ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಬಂದ ಮೊದಲ ಮಾವು

ಶ್ರೀನಿವಾಸಪುರ: ಎರಡು ವಾರ ಕಳೆದರೆ ವಹಿವಾಟು ಹೆಚ್ಚಳ ಸಾಧ್ಯತೆ
Last Updated 27 ಮೇ 2018, 13:37 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾವಿನ ಕಾಯಿ ವಹಿವಾಟು ಆರಂಭವಾಗಿದೆ. ಆದರೆ ನಿರೀಕ್ಷಿತ ಬೆಲೆ ಮಾತ್ರ ಬಂದಿಲ್ಲ.

ಪಟ್ಟಣದ ಮಾವಿನ ಕಾಯಿ ಮಾರುಕಟ್ಟೆ ಏಷ್ಯಾದಲ್ಲಿಯೇ ದೊಡ್ಡದು. ಈಗಷ್ಟೇ ರೈತರು ಕೆಲವು ತಳಿಯ ಮಾವಿನ ಕಾಯಿ ಕಿತ್ತುತಂದು ಮಂಡಿಗೆ ಹಾಕುತ್ತಿದ್ದಾರೆ. ವಾತಾವಣ ವೈಪರೀತ್ಯದಿಂದಾಗಿ ಈ ಬಾರಿ ಮಾವಿನ ಸುಗ್ಗಿ ಒಂದು ತಿಂಗಳು ತಡವಾಗಿ ಪ್ರಾರಂಭವಾಗಿದೆ. ರಾಜಗೀರ ತಳಿ ಮಾವು ತಾಲ್ಲೂಕಿನಲ್ಲಿ ಮಾರುಕಟ್ಟೆಗೆ ಮೊದಲು ಬರುತ್ತದೆ. ಹಂತ ಹಂತವಾಗಿ ಇತರ ತಳಿಯ ಮಾವಿನ ಕಾಯಿಗಳು ಬರುತ್ತವೆ.

ಆದರೆ ರೈತರು ರಾಜಗೀರ ತಳಿಯ ಮಾವು ಮಾತ್ರವಲ್ಲದೆ, ಇನ್ನೂ ಪಕ್ವವಾಗದ ತೋತಾಪುರಿ, ಬಾದಾಮಿ, ಬೇನಿಷಾ ಮುಂತಾದ ತಳಿ ಮಾವನ್ನೂ ತಂದು ಮಂಡಿಗೆ ಹಾಕುತ್ತಿದ್ದಾರೆ. ತೋತಾಪುರಿ ಒಂದು ಟನ್‌ಗೆ ₹ 10 ಸಾವಿರದಿಂದ ₹ 15 ಸಾವಿರ, ಬಾದಾಮಿ ₹ 18 ರಿಂದ 19 ಸಾವಿರ, ರಾಜಗೀರ ₹ 10 ರಿಂದ 12 ಸಾವಿರದಂತೆ ಮಾರಾಟವಾಗುತ್ತಿದೆ ಎಂದು ಮಂಡಿ ಮಾಲೀಕ ಮತೀನ್‌ ಷರೀಫ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಈ ಬಾರಿ ತಡವಾಗಿ ಹೂ ಬಂದ ಪರಿಣಾಮ, ಫಸಲು ಪಕ್ವಗೊಳ್ಳುವುದು ತಡವಾಗಿದೆ. ಆದರೂ ಕೆಲವು ಮಾವು ಬೆಳೆಗಾರರು ಹಣದ ಅಗತ್ಯ, ಕಳ್ಳರ ಕಾಟ, ಕಾವಲಿಗೆ ತೊಡಕು ಇತ್ಯಾದಿ ಕಾರಣಗಳಿಂದ ಮುಂಚಿತವಾಗಿ ಕಾಯಿ ಕೀಳುತ್ತಿದ್ದಾರೆ. ಮಾರುಕಟ್ಟೆಗೆ ಇನ್ನೂ ಹೊರಗಿನ ವ್ಯಾಪಾರಿಗಳು ಬಂದಿಲ್ಲ. ಹಾಗಾಗಿ ಕಾಯಿಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಮಾವು ಬೆಳೆಗಾರರು ವೈಜ್ಞಾನಿಕವಾಗಿ ಕಾಯಿ ಕೀಳುವುದಿಲ್ಲ. ಅದು ಬೆಲೆ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕೆಲವು ರೈತರು ತೊಟ್ಟು ಸಹಿತ ಕಾಯಿ ಕಟಾವು ಮಾಡಿ, ಕ್ರೇಟ್‌ಗಳಿಗೆ ತುಂಬಿ ಮಂಡಿಗೆ ತರುತ್ತಿದ್ದಾರೆ. ಹಾಗೆ ಮಾಡುವುದರಿಂದ ಸರಕು ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ ಎಂಬ ನಂಬಿಕೆ ಅವರದ್ದು.‌

ಸಗಟು ಮಾರುಕಟ್ಟೆಯಲ್ಲಿ ಮಾವಿನ ಕಾಯಿ ಬೆಲೆ ಕುಸಿದಿದ್ದರೂ ಚಿಲ್ಲರೆ ಬೆಲೆ ಮಾತ್ರ ಗಗನಕ್ಕೇರಿದೆ. ಚಿಲ್ಲರೆ ವ್ಯಾಪಾರಿಗಳು ಕಡಿಮೆ ಬೆಲೆಗೆ ಕಾಯಿ ಖರೀದಿಸಿ ತಮ್ಮದೇ ಆದ ವಿಧಾನದಲ್ಲಿ ಹಣ್ಣು ಮಾಡಿ ಮಾರುತ್ತಿದ್ದಾರೆ. ಹಣ ಕೊಟ್ಟರೂ ಕಾಯಿ ರುಚಿಯಿಲ್ಲ ಎನ್ನುತ್ತಿದ್ದಾರೆ ಗ್ರಾಹಕರು.

ಮಾವಿನ ಕಾಯಿ ಮಂಡಿಗಳಲ್ಲಿ ಕೆಲಸ ಮಾಡಲು ನೆರೆಯ ಆಂಧ್ರಪ್ರದೇಶದಿಂದ ಕಾರ್ಮಿಕರು ಕುಟುಂಗಳ ಸಹಿತ ಬಂದಿದ್ದಾರೆ. ಆದರೆ ಕೆಲಸ ಮಾತ್ರ ಇಲ್ಲ. ಮಾವು ವಹಿವಾಟು ಪೂರ್ಣ ಪ್ರಮಾಣದಲ್ಲಿ ನಡೆಯಲು ಇನ್ನೂ ಒಂದೆರಡು ವಾರಗಳು ಕಳೆಯಬೇಕು. ಆಗಷ್ಟೇ ವಹಿವಾಟಿನ ಪೂರ್ಣ ಚಿತ್ರಣ ಕಂಡುಬರಲು ಸಾಧ್ಯ ಎನ್ನುವರು ವ್ಯಾಪಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT