಉಡಿಗಾಲ, ಆಲ್ದೂರು, ನವಿಲೂರು ಗ್ರಾಮಗಳಲ್ಲಿ 7 ಮನೆಗಳ ಗೋಡೆಗಳು ಕುಸಿದಿವೆ. ಆಲ್ದೂರಿನಲ್ಲಿ 1.5 ಎಕರೆ ಬಾಳೆತೋಟ ನಾಶವಾಗಿದೆ.

ಕೊಡಗು ಜಿಲ್ಲೆಯ ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಮಡಿಕೇರಿ, ಗಾಳಿಬೀಡು ವ್ಯಾಪ್ತಿಯಲ್ಲೂ ವರುಣನ ಆರ್ಭಟ ಜೋರಾಗಿತ್ತು.

ಹಸು ಬಲಿ: ಮೈಸೂರು ನಗರ ಸೇರಿದಂತೆ ತಿ.ನರಸೀಪುರ, ನಂಜನಗೂಡು, ವರುಣಾದಲ್ಲಿ ಶುಕ್ರವಾರ ಸಂಜೆ ಜೋರು ಮಳೆ ಸುರಿಯಿತು. ತಿ.ನರಸೀಪುರ ಬಸ್‌ ನಿಲ್ದಾಣದ ಕಾಂಪೌಂಡ್‌ ಕುಸಿದಿದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿಯಲ್ಲಿ 1 ಎಕರೆ ಬಾಳೆ ಬೆಳೆ ನಾಶವಾಗಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿ ಗುರುವಾರ ರಾತ್ರಿ ಸಿಡಿಲಿಗೆ ಹಸುವೊಂದು ಬಲಿ
ಯಾಗಿದೆ. ಭುವನಹಳ್ಳಿಯಲ್ಲಿ ತೇಗ, ಅಡಿಕೆ ಮರಗಳು ಉರುಳಿವೆ. ಬೆಟ್ಟದಪುರ ಸಮೀಪದ ಕುಮಾರಿಕೊಪ್ಪಲಿನಲ್ಲಿ ಮನೆಯೊಂದರ ಚಾವಣಿ ಹಾರಿಹೋಗಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಕುನ್ನಪಟ್ಟಣದ ಗ್ರಾಮದಲ್ಲಿ ಮನೆಯೊಂದು ಕುಸಿದು ಒಂದೇ ಕುಟುಂಬದ ಐವರು ಗಾಯಗೊಂಡಿದ್ದಾರೆ.

ಮಂಡ್ಯ ನಗರ ಸೇರಿದಂತೆ ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ಮಳೆಯಾಗಿದೆ.

ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಸುಗ್ಗನಹಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ ದೇವರ ತೋಪಿನಲ್ಲಿದ್ದ ಹಲವು ಮರಗಳು ಧರೆಗೆ ಉರುಳಿವೆ.

ಧಾರವಾಡ, ಉತ್ತರ ಕನ್ನಡ, ಗದಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಗುರುವಾರ ತಡರಾತ್ರಿ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಗಾಳಿಗೆ ಹಲವು ಕಡೆ ಮರಗಳು ಉರುಳಿಬಿದ್ದಿವೆ.

ಸಿಡಿಲು ಬಡಿದು, ಕುಮಟಾ ತಾಲ್ಲೂಕಿನ ಬರ್ಗಿ ಗ್ರಾಮದ ಮೂವರು ಗಾಯಗೊಂಡಿದ್ದಾರೆ. ಕಲಭಾಗದ ಹೊನಮಾಂವ್ ಚರ್ಚ್ ಸಮೀಪದ ಎಪಿಎಂಸಿ ಗುಡ್ಡದ ಮೇಲಿರುವ ಶತಮಾನದಷ್ಟು ಹಳೆಯದಾದ ಮೇರಿ ಶಿಲುಬೆ ಭಗ್ನಗೊಂಡಿದೆ.

ಶಿರಸಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ ಮತ್ತಿತರ ಕಡೆ ಮಳೆಯಾಗಿದ್ದು, ಬೆಳೆ ಹಾನಿಯಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ರಾಮಸಾಗರದಲ್ಲಿ ಮಳೆಯಿಂದ 1,100 ಎಕರೆ ಬಾಳೆತೋಟ ಹಾಳಾಗಿದೆ.

ರಾಜ್ಯ ಹೆದ್ದಾರಿ 49ರ ಸಿದ್ಧೇಶ್ವರ ಕ್ರಾಸ್‌ನಲ್ಲಿ ಆಲದ ಮರ ಉರುಳಿ ಬಿದ್ದಿದ್ದರಿಂದ ಶುಕ್ರವಾರ ಬೆಳಗಿನ ಜಾವ ಆರು ಗಂಟೆ
ಯವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಬೀಸಿದ ಭಾರಿ ಪ್ರಮಾಣದ ಬಿರುಗಾಳಿಯಿಂದ ಅಪಾರ ನಷ್ಟವಾಗಿದೆ. ಜಾನೇಕಲ್, ಅಮರಾವತಿ, ಹರವಿ, ಕೆ.ಗುಡದಿನ್ನಿ , ಹಳ್ಳಿ ಹೊಸೂರು, ಮಾಡಗಿರಿ, ಶ್ರೀನಿವಾಸ್ ಕ್ಯಾಂಪ್, ಬಲ್ಲಟಗಿ ಕ್ಯಾಂಪ್‌ ಸೇರಿ ಅನೇಕ ಗ್ರಾಮಗಳಲ್ಲಿ ಬೃಹತ್ ಮರಗಳು ರಸ್ತೆಗೆ ಉರುಳಿವೆ. ಟಿನ್ ಶೆಡ್, ಹುಲ್ಲಿನ ಬಣವಿ ಗಾಳಿಗೆ ಹಾರಿ ಹೋಗಿವೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.‌

ಸಿರವಾರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ರಾತ್ರಿ ಗಾಳಿ ಸಹಿತ ಮಳೆ ಸುರಿಯಿತು. ಹಳ್ಳಿಹೊಸೂರು ಗ್ರಾಮದಲ್ಲಿ ಮೂರು ಮರಗಳು ನೆಲಕ್ಕುರುಳಿದ್ದು, ಇದರಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಗುಡಿಸಲುಗಳು ಗಾಳಿಗೆ ನೆಲಸಮವಾಗಿರುವುದರಿಂದ ಜನರು ಅಂಗನವಾಡಿಯಲ್ಲಿ ಆಶ್ರಯ ಪಡೆದಿದ್ದಾರೆ.

ಹರವಿ ಗ್ರಾಮ ಹೊರವಲಯದಲ್ಲಿ ಮಳೆಯಿಂದಾಗಿ ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಹರವಿ ಸಮೀಪದ ಮಾನ್ವಿ- ಸಿರವಾರ ಮುಖ್ಯ ರಸ್ತೆಯಲ್ಲಿ ಐದು ಮರಗಳು ಮುರಿದು ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಬಲ್ಲಟಗಿ, ನುಗಡೋಣಿ, ಹೊಸೂರು ಗ್ರಾಮಗಳಲ್ಲಿ  ಮಳೆ, ಗಾಳಿಯಿಂದ ಟಿನ್ ಶೆಡ್‌ಗಳು ಕಿತ್ತುಹೋಗಿವೆ.

ಹೆದ್ದಾರಿ ಮೇಲೆ ಬಿದ್ದ ಮರ

ಬೀರೂರು: ಪಟ್ಟಣದ ಹೊರವಲಯದ ಶಿವಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುರುವಾರ ರಾತ್ರಿ ಸುರಿದ ಗಾಳಿ ಮಳೆಗೆ ಹೆಮ್ಮರವೊಂದು ರಸ್ತೆಗೆ ಉರುಳಿಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು.

ಗುರುವಾರ ತಡರಾತ್ರಿ 2 ಗಂಟೆ ವೇಳೆಗೆ ಮರ ಬಿದ್ದ ವಿಷಯ ತಿಳಿದ ಕೂಡಲೇ ಬೀರೂರು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೆರವು ಕಾರ್ಯಾಚರಣೆ ಆರಂಭಿಸಿದರು. ಬೀರೂರು ಕಡೆಯಿಂದ ಶಿವಮೊಗ್ಗ ಕಡೆ ಹೋಗುವವರಿಗೆ ಪರ್ಯಾಯ ಮಾರ್ಗವಾಗಿ ಲಿಂಗದಹಳ್ಳಿ ರಸ್ತೆಯಲ್ಲಿ ಸಂಚರಿಸುವಂತೆ ಸೂಚಿಸಲಾಗಿತ್ತು. ಮರ ತೆರವು ಕಾರ್ಯಾಚರಣೆಗೆ ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಲಾಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದು ಮರ ಕೊಯ್ಯುವವರಿಗೆ ಮಾರ್ಗದರ್ಶನ ನೀಡಿದರು. ಶುಕ್ರವಾರ ಬೆಳಿಗ್ಗೆಯಿಂದ ಲಾರಿಗಳು ಮುಂದೆ ಹೋಗಲು ದಾರಿ ಕಾಣದೆ ಸಾಲಾಗಿ ನಿಂತಿದ್ದವು. ಬೆಳಿಗ್ಗೆ 10.30ರ ಸುಮಾರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಮಂಗಳವಾರದವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ಕರಾವಳಿ ಜಿಲ್ಲೆಗಳಲ್ಲಿ ಅತಿವೇಗದ ಗಾಳಿ ಬೀಸುವ ಮತ್ತು ಅಲ್ಲಲ್ಲಿ ಮಳೆಯಾಗುವ ಸಂಭವ ಇದೆ. ಭಾನುವಾರ ಮಳೆ ಬೀಳುವ ಸಾಧ್ಯತೆ ಇಲ್ಲ. ಆದರೆ, ಸೋಮವಾರ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಅತಿವೇಗದ ಗಾಳಿಯೂ ಬೀಸಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

ಮಂಗಳವಾರ ಗಾಳಿಯ ವೇಗ ಮತ್ತು ಮಳೆ ಇನ್ನೂ ಹೆಚ್ಚಲಿದೆ. ಆ ದಿನ ಕರಾವಳಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.

ಭಾಗಮಂಡಲದಲ್ಲಿ 7ಸೆಂ.ಮೀ ಮಳೆ

ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗಿದೆ. ಭಾಗಮಂಡಲದಲ್ಲಿ 7 ಸೆಂ.ಮೀ ಮಳೆ ಸುರಿದಿದೆ.

ಚಾಮರಾಜನಗರ 5, ಹಾವೇರಿ, ಶಿಗ್ಗಾವಿ, ಶಿವನಿ, ಟಿ.ನರಸೀಪುರದಲ್ಲಿ ತಲಾ 4, ಸುಳ್ಯ, ಅಂಕೋಲಾ, ಹಾವೇರಿ, ಸವಣೂರು, ರಾಣೇಬೆನ್ನೂರು, ಮುನಿರಾಬಾದ್‌, ಮಡಿಕೇರಿ, ಮೂಡಿಗೆರೆ, ಆಲೂರು, ಗುಂಡ್ಲುಪೇಟೆಯಲ್ಲಿ ತಲಾ 3, ಮಂಚಿಕೇರಿ, ಮುಂಡಗೋಡು, ಗದಗ, ಶಿರಹಟ್ಟಿ, ಹುನಗುಂದ, ಇಳಕಲ್‌, ಕುಶಾಲನಗರ, ಹಾಸನ, ಕನಕಪುರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ದಕ್ಷಿಣ ಒಳನಾಡು ಹಾಗೂ ಕರಾವಳಿಯ ಅನೇಕ ಕಡೆಗಳಲ್ಲಿ, ಉತ್ತರ ಒಳನಾಡಿನಲ್ಲಿ ಮುಂದಿನ 24ತಾಸಿನಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT