ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಸುಡುಗಾಡು ಸಿದ್ಧರ ಬದುಕು ಬಲಿ

ಬಿರುಗಾಳಿಗೆ ಹಾರಿ ಹೋದ ಗುಡಿಸಲುಗಳು; ರಕ್ಷಣೆ ಇಲ್ಲದೆ ಪರದಾಟ, ಸಂಕಷ್ಟ ಕೇಳುವವರು ಯಾರು?
Last Updated 27 ಮೇ 2018, 10:42 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಕಳೆದ 5 ದಿನದಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ಪಟ್ಟಣದ ಕೇದಿಗೆಹಳ್ಳಿ ಗುಂಡುತೋಪಿನ ಮೂವತ್ತೈದಕ್ಕೂ ಹೆಚ್ಚು ಕುಟುಂಬಗಳು ತತ್ತರಿಸಿ ಹೋಗಿವೆ. ಗುಡಿಸಲುಗಳು ಬಿರುಗಾಳಿಗೆ ಹಾರಿ ಹೋಗಿವೆ. ರಕ್ಷಣೆ ಇಲ್ಲದೆ ಸುಡುಗಾಡು ಸಿದ್ಧರು ಪರದಾಡುತ್ತಿದ್ದಾರೆ.

ಶನಿವಾರ ಸಂಜೆ ಪಟ್ಟಣದಲ್ಲಿ ಸುರಿದ ಗಾಳಿ ಮಳೆಗೆ ಲಕ್ಷ್ಮಿದೇವಿ ಹಾಗೂ ಶಿವಮ್ಮ ಎಂಬಿವರ ಗುಡಿಸಲು ಸಂಪೂರ್ಣವಾಗಿ ಹಾರಿ ಹೋಗಿವೆ. ಗುಡಿಸಲುಗಳ ಮೇಲೆ ಮರವೊಂದು ಮುರಿದು ಬಿದ್ದಿದೆ. ಗುಡಿಸಲಿನಲ್ಲಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ಪಕ್ಕದಲ್ಲೇ ಇರುವ ದೊಡ್ಡ ಹುಣುಸೇ ಮರ ಬಿದ್ದು, ಬಲಿ ತೆಗೆದುಕೊಳ್ಳುವ ಆತಂಕ ಅಲೆಮಾರಿ ಸುಡುಗಾಡು ಸಿದ್ಧರನ್ನು ಕಾಡುತ್ತಿದೆ.

ಕಳೆದ 35 ವರ್ಷಗಳಿಂದ ಪಟ್ಟಣದ 6ನೇ ವಾರ್ಡ್‌ನ ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ಸುಡುಗಾಡು ಸಿದ್ಧರ 25 ಕುಟುಂಬಗಳು ನೆಲೆ ನಿಂತಿವೆ. ವಸತಿ ಹಾಗೂ ಸೂರಿಗಾಗಿ ದಶಕಗಳಿಂದ ಹೋರಾಡುತ್ತಾ ಬರುತ್ತಿದ್ದೇವೆ ಆದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಗುಂಡುತೋಪಿನ ಸುಡುಗಾಡು ಸಿದ್ಧರು ಆರೋಪಿಸಿದ್ದಾರೆ.

ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಪುನರಾವರ್ತನೆ ಆಗುತ್ತಿದೆ. ನಿರಂತರವಾಗಿ ಪುರಸಭೆಯಿಂದ ಹಿಡಿದು ಜಿಲ್ಲಾಧಿಕಾರಿವರೆಗೆ ಹಲವು ಬಾರಿ ಸೂರು ಕಲ್ಪಿಸಿಕೊಡುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ನಿತ್ಯ ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದೇವೆ ಎಂದು ‘ಪ್ರಜಾವಾಣಿ’ ಮುಂದೆ ತಮ್ಮ ಅಳಲು ತೋಡಿಕೊಂಡರು.

ಸುಡಗಾಡು ಸಿದ್ಧರ ಮಹಿಳೆ ಗೌರಮ್ಮ ಮಾತನಾಡಿ, ನಾವು ಹಳ್ಳಿ ಸುತ್ತಿ ಕೂದಲು ಹೇರ್‌ ಪಿನ್‌, ಬಾಚಣಿಗೆ ವ್ಯಾಪಾರ ಮಾಡಿ ಬದುಕಬೇಕು. ಮಳೆಗೆ ಗುಡಿಸಲುಗಳು ಹಾರಿ ಹೋಗಿವೆ. ಮಳೆಯ ನೀರು ನುಗ್ಗುತ್ತಿದೆ. ಗುಡಿಸಲುಗಳ ಪಕ್ಕದಲ್ಲೇ ಇರುವ ದೊಡ್ಡ ಹುಣುಸೇಮರ ಯಾವಾಗ ಬೇಕಾದರೂ ಬಿದ್ದು ಬಲಿ ತೆಗೆದುಕೊಳ್ಳಬಹುದು. ಹಾವು, ಚೇಳು, ಮಂಡರಗಪ್ಪೆಯಂಥ ವಿಷಜಂತುಗಳು ಮಳೆಯ ನೀರಿನೊಂದಿಗೆ ಮನೆಗೆ ನುಗ್ಗುತ್ತಿವೆ. ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ. ನಿತ್ಯ ಗುಡಿಸಲುಗಳನ್ನು ರಿಪೇರಿ ಮಾಡುವುದೇ ಕೆಲಸ ಆಗಿದೆ. ಕಳೆದ ಒಂದು ವಾರದಿಂದ ಯಾರೂ ವ್ಯಾಪಾರಕ್ಕೆ ಹೋಗಿಲ್ಲ ಎಂದು ದುಸ್ಥಿತಿ ವಿವರಿಸಿದರು.

ಸುಡಗಾಡು ಸಿದ್ಧರ ಮುಖಂಡ ವೆಂಕಟೇಶಯ್ಯ ಮಾತನಾಡಿ, ಪ್ರತಿ ಬಾರಿ ಮಳೆ ಬಂದಾಗಲೂ ನಮ್ಮಗಳ ಸಮಸ್ಯೆಯನ್ನು ಎಲ್ಲ ಅಧಿಕಾರಿ, ರಾಜಕಾರಣಿಗಳಿಗೆ ತಿಳಿಸಿದರೂ ಯಾರೂ ನಮ್ಮ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಮಳೆಯ ನೀರು ಗುಡಿಸಲಿಗೆ ನುಗ್ಗಿದರೆ ಬಟ್ಟೆ ಬರೆ, ಧವಸ ಧಾನ್ಯ ನೀರುಪಾಲಾಗುತ್ತಿವೆ. ನಮ್ಮ ಬದುಕು ಮಳೆಯಲ್ಲಿ ಕೊಚ್ಚಿ ಹೋಗುತ್ತಿದೆ. ನೂತನ ಶಾಸಕರು ಈ ಕುರಿತು ತಾಲ್ಲೂಕು ಆಡಳಿತ ತುರ್ತಾಗಿ ಕಾರ್ಯೋನ್ಮುಖವಾಗುವಂತೆ ಕ್ರಮ ವಹಿಸಿ ಸಮಸ್ಯೆಗೆ ಶೀಘ್ರ ಪರಿಹಾರ ಕೊಡಿಸಿಕೊಡಬೇಕು ಎಂದು ಆಗ್ರಹಿಸಿದರು.

ದಬ್ಬೇಘಟ್ಟದಲ್ಲಿ ಪುನರ್ವಸತಿ

ಹಿಂದಿನ ಜಿಲ್ಲಾಧಿಕಾರಿ ಮೋಹನ್‌ರಾಜ್ ಪಟ್ಟಣದ ಹೊರ ವಲಯ ದಬ್ಬೇಘಟ್ಟದ ಸರ್ವೆ ನಂಬರ್ 122ರಲ್ಲಿ 2.5 ಎಕರೆ ಜಮೀನನ್ನು ಸುಡುಗಾಡು ಸಿದ್ಧರ ಪುನರ್ವಸತಿಗಾಗಿ ಗುರುತಿಸಿ ಆದೇಶ ಹೊರಡಿಸಿದ್ದಾರೆ.

ಸುಡುಗಾಡ ಸಿದ್ಧರಿಗೆ ನಿವೇಶನ ನೀಡಲು ಡಿ.ಸಿ.ಕಚೇರಿಯಿಂದ ನಿರ್ದೇಶನ ಬಂದಿದೆ. ಈ ಸಂಬಂಧ ಅರ್ಜಿಗಳನ್ನು ತರಿಸಿಕೊಳ್ಳಲಾಗಿದೆ. ಶೀಘ್ರ ದಾಖಲೆ ಸಿದ್ಧಪಡಿಸಿ, ಇವರ ಕಡತವನ್ನು ಜಿಲ್ಲಾಧಿಕಾರಿಗೆ ಕಳುಹಿಸಲು ಕ್ರಮ ಕೈಗೊಳ್ಳತ್ತೇನೆ ಎಂದು ತಹಶೀಲ್ದಾರ್ ತಿಮ್ಮಪ್ಪ ತಿಳಿಸಿದರು.

ನಿವೇಶನ ಕೊಡಲಿ

ಚಿಕ್ಕನಾಯಕನಹಳ್ಳಿಯ ಅಲೆಮಾರಿ ಪಂಗಡವಾದ ಸುಡುಗಾಡು ಸಿದ್ಧರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತದೊಂದಿಗೆ ನಿಂರತರ ಸಂಪರ್ಕದಲ್ಲಿದ್ದೇನೆ. ಈಗ ನೂತನ ಜಿಲ್ಲಾಧಿಕಾರಿ ಬಂದಿದ್ದು, ಸುಡುಗಾಡು ಸಿದ್ಧರಿಗೆ ಶೀಘ್ರ ನಿವೇಶನ ಒದಗಿಸಿದರೆ ಅಲೆಮಾರಿ ಕೋಶದ ವತಿಯಿಂದ ಮನೆ ನಿರ್ಮಿಸಿಕೊಡಲು ಸಿದ್ಧರಿದ್ದೇವೆ ಎಂದು ಬೆಂಗಳೂರಿನ ಅಲೆಮಾರಿ ಕೋಶ ನೋಡಲ್‌ ಅಧಿಕಾರಿ ಡಾ.ಬಾಲಗುರುಮೂರ್ತಿ ತಿಳಿಸಿದರು.

ಮಳೆಯ ಅವಾಂತರ

ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಕೇದಿಗೆಹಳ್ಳಿ ಸಮೀಪದ ಗುಂಡುತೋಪಿನಲ್ಲಿ ಬಿಡಾರ ಹೂಡಿರುವ ಸುಡುಗಾಡು ಸಿದ್ದರು ವಾಸಿಸುತ್ತಿರುವ ಗುಡಿಸಲುಗಳಿಗೆ ಪ್ರತಿ ಬಾರಿ ಮಳೆ ಬಂದಾಗಲೂ ಮಳೆಯ ನೀರು ನುಗ್ಗುತ್ತಲೇ ಇದೆ. ಮಳೆಯ ಜತೆಗೆ ವಿಷಜಂತುಗಳು ಮನೆಯ ಒಳಗೆ ಸೇರಿದ್ದು, ಅವುಗಳನ್ನು ಹೊರಹಾಕುವಲ್ಲಿಯೇ ನಿವಾಸಿಗಳು ದಿನರಾತ್ರಿ ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT