ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಕ ಮಳೆ: ದೂರವಾದ ಕಾಳ್ಗಿಚ್ಚಿನ ಆತಂಕ

ಹಚ್ಚ ಹಸಿರಿನಿಂದ ನಳನಳಿಸುತ್ತಿರುವ ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳು
Last Updated 27 ಮೇ 2018, 12:28 IST
ಅಕ್ಷರ ಗಾತ್ರ

ಹನೂರು: ವಾಡಿಕೆಗಿಂತ ಮೊದಲೇ ಈ ಬಾರಿ ಬಿದ್ದ ಮಳೆಯಿಂದಾಗಿ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಇದರ ಬೆನ್ನಲ್ಲೇ ವನ್ಯಪ್ರಾಣಿಗಳು ಕಾಡಂಚಿನ ಜಮೀನುಗಳಿಗೆ ನುಗ್ಗುವ ಪ್ರಕರಣಗಳೂ ಗಣನೀಯವಾಗಿ ಕ್ಷೀಣಿಸಿವೆ.

ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಕೀರ್ತಿಗೆ ಭಾಜನವಾಗಿರುವ ಕಾವೇರಿ ವನ್ಯಧಾಮ ಮತ್ತು ಇದಕ್ಕೆ ಹೊಂದಿಕೊಂಡಂತೆ ಇರುವ  ಮಲೆಮಹದೇಶ್ವರ ವನ್ಯಧಾಮ ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ನೀರು, ಆಹಾರವಿಲ್ಲದೇ ಪರದಾಡುತ್ತಿದ್ದ ವನ್ಯಜೀವಿಗಳಿಗೆ ನಿರಂತರ ಸುರಿದ ಮಳೆ ಹರ್ಷವನ್ನುಂಟು ಮಾಡಿದೆ.

ಹನೂರು ತಾಲ್ಲೂಕು ಶೇ 60ರಷ್ಟು ಅರಣ್ಯದಿಂದಲೇ ಆವೃತವಾಗಿರುವ ಪ್ರದೇಶ. ಇಷ್ಟಾಗಿಯೂ ಇಲ್ಲಿ ಪ್ರತಿ ವರ್ಷ ಜೂನ್ ತಿಂಗಳ ಮೊದಲ ವಾರದಿಂದ ಈ ಭಾಗದಲ್ಲಿ ಮಳೆ ಆರಂಭವಾಗುವುದು ವಾಡಿಕೆ. ಆದರೆ, ಈ ಬಾರಿ ಮಾರ್ಚ್ ಅಂತ್ಯದಿಂದಲೇ ಮಳೆ ಆರಂಭವಾಗಿರುವುದರಿಂದ ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

ತಪ್ಪಿದ ವನ್ಯಜೀವಿ ಉಪಟಳ: ಮಾರ್ಚ್ ತಿಂಗಳಾಗುತ್ತಿದ್ದಂತೆ ವನ್ಯಪ್ರಾಣಿಗಳಿಂದ ತಮ್ಮ ಜಮೀನಿನಲ್ಲಿರುವ ಫಸಲನ್ನು ಸಂರಕ್ಷಿಸುವುದು ಕಾಡಂಚಿನ ರೈತರಿಗೆ ಒಂದು ಸವಾಲಾಗಿತ್ತು. ಆನೆ ಕಂದಕ, ಸೋಲಾರ್ ಬೇಲಿಯನ್ನು ದಾಟಿ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದ ಕಾಡುಪ್ರಾಣಿಗಳು ಜಮೀನಿನಲ್ಲಿರುವ ಫಸಲನ್ನು ತಿಂದು ಹಾಳು ಮಾಡುವುದರ ಜತೆಗೆ ಪಂಪ್‍ಸೆಟ್ ಹಾಗೂ ಇತರೆ ಪರಿಕರಗಳನ್ನು ನಾಶಗೊಳಿಸುತ್ತಿದ್ದವು. ಕೆಲ ಸಂದರ್ಭದಲ್ಲಿ ಕಾವಲು ಕಾಯುತ್ತಿದ್ದ ರೈತರ ಮೇಲೂ ದಾಳಿ ಮಾಡಿ ಅವರನ್ನು ಬಲಿ ತೆಗೆದುಕೊಂಡ ಪ್ರಕರಣಗಳು ಹೂಗ್ಯಂ ಹಾಗೂ ಪಿ.ಜಿ.ಪಾಳ್ಯ ವಲಯಗಳಲ್ಲಿ ಜರುಗಿದ್ದವು.

2 ತಿಂಗಳಿನಿಂದ ಬೀಳುತ್ತಿರುವ ಮಳೆಯಿಂದಾಗಿ ಅರಣ್ಯದಲ್ಲಿ ನೀರು, ಆಹಾರ ಸಮೃದ್ಧವಾಗಿರುವುದರಿಂದ ವನ್ಯಪ್ರಾಣಿಗಳ ಹಾವಳಿ ಅಲ್ಪಮಟ್ಟಿಗೆ ಕಡಿಮೆಯಾಗಿದೆ. ಈಚೆಗೆ ಹನೂರು ಬಫರ್ ವಲಯದಲ್ಲಿ ಜೋಳದ ಫಸಲನ್ನು ನಾಶಗೊಳಿಸಿದ ಪ್ರಕರಣ ಹೊರತುಪಡಿಸಿದರೆ ಇತರೆ ಯಾವುದೇ ಫಸಲು ನಾಶ ಪ್ರಕರಣಗಳು ಯಾವ ವಲಯದಲ್ಲೂ ದಾಖಲಾಗಿಲ್ಲ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಕ್ಷೀಣಿಸಿದ ಕಾಳ್ಗಿಚ್ಚು

ಬೇಸಿಗೆ ಆರಂಭವಾಗುತ್ತಿದ್ದಂತೆ ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವುದು ಅರಣ್ಯಾಧಿಕಾರಿಗಳಿಗೆ ಒಂದು ಸವಾಲು. ಮೂಢನಂಬಿಕೆಯಿಂದಲೂ, ಹಳೇ ವೈಷಮ್ಯದಿಂದಲೂ ಕಿಡಿಗೇಡಿಗಳು ಎಸೆಗುವ ಕೃತ್ಯಕ್ಕೆ ಇಡೀ ಅರಣ್ಯವೇ ಬೆಂಕಿಗಾಹುತಿಯಾಗುತ್ತಿತ್ತು.

ಇಂತಹ ಪ್ರಕರಣಗಳು ಕಾವೇರಿ ವನ್ಯಧಾಮದಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಈ ಬಾರಿಯೂ ಕೊತ್ತನೂರು ವನ್ಯಜೀವಿ ವಲಯದಲ್ಲಿ ನೂರಾರು ಎಕರೆ ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಆದರೆ, ಪ್ರತಿ ವರ್ಷ ನೂರಾರು ಎಕರೆ ಬೆಂಕಿಗಾಹುತಿಯಾಗಿದ್ದ ಕಾವೇರಿ ವನ್ಯಧಾಮದಲ್ಲಿ ಬೆಂಕಿ ಪ್ರಕರಣಗಳು ಕೊಂಚ ತಗ್ಗಿವೆ. ಪ್ರತಿ ವರ್ಷ ಕಾಣಿಸಿಕೊಳ್ಳುತ್ತಿದ್ದ ಬೆಂಕಿ ಹನೂರು ವನ್ಯಜೀವಿ ವಲಯದಲ್ಲಿ ಈ ಬಾರಿ ಕಾಣಿಸಿಕೊಂಡಿಲ್ಲ.

– ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT