ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ಈದ್‌ ಸಮಾಜದ ಸದ್ಭಾವನೆ ಬಲಪಡಿಸಲಿದೆ: ಪ್ರಧಾನಿ ಮೋದಿ

Last Updated 27 ಮೇ 2018, 8:39 IST
ಅಕ್ಷರ ಗಾತ್ರ

ನವದೆಹಲಿ: ‘ಈದ್‌(ರಂಜಾನ್‌) ನಮ್ಮ ಸಮಾಜದಲ್ಲಿನ ಸದ್ಭಾವನೆಯ ಬಂಧವನ್ನು ಮತ್ತಷ್ಟು ಬಲಪಡಿಸಲಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ರೇಡಿಯೋದ ಮಾಸಿಕ ಕಾರ್ಯಕ್ರಮ ‘ಮನ್‌ ಕಿ ಬಾತ್‌’ನ(ಮನದ ಮಾತು) 44ನೇ ಸಂಚಿಕೆಯಲ್ಲಿ ಮಾತನಾಡಿದ ಅವರು,‘ಎಲ್ಲರೂ ಸಂತೋಷ ಮತ್ತು ಉತ್ಸಾಹದಿಂದ ಈದ್‌ ಆಚರಣೆ ಮಾಡಲಿದ್ದಾರೆ ಎಂಬ ಭರವಸೆ ಮತ್ತು ನಂಬಿಕೆ ಇದೆ. ನಿಮ್ಮಲ್ಲರಿಗೂ ಹಬ್ಬದ ಹೃತ್ಪೂರ್ವಕ ಶುಭಾಶಯಗಳು’ ಎಂದರು.

ವೀರ ಸಾವರ್ಕರ್‌ ಜನ್ಮದಿನದ(ಮೇ 28) ಪ್ರಯುಕ್ತ, ಮೋದಿ ತಮ್ಮ ಮಾತಿನಲ್ಲಿ ಸಾವರ್ಕರ್‌ ಅವರು ಪ್ರತಿಭಾವಂತ ಬರಹಗಾರ ಮತ್ತು ಸಮಾಜ ಸುಧಾರಕ ಎಂದು ಸ್ಮರಿಸಿದರು.

‘ಮೇ ತಿಂಗಳಿಗೂ 1857ರಲ್ಲಿ ನಡೆದ ಐತಿಹಾಸಿಕ ಘಟನೆಗೂ ಸಂಬಂಧವಿದೆ. ಆ ವರ್ಷದಲ್ಲಿ ನಡೆದ ಹೋರಾಟವನ್ನು ಕೆಲವರು ಕೇವಲ ‘ಸಿಪಾಯಿ ದಂಗೆ’ ಎಂದು ಕರೆದರು. ಆದರೆ, ಅದನ್ನು ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಹೆಸರಿಸಿದ ಸಾವರ್ಕರ್‌ ಅವರನ್ನು ನಾನು ಗೌರವಿಸುತ್ತೇನೆ’ ಎಂದರು.

ದೇಶದ ಪ್ರಥಮ ಪ್ರಧಾನಿ ಜವಹರಲಾಲ್‌ ನೆಹರೂರ 54ನೇ ಪುಣ್ಯತಿಥಿಯ ಪ್ರಯುಕ್ತ ಪ್ರಧಾನಿ ಮೋದಿ, ನೆಹರೂರನ್ನೂ ನೆನಪಿಸಿಕೊಂಡರು.

‘ಹವಾಮಾನ ಬದಲಾವಣೆಯಿಂದ ದೇಶದ ಹಲವು ಪ್ರದೇಶಗಳಲ್ಲಿ ಕೆಲವು ವಾರಗಳಿಂದ ಬಿರುಗಾಳಿ ಬೀಸುತ್ತಿದೆ. ಇದರಿಂದ ಜೀವ ಮತ್ತು ಆಸ್ತಿಪಾಸ್ತಿ ಹಾನಿಯೂ ಆಗುತ್ತಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಪ್ರಕೃತಿಯೊಂದಿಗೆ ಹೋರಾಡುವುದನ್ನು ಕಲಿಸಿಲ್ಲ. ಬದಲಿಗೆ ಅದರೊಟ್ಟಿಗೆ ಸಾಮರಸ್ಯದಿಂದ ಬದುಕುವುದನ್ನು ಕಲಿಸಿವೆ’ ಎಂದರು.

‘ಜಾಗತಿಕ ಮಟ್ಟದಲ್ಲಿ ವಿಶ್ವ ಪರಿಸರ ದಿನ ಆಚರಣೆಯ ಹೊಣೆ ಈ ಬಾರಿ ಭಾರತಕ್ಕೆ ಸಿಕ್ಕಿದೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವಲ್ಲಿ ಭಾರತ ಸಮರ್ಥವಾಗಿ ನಾಯಕತ್ವ ನಿಭಾಯಿಸಬಲ್ಲದು ಎಂಬುದನ್ನು ಇದು ಸೂಚಿಸುತ್ತದೆ. ಪರಿಸರವನ್ನು ಪ್ಲಾಸ್ಟಿಕ್‌ಮುಕ್ತಗೊಳಿಸುವುದೇ ಈ ಬಾರಿ ಆಚರಣೆಯ ಧ್ಯೇಯವಾಗಿದೆ’ ಎಂದು ತಿಳಿಸಿದರು.

‘ನಮ್ಮ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ತಾರ್ಕಿಕ ಚಿಂತನಾ ಕ್ರಮವನ್ನು ವೃದ್ಧಿಸುವ ಅಂಶಗಳಿವೆ. ನಮ್ಮ ಪರಂಪರೆಯನ್ನು ಮರೆಯಬಾರದು. ಸಾಂಪ್ರದಾಯಿಕ ಆಟಗಳನ್ನು ಆಡುವಂತೆ ಮಕ್ಕಳನ್ನು ಉತ್ತೇಜಿಸಬೇಕು’ ಎಂದು ಸಲಹೆ ನೀಡಿದರು.

ಮೌಂಟ್‌ ಎವರೆಸ್ಟ್‌ ಶಿಖರವನ್ನು ಇತ್ತೀಚೆಗೆ ಹತ್ತಿ ಸಾಧನೆ ಮಾಡಿದ ಐವರು ಬುಡಕಟ್ಟು ವಿದ್ಯಾರ್ಥಿಗಳು, ಬಿಎಸ್‌ಎಫ್ ತಂಡ ಹಾಗೂ ಭೂಮಂಡಲದ ಸಾಗರಗಳ ಯಾನ ಮಾಡಿ ಬಂದ ಐಎನ್‌ಎಸ್‌ವಿ ತಾರಿಣಿ ತಂಡದ ಮಹಿಳಾ ಸದಸ್ಯರಿಗೆ ಶಭಾಶ್‌ಗಿರಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT