ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಕಂಡಲ್ಲೆಲ್ಲ ಕಸದ ರಾಶಿ!

ಪೌರ ಕಾರ್ಮಿಕರ ಪ್ರತಿಭಟನೆ, ಮೂರು ದಿನಗಳಿಂದ ಕಸ ವಿಲೇವಾರಿ ಸ್ಥಗಿತ
Last Updated 26 ಮೇ 2018, 10:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆ ವತಿಯಿಂದಲೇ ನೇರವಾಗಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ನಗರದಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಇದರಿಂದ ವಾಣಿಜ್ಯ ನಗರಿ ಖ್ಯಾತಿಯ ಹುಬ್ಬಳ್ಳಿಯಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ ಕಾಣುತ್ತಿದೆ.

ನಗರದಲ್ಲಿ ಒಂದು ವಾರದಿಂದ ಗುಡುಗು, ಸಿಡಿಲು, ಬಿರುಗಾಳಿ ಸಮೇತ ಸತತವಾಗಿ ಮಳೆ ಬೀಳುತ್ತಿದೆ. ಇದರಿಂದ ಸಾಕಷ್ಟು ಕಡೆ ಮರಗಳು ಮತ್ತು ಟೊಂಗೆಗಳು ಬಿದ್ದಿವೆ. ಆ ಟೊಂಗೆಗಳನ್ನು ಮನೆಯವರೇ ತೆರವುಗೊಳಿಸಿ ಹತ್ತಿರದಲ್ಲಿರುವ ಖಾಲಿ ಜಾಗಗಳಲ್ಲಿ ಹಾಕುತ್ತಿದ್ದಾರೆ. ಇದರಿಂದ ನಿತ್ಯದ ಕಸದ ಜೊತೆಗೆ ಈ ಕಸವೂ ಸೇರಿಕೊಂಡಿದೆ. ಪ್ಲಾಸ್ಟಿಕ್‌ ಮತ್ತು ತ್ಯಾಜ್ಯಗಳಿಂದ ಚರಂಡಿಗಳು ತುಂಬಿ ಹೋಗಿರುವುದರಿಂದ ಖಾಲಿ ಜಾಗ ಮತ್ತು ಚರಂಡಿಗಳಲ್ಲಿ ದಿನದಿಂದ ದಿನಕ್ಕೆ ಕಸದ ‍ಪ್ರಮಾಣ ಹೆಚ್ಚಾಗುತ್ತಿದೆ.

ಲಿಂಗರಾಜ ನಗರ, ಶಿರೂರು ಪಾರ್ಕ್‌ ಸರ್ಕಲ್‌, ಅರವಿಂದ ನಗರ, ಗಿರಣಿ ಚಾಳ, ದೇಶಪಾಂಡೆ ನಗರ, ದಯಾನಂದ ಕಾಲೊನಿ, ಹಳೇ ಇನ್‌ಕಂ ಟ್ಯಾಕ್ಸ್‌ ರೋಡ್‌, ವೀರಾಪುರ ಓಣಿ, ವಿದ್ಯಾನಗರದಲ್ಲಿರುವ ರಂಭಾಪುರಿ ಕಲ್ಯಾಣ ಮಂಟಪದ ಪಕ್ಕದ ರಸ್ತೆ, ಜನತಾ ಕಾಲೊನಿ 1ನೇ ಕ್ರಾಸ್‌, ಚಂದ್ರನಾಥ ನಗರಗಳಲ್ಲಿ ಕಸ ರಾಶಿ, ರಾಶಿಯಾಗಿ ಬಿದ್ದಿದೆ. ಅಕ್ಕ–ಪಕ್ಕದ ಮನೆಗಳವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಶಿರೂರು ಪಾರ್ಕ್‌ ಮತ್ತು ಲಿಂಗರಾಜ ನಗರದಲ್ಲಿ ಕಸದ ರಾಶಿ ರಸ್ತೆಗೂ ಹರಡಿಕೊಂಡು ವಾಹನ ಸವಾರರು ಕಸದ ಮಧ್ಯೆಯೇ ವಾಹನ ಚಲಾಯಿಸುವಂತಾಗಿದೆ.

ಮಾರುಕಟ್ಟೆಯಲ್ಲೂ ಕಸದ ರಾಶಿ: ಸ್ಟೇಷನ್‌ ರಸ್ತೆ, ದುರ್ಗದ ಬೈಲ್‌, ಕಿರಿದಾದ ರಸ್ತೆಗಳು ಇರುವ ಗಣೇಶ ಪೇಟೆ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿಯೂ ಕಸದ ರಾಶಿ ಎದ್ದು ಕಾಣುತ್ತಿದೆ. ಕಸ ತುಳಿದುಕೊಂಡೇ ಮಾರುಕಟ್ಟೆಯಲ್ಲಿ ತಿರುಗಾಡುವಂತಾಗಿದೆ. ಜನರಲ್ಲಿ ರೋಗದ ಭೀತಿ ಶುರುವಾಗಿದೆ.

ತುಂಬಿರುವ ಕಸದ ಡಬ್ಬಿಗಳು: ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಅರವಿಂದ ನಗರ ರಸ್ತೆ, ದೇಶಪಾಂಡೆ ನಗರ, ರಮೇಶ ಭವನ ರಸ್ತೆ ಹೀಗೆ ಹಲವು ಸ್ಥಳಗಳಲ್ಲಿ ಎರಡು ಪ್ಲಾಸ್ಟಿಕ್‌ ಡಬ್ಬಿಗಳನ್ನು ಇಡಲಾಗಿದೆ. ಅವುಗಳು ಕೂಡ ತುಂಬಿ ಹೋಗಿದ್ದು, ಡಬ್ಬಿಗಳ ಸುತ್ತಲೂ ಕಸದ ರಾಶಿ ಚೆಲ್ಲಿದೆ. ಬಹುತೇಕ ಡಬ್ಬಿಗಳಲ್ಲಿ ಪ್ಲಾಸ್ಟಿಕ್‌ ಚೀಲಗಳೇ ಕಾಣಿಸುತ್ತಿವೆ.

ಪೌರ ಕಾರ್ಮಿಕರು ತಳ್ಳು ಗಾಡಿಯಲ್ಲಿ ಮನೆ, ಮನೆಗೆ ಹೋಗಿ ಕಸ ಸಂಗ್ರಹಿಸುತ್ತಿದ್ದರು. ಆದರೆ, ಮೂರು ದಿನಗಳಿಂದ ಕಸ ಸಂಗ್ರಹಿಸಲು ಯಾರೂ ಬಂದಿಲ್ಲ. ಟ್ರ್ಯಾಕ್ಟರ್‌ಗಳಲ್ಲಿ ಕಸ ಸಂಗ್ರಹಿಸಿ ಕಸದ ರಾಶಿ ಕಡಿಮೆ ಮಾಡಲು ಪ್ರಯತ್ನಿಸಿದ್ದರೂ, ಕಸದ ಪ್ರಮಾಣ ಕಡಿಮೆಯಾಗಿಲ್ಲ.

‘ಕಸ ತೆಗೆದುಕೊಂಡು ಹೋಗಲು ನಿತ್ಯ ಬೆಳಿಗ್ಗೆ ಪೌರ ಕಾರ್ಮಿಕರು ಬರುತ್ತಿದ್ದರು. ಎರಡು, ಮೂರು ದಿನಗಳಿಂದ ಯಾರೂ ಬಾರದ ಕಾರಣ ಮನೆ ಹತ್ತಿರದ ಖಾಲಿ ಜಾಗದಲ್ಲಿ ಕಸ ಹಾಕಿದ್ದೇವೆ. ಗಬ್ಬು ವಾಸನೆ ಬರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮಳೆಗಾಲ ಆಗಿರುವುದರಿಂದ ರೋಗದ ಭೀತಿ ಎದುರಾಗಿದೆ’ ಎಂದು ದಯಾನಂದ ಕಾಲೊನಿ ನಿವಾಸಿ ಅನ್ನಪೂರ್ಣ ಬಳಿಗಾರ ಆತಂಕ ವ್ಯಕ್ತಪಡಿಸಿದರು.

‘ಎರಡು ದಿನಗಳಲ್ಲಿ ನಗರ ಸ್ವಚ್ಛ’

ಪಾಲಿಕೆಯ 344 ಕಾಯಂ ಸಿಬ್ಬಂದಿ ಮತ್ತು ಕೆಲವು ಗುತ್ತಿಗೆ ನೌಕರರು ಪ್ರಮುಖ ಬಡಾವಣೆಗಳಲ್ಲಿ ಕಸ ವಿಲೇವಾರಿ ಮಾಡಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ನಮ್ಮಲ್ಲಿ ಎಷ್ಟು ಕಾರ್ಮಿಕರು ಇದ್ದರೋ, ಈಗಲೂ ಅಷ್ಟೇ ಕೆಲಸಗಾರರು ಇದ್ದಾರೆ. ಇದರಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಒಂದೆರೆಡು ದಿನಗಳಲ್ಲಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು
– ಕೆ.ಎಸ್‌. ನಯನಾ, ಪರಿಸರ ಎಂಜಿನಿಯರ್‌

**
ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಕಾರಣ ಕಸ ವಿಲೇವಾರಿ ಸಮಸ್ಯೆಯಾಗಿರುವುದು ನಿಜ. ಶನಿವಾರ ಕೆಲಸ ಆರಂಭವಾಗಲಿದ್ದು, ಎಲ್ಲವೂ ಸರಿಹೋಗಲಿದೆ
– ಸುಧೀರ ಸರಾಫ್‌, ಮೇಯರ್‌ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT