ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತಕ್ಕೆ ಸಿಗಲಿದೆ ಐರ್ಲೆಂಡ್‌ ಬೆಂಬಲ

ಸವಿತಾ ಹಾಲಪ್ಪನವರ ತಂದೆ ಅಂದಾನೆಪ್ಪ ಯಾಳಗಿ ವಿಶ್ವಾಸ
Last Updated 26 ಮೇ 2018, 8:59 IST
ಅಕ್ಷರ ಗಾತ್ರ

ಬೆಳಗಾವಿ: ‘ಗರ್ಭಪಾತ ನಿಷೇಧ ಕಾನೂನನ್ನು ಹಿಂದಕ್ಕೆ ಪಡೆಯಬೇಕು ಎನ್ನುವ ಬೇಡಿಕೆಗೆ ಐರ್ಲೆಂಡ್‌ನ ಜನರು ಬೆಂಬಲ ವ್ಯಕ್ತಪಡಿಸುವ ವಿಶ್ವಾಸ ಇದೆ’ ಎಂದು ಈ ಸಮಸ್ಯೆಯಿಂದಾಗಿ ತಮ್ಮ ಮಗಳನ್ನು ಕಳೆದುಕೊಂಡ ಇಲ್ಲಿನ ನಿವೃತ್ತ ಎಂಜಿನಿಯರ್‌ ಅಂದಾನೆಪ್ಪ ಯಾಳಗಿ ಹೇಳುತ್ತಾರೆ.

ಐರ್ಲೆಂಡ್‌ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲು ನಿರಾಕರಿಸಿದ ನಂತರ ಬೆಳಗಾವಿ ಮೂಲದ ದಂತ ವೈದ್ಯೆ ಡಾ.ಸವಿತಾ ಹಾಲಪ್ಪನವರ್ 2012ರಲ್ಲಿ ಮೃತಪಟ್ಟಿದ್ದರು. ಇವರು ಅಂದಾನೆಪ್ಪ ಅವರ ಮಗಳು.

‘ಕ್ಯಾಥೊಲಿಕ್‌ ಆಚರಣೆ ಜಾರಿಯಲ್ಲಿರುವ ಕಾರಣ ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ಅವಕಾಶ ಇಲ್ಲ. ಈ ಕಾರಣಕ್ಕೇ ನನ್ನ ಮಗಳು ಮೃತಪಟ್ಟಿದ್ದಳು. ಇದರಿಂದ ಆಕ್ರೋಶಗೊಂಡ ಹಲವು ಸಂಘಟನೆಗಳು ಬೀದಿಗಿಳಿದು ಅಲ್ಲಿ ಪ್ರತಿಭಟನೆ ನಡೆಸಿದ್ದವು. ಗರ್ಭಪಾತಕ್ಕೆ ಸಂಬಂಧಿಸಿದಂತೆ ಇರುವ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲುಗೊಳಿಸಬೇಕು ಎಂದು ಒತ್ತಾಯಿಸಿದ್ದವು. ಇದರ ಫಲವಾಗಿ ಅಲ್ಲಿನ ಸರ್ಕಾರ, ಶುಕ್ರವಾರ ಜನಮತ ಗಣನೆ ನಡೆಸಿದೆ. ಶನಿವಾರ ಅದರ ಫಲಿತಾಂಶ ಪ್ರಕಟವಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗರ್ಭದಲ್ಲಿರುವ ಮಗು ಹಾಗೂ ತಾಯಿಯ ಆರೋಗ್ಯಕ್ಕೆ ಸಮಸ್ಯೆ ಎದುರಾದಾಗ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಇಬ್ಬರ ಜೀವಕ್ಕೂ ಕುತ್ತು ಬರುತ್ತದೆ. ಇಂತಹುದೇ ಸ್ಥಿತಿಗೆ ನನ್ನ ಮಗಳು ಬಲಿಯಾದಳು. ಅವಳಿಗೆ ಬಂದ ಪರಿಸ್ಥಿತಿ ಇನ್ನೊಬ್ಬರಿಗೆ ಬರಬಾರದು’ ಎಂದು ಅವರು ಗದ್ಗದಿತರಾದರು.

‘ಸವಿತಾ ಸಾವಿನ ನಂತರ ಅಲ್ಲಿನ ಹಲವು ಪತ್ರಕರ್ತರು ಹಾಗೂ ಸಾರ್ವಜನಿಕರು ನಮ್ಮ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡರು. ನಾವು ಅವರಿಗೆ ಎಲ್ಲ ಮಾಹಿತಿ ನೀಡಿದೆವು. ಹೋರಾಟಕ್ಕೆ ಬಲ ತುಂಬಿದೆವು. ಆರು ವರ್ಷ ನಡೆಸಿದ ಹೋರಾಟ ಇಂದು ಈ ಹಂತಕ್ಕೆ ಬಂದು ಮುಟ್ಟಿದೆ’ ಎಂದರು.

‘ಆ ದೇಶದಲ್ಲಿ ಗರ್ಭಪಾತದ ಮೇಲೆ ನಿಷೇಧ ಇರುವುದರಿಂದ ಅಲ್ಲಿನ ಮಹಿಳೆಯರು ಪಕ್ಕದ ಇಂಗ್ಲೆಂಡ್‌ ದೇಶಕ್ಕೆ ಹೋಗಿ ಗರ್ಭಪಾತ ಮಾಡಿಸಿಕೊಂಡು ಬರುತ್ತಾರೆ. ಇದು ಹಣ ಇರುವವರಿಗೆ ಮಾತ್ರ ಸಾಧ್ಯವಾಗುತ್ತದೆ. ಈ
ಕಾರಣಕ್ಕಾಗಿ ಅಲ್ಲಿರುವ ಬಹಳಷ್ಟು ಜನರು ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT