ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆ ಖರ್ಜೂರ ಈಚಲು ಹಣ್ಣು

Last Updated 27 ಮೇ 2018, 13:33 IST
ಅಕ್ಷರ ಗಾತ್ರ

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈಚಲು ಮರಗಳು ಕಾಯಿ ಗೊಂಚಲು ಹೊತ್ತು ಕಂಗೊಳಿಸುತ್ತಿವೆ. ಮರದಲ್ಲಿ ತೂಗುತ್ತಿರುವ ಹಸಿರು ಹಾಗೂ ಹಳದಿ ಬಣ್ಣದ ಗೊಂಚಲುಗಳ ಈಚಲು ಕಾಯಿ ಪ್ರಿಯರ ಬಾಯಲ್ಲಿ ನೀರೂರಿಸುತ್ತಿವೆ.

ಈಚಲು ಹಣ್ಣನ್ನು ಬಯಲು ಸೀಮೆಯ ಖರ್ಜೂರ ಎಂದು ಕರೆಯುವುದು ರೂಢಿ. ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗಿ, ಕಾಫಿ ಬಣ್ಣದೊಂದಿಗೆ ಹಣ್ಣಾಗುವ ಈಚಲು ಹಣ್ಣು ಎಲ್ಲ ವಯೋಮಾನದವರಿಗೂ ಇಷ್ಟ. ಮಕ್ಕಳು ಖುಷಿಪಟ್ಟು ಸವಿಯುತ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಬೆಳಿಗ್ಗೆ ಎದ್ದು ಈಚಲು ಮರದ ಕೆಳಗೆ ಉದುರಿದ ಹಣ್ಣನ್ನು ಆಯುವುದು ಸಾಮಾನ್ಯ. ಶಾಲಾ ಮಕ್ಕಳು ಶಾಲೆ ಬಿಟ್ಟ ಕೂಡಲೆ ಈಚಲು ಮರದತ್ತ ಸಾಗುತ್ತಾರೆ. ತೂಗುವ ಗೊಂಚಲಿಗೆ ಕಲ್ಲೆಸೆದು ಬೀಳಿಸಿ, ಹಣ್ಣನ್ನು ತಿನ್ನುತ್ತಾರೆ.

ಹಿರಿಯರೂ ಸಹ ದೋಟಿಯೊಂದಿಗೆ ಹೋಗಿ ಹಳದಿ ಬಣ್ಣದ ಗೊಂಚಲನ್ನು ಕೊಯ್ದು ತಂದು ಒಂದು ಕಡೆ ಇಟ್ಟು ಹಣ್ಣಾದ ಮೇಲೆ ಬಿಡಿಸಿ ಮಕ್ಕಳಿಗೆ ಕೊಡುತ್ತಾರೆ. ಬಡವರು ಈ ಕಾಯಿ ಸಂಗ್ರಹಿಸಿ ಶಾಲೆಗಳ ಎದುರು ಬುಟ್ಟಿಯಲ್ಲಿ ಇಟ್ಟುಕೊಂಡು ಮಾರಿ ನಾಲ್ಕು ಕಾಸು ಸಂಪಾದಿಸುತ್ತಾರೆ. ಇದರಿಂದಾಗಿ ಈ ಕಾಲ ಬಂತೆಂದರೆ ಶಾಲಾವರಣ ಈಚಲು ಬೀಜದಿಂದ ತುಂಬಿಹೋಗುತ್ತದೆ.

ಈಚಲು ಹಣ್ಣಿನ ಆಸೆಯಿಂದ ಮರ ಏರುವ ಮಕ್ಕಳು ಮುಳ್ಳು ಚುಚ್ಚಿಸಿಕೊಂಡು ಅಳುವುದುಂಟು. ಹಣ್ಣು ಆರಿಸುವ ಅವಸರದಲ್ಲಿ ಮರದ ಕೆಳಗೆ ಉದುರಿರುವ ಮುಳ್ಳು ತುಳಿದು ರಕ್ತ ಸೋರಿಸಿಕೊಳ್ಳುವುದೂ ಸಾಮಾನ್ಯ. ಎಸೆದ ಕಲ್ಲು ಮರದಲ್ಲಿ ಸಿಕ್ಕಿಕೊಂಡು ಗಾಳಿ ಬೀಸಿದಾಗ ಮರದ ಕೆಳಗಿರುವವರ ತಲೆ ಮೇಲೆ ಬೀಳುವುದುಂಟು.

ಈಚಲು ಮರದ ಕೆಳಗೆ ಹೋಗುವವರಿಗೆ ಚೂಪಾದ ಮುಳ್ಳಿನ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲವಾದರೆ ನೋವು ಅನುಭವಿಸಬೇಕಾಗುತ್ತದೆ. ಈಚಲು ಮುಳ್ಳು ತಗುಲಿದರೆ ಬೇಗ ವಾಸಿ ಯಾಗಲ್ಲ ಎಂದು ಕೃಷಿಕರು ಹೇಳುವರು.

ತಾಲ್ಲೂಕಿನಲ್ಲಿ ಹಿಂದೆ ವಿಶಾಲವಾದ ಈಚಲು ತೋಪುಗಳಿದ್ದವು. ಸೇಂದಿ ತೆಗೆಯುತ್ತಿದ್ದ ಕಾಲದಲ್ಲಿ ಈ ಮರಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಸೇಂದಿ ನಿಷೇಧಿಸಿದ ನಂತರ ಮರಗಳನ್ನು ಕಡಿದು ಜಮೀನನ್ನು ಕೃಷಿಗೆ ಬಳಸಿಕೊಳ್ಳಲಾಯಿತು. ಈಗ ಖಾಸಗಿ ಜಮೀನಲ್ಲಿ ಈಚಲು ಮರ ಕಾಣ ಸಿಗುವುದಿಲ್ಲ. ಸರ್ಕಾರಿ ಜಮೀನು, ರಸ್ತೆ ಬದಿ ಹಾಗೂ ಮಾವಿನ ತೋಟಗಳ ಬೇಲಿಗಳಲ್ಲಿ ಉಳಿದುಕೊಂಡಿವೆ.

ಈಚಲು ಮರವನ್ನು ಯಾರೂ ಬಿತ್ತಿ ಬೆಳೆಯುವುದಿಲ್ಲ. ಅದು ನೈಸರ್ಗಿಕವಾಗಿ ಬೆಳೆದು ನಿಲ್ಲುತ್ತದೆ. ಸಾಮಾನ್ಯವಾಗಿ ಮಳೆ ನೀರು ಹರಿಯುವ ಕಾಲುವೆ ಪಕ್ಕದಲ್ಲಿ ಬೆಳೆಯುತ್ತದೆ. ದಟ್ಟವಾದ ಬೇರಿನ ಮೂಲಕ ಭೂ ಸವಕಳಿ ತಪ್ಪಿಸುತ್ತದೆ. ನಿಸರ್ಗದ ಮಡಿಲಲ್ಲಿ ತಾನೇ ತಾನಾಗಿ ಬೆಳೆದು ಉಪಕಾರ ಮಾಡುವ ಈಚಲು ಅಳಿವಿನ ಹಾದಿ ಹಿಡಿದಿರುವುದು ಖೇದಕರ ಸಂಗತಿಯಾಗಿದೆ ಎಂಬುದು ರೈತ ವೆಂಕಟರೆಡ್ಡಿ ಅನಿಸಿಕೆ.

ಬಹು ಉಪಯೋಗಿ ಮರ

ಈಚಲು ಬಹುಪಯೋಗಿ ಮರ. ಹಣ್ಣುಗಳಷ್ಟೇ ಅಲ್ಲ, ಅದರ ಎಲೆ ಬಿಡಿಸಿ ಚಾಪೆ ಹೆಣೆಯುತ್ತಾರೆ. ಹುಣಸೆಹಣ್ಣು ಕಟ್ಟಲು ಈಚಲು ಚಾಪೆ ಅನುಕೂಲ. ಎಲೆ ಕಳೆದು ಉಳಿಯುವ ದಂಟಿನಿಂದ ಬುಟ್ಟಿ ಹಾಗೂ ಮಕ್ಕರಿ ಹೆಣೆಯಲಾಗುತ್ತದೆ. ಈಚಲು ಗಡ್ಡೆ ಹೆಚ್ಚು ರುಚಿಕರ. ಮರದ ಸುಳಿಯಲ್ಲಿ ಬಿಳಿ ಬಣ್ಣದ ಗಡ್ಡೆ ಇರುತ್ತದೆ. ಮರ ಕಡಿದ ಸಂದರ್ಭದಲ್ಲಿ ಕೊಡಲಿ ನೆರವಿನಿಂದ ಗಡ್ಡೆ ಬೇರ್ಪಡಿಸಿ ತಿನ್ನುತ್ತಾರೆ.

ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT