ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಮುಖಿಯಾಗಿರುವ ಪೆಟ್ರೋಲ್‌ ಬೆಲೆ

ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟದ ಭೀತಿ
Last Updated 26 ಮೇ 2018, 10:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ವಾಹನಗಳ ಸವಾರರಲ್ಲಿ ಮಾತ್ರವಲ್ಲ, ಉದ್ಯಮಿಗಳು ಹಾಗೂ ಸಾರ್ವಜನಿಕರಲ್ಲಿಯೂ ಆತಂಕ ಮೂಡಿಸಿದೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಈಗಾಗಲೇ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಭೀತಿ ಇದೆ. ಕೈಗಾರಿಕಾ ವಸ್ತುಗಳ ಸಾಗಾಣೆ ದರದಲ್ಲಿಯೂ ಹೆಚ್ಚಳ
ವಾಗಿದ್ದು, ಮುಂದಿನ ಕೈಗಾರಿಕಾ ಉತ್ಪಾದನಾ ವಸ್ತುಗಳ ಬೆಲೆಯಲ್ಲಿಯೂ ಹೆಚ್ಚಳವಾಗಲಿದೆ ಎನ್ನುತ್ತಾರೆ ಉದ್ಯಮಿಗಳು.

ಕಳೆದ ಐದು ತಿಂಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಎಂಟು ರೂಪಾಯಿ ಹಾಗೂ ಡೀಸೆಲ್‌ ಬೆಲೆಯಲ್ಲಿ ಒಂಬತ್ತು ರೂಪಾಯಿ ಹೆಚ್ಚಳವಾಗಿದೆ. ಪ್ರತಿ ನಿತ್ಯ ಬೆಲೆಗಳ ಪರಿಷ್ಕರಣೆ ಮಾಡುವುದರಿಂದ ನಿತ್ಯವೂ ಐದರಿಂದ ಹದಿನೈದು ಪೈಸೆಯವರೆಗೆ ಬೆಲೆ ಹೆಚ್ಚಾಗುತ್ತಲೇ ಇದೆ.

ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳ: ಮಾರುಕಟ್ಟೆಯಲ್ಲಿ ಕಿರಾಣಿ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆಗಳಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.‌ ಉದ್ದಿನಬೇಳೆ, ಕಡಲೆಬೇಳೆ, ಸಕ್ಕರೆ, ಬೆಲ್ಲ, ಅವಲಕ್ಕಿ, ಅಡುಗೆ ಎಣ್ಣೆ ಸೇರಿದಂತೆ ವಿವಿಧ ವಸ್ತುಗಳ ಬೆಲೆಯಲ್ಲಿ ಹೆಚ್ಚಾಗಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಹೆಚ್ಚಳ ಹೀಗೆಯೇ ಮುಂದುವರಿದರೆ, ವಸ್ತುಗಳ ಬೆಲೆಯಲ್ಲಿಯೂ ಮತ್ತಷ್ಟು ಹೆಚ್ಚಳವಾಗಲಿದೆ.

ವಸ್ತುಗಳ ಸಾಗಾಟದ ವೆಚ್ಚ ಹೆಚ್ಚಳ: ಕೃಷಿ ಹಾಗೂ ಕೈಗಾರಿಕಾ ವಸ್ತುಗಳ ಸಾಗಾಟದ ಬೆಲೆಯಲ್ಲಿ ಹೆಚ್ಚಳವಾಗಿದೆ. ಡೀಸೆಲ್‌ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಪ್ರತಿ ಕಿ.ಮೀ. ಗೆ ವಿಧಿಸುತ್ತಿದ್ದ ದರವನ್ನು ವಾಹನಗಳ ಮಾಲೀಕರು ಹೆಚ್ಚಿಸಿದ್ದಾರೆ.

ಕೈಗಾರಿಕಾ ಉತ್ಪಾದನಾ ಸಾಮಗ್ರಿಗಳನ್ನು ಸ್ಥಳೀಯವಾಗಿ ಸಾಗಿಸಲು ₹ 400 ಕೇಳುತ್ತಿದ್ದ ವಾಹನಗಳ ಮಾಲೀಕರು, ಈಗ ಡೀಸೆಲ್‌ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ₹ 600 ಕೇಳುತ್ತಿದ್ದಾರೆ. ಹೊರ ಜಿಲ್ಲೆ, ರಾಜ್ಯಗಳಿಗೆ ಕಳುಹಿಸುವ ವಸ್ತುಗಳ ಸಾಗಾಣೆ ದರದಲ್ಲಿಯೂ ಹೆಚ್ಚಳವಾಗಿದೆ ಎನ್ನುತ್ತಾರೆ ಉದ್ಯಮಿ ರಮೇಶ ಪಾಟೀಲ.
ಉದ್ಯೋಗ ನಷ್ಟದ ಭೀತಿ: ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಾಗುವುದರಿಂದ ಉತ್ಪಾದನಾ ವೆಚ್ಚದಲ್ಲಿಯೂ ಹೆಚ್ಚಳವಾಗಲಿದೆ. ಇದರಿಂದ ಕೈಗಾರಿಕೆಗಳ ಲಾಭದ ಪ್ರಮಾಣ ಕಡಿಮೆಯಾಗಲಿದೆ. ಆಗ ಉದ್ಯೋಗ ಕಡಿತಕ್ಕೆ ಉದ್ಯಮಿಗಳು ಮುಂದಾಗಬಹುದು. ಒಟ್ಟಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬಿಸಿ ಉಳಿದ ಕ್ಷೇತ್ರಗಳ ಮೇಲೂ ಆಗುತ್ತಿದೆ.

**
ನಿತ್ಯ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಇಲ್ಲಿಗಿಂತ ಬೇರೆ ದೇಶಗಳಲ್ಲಿ ಬೆಲೆ ಕಡಿಮೆ ಇದೆ. ಆದರೆ, ಇಲ್ಲಿ ಮಾತ್ರ ಹೆಚ್ಚಿಸುತ್ತಲೇ ಇದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದರ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ
ಮೆಹಬೂಬ್‌ ಮಕಾನದಾರ, ಹುಬ್ಬಳ್ಳಿ,
**
ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಹೆಚ್ಚಳದಿಂದ ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಇದು ವಸ್ತುಗಳ ಬೆಲೆ ಹೆಚ್ಚಳಕ್ಕೂ ಕಾರಣವಾಗಲಿದೆ
– ರಮೇಶ ಪಾಟೀಲ, ಉದ್ಯಮಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT