ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ತಂಡಗಳು ಸೆಮಿಫೈನಲ್‌ಗೆ ಲಗ್ಗೆ

ಮರಗೋಡಿನಲ್ಲಿ ನಡೆಯುತ್ತಿರುವ 3ನೇ ವರ್ಷದ ಗೌಡ ಫುಟ್‌ಬಾಲ್‌ ಟೂರ್ನಿ
Last Updated 27 ಮೇ 2018, 13:26 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಗೌಡ ಫುಟ್‌ಬಾಲ್‌ ಅಕಾಡೆಮಿ ಆಶ್ರಯದಲ್ಲಿ ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 3ನೇ ವರ್ಷದ ಗೌಡ ಫುಟ್‌ಬಾಲ್‌ ಟೂರ್ನಿಯಲ್ಲಿ ಕಾಂಗೀರ, ಕಟ್ಟೆಮನೆ, ಪೊನ್ನಚ್ಚನ ಹಾಗೂ ಬಡುವಂಡ್ರ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ.

ಶನಿವಾರ ನಡೆದ ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಪೋರೆ ಕುಂಜಿಲನ ತಂಡ ಕೋಚನ ತಂಡವನ್ನು ಎದುರಿಸಿತು. ಪೊರೆ ಕುಂಜಿಲನ ತಂಡದ ಪರ ಸಚಿನ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮತ್ತೊಂದು ಪಂದ್ಯದಲ್ಲಿ ಯಾಲದಾಳು ತಂಡ ಪೊನ್ನಚ್ಚನ ತಂಡವನ್ನು ಎದುರಿಸಿತು. ಪೊನ್ನಚ್ಚನ ತಂಡ 3–0 ಅಂತರದಲ್ಲಿ ಜಯ ಸಾಧಿಸಿತು. ತಂಡದ ಪರ ಮಹೇಶ್, ಪ್ರಶಾಂತ್ ಹಾಗೂ ಶ್ರೀನಿ ತಲಾ ಒಂದೊಂದು ಗೋಲು ದಾಖಲಿಸಿದರು.

ಬಡುವಂಡ್ರ ಹಾಗೂ ಪಾಣತ್ತಲೆ ನಡುವಣ ಪಂದ್ಯದಲ್ಲಿ ಸಮಬಲ ಸಾಧಿಸಿತ್ತಾದರೂ, ಬಡುವಂಡ್ರ ತಂಡ ಟ್ರೈ ಬ್ರೇಕರ್‌ನಲ್ಲಿ ಗೆಲುವಿನ ನಗೆ ಬೀರಿತು. ಕಡ್ಯದ ಹಾಗೂ ಐಯಂಡ್ರ ಹಣಾಹಣಿಯಲ್ಲಿ ಕಡ್ಯದ ತಂಡ 1–0 ಗೋಲುಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.

ನಂತರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಬೊಳ್ಳೂರು ತಂಡ ಕಟ್ಟೆಮನೆ ತಂಡವನ್ನು ಎದುರಿಸಿತು. ಕಟ್ಟೆಮನೆ ತಂಡ 2–0 ಅಂತರದಲ್ಲಿ ಜಯ ಸಾಧಿಸಿತು. ಮತ್ತೊಂದು ಪಂದ್ಯಾಟದಲ್ಲಿ ಕಾಂಗೀರ ತಂಡ 1–0 ಗೋಲುಗಳಿಂದ ಮುಕ್ಕಾಟಿ ತಂಡವನ್ನು ಮಣಿಸಿತು. ಪೊರೆಕುಂಜಿಲ ಹಾಗೂ ಪೊನ್ನಚ್ಚನ ನಡುವಣ ಪಂದ್ಯಾಟದಲ್ಲಿ ಪೊನ್ನಚ್ಚನ ತಂಡ 5–1 ಗೋಲುಗಳಿಂದ ಜಯ ಸಾಧಿಸಿತು. ಪೊನ್ನಚ್ಚನ ತಂಡದ ಪರ ಪ್ರಶಾಂತ್ 2, ಶ್ರೀನಿವಾಸ್ 2 ಹಾಗೂ ಕವನ್ ಒಂದು ಗೋಲು ದಾಖಲಿಸಿದರು. ಬಡುವಂಡ್ರ ಹಾಗೂ ಕಡ್ಯದ ನಡುವಿನ ಪಂದ್ಯದಲ್ಲಿ ಬಡುವಂಡ್ರ ತಂಡ 1–0 ಗೋಲುಗಳಿಂದ ಜಯಗಳಿಸಿತು.

ಇಂದು ಫೈನಲ್‌ ಪಂದ್ಯಕ್ಕೆ ಚಾಲನೆ: ಮೇ 27ರಂದು ಫುಟ್‌ಬಾಲ್‌ ಫೈನಲ್ ಪಂದ್ಯವು ಮಧ್ಯಾಹ್ನ 2.30ಕ್ಕೆ ನಡೆಯಲಿದ್ದು, ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ. ಮೊದಲ ಸೆಮಿ ಫೈನಲ್ ಪಂದ್ಯಕ್ಕೆ ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಮುಂಡೋಡಿ ನಾಣಯ್ಯ ಹಾಗೂ ಕಟ್ಟೆಮನೆ ಧನಂಜಯ ಉದ್ಘಾಟಿಸಲಿ ದ್ದಾರೆ. ಎರಡನೇ ಸೆಮಿ ಫೈನಲ್ ಪಂದ್ಯಕ್ಕೆ ವಿ.ಎಸ್.ಎಸ್.ಎನ್‌ನ ಅಧ್ಯಕ್ಷ ಬಾಳಕಜೆ ಯೋಗೇಂದ್ರ ಹಾಗೂ ಕಟ್ಟೆಮಾಡು ಕಾಫಿ ಬೆಳೆಗಾರ ತೋಟಂಬೈಲು ಪ್ರದೀಪ್ ಚಾಲನೆ ನೀಡಲಿದ್ದಾರೆ.

ಸಮಾರೋಪ ಸಮಾರಂಭ: ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಬೆಂಗಳೂರು ಬಿಬಿಎಂಪಿಯ ನಿವೃತ್ತ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ, ಕೊಡಗು ಗೌಡ ಫುಟ್‌ಬಾಲ್ ಅಕಾಡೆಮಿಯ ಸಂಸ್ಥಾಪಕ ಕಟ್ಟೆಮನೆ ರಾಕೇಶ್, ವಕೀಲ ಮನೋಜ್ ಬೋಪಯ್ಯ, ಚೆರಿಯಮನೆ ರತ್ನಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀರ್ಘಕೇಶಿ ಶಿವಣ್ಣ ಪಾಲ್ಗೊಳ್ಳಲಿದ್ದಾರೆ. ನಂತರ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT