ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದವರ ಆಶಾಕಿರಣ ‘ಸ್ನೇಹ ಸದನ’

Last Updated 27 ಮೇ 2018, 13:17 IST
ಅಕ್ಷರ ಗಾತ್ರ

ಎಷ್ಟೇ ಆಧುನಿಕತೆ ಅಳವಡಿಸಿಕೊಂಡರೂ, ಎಚ್‌ಐವಿ ಸೋಂಕಿತ ಮಕ್ಕಳನ್ನು ಸಮಾಜ ನೋಡುವ ದೃಷ್ಟಿಕೋನ ಭಿನ್ನವೇ ಎಂಬುದು ನಿರ್ವಿವಾದ. ಆದರೆ, ಬ್ಯಾಡಗಿ ಪಟ್ಟಣದಲ್ಲಿರುವ ‘ಸ್ನೇಹ ಸದನ’ ಅದಕ್ಕೆ ಅಪವಾದ.

ಕಳೆದ ಎರಡು ವರ್ಷಗಳಿಂದ ಎಚ್‌ಐವಿ ಸೋಂಕಿತ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಆ ಮಕ್ಕಳಲ್ಲಿ ಚೈತನ್ಯ ತುಂಬುವ ಕೆಲಸವನ್ನು ‘ಸ್ನೇಹ ಸದನ’ ಮಾಡುತ್ತಿದೆ. ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಮತ್ತು ಹಾವೇರಿಯ ವಿಹಾನ್ ಸಂಸ್ಥೆ ಕಾರ್ಯದಲ್ಲಿ ಕೈಜೋಡಿಸಿವೆ.

ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ 35 ಹಾಗೂ ಹಾವೇರಿ ಜಿಲ್ಲೆಯ 20 ಸೇರಿದಂತೆ ಒಟ್ಟಾರೆ 55 ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿದೆ.

ಶಿಬಿರದಲ್ಲಿ ಕರಾಟೆ ಮೂಲಕ ಆತ್ಮರಕ್ಷಣೆ, ಮನರಂಜನೆ ಹಾಗೂ ಆಟೋಟಗಳನ್ನು ಏರ್ಪಡಿಸಿ ಹುಮ್ಮಸ್ಸು ತುಂಬಿದೆ. ಯೋಗ ಕಲಿಸುವ ಮೂಲಕ ಮಕ್ಕಳ ಆರೋಗ್ಯ ವೃದ್ಧಿಗೆ ನೆರವಾಗುತ್ತಿದೆ. ತಂದೆ–ತಾಯಿ ಕಳೆದುಕೊಂಡ ಮಕ್ಕಳಲ್ಲಿನ  ಒಂಟಿತನ ಹೋಗಲಾಡಿಸಲು ಕೂಡ ತರಬೇತಿ ನೀಡುತ್ತಿದೆ.

ಏನಿದು ಸ್ನೇಹ ಸದನ?: ತಾಲ್ಲೂಕಿನಲ್ಲಿ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯೇ ಸ್ನೇಹ ಸದನ.

‘ನೊಂದವರ, ದೀನ ದಲಿತರ ಹಾಗೂ ಬಡವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಮುಖ್ಯವಾಗಿ ಮಹಿಳಾ ಸಬಲೀಕರಣ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಒತ್ತು ನೀಡಲಾಗುತ್ತಿದೆ’ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕಿ ಸಿಸ್ಟರ್‌ ಮೇರಿ ತೆರೇಸಾ.

ಐದು ಶಿಶುಪಾಲನಾ ಕೇಂದ್ರದಲ್ಲಿ ಚಿಕ್ಕಮಕ್ಕಳಿಗೆ ಪೌಷ್ಟಿಕ ಆಹಾರ ನಿರ್ವಹಣೆ, 12ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ಕ್ಲಬ್‌ಗಳನ್ನು ಸ್ಥಾಪಿಸಿ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಒಂಬತ್ತು ಆಯ್ದ ಪ್ರೌಢ ಶಾಲೆಗಳಲ್ಲಿ ಹದಿಹರೆಯದ ಮಕ್ಕಳ ಸಬಲೀಕರಣ ಹೀಗೆ ಹಲವುಬಗೆಯ ಸಮಾಜ ಮುಖಿ ಕೆಲಸಗಳನ್ನು ಸಂಸ್ಥೆ ನಡೆಸುತ್ತಿದೆ.

‘ಬಾಲ ನ್ಯಾಯ ಕಾಯ್ದೆಯಡಿ ನೋಂದಾಯಿತ ಹೆಣ್ಣುಮಕ್ಕಳ ಕುಟೀರವನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ 50 ಅನಾಥ, ಏಕಪೋಷಕ ಮತ್ತು ನಿರ್ಗತಿಕ ಬಡ ಹೆಣ್ಣುಮಕ್ಕಳಿಗೆ ವಸತಿ ಕಲ್ಪಿಸಿ ಅವರಿಗೆ ಶಿಕ್ಷಣ ಕೊಡಿಸಲಾಗುತ್ತಿದೆ’ ಎಂದು ಸಿಸ್ಟರ್ ಸಹನಾ ವಿವರಿಸಿದರು.

‘ಗ್ರಾಮಗಳಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿ ಮಕ್ಕಳ ಲಾಲನೆ-ಪೋಷಣೆ ಕುರಿತು ಮಾಹಿತಿ ನೀಡುವುದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ಒದಗಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಸಂಸ್ಥೆಯ ಸಿಸ್ಟರ್ ಗ್ಲೋರಿಯಾ ತೆರೆಸಿಟಾ ಹೇಳಿದರು.

-ಪ್ರಮೀಳಾ ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT