ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀತಿಯಿಂದ ಮೈತ್ರಿ: ಪ್ರಧಾನಿ ಲೇವಡಿ

Last Updated 27 ಮೇ 2018, 4:38 IST
ಅಕ್ಷರ ಗಾತ್ರ

ಕಟಕ್‌ : ಭ್ರಷ್ಟಾಚಾರದ ವಿರುದ್ಧ ಹೋರಾಡುವ ತಮ್ಮ ಬದ್ಧತೆ ಹಲವರ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿದೆ. ಹಾಗಾಗಿಯೇ ಅವರೆಲ್ಲರೂ ಈಗ ಒಂದಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭದಲ್ಲಿ ವಿರೋಧ ಪಕ್ಷಗಳ ಮುಖಂಡರು ಭಾಗಿಯಾಗಿದ್ದನ್ನು ಪರೋಕ್ಷವಾಗಿ ಅವರು ಪ್ರಸ್ತಾಪಿಸಿದರು.

ತಮ್ಮ ನೇತೃತ್ವದ ಎನ್‌ಡಿಎ ಸರ್ಕಾರದ ನಾಲ್ಕನೇ ವರ್ಷಾಚರಣೆಯ ನಿಮಿತ್ತ ಶನಿವಾರ ಇಲ್ಲಿನ ಬಾಲಿ ಯಾತ್ರಾ ಮೈದಾನದಲ್ಲಿ ಜನಕಲ್ಯಾಣ ಸಮಾವೇಶ ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ತಮ್ಮ ಸರ್ಕಾರವು ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ಜನರು ಈ ಸರ್ಕಾರಕ್ಕೆ ಅನುಮೋದನೆಯ ಮುದ್ರೆ ಒತ್ತಿದ್ದಾರೆ. 20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನಾಲ್ಕು ವರ್ಷಗಳ ಎನ್‌ಡಿಎ ಸರ್ಕಾರದ ಸಾಧನೆಯನ್ನು ಜನರು ಮೆಚ್ಚಿದ್ದಾರೆ ಎಂಬುದನ್ನು
ಇದು ತೋರಿಸುತ್ತದೆ. ದೇಶ ಬದಲಾಗಬಲ್ಲುದು ಎಂಬ ಭಾವನೆ ನಾಲ್ಕು ವರ್ಷಗಳ ಎನ್‌ಡಿಎ ಆಡಳಿತದಿಂದಾಗಿ ಜನರಲ್ಲಿ ಬಂದಿದೆ ಎಂದು ಮೋದಿ ಹೇಳಿದರು.

ಎನ್‌ಡಿಎ ಸರ್ಕಾರವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಭಯಪಡುತ್ತಿಲ್ಲ. ತಮ್ಮದು ಗೊಂದಲ ಮೂಡಿಸುವ ಸರ್ಕಾರ ಅಲ್ಲ. ಇದು ಬದ್ಧತೆಯ ಸರ್ಕಾರ ಮತ್ತು ನಿರ್ದಿಷ್ಟ ದಾಳಿಗಳನ್ನು ನಡೆಸಬಲ್ಲ ಶಕ್ತಿ ಇರುವ ಸರ್ಕಾರ ಎಂದು ಮೋದಿ ಪ್ರತಿಪಾದಿಸಿದರು. ಕಾಂಗ್ರೆಸ್‌ ಸದಾ ಅಧಿಕಾರದ ಬಗ್ಗೆಯೇ ಯೋಚಿಸುತ್ತದೆ ಎಂದು ಟೀಕಿಸಿದರು.

*****

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿಗೆ ಅಣಕು ಅಂಕಪತ್ರವೊಂದನ್ನು ಟ್ವಿಟರ್‌ ಮೂಲಕ ನೀಡಿದ್ದಾರೆ. ಉದ್ಯೋಗ ಸೃಷ್ಟಿ, ಕೃಷಿ, ತೈಲ ಬೆಲೆ ನಿಯಂತ್ರಣ, ವಿದೇಶಾಂಗ ನೀತಿಯಂತಹ ವಿಚಾರಗಳಲ್ಲಿ ಮೋದಿ ಅವರು ‘ಫೇಲ್‌’ ಆಗಿದ್ದಾರೆ ಎಂದು ರಾಹುಲ್‌ ಅಣಕವಾಡಿದ್ದಾರೆ.

******

ನಮೋ ಸಮೀಕ್ಷೆ

ತಮ್ಮ ಆ್ಯಪ್‌ನಲ್ಲಿ ನಡೆಸುವ ಸಮೀಕ್ಷೆಯಲ್ಲಿ ಸರ್ಕಾರ, ಕ್ಷೇತ್ರದ ಸಂಸದರು ಮತ್ತು ಶಾಸಕರ ಕೆಲಸದ ಮೌಲ್ಯಮಾಪನ ಮಾಡುವಂತೆ ಮೋದಿ ಅವರು ಜನರಿಗೆ ಕರೆ ನೀಡಿದ್ದಾರೆ.

‘ನಿಮ್ಮ ಮಾತಿಗೂ ಬೆಲೆ ಇದೆ. ಕೇಂದ್ರ ಸರ್ಕಾರ, ಅದರ ಕಾರ್ಯಕ್ರಮಗಳು, ನಿಮ್ಮ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗೆಗಿನ
ಅನಿಸಿಕೆಗಳನ್ನು ತಿಳಿಸಿ. ನಮೋ ಆ್ಯಪ್‌ನ ಸಮೀಕ್ಷೆಯಲ್ಲಿ ಭಾಗವಹಿಸಿ’ ಎಂದು ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

*****

ಕುಮಾರಸ್ವಾಮಿ ಅಭಿನಂದನೆ

ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ  ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರವು ಜನರ ನಿರೀಕ್ಷೆಗಳನ್ನು ಈಡೇರಿಸಿದೆಯೇ ಎಂಬ ಪ್ರಶ್ನೆಗೆ, ‘ಜನರು ಏನು ನಿರ್ಧರಿಸುತ್ತಾರೆ ನೋಡೋಣ’ ಎಂದು ಹೇಳಿದರು.

‘ಭಾಷಣಗಳ ಮೂಲಕ ಅವರು ಹಲವು ಭರವಸೆಗಳನ್ನು ನೀಡಿದ್ದಾರೆ. ದೊಡ್ಡ ದೊಡ್ಡ ವಿಚಾರಗಳನ್ನು ಚರ್ಚಿಸಿದ್ದಾರೆ. ಆದರೆ ಅವುಗಳನ್ನು ಅನುಷ್ಠಾನ
ಗೊಳಿಸಲು ಸಾಧ್ಯವಾಗಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT