ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ ಅಪರೂಪದ ವಾಸ್ತುಶಿಲ್ಪ

ಬಳ್ಳಕ್ಕಿ ನರಸಿಂಹ ದೇಗುಲಕ್ಕೆ ಬೇಕಿದೆ ಕಾಯಕಲ್ಪ
Last Updated 27 ಮೇ 2018, 12:49 IST
ಅಕ್ಷರ ಗಾತ್ರ

ಐತಿಹಾಸಿಕ ಕಲಾಕೃತಿಗಳ ಬಗ್ಗೆ ಜನರ ಅಸಡ್ಡೆ ಹೇಗಿದೆಯೆಂಬುದಕ್ಕೆ ತಾಲ್ಲೂಕಿನ ದೊಡ್ಡಪಟ್ಟಣಗೆರೆಯ ಬಳ್ಳಕ್ಕಿ ನರಸಿಂಹ ದೇಗುಲ ಸಾಕ್ಷಿಯಾಗಿದೆ. ಅತ್ಯಪರೂಪದ ವಾಸ್ತುಶಿಲ್ಪಕ್ಕೆ ಉದಾಹರಣೆಯಾದ ಈ ದೇಗುಲ ಸುಸ್ಥಿತಿಯಲ್ಲಿದ್ದರೂ ನಿರ್ಲಕ್ಷ್ಯಕ್ಕೊಳಗಾಗಿ ಗತ ವೈಭವವನ್ನು ಸಾರುತ್ತಾ ನಿಂತಿದೆ.

ಹೊಯ್ಸಳ ವಂಶದ 1ನೇ ಬಲ್ಲಾಳನ ಕಾಲದಲ್ಲಿ ಈ ದೇಗುಲಕ್ಕೆ ದಾನ ದತ್ತಿ ನೀಡಿರುವ ಶಾಸನಗಳು ಲಭ್ಯವಿದೆ. ಆದರೆ ಈ ದೊಡ್ಡಪಟ್ಟಣಗೆರೆ ಗ್ರಾಮವು ಹಿಂದೆ ನಗರಾವತಿ ಪಟ್ಟಣ ಎಂಬ ಹೆಸರಿನ ಅಗ್ರಹಾರವಾಗಿತ್ತು. ಇಲ್ಲಿ ಹೆಚ್ಚು ವ್ಯಾಪಾರ ವಹಿವಾಟು ನಡೆಯುತ್ತಿತ್ತು ಹಾಗೂ ಇದೊಂದು ಪ್ರಮುಖ ಆಡಳಿತ ಕೇಂದ್ರವಾಗಿತ್ತು ಎಂಬುದಲ್ಲಿ ಇಲ್ಲಿರುವ ಕೋಟೆಯ ಅವಶೇಷಗಳು ಸಾಕ್ಷಿಯಾಗಿವೆ.

ಇಲ್ಲಿರುವ ಬಳ್ಳಕ್ಕಿ ನರಸಿಂಹ ದೇಗುಲ ಬಹು ವಿಸ್ತಾರವಾದ ತ್ರಿಕೂಟ ದೇಗುಲ. ಪ್ರಧಾನ ದೇವತೆ ಲಕ್ಷ್ಮೀ ನರಸಿಂಹ. ಉಳಿದ ಎರಡು ಗರ್ಭಗೃಹಗಳಲ್ಲಿ ಉಗ್ರನರಸಿಂಹ ಮತ್ತು ಅದರೆದುರು ವೇಣುಗೋಪಾಲ ಸ್ವಾಮಿ ವಿಗ್ರಹಗಳಿವೆ. ಲಕ್ಷ್ಮೀನಾರಾಯಣ ಸ್ವಾಮಿ ವಿಗ್ರಹ ಅತ್ಯಂತ ಮನಮೋಹಕವಾಗಿದ್ದು, ಸ್ವಾಮಿಯ ತೊಡೆಯ ಮೇಲೆ ಲಕ್ಷ್ಮೀ ದೇವಿ ಕುಳಿತಿದ್ದಾಳೆ. ಶಂಖ ಚಕ್ರ ಗಧಾಧಾರಿಯಾದ ಮಹಾವಿಷ್ಣುವಿನ ವಿಗ್ರಹ ಹೊಯ್ಸಳ ಶಿಲ್ಪಕ್ಕೊಂದು ಮಹೋನ್ನತ ಉದಾಹರಣೆಯಾಗಿದೆ.

ನಾರಾಯಣನ ಎಡಭಾಗದ ಗರ್ಭಗೃಹದಲ್ಲಿ ಉಗ್ರನರಸಿಂಹನ ವಿಗ್ರಹವಿದೆ. ಶ್ರೀದೇವಿ ಮತ್ತು ಭೂದೇವಿಯೊರಡಗೂಡಿ ಕುಳಿತಿರುವ ಈ ನರಸಿಂಹನ ವಿಗ್ರಹ ಸುಮಾರು 4 ಅಡಿ ಎತ್ತರವಿದೆ. ಸೂಕ್ಷ್ಮ ಕುಸುರಿ ಕೆಲಸದಿಂದ ಕೂಡಿರುವ ನರಸಿಂಹನ ಉಗ್ತೆ ಕಡಿಮೆ ಮಾಡಲು ಅವನ ಪಕ್ಕದಲ್ಲಿ ಶ್ರೀ ದೇವಿ ಮತ್ತ ಭೂದೇವಿಯನ್ನು ಪ್ರತಿಷ್ಠಾಪಿಸಲಾಗಿದೆ ಎಂಬುದು ಸ್ಥಳೀಯರ ನಂಬಿಕೆ. ಆದರೂ ಆತನ ಸಿಟ್ಟು ಕಡಿಮೆಯಾಗದೆ ಹಾಗೂ ಆತನ ದೃಷ್ಟಿ ನೇರವಾಗಿ ಗ್ರಾಮದ ಮೇಲೆ ಬೀಳುತ್ತಿದ್ದರಿಂದ ಆತನೆದುರಿಗೆ ಗೋಪಾಲಕೃಷ್ಣನ ವಿಗ್ರಹ ಪ್ರತಿಷ್ಠಾಸಲಾಗಿದೆ ಎಂಬ ಪ್ರತೀತಿಯಿದೆ.

ಗೋಪಾಲಕೃಷ್ಣನ ವಿಗ್ರಹದ ಚೆಲುವು ವರ್ಣನಾತೀತ. ಪ್ರಭಾವಳಿಗಳಲ್ಲಿ ದಶಾವತಾರದ ವರ್ಣನೆ ಇನ್ನೊಂದು ವಿಶೇಷ. ವೇಣುಗೋಪಾಲನ ಪಕ್ಕದಲ್ಲಿಯೇ ಮತ್ತೊಂದು ಯೋಗಾನರಸಿಂಹನ ವಿಗ್ರಹವಿದೆ. ಒಂದೇ ದೇಗುಲದಲ್ಲಿ ಎರಡು ನರಸಿಂಹ ವಿಗ್ರಹಗಳಿರುವುದು ವಿಶೇಷ. ಈ ಬಳ್ಳಕ್ಕಿ ನರಸಿಂಹನಿಗೆ ಪ್ರತಿದಿನ 1 ಬಳ್ಳ(4 ಸೇರು) ಅಕ್ಕಿ ಅನ್ನ ಮಾಡಿ ನೈವೇದ್ಯ ಮಾಡುತ್ತಿದುದು ವಾಡಿಕೆ. ಆದ್ದರಿಂದಲೇ ಬಳ್ಳಕ್ಕಿ ನರಸಿಂಹ ಎಂಬ ಅಭಿದಾನ. ಆದರೆ ಅದೇಕೋ ತಿಳಿಯದು ಈಗ ಹಲವಾರು ವರ್ಷಗಳಿಂದ ಈ ದೇವಸ್ಥಾನ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಯಿತು.

ನರಸಿಂಹನಿಗೆ ಬಳ್ಳಕ್ಕಿಯೂ ನಿಂತುಹೋಯಿತು. ಪೂಜೆ ಮಾಡಿಕೊಂಡಿದ್ದ ಬಾಹ್ಮಣ ಕುಟುಂಬವೂ ಈ ಊರು ತೊರೆದು ಹೋಯಿತು. ಕೆಲ ದಿನಗಳು ದೀಪವೂ ಹಚ್ಚದಂತಹ ಪರಿಸ್ಥಿತಿಯನ್ನು ಈ ದೇಗುಲ ಕಂಡಿತು. ನಂತರದಲ್ಲಿ ಒಬ್ಬ ವೃದ್ಧರು ಈ ದೇಗುಲಕ್ಕೆ ಪ್ರತೀ ದಿನ ಬಂದು ದೀಪ ಹಚ್ಚಿ ಹೋಗುತ್ತಾರೆ. ಯಾವುದೇ ರೀತಿಯ ಸಂಪ್ರದಾಯಬದ್ದವಾಗಿ ಪೂಜೆ ನಡೆಯುತ್ತಿಲ್ಲ.

ಮುಜರಾಯಿ ಇಲಾಖೆಗೆ ಈ ದೇಗುಲ ಸೇರಿದ್ದರೂ ಇಲಾಖೆಯಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ. ಅವರೊಂದಿಷ್ಟು ಆಸಕ್ತಿ ತೋರಿಸಿದರೆ ದೇಗುಲದಲ್ಲಿ ನಿತ್ಯಾರಾಧನೆಯ ವ್ಯವಸ್ಥೆಯನ್ನಾದರೂ ಮಾಡಬಹುದು ಎಂಬ ಆಶಯ ಊರಿನ ಹಿರಿಯರಾದ ಶೇಷಾದ್ರಿ ಜೋಯಿಸರದ್ದು.

ದೇಗುಲದಲ್ಲಿರುವ ಭುವನೇಶ್ವರಿಯ ನಡುವೆ ಗೋಪಾಲಕೃಷ್ಣನ ಸುಂದರ ವಿಗ್ರಹವಿದೆ. ಸಪ್ತಮಾತೃಕೆಯರ, ಅಷ್ಟದಿಕ್ಪಾಲಕರ ವಿಗ್ರಹಗಳು ಗಮನ ಸೆಳೆಯುತ್ತದೆ. ಇಡೀ ದೇಗುಲದ ಹೊರಭಾಗ ಶಿಲ್ಪಕಲಾರಹಿತವಾಗಿದ್ದರೂ ಒಳಭಾಗದಲ್ಲಿ ಶಿಲ್ಪವೈಭವದಿಂದ ಕೂಡಿದೆ. ಈ ಮೂರೂ ಮನಮೋಹಕ ವಿಗ್ರಹಗಳು ಅರಿಶಿನ ಕುಂಕುಮ
ದಿಂದ ಆವೃತವಾಗಿ ಕಳಾಹೀನಗೊಂಡಿವೆ. ಇವುಗಳನ್ನು ರಕ್ಷಿಸದಿದ್ದರೆ ಮುಂದೊಂದು ದಿನ ಅಪೂರ್ವ ಕಲಾಕೃತಿಗಳು ಶಾಶ್ವತವಾಗಿ ಹಾಳಾಗುವ ಸಂಭವವಿದೆ. ಸ್ಥಳೀಯರ ಸಹಕಾರದೊಡನೆ ಮುಜರಾಯಿ ಇಲಾಖೆ ಈ ದೇಗುಲದ ರಕ್ಷಣೆಗೆ ಮುಂದಾಗಬೇಕೆಂಬುದು ಕಲಾಸಕ್ತರ ಆಶಯವಾಗಿದೆ.

ಬಾಲುಮಚ್ಚೇರಿ, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT