ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಕೆಗೆ ಕೈತಪ್ಪಲಿದೆಯೇ ಉಸ್ತುವಾರಿ ಪಟ್ಟ?

ಗದಗ ಗದ್ದುಗೆ ಯಾರಿಗೆ? ಲೆಕ್ಕಾಚಾರ ಪ್ರಾರಂಭ; ಸಂಭಾವ್ಯರ ಪಟ್ಟಿಯಲ್ಲಿ ಹೊರಟ್ಟಿ ಹೆಸರು
Last Updated 27 ಮೇ 2018, 13:04 IST
ಅಕ್ಷರ ಗಾತ್ರ

ಗದಗ: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಶುಕ್ರವಾರ ವಿಶ್ವಾಸಮತ ಗೆದ್ದ ಬೆನ್ನಲ್ಲೇ, ಜಿಲ್ಲೆಯಲ್ಲಿ ಈ ಬಾರಿ ಉಸ್ತುವಾರಿ ಸಚಿವರು ಯಾರಾಗಬಹುದು ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ನಾಲ್ಕು ಮತ ಕ್ಷೇತ್ರಗಳನ್ನು ಹೊಂದಿರುವ ಗದಗ ಜಿಲ್ಲೆಯಲ್ಲಿ 3 ಕ್ಷೇತ್ರದಲ್ಲಿ ಬಿಜೆಪಿ ಮತ್ತು 1 ಕಡೆ ಕಾಂಗ್ರೆಸ್‌ ಗೆಲುವು ಪಡೆದಿದೆ. ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ಶಾಸಕರಾಗಿರುವ (ಗದಗ ಕ್ಷೇತ್ರ) ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್.ಕೆ.ಪಾಟೀಲ ಅವರಿಗೆ ಈಗಿನ ಮೈತ್ರಿ ಸರ್ಕಾರದಲ್ಲೂ ಮಂತ್ರಿ ಸ್ಥಾನ ಲಭಿಸಿ ಅವರು ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿತ್ತು.

ಆದರೆ, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಎಲ್ಲಿಯೂ ಅವರ ಹೆಸರಿಲ್ಲದಿರುವುದು ಹೊಸ ರಾಜಕೀಯ ಚರ್ಚೆ ಹುಟ್ಟುಹಾಕಿದೆ. ಗದಗ ಜಿಲ್ಲಾ ಉಸ್ತುವಾರಿ ಪಟ್ಟ ಯಾರಿಗೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

‘ಈ ಬಾರಿ ಕೆಲವು ಹಿರಿಯ ಮುಖಂಡರು ಅನಿವಾರ್ಯವಾಗಿ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಹೇಳಿರುವುದು ಮತ್ತು ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಎಲ್ಲಿಯೂ ಎಚ್ಕೆ ಅವರ ಹೆಸರಿಲ್ಲದೇ ಇರುವುದು, ಅವರಿಗೆ ಉಸ್ತುವಾರಿ ಪಟ್ಟ ಕೈತಪ್ಪಲಿದೆ ಎನ್ನುವವರ ವಾದಕ್ಕೆ ಪುಷ್ಠಿ ಒದಗಿಸಿದೆ.

ಇದೇ ವೇಳೆ, ‘ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಸಂಘಟಿಸಲು ಅನುಕೂಲವಾಗುವ ವಾತಾವರಣ ನಿರ್ಮಾಣಕ್ಕೆ ಆದ್ಯತೆ ಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಜೆಡಿಎಸ್ ಪಕ್ಷದ ಸಚಿವರೇ ಉಸ್ತುವಾರಿ ಮಂತ್ರಿಯಾಗುತ್ತಾರೆ’ ಎನ್ನುವ ಮಾತುಗಳು ಜೆಡಿಎಸ್‌ ಸ್ಥಳೀಯ ಮುಖಂಡರಿಂದ ಕೇಳಿಬರುತ್ತಿದೆ. ಇದಕ್ಕೆ ಬಲ ನೀಡುವಂತೆ ಅವರು ಸಂಭಾವ್ಯ ಸಚಿವರ ಪಟ್ಟಿಯಲ್ಲಿರುವ ಬಸವರಾಜ ಹೊರಟ್ಟಿ ಅವರ ಹೆಸರನ್ನು ಮುಂದಿಡುತ್ತಾರೆ.

ಸಂಪುಟ ವಿಸ್ತರಣೆ ನಂತರ ಸ್ಪಷ್ಟ ಚಿತ್ರಣ

ಎರಡು ದಶಕಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಸೋಲಿಲ್ಲದ ಸರದಾರ ಎಂದು ಹೆಸರು ಪಡೆದಿದ್ದ ಎಚ್‌.ಕೆ.ಪಾಟೀಲ ಅವರು, 2008ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. 2013ರ ಚುನಾವಣೆಯಲ್ಲಿ ಗೆದ್ದು, ಮೊದಲ ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಸಕ್ತ ಚುನಾವಣೆಯಲ್ಲಿ ಅವರು ಕೇವಲ 1,868 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ವಿರುದ್ಧ ಪ್ರಯಾಸಕರ ಗೆಲುವು ಗಳಿಸಿ ಎರಡನೆಯ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಎಚ್ಕೆ ಗೆಲುವಿನ ಅಂತರ ಗದಗ ಕ್ಷೇತ್ರದಲ್ಲಿ ದಾಖಲಾದ ‘ನೋಟಾ’ ಸಂಖ್ಯೆಗಿಂತ ಕಡಿಮೆ ಎನ್ನುವುದು ಗಮನಾರ್ಹ ಅಂಶ. ಆದರೆ, ಉತ್ತರ ಕರ್ನಾಟಕದ ಭಾಗದಲ್ಲಿ ಗೆದ್ದಿರುವ ಕಾಂಗ್ರೆಸ್‌ನ ಬೆರಳೆಣಿಕೆಯ ಪ್ರಭಾವಿ ಸಚಿವರ ಪೈಕಿ ಅವರೂ ಒಬ್ಬರು. ಈ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಖಾತೆ ಲಭಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಆದರೆ, ಈ ಸ್ಥಾನ ಸಿಗುತ್ತಾ, ಕೈತಪ್ಪುತ್ತಾ ಎನ್ನುವುದು ಸಂಪುಟ ವಿಸ್ತರಣೆ ಮುಗಿದ ಬಳಿಕವೇ ಸ್ಪಷ್ಟವಾಗಲಿದೆ.

ಎಚ್ಕೆ ಅವರು ಈಗಾಗಲೇ ಜವಳಿ, ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇರಲಿ, ಇರದೇ ಇರಲಿ, ಒಂದಲ್ಲ ಒಂದು ರೀತಿ ಎಚ್ಕೆ ಅವರು ಅಧಿಕಾರದಲ್ಲೇ ಇರುತ್ತಾರೆ ಎಂಬ ವಿರೋಧ ಪಕ್ಷಗಳ ಆರೋಪ ಈ ಬಾರಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT