ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಳ್ಳರ ವದಂತಿ: ಕರಪತ್ರ ಹಂಚಿಕೆ

ಪೊಲೀಸರಿಂದ ಜನಜಾಗೃತಿ
Last Updated 26 ಮೇ 2018, 13:47 IST
ಅಕ್ಷರ ಗಾತ್ರ

ಕೋಲಾರ: ರಾಜ್ಯಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ನಗರದ ಗಲ್‌ಪೇಟೆ ಠಾಣೆ ಪೊಲೀಸರು ಸಾರ್ವಜನಿಕರ ಆತಂಕ ದೂರ ಮಾಡಲು ನಗರದಲ್ಲಿ ಶುಕ್ರವಾರ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳನ್ನು ಮಕ್ಕಳ ಕಳ್ಳರೆಂದು ಭಾವಿಸಿ ಥಳಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಹೊರಗಿನ ಜನ ಜಿಲ್ಲೆಗೆ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರಪತ್ರ ವಿತರಣೆ ವೇಳೆ ಮಾತನಾಡಿದ ಎಸ್‌ಐ ರವಿಕುಮಾರ್, ‘ಕೆಲ ಕಿಡಿಗೇಡಿಗಳು ಮಕ್ಕಳು ಕಳ್ಳರು ಅಲ್ಲಿ ಬಂದಿದ್ದಾರೆ, ಇಲ್ಲಿ ಬಂದಿದ್ದಾರೆ, ಇಲ್ಲಿ ಸಿಕ್ಕಿದ್ದಾರೆ ಎಂಬ ದೃಶ್ಯಾವಳಿ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವದಂತಿ ಸೃಷ್ಟಿಸುತ್ತಿದ್ದಾರೆ. ಇದರಿಂದ ಜಿಲ್ಲೆಯೂ ಸೇರಿದಂತೆ ರಾಜ್ಯದೆಲ್ಲೆಡೆ ಜನ ಭಯಭೀತರಾಗಿದ್ದಾರೆ. ಆದರೆ, ಮಕ್ಕಳ ಕಳ್ಳರು ರಾಜ್ಯಕ್ಕೆ ಬಂದಿದ್ದಾರೆ ಎಂಬ ಸಂಗತಿ ಸುಳ್ಳು. ಸಾರ್ವಜನಿಕರು ಆತಂಕಪಡಬೇಕಿಲ್ಲ’ ಎಂದು ಹೇಳಿದರು.

‘ಮಕ್ಕಳನ್ನು ಸಾಯಿಸಿ, ದೇಹದ ಅಂಗಾಂಗಗಳನ್ನು ಕತ್ತರಿಸಿರುವ ಚಿತ್ರಗಳು ವಾಟ್ಸ್‌ಆ್ಯಪ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ, ಎಲ್ಲಿಯೂ ಮಕ್ಕಳ ಕಳ್ಳರು ಸಿಕ್ಕಿಲ್ಲ. ಹೊರ ರಾಜ್ಯಗಳಿಂದ ಅನೇಕರು ಉದ್ಯೋಗಕ್ಕಾಗಿ ರಾಜ್ಯಕ್ಕೆ ಬಂದಿದ್ದಾರೆ. ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯಿಂದ ಅವರಿಗೆ ತೊಂದರೆಯಾಗುತ್ತಿದೆ’ ಎಂದರು.

ಭಾಷೆ ಬರುವುದಿಲ್ಲ: ‘ಹೊರ ರಾಜ್ಯದವರಿಗೆ ಸ್ಥಳೀಯ ಭಾಷೆ ಬರುವುದಿಲ್ಲ. ಅಪರಿಚಿತರಾಗಿರುವ ಅವರನ್ನು ಸಾರ್ವಜನಿಕರು ಸುತ್ತುವರಿದು ಇಲ್ಲಸಲ್ಲದ ಪ್ರಶ್ನೆ ಕೇಳಿದರೆ ಅವರೂ ಆತಂಕಗೊಂಡು ಮೌನ ವಹಿಸುತ್ತಾರೆ. ಇದರಿಂದ ಸಾರ್ವಜನಿಕರು ಅನುಮಾನಗೊಂಡು ಅವರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಗ್ರಾಮಗಳಲ್ಲಿ ಜನ ದೊಣ್ಣೆ, ಟಾರ್ಚ್‌ಗಳನ್ನು ಹಿಡಿದು ಇಡೀ ರಾತ್ರಿ ಕಾವಲು ಕಾಯುತ್ತಿದ್ದಾರೆ’ ಎಂದು ತಿಳಿಸಿದರು.

‘ಮಕ್ಕಳ ಕಳ್ಳರು ರಾಜ್ಯಕ್ಕೆ ಬಂದಿರುವ ಬಗ್ಗೆ ಇಲಾಖೆಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಹೀಗಾಗಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಹಲ್ಲೆ ನಡೆಸದೆ ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರೆ ಅವರು ವಿಚಾರಣೆ ನಡೆಸುತ್ತಾರೆ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT