ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಲು ಸೂಚನೆ

15 ಗ್ರಾಮ ಪಂಚಾಯಿತಿಗಳ ಚುನಾವಣೆ; ಜೂನ್‌ 14ರಂದು ಮತದಾನ
Last Updated 27 ಮೇ 2018, 9:47 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ 15 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 28ರೊಳಗಾಗಿ ವಿಧಾನಸಭಾ ಮತಕ್ಷೇತ್ರದ ಡಾಟಾಬೇಸ್ ಅನುಗುಣವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಹಶೀಲ್ದಾರರಿಗೆ ಸೂಚಿಸಿದರು.

ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಹು ಆಯ್ಕೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಒಂದು ಮತಯಂತ್ರದಲ್ಲಿ ಮತದಾರರು ನಾಲ್ಕು ಅಭ್ಯರ್ಥಿಗಳಿಗೆ ಮತ ಚಲಾಯಿಸಬಹುದಾಗಿದೆ. ಚುನಾವಣೆ ನಡೆಯುವ ಎಲ್ಲ ಮತಗಟ್ಟೆಗಳಲ್ಲಿ ಮತದಾರರಿಗೆ ಎಲೆಕ್ಟ್ರಾನಿಕ್ ಮತಯಂತ್ರದ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕಲಬುರ್ಗಿ ತಾಲ್ಲೂಕಿನ ಮರಗುತ್ತಿ, ಆಳಂದ ತಾಲ್ಲೂಕಿನ ಮಡಕಿ, ದಣ್ಣೂರ, ನಿರಗುಡಿ, ಭೂಸನೂರ, ಹಿತ್ತಲಶಿರೂರ, ಧುತ್ತರಗಾಂವ, ಚಿಂಚೋಳಿ ತಾಲ್ಲೂಕಿನ ಕರ್ಚಖೇಡ, ಗರಗಪಳ್ಳಿ, ಚಿತ್ತಾಪುರ ತಾಲ್ಲೂಕಿನ ಶಳ್ಳಗಿ, ಕೊಲ್ಲೂರ, ರಾಂಪುರಹಳ್ಳಿ, ಜೇವರ್ಗಿ ತಾಲ್ಲೂಕಿನ ಮದರಿ, ಕರಕಿಹಳ್ಳಿ, ರಂಜಣಗಿ ಗ್ರಾಮ ಪಂಚಾಯಿತಿಗಳಿಗಾಗಿ ಚುನಾವಣೆ ನಡೆಯಲಿದೆ ಎಂದರು.

ಕಲಬುರ್ಗಿ ತಾಲ್ಲೂಕಿನಲ್ಲಿ- 7, ಆಳಂದ- 42, ಜೇವರ್ಗಿ- 19, ಚಿತ್ತಾಪುರ- 13 ಹಾಗೂ ಚಿಂಚೋಳಿ- 10 ಸೇರಿದಂತೆ ಒಟ್ಟು 91 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಜೂನ್ 14ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮೇ 30ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಜೂನ್ 2 ಕೊನೆಯ ದಿನವಾಗಿದ್ದು, ಕೇವಲ 3 ದಿನಗಳ ಕಾಲಾವಕಾಶ ನೀಡಲಾಗಿದೆ. ತಹಶೀಲ್ದಾರರು ತಾಲ್ಲೂಕು ಮಟ್ಟದ
ಲ್ಲಿಯೇ ಮತಪತ್ರವನ್ನು ತಯಾರಿಸಿಕೊಂಡು ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ಅಳವಡಿಸಬೇಕು. ಇದರಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂದು ಸೂಚಿಸಿದರು.

ಇದೇ ಅವಧಿಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಒಟ್ಟು 13 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಚುನಾವಣೆ ಮತಪತ್ರದ ಮುಖಾಂತರ ನಡೆಯುವುದು ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಈಗಾಗಲೇ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡಗಳ ವಿಂಗಡಣೆ ಕೈಗೊಂಡು ಅಧಿಸೂಚನೆ ಹೊರಡಿಸಲಾಗಿದೆ. ನೂತನವಾಗಿ ಗುರುತಿಸಲಾಗಿರುವ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮತದಾರ
ರನ್ನು ಗುರುತಿಸಬೇಕು. ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ವಿಂಗಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜೂನ್ 11ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಬೇಕು. ಜೂನ್ 17ರೊಳಗಾಗಿ ಆಕ್ಷೇಪನೆಗಳನ್ನು ಸ್ವೀಕರಿಸಿ ಜೂನ್ 22ರೊಳಗಾಗಿ ಆಕ್ಷೇಪನೆಗಳನ್ನು ಇತ್ಯರ್ಥಪಡಿಸಿ, 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT