ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯಡಕ: ಅಲೆವೂರು-ನೈಲಪಾದೆ ರಸ್ತೆಗೆ ಕೊನೆಗೂ ಅಭಿವೃದ್ಧಿ ಭಾಗ್ಯ

Last Updated 27 ಮೇ 2018, 10:49 IST
ಅಕ್ಷರ ಗಾತ್ರ

ಹಿರಿಯಡಕ: ಒಂದು ವರ್ಷದಿಂದ ಅರೆಬರೆ ಕಾಮಗಾರಿ ನಡೆಸಿ ವಾಹನ ಸವಾರರನ್ನು ತೀವ್ರ ಸಂಕಷ್ಟಕ್ಕೆ ಗುರಿ ಮಾಡಿದ್ದ ಉಡುಪಿ ತಾಲ್ಲೂಕಿನ ಅಲೆವೂರು-ನೈಲಪಾದೆ ರಸ್ತೆ ಕಾಮಗಾರಿಗೆ ಈಗ ವೇಗ ದೊರೆತಿದ್ದು, ಕೆಲಸ ಭರದಿಂದ ಸಾಗಿದೆ.

ಉಡುಪಿ ತಾಲ್ಲೂಕಿನ ಕಾಪು ವಿಧಾನಸಭಾ ಕ್ಷೇತ್ರದ ಅಲೆವೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸುಮಾರು 2 ಕಿ.ಮೀ ಉದ್ದದ ಅಲೆವೂರು-ನೈಲಪಾದೆ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ ’ಯೋಜನೆಯಡಿ ಅಭಿವೃದ್ಧಿಗೊಳಿಸಲು ಕಳೆದ ವರ್ಷ ಏಪ್ರಿಲ್‌ನಲ್ಲಿ ಈ ಹಿಂದೆ ಶಾಸಕರಾಗಿದ್ದ ವಿನಯ್‌ಕುಮಾರ್ ಸೊರಕೆ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ರಸ್ತೆ ಅಭಿವೃದ್ಧಿಯ ಗುತ್ತಿಗೆಯನ್ನು ಕಾಪುವಿನ ಸುರೇಶ್ ಆರ್. ಶೆಟ್ಟಿ ವಹಿಸಿಕೊಂಡಿದ್ದರು.

ಗುದ್ದಲಿ ಪೂಜೆ ನಡೆದ ಕೂಡಲೇ ಚರಂಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಬಳಿಕ ಕಾಮಗಾರಿಯ ವೇಗ ಕುಂಠಿತಗೊಂಡಿತು. ಕಾಮಗಾರಿಗೆ ಎಂದು ತರಿಸಲಾಗಿದ್ದ ಮರಳು, ಜಲ್ಲಿ ರಾಶಿಯನ್ನು ರಸ್ತೆಯ ಬದಿಯಲ್ಲಿಯೇ ಸಂಗ್ರಹಿಸಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತು. ಚರಂಡಿ, ರಸ್ತೆಯ ಅರೆಬರೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಈ ರಸ್ತೆ ಕೆಸರಿನಿಂದ ತುಂಬಿ ಪ್ರಯಾಣಿಸುವುದೇ ಅಸಾಧ್ಯ ಎಂಬಂತಾಗಿತ್ತು.

ಪೆರ್ಣಂಕಿಲ, ಕರ್ವಾಲು, ಮರ್ಣೆ, ಕೊಡಂಗಳ, ಅಲೆವೂರು ಪರಿಸರದ ಜನರು ತಮ್ಮ ದಿನನಿತ್ಯದ ಕೆಲಸಕ್ಕೆ ಉಡುಪಿಗೆ ಪ್ರಯಾಣಿಸಲು ಇದೇ ರಸ್ತೆಯನ್ನು ಬಳಸುತ್ತಿದ್ದರು. ಇದೇ ಯೋಜನೆಯಲ್ಲಿ ಮೂಡು ಅಲೆವೂರಿನಿಂದ ನೈಲಪಾದೆಯವರೆಗಿನ 1 ಕಿ.ಮೀ. ರಸ್ತೆ ಡಾಂಬರೀಕರಣಗೊಂಡಿತ್ತು. ಆದರೆ, ಹೆಚ್ಚಿನ ಜನ ಬಳಸುತ್ತಿದ್ದ ಮಣಿಪಾಲ ಕ್ರಾಸ್‌ನಿಂದ ಮೂಡು ಅಲೆವೂರಿನ 1 ಕಿ.ಮೀ. ರಸ್ತೆ ಮಾತ್ರ ಅರೆಬರೆ ಕಾಮಗಾರಿಯಿಂದಾಗಿ ತೀರಾ ಹದಗೆಟ್ಟಿತ್ತು. ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಕೆಸರಿನಲ್ಲಿ ತಮ್ಮ ವಾಹನವನ್ನು ನಿಯಂತ್ರಣ ಮಾಡಲಾಗದೇ ರಸ್ತೆಗೆ ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳೂ ನಡೆದಿದ್ದವು.

ವಾಹನ ಸವಾರರು ಈ ರಸ್ತೆಯ ಅವ್ಯವಸ್ಥೆಯಿಂದ ಪ್ರತಿದಿನ ಅನುಭವಿಸುತ್ತಿದ್ದ ತೊಂದರೆಯ ಕುರಿತು ಅಲೆವೂರು ಗ್ರಾಮ ಪಂಚಾಯಿತಿ ಮೂಲಕ ಗುತ್ತಿಗೆದಾರರ ಗಮನಕ್ಕೆ ತಂದಾಗ ಅವರಿಂದ ಕೆಲವೇ ದಿನಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುತ್ತೇವೆ ಎಂಬ ಭರವಸೆ ದೊರೆಯುತ್ತಿತ್ತೇ ಹೊರತು ಕಾಮಗಾರಿ ನಡೆಯುತ್ತಿರಲಿಲ್ಲ. ಜುಲೈ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ಇದೀಗ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದೆ. ರಸ್ತೆಯ ಇಕ್ಕೆಲವನ್ನು ಹಿಟಾಚಿ ಮೂಲಕ ಅಗಲಗೊಳಿಸಿ ಜಲ್ಲಿ ತುಂಬಿಸಿ ಕಾಂಕ್ರಿಟ್‌ ರಸ್ತೆ ಮಾಡುವ ತಯಾರಿ ನಡೆಸಲಾಗುತ್ತಿದೆ. ರಸ್ತೆಯ ಚರಂಡಿ ಕಾಮಗಾರಿಯೂ ಅಪೂರ್ಣಗೊಂಡಿದ್ದು, ಕರಾವಳಿ ಪರಿಸರದಲ್ಲಿ ಈಗಾಗಲೇ ಮಳೆ ಆರಂಭಗೊಂಡಿರುವುದರಿಂದ ಕಾಪು ವಿಧಾನಸಭಾ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಂತಾಗಿದ್ದ ಅಲೆವೂರು-ನೈಲಪಾದೆ ರಸ್ತೆಯ ಅರೆಬರೆ ಕಾಮಗಾರಿ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಪೂರ್ಣಗೊಂಡಲ್ಲಿ ಒಳ್ಳೆಯದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

‘ವರ್ಷದ ಹಿಂದೆಯೇ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿತ್ತು. ಆದರೆ ಬಳಿಕ ಅರ್ಧಕ್ಕೆ ನಿಂತ ಕಾರಣದಿಂದಾಗಿ ಈ ರಸ್ತೆಯಲ್ಲಿ ವಾಹನಗಳು ಸಂಚರಿಸುವುದೇ ಅಸಾಧ್ಯ ಎನಿಸುವಂತಾಗಿತ್ತು. ಈ ಬಗ್ಗೆ ಪಂಚಾಯಿತಿಯ ವತಿಯಿಂದ ಹಲವು ಬಾರಿ ಗುತ್ತಿಗೆದಾರರ ಗಮನಕ್ಕೆ ತರಲಾಗಿತ್ತು. ಇದೀಗ ಮತ್ತೇ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ’ ಎನ್ನುತ್ತಾರೆ ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ನಾಯಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT