ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಕೊಟ್ಟ ಭಾಳ್ ತಪ್ಪ್‌ ಮಾಡಿದ್ವಿ!

ಬೆಂಬಲ ಬೆಲೆ: ಮೂರು ತಿಂಗಳಾದರೂ ಜಿಲ್ಲೆಯ ತೊಗರಿ ಬೆಳೆಗಾರರ ಕೈಸೇರದ ಹಣ
Last Updated 26 ಮೇ 2018, 12:27 IST
ಅಕ್ಷರ ಗಾತ್ರ

ವಿಜಯಪುರ: ‘ತುಸು ಹೆಚ್ಚು ರೊಕ್ಕಾ ಬರ್ತಾವ ಅಂತ ಆಸ್ಯಾಕ ಬಿದ್ದು ನಸಿಕ್‌ನ್ಯಾಕ ನಿಂತು ಪಾಳಿ ಹಚ್ಚಿ ಸರ್ಕಾರದವ್ರಿಗಿ ತೊಗರಿ ಕೊಟ್‌ ಭಾಳ್‌ ತಪ್‌ ಮಾಡ್ಯಾವಿ. ಹೊರಗ ಕೊಟ್ರ ಬಡ್ಡಿ ಹಂಗ ತಂದ ಸಾಲರೇ ಮುಟ್ತೀತ್ತು. ಈಗ ಬಡ್ಡಿನೂ ಹೆಚ್ಚಾಗತೈತಿ. ತೊಗರಿ ರೊಕ್ಕಾನೂ ಬರ್ತಿಲ್ಲ. ಮಳಿಯರೇ ಆಗ್ಯಾದ ಹೊಲ ರಾಬ್‌ ಮಾಡಿ ಬಿತ್ತಾಕೂ ನಮ್ಮ ಹತ್ರ ರೊಕ್ಕ ಇಲ್ಲ ಏನ್‌ ಮಾಡಬೇಕು...’

ತೊಗರಿ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ ಎಂದು ರೈತರು ಬೇಸರದಲ್ಲಿದ್ದಾಗ, ಸರ್ಕಾರ ಅದನ್ನು ಖರೀದಿಸಲು ಮುಂದಾಗಿತ್ತು. ಆಗ, ನಾ ಮುಂದು ತಾ ಮುಂದು ಎಂದು ಬೆಳೆದ ಬೆಳೆಯನ್ನೆಲ್ಲ ಸೊಸೈಟಿಗೆ ತಂದು ಸುರುವಿದ್ದರು. ಈಗ ಸಕಾಲಕ್ಕೆ ಹಣ ನೀಡದ ಕಾರಣ ಸಂಕಷ್ಟ ಅನುಭವಿಸುತ್ತಿರುವ ರೈತರ ನೋವಿನ ಮಾತು ಇದು.

‘ತೊಗರಿ ರೊಕ್ಕಾ ಬರ್ತಾವ ಅನ್ನೋ ಆಸೆದಾಗ ಮಗಳ ಕುಬುಸಾ ಇಟ್ಕೊಂಡಿದ್ದೆ. ಬರಲಾರ್ಕ್ ಮೂರರ್‌ ಬಡ್ಡಿಯಂಗ್ ಹೊರಗ್‌ ಸಾಲ ಮಾಡೀನಿ. ಅವ್ರು ದಿನಾ ಬೆಂಗಡಗಿ ಹಚ್ಯಾರ. ಮಳಿ ಬ್ಯಾರೆ ಆಗ್ಯಾದ ಹೊಲ ರಾಬ ಮಾಡಾಕ್‌, ಬೀಜ, ಗೊಬ್ಬರ ಕೊಂಡಾಕು ನನ್ನ ಹತ್ರ ರೊಕ್ಕ ಇಲ್ಲ. ತೊಗ್ರಿ ರೊಕ್ಕಾ ದೌಡ ಬ್ಯಾಂಕಿಗಿ ಹಾಕಿದ್ರ ಬಾಳ ಚಲೋ ಆಗ್ತಾದ. ಇಲ್ಲಂದ್ರ ಮತ್‌ ಇನ್ನೊಬ್ಬರ ಹತ್ಯಾಕ ಕೈಚಾಚಬೇಕು’ ಎನ್ನುತ್ತಾರೆ ಮುದ್ದೇಬಿಹಾಳ ತಾಲ್ಲೂಕು ನಾಲವಾಡದ ನೆರಸಪ್ಪ ಹೊಸಮನಿ.

‘ತೊಗರಿ ಕಾಟಾ ಚಾಲು ಆದ ಮ್ಯಾಲ ಮೊದಲಿಗೆ ಕೊಟ್ಟೀನಿ. ನಮಕ್ಕಿಂತ ಹಿಂದ್‌ ಕೊಟ್ಟವ್ರ ರೊಕ್ಕ ಬಂದೂ ಆದ್ರ ನಮ್ಮೂ ಬರ್ಲೆ ಇಲ್ಲ. ಯಾಕ್‌ ಬರ್ಲಿಲ್ಲ ಅಂತ ಕೇಳಿದ್ರ ನಿಮ್ದು ಪಟ್ಟಿ ಲಕ್ಷಕ್ಕಿಂತ ಹೆಚ್ಚ ಐತಿ. ನೀವು ಕೊಟ್ಟಿದ್ದು ಜನಧನ್ ಖಾತೆ ಇರೋದ್ರಿಂದ ಐವತ್‌ ಸಾವಿರಕ್ಕಿಂತ ಹೆಚ್ಚಿಗಿ ಹಣ ಹಾಕಾಕ ಬರಾಲ್‌ ಅಂದ್ರು. ಬ್ಯಾರೆ ಬ್ಯಾಂಕ್‌ದಾಗ ಹೊಸ ಪಾಸ್‌ಬುಕ್‌ ತಗೊಂಡು ಕೊಟ್ಟು ತಿಂಗಳಾದ್ರು ಇನ್ನೂ ರೊಕ್ಕ ಬಂದಿಲ್ಲ. ಸಾಲಾ ಕೊಟ್ಟವ್ರು ಬಾಳ ಕಿರಿಕಿರಿ ಕೊಡಾಕತ್ತಾರ. ಯ್ಯಾಕರೇ ಸರ್ಕಾರದವ್ರಿಗಿ ಕೊಟ್ಟೆವಿ ಅನ್ಸಾಕತ್ತಾದ ನೋಡ್ರಿ’ ಎಂದು ಸಿಂದಗಿ ತಾಲ್ಲೂಕು ತಾಂಬಾ ಗ್ರಾಮದ ಪ್ರಭು ಗಳೇದ ಹೇಳಿದರು.

‘ತೊಗರಿ ತಗೋಳಾಕ ಸ್ಟಾರ್ಟ್‌ ಮಾಡಿದ ಒಂದೆರಡು ದಿನದಾಗ 20 ಕ್ವಿಂಟಲ್‌ ತೊಗರಿ ಕಾಟಾಕ ಕೊಟ್ಟೆವಿ. ರೊಕ್ಕ ಆಗ ಬರ್ತಾವ್ ಈಗ ಬರ್ತಾವ ಅಂಥ ಕಾದ ಕುಳಿತಿದ್ವಿ. ಆದ್ರ ಬಾಳ ದಿನ ಆದ್ರು ಬರಲಾರ್ಕ್‌ ವಿಜ್ಯಾಪುರದಾಗಿನ ಆಫೀಸ್‌ನ್ಯಾಗ ಕೇಳಿದ್ರ ನಿಮ್ಮ ಅಪ್ಲಿಕೇಷನ್‌ ರಿಜಕ್ಟ್‌ ಆಗ್ಯಾದ ನಾಲ್ಕೈದುಕ ಬಂದು ಬೆಟ್ಟಿ ಆಗು ಅಂದ್ರು. ಆಗ ಹೋದ್ರ ಯಾರು ಅಲ್ಲಿ ಇರ್ಲಿಲ್ಲ. ಎಂಟತ್ತ ಸಾರಿ ಎಡತಾಕಿದ್ರೂ ಉಪಯೋಗವಾಗ್ಲಿಲ್ಲ. ನೀವು ಬರಬ್ಯಾಡ್ರಿ ಸೊಸೈಟಿನರ್ವಿಗಿ ಕಳಿಸ್ರಿ ಅಂತ ಹೇಳಿ ಕಳಿಸಿದ್ರೂ’ ಎಂದು ಕಲಕೇರಿ ಗ್ರಾಮದ ಮಡಿವಾಳಪ್ಪ ಗುಮ್ಮಶೆಟ್ಟಿ ತಿಳಿಸಿದರು.

ಖಾತೆಗೆ ಹಣ ಜಮಾ ಆಗಿಲ್ಲ...

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 93 ಖರೀದಿ ಕೇಂದ್ರಗಳ ಮೂಲಕ 73,567 ರೈತರಿಂದ 8,47,169 ಕ್ವಿಂಟಲ್‌ ತೊಗರಿ ಖರೀದಿ ಮಾಡಿ ಮೂರು ತಿಂಗಳಾಗಿದೆ. ಈವರೆಗೂ ಬಹುತೇಕ ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾಗೊಂಡಿಲ್ಲ. ಕಳೆದ ವರ್ಷದ ಮಾರಿದ ಕೆಲ ರೈತರಿಗೂ ಹಣ ಸಿಕ್ಕಿಲ್ಲ ಎಂದು ದೂರಲಾಗಿದೆ. ಈ ಕುರಿತು ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳಿ ವಿಜಯಪುರ ಶಾಖಾ ವ್ಯವಸ್ಥಾಪಕ ಆರ್.ಆರ್‌.ಜುಂಜರವಾಡ ಅವರನ್ನು ಸಂಪರ್ಕಿಸಿದರೂ ಅವರು ಸ್ಪಂದನೆ ನೀಡಲಿಲ್ಲ.

**
ತೊಗರಿ ಕೊಟ್ಟ ಎರಡ ತಿಂಗಳ ಆದ್ರೂ ರೊಕ್ಕಾ ಜಮಾ ಆಗಿಲ್ಲ. ದೌಡ ರೊಕ್ಕಾ ಹಾಕಿದ್ರ ಬಿತ್ತಾಕ ಬೀಜ, ಗೊಬ್ಬರ ಕೊಳ್ಳಾಕ ಚಲೋ ಆಗತೈತಿ. ಇಲ್ಲಂದ್ರ ಎಲ್ಲ ರೈತ್ರಿಗೂ ಸಮಸ್ಯೆ ಆಗೈತಿ
ಜಗದೀಶ ಉಳ್ಳಾಗಡ್ಡಿ, ಜೈನಾಪುರ ಬಸವನ ಬಾಗೇವಾಡಿ ತಾಲ್ಲೂಕು

ಬಾಬುಗೌಡ ರೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT