ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರದ ಸಾವಿರ ಮನೆ ಹಂಚಿಕೆ ಯೋಜನೆ

ಮೂರು ವರ್ಷ ಗತಿಸಿದರೂ ಬಡವರಿಗೆ ಸಿಗದ ಮನೆ, ನಿವೇಶನ; ಭರವಸೆಯಲ್ಲಿಯೇ ಕಾಲಹರಣ– ಆರೋಪ
Last Updated 26 ಮೇ 2018, 9:51 IST
ಅಕ್ಷರ ಗಾತ್ರ

ಗೌರಿಬಿದನೂರು: ಪಟ್ಟಣದ ವಸತಿ ರಹಿತ ನಾಗರಿಕರಿಗೆ ಗುಂಪು ಮನೆ ಅಥವಾ ನಿವೇಶನ ಮಂಜೂರು ಮಾಡುವ ಭರವಸೆ ಮೂರು ವರ್ಷ ಕಳೆದರೂ ಈಡೇರಿಲ್ಲ. ನಿವೇಶನ ಅಥವಾ ಮನೆಗಾಗಿ ಬಡ ಫಲಾನುಭವಿಗಳು ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದಾರೆ.

ಪಟ್ಟಣದಲ್ಲಿ ಒಟ್ಟು 37,872 ಜನ ವಾಸಿಸುತ್ತಿದ್ದಾರೆ. ಇವರಲ್ಲಿ ಬಹುತೇಕ ಜನರಿಗೆ ಸ್ವಂತ ಸೂರಿಲ್ಲ. ಪುರಸಭೆ ವತಿಯಿಂದ ಅರ್ಹ ಬಡವರಿಗೆ ಮನೆ ನೀಡುವ ಯೋಜನೆ ಸಿದ್ಧವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಸಕ್ಕರೆ ಕಾರ್ಖಾನೆಯ ಹಿಂಭಾಗದ ಬರ್ಜಾನುಕುಂಟೆ ಹೊರವಲಯದಲ್ಲಿ 22 ಎಕರೆ ಜಮೀನು ಖರೀದಿಸಲಾಗಿದೆ.

ಪುರಸಭೆ ಸಾಮಾನ್ಯ ಸಭೆಯಲ್ಲಿ ಹಲವಾರು ಬಾರಿ ಈ ವಿಚಾರ ಮಂಡನೆಯಾಗಿದೆ. ಫಲಾನುಭವಿಗಳ ಪಟ್ಟಿ ನೀಡುವಂತೆ ಸದಸ್ಯರಿಗೆ ಸೂಚನೆ ನೀಡಲಾಗಿತ್ತು. ಇದಕ್ಕೆ ಪೂರಕವಾಗಿ ಸದಸ್ಯರೂ ಸಹ ಫಲಾನುಭವಿಗಳ ದೊಡ್ಡ ಪಟ್ಟಿ ನೀಡಿದ್ದರು. ವಿದೇಶಿ ತಂತ್ರಜ್ಞಾನದಿಂದ ಒಂದು ಸಾವಿರ ಗುಂಪು ಮನೆ ನಿರ್ಮಿಸುವ ಮನೆ ಪಡೆಯಲು ಆಸಕ್ತ ಫಲಾನುಭವಿಗಳು ₹ 1.20 ಲಕ್ಷ ಪಾವತಿಸಲು ತಿಳಿಸಲಾಗಿತ್ತು. ಉಳಿದ ₹ 2.70 ಲಕ್ಷವನ್ನು ಫಲಾನುಭವಿಗಳಿಗೆ ಸ್ಥಳೀಯ ಬ್ಯಾಂಕ್‌ನಲ್ಲಿ ಸಾಲ ಮಂಜೂರು ಮಾಡಲು ನೆರವಾಗುವುದಾಗಿ ಭರವಸೆ ಯನ್ನೂ ನೀಡಿತ್ತು. ಇದರಂತೆ 172 ಫಲಾನುಭವಿಗಳು ಹಣ ಪಾವತಿಸಿದ್ದರು. ಆದರೆ ಸ್ವಂತ ಮನೆ ಸಿಗುವುದೆಂಬ ನಿರೀಕ್ಷೆ ಇನ್ನೂ ಈಡೇರಿಲ್ಲ.

ವಿಳಂಬ ಧೋರಣೆಯಿಂದಾಗಿ ಗುಂಪುಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳ ಆಸಕ್ತಿ ಇತ್ತೀಚೆಗೆ ಕ್ಷೀಣಿಸಿದೆ. ಹೀಗಾಗಿ ಮನೆ ನಿರ್ಮಾಣ ಯೋಜನೆ ಕೈಬಿಟ್ಟು, 687 ನಿವೇಶನ ಮಂಜೂರು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪುರಸಭೆ ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನು ಚುನಾವಣೆ ಸಮೀಪಿಸುತ್ತಿದ್ದಂತೆ ನಾಗರಿಕರಿಗೆ ಆಮಿಷ ತೋರಿಸಿ ಕೆಲವೇ ದಿನಗಳಲ್ಲಿ ಮನೆ ಸಿಕ್ಕೇ ಸಿಗುತ್ತದೆ ಎಂದು ಅಂಗೈಯಲ್ಲಿ ಅರಮನೆ ತೋರಿಸುವವರೂ ಇದ್ದಾರೆ. ಅವರೆಲ್ಲ ಚುನಾವಣೆ ನಂತರ ಯಾರೊಬ್ಬರೂ ಕೈಗೆ ಸಿಗದಂತೆ ನಾಪತ್ತೆಯಾಗುವರು ಎನ್ನುತ್ತಾರೆ ನೊಂದ ಫಲಾನುಭವಿ ವೆಂಕಟರಮಣಪ್ಪ.

ಪುರಸಭೆ ಸದಸ್ಯರೊಬ್ಬರು ಹೇಳುವ ಪ್ರಕಾರ. ‘ಪಟ್ಟಣದಲ್ಲಿ ಬಡವರಿಗೆ ಮನೆ ಅಥವಾ ನಿವೇಶನ ನೀಡುವ ಯೋಜನೆ ಅವೈಜ್ಞಾನಿಕವಾಗಿದೆ. ಚುನಾವಣೆ ಸಂದರ್ಭದಲ್ಲಿ ಮತ ದಾರರ ಮನವೊಲಿಕೆಗಾಗಿ ಆಮಿಷ ತೋರಿಸಿದ್ದಾರೆ. ಪಟ್ಟಣದಿಂದ ನಾಲ್ಕೈದು ಕಿ.ಮೀ. ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ವಸತಿ ಕಲ್ಪಿಸುತ್ತೇವೆ ಎಂಬ ಭರವಸೆ ನೀಡಿ ಮುಗ್ಧ ಜನರ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಿಂದೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ಅಧಿಕಾರಿ ಗಳೂ ಮೌನ ವಹಿಸಿದ್ದಾರೆ’ ಎನ್ನುತ್ತಾರೆ.

ಕಾನೂನಾತ್ಮಕವಾಗಿ ಪುರಸಭೆ ವತಿಯಿಂದ ರೂಪಿಸಲಾಗಿದ್ದ ಯೋಜನೆಯು ವರ್ಷಗಳ ಹಿಂದೆಯೇ ನಿಷ್ಕ್ರಿಯಗೊಂಡಿದೆ. ಅದನ್ನು ತೇಪೆ ಹಾಕಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಆದರೆ ಸ್ವಂತ ಮನೆಯ ಕನಸನ್ನು ಹೊತ್ತು ಸಾಲ ಮಾಡಿ ಹಣ ಪಾವತಿಸಿದ 72 ಫಲಾನುಭವಿಗಳ ಪರಿಸ್ಥಿತಿ ಅತಂತ್ರವಾಗಿದೆ ಎನ್ನುವರು.

ಬಗೆಹರಿಸುವ ಸೂಚನೆ ಇಲ್ಲ

'ಗುಂಪು ಮನೆಗಳ ಮತ್ತು ನಿವೇಶನ ಹಂಚಿಕೆ ವಿಚಾರದ ಹಿಂದೆ ದೊಡ್ಡ ಕಥೆ ಇದೆ. ಸದ್ಯಕ್ಕೆ ಸಮಸ್ಯೆಗಳು ಬಗೆಹರಿಯುವ ಸೂಚನೆ ಕಾಣುವುದಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು, ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ದೊರೆತರೆ ಯೋಜನೆಯ ಪ್ರಕ್ರಿಯೆಯನ್ನು ಮತ್ತೆ ಮೊದಲಿನಿಂದ ಆರಂಭಿಸಿ, ಮುಕ್ತಿ ಕಾಣಿಸಬೇಕಾಗಿದೆ’ ಎಂದು ನಗರಸಭೆ ಆಯುಕ್ತ ವಿ. ಮುನಿಶ್ಯಾಮಪ್ಪ ಸ್ಪಷ್ಟಪಡಿಸುವರು.

ಶಾಲೆಯಾದ ಮಾದರಿ ಗುಂಪುಮನೆ

ಮಾದರಿ ಗುಂಪು ಮನೆಗಳಿಗೆ ಕ್ರಿಯಾ ಯೋಜನೆ ಮತ್ತು ವಿನ್ಯಾಸ ಸಿದ್ಧಗೊಳಿಸಲು ಆರಂಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿದ್ದರು. ಅದರ ಫಲವಾಗಿ ಮರಿಯಪ್ಪನಪಾಳ್ಯ (ವಿದ್ಯಾನಿಧಿ ಶಾಲೆ ಬಳಿ) ಸಮೀಪ ಗುಂಪು ಮನೆ ನಿರ್ಮಾಣ ಮಾಡಲಾಯಿತು.

ಇದನ್ನೇ ಮೂಲ ಕೇಂದ್ರವನ್ನಾಗಿ ಮಾಡಿಕೊಂಡ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ಫಲಾನುಭವಿಗಳಿಗೆ ತೋರಿಸಿ, ಹಣ ಸಂಗ್ರಹ ಮಾಡಿದರು.

ಇವೆಲ್ಲ ಮುಗಿದು ಮೂರು ವರ್ಷ ಗತಿಸಿದೆ. ಯೋಜನೆಗೆ ತಾಂತ್ರಿಕ ಕಾರಣ ನೀಡಿ ಸ್ಥಗಿತಗೊಳಿಸಲಾಯಿತು. ಅರ್ಧಕ್ಕೆ ನಿಂತ ಮಾದರಿ ಗುಂಪು ಮನೆಗಳನ್ನು ನಂತರ ಶಾಸಕರ ಸೂಚನೆ ಮೇರೆಗೆ ಮಾದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಆಟ, ಪಾಠಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

**
ಮನೆ ಕೊಡುವುದಾಗಿ ಭರವಸೆ ನೀಡಿ, ಹಣ ಪಡೆದರು. ವರ್ಷಕ್ಕೊಮ್ಮೆ ಆಸೆ ತೋರಿಸುವರು. ನಂತರ ಎಲ್ಲರೂ ಮೌನವಹಿಸುವರು. ನಮಗೆ ಕಾಯುವುದು ತಪ್ಪಿಲ್ಲ
– ರಾಮಚಂದ್ರೇಗೌಡ, ನೊಂದ ಸಂತ್ರಸ್ತ

**
ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗಿದೆ. ಹೊಸ ಸರ್ಕಾರದ ಆಡಳಿತದಲ್ಲಿ ತೊಡಕು ನಿವಾರಿಸಿ ಹಂಚಿಕೆ ಮಾಡಲಾಗುವುದು
ವಿ. ಮುನಿಶ್ಯಾಮಪ್ಪ, ನಗರಸಭೆ ಆಯುಕ್ತ 

ಎ.ಎಸ್‌. ಜಗನ್ನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT