ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯ ಹೇಳುವ ರಾಮಕೊಂಡಾಡಿಗಳ ಬದುಕೇ ಅತಂತ್ರ

ವೃತ್ತಿಯಿಂದ ತೆರೆಮರೆಗೆ ಸರಿಯುತ್ತಿರುವ ಅಲೆಮಾರಿ ಜನಾಂಗ, ಸರ್ಕಾರಿ ಸೌಲಭ್ಯದಿಂದ ವಂಚಿತ ಸಮುದಾಯ
Last Updated 27 ಮೇ 2018, 13:45 IST
ಅಕ್ಷರ ಗಾತ್ರ

ಹನುಮಸಾಗರ: ತೆಲುಗು ಭಾಷೆಯ ಗದ್ಯವನ್ನೆ ಪದ್ಯದ ತರಹದ ಹಾಡುತ್ತಾ ಹಳ್ಳಿಯಲ್ಲಿ ತಿರುಗಾಡುವ ಅಲೆಮಾರಿ ವರ್ಗಕ್ಕೆ ಸೇರಿದ ರಾಮಕೊಂಡಾಡಿಗಳು ಇತಿಹಾಸ ಪುಟದತ್ತ ಸೇರುವ ಕಾಲ ದೂರವಿಲ್ಲ.

ತಲೆಗೆ ಕೇಸರಿ ಬಣ್ಣದ ಮುಂಡಾಸು ಸುತ್ತಿಕೊಂಡು ಅದರ ಮೇಲೊಂದು ಅಗಲವಾದ ನವಿಲಗರಿ ಸಿಕ್ಕಿಸಿಕೊಂಡು, ಹೆಗಲ ಮೇಲೊಂದು ಹಸಿರು ವಸ್ತ್ರ, ಹೆಗಲಿಗೆ ಇಳಿಹಾಕಿದ ಬೊಂಬಿನ ಹಿಂದಿನ ತುದಿಗೆ ಜೋಳಿಗೆ ಮುಂದಿನ ತುದಿಗೆ ನೇತಾಡುವ ನೀರಿನ ಚೊಂಬು, ಹಣೆಯ ಮೇಲೆ ಅಗಲವಾದ ಕುಂಕುಮ ಬೊಟ್ಟು, ನಾಯಿ ಬೆದರಿಸಲು ಎಡಗೈಯಲ್ಲಿ ಬೆತ್ತ, ಬಲಗೈಯಲ್ಲಿ ಏಕನಾದ ತಂಬೂರಿ ಮೀಟುತ್ತಾ ಮೊಣಕಾಲವರೆಗೆ ಲುಂಗಿ ಸುತ್ತಿಕೊಂಡು ಬರುವ ವ್ಯಕ್ತಿಯೇ ರಾಮಕೊಂಡಾಡಿ.

ಈ ಅಲೆಮಾರಿ ಮನೆಯಂಗಳಕ್ಕೆ ಕಾಲಿಟ್ಟರೆ ಓಣಿಯ ಮಕ್ಕಳೆಲ್ಲ ಕುರ್ರ್ ಮಾಮಾ ಎಂದು ಹುಯಿಲೆಬ್ಬಿಸಿ ಇನ್ನಿಷ್ಟು ಮಕ್ಕಳನ್ನು ಕಲೆ ಹಾಕುತ್ತಾರೆ. ಸುಮಾರು 400 ವರ್ಷಕ್ಕೂ ಹೆಚ್ಚು ಹಿಂದಿನ ಇತಿಹಾಸ ಹೊಂದಿದ ಈ ಅಲೆಮಾರಿಗಳ ಸಂಸ್ಕೃತಿಗೆ ಈವರೆಗೂ ಆಧುನಿಕತೆಯ ಗಾಳಿ ಸೋಕದೇ ಅಂದು ರೂಢಿಯಲ್ಲಿದ್ದ ಸಂಪ್ರದಾಯಗಳು, ಸಂಸ್ಕಾರಗಳು, ಆಚರಣೆಗಳು, ಕಟ್ಟಳೆಗಳು ಇಂದಿಗೂ ನಂಬಿಕೆ ಉಳಿಸಿಕೊಂಡಿವೆ. ಆದರೆ ‘ಉದರ ನಿಮಿತ್ಯಂ ಬಹುಕೃತ ವೇಷಂ’ ಎಂಬಂತೆ ಆಗ ಹೊಟ್ಟೆ ಹೊರೆಯಲು ಹಾಕಿದ್ದ ರಾಮಕೊಂಡಾಡಿ ವೇಷ ಈಗ ಬದಲಾಗಿ ಆಚರಣೆಗಳು, ಸಂಪ್ರ ದಾಯಗಳ ಬೇರುಗಳು ಉಳಿದಿವೆ.

ಆಂಧ್ರಪ್ರದೇಶದ ಶ್ರೀಶೈಲ ಬೆಟ್ಟದ ಸುತ್ತಮುತ್ತಲಿನ ಪ್ರದೇಶವೇ ಇವರ ಮೂಲ ಸ್ಥಳವಾದರೂ ನೂರಾರು ವರ್ಷಗಳಿಂದ ಅಲೆಮಾರಿಯಾಗಿ ಊರೂರು ಸುತ್ತುತ್ತಾ ವಿವಿಧ ಭಾಗಗಳಿಗೆ ಹಂಚಿ ಹೋಗಿದ್ದಾರೆ. ಪೂರ್ವದ ದಿನಗಳಲ್ಲಿ ಈ ಸಮುದಾಯ ಕಾಡು ಮೇಡು ಅಲೆಯುತ್ತಾ ಗಡ್ಡೆಗೆಣಸು ತಿನ್ನುತ್ತಾ, ಬೇಟೆಯಾಡುತ್ತಾ ಅರಣ್ಯದಲ್ಲಿ ವಾಸವಾಗಿದ್ದ ಜನಾಂಗವಾಗಿತ್ತು.

ಶಿವಾಜಿ ಮಹಾರಾಜ, ಬಾಹು ಬಲ ಹೊಂದಿದ ಇಂತಹ ಅರಣ್ಯದ ಅಲೆಮಾರಿಗಳನ್ನೇ ತನ್ನ ಸೈನ್ಯದಲ್ಲಿ ಸೇರಿಸಿಕೊಳ್ಳುತ್ತಿದ್ದಾಗ ಈ ಅಡವಿ ಜಂಗಾಲರು ಅವನ ಕಣ್ಣಿಗೆ ಬಿದ್ದರಂತೆ, ಇವರಿಗೆ ರಾಮಕೊಂಡಾಡಿ ವೇಷ ತೊಡಿಸಿ ಗುಪ್ತಚಾರರನ್ನಾಗಿ ಬಳಸಿಕೊಂಡು ಕಾಡಿನಿಂದ ನಾಡಿಗೆ ಕರೆತಂದನಂತೆ. ಅದಕ್ಕೆ ಉಂಬಳಿ ಯಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳ ನಾಡಿನಲ್ಲಿ ಇದೇ ವೇಷಧರಿಸಿಕೊಂಡು ಉದರ ಕಾರ್ಯ ಮಾಡಲು ಅನುಮತಿ ನೀಡಿದ ನಂತೆ ಎಂದು ಈ ಜನಾಂಗದ ಹಿರಿಯ ಹನುಮಂತಪ್ಪ ಕರಿ ಹೇಳುತ್ತಾರೆ.

ಮರೆಯಾಗುತ್ತಿರುವ ರಾಮ ಕೊಂಡಾಡಿ ಗಳ ವೇಷ: ಹಳ್ಳಿ ಹಳ್ಳಿಗಳಲ್ಲೂ ವೈದ್ಯಕೀಯ ಜಾಗೃತಿ ಬೆಳೆದಿರುವ ಇಂದಿನ ದಿನಗಳಲ್ಲಿ ಈ ಹಿಂದಿನಿಂತೆ ಗ್ರಾಮೀಣರು ರಾಮಕೊಂಡಾಡಿ ಗಳಿಂದ ಗಿಡಮೂಲಿಕೆಗಳನ್ನು ತೆಗೆದು ಕೊಳ್ಳುತ್ತಿಲ್ಲ, ಬದಲಿಗೆ ಇವರನ್ನು ಸಂಶಯ ದೃಷ್ಟಿಯಿಂದ ಕಾಣುತ್ತಿದ್ದಾರೆ. ಮೊರದ ತುಂಬ ಕಾಳು ಕಡಿ ಭಿಕ್ಷೆ ಮಾಡುತ್ತಿದ್ದ ಕಾಲ ಬದಲಾಗಿ ತುಂಡು ರೊಟ್ಟಿ ಇಲ್ವೆ ಕಿಲುಬುಕಾಸು ನೀಡಿ ಸಾಗ ಹಾಕುತ್ತಾರೆ. ಹತ್ತಾರು ಹಳ್ಳಿಗಳನ್ನು ಅಲೆದರೂ ಇವರ ಗೇಣು ಹೊಟ್ಟೆ ತುಂಬುತ್ತಿಲ್ಲ, ಸ್ವಂತ ದುಡಿಮೆ ಹೊಂದಬೇಕೆಂದರೆ ಕಾಸಿಲ್ಲ, ಅಂಗೈಯಗಲದಷ್ಟು ಜಮೀನಿಲ್ಲದ ಸಂಕಷ್ಟದ ಬದುಕು ಇವರದಾಗಿದೆ.

ವೇಷ ಬದಲಾಯಿತು....

ರಾಮಕೊಂಡಾಡಿಯ ವೇಷ ಈಗ ಬಹುತೇಕವಾಗಿ ಬದಲಾದರೂ ಈ ಆಯುರ್ವೇದ ವೃತ್ತಿ ಮಾತ್ರ ಕೊಂಚ ಈಗಲೂ ಮುಂದುವರೆದಿದೆ. ಅವರ ಜೋಳಿಗೆಯಲ್ಲಿ ಹನುಮನ ಹಸ್ತ, ರಾಮಬಾಣಕಡ್ಡಿ, ನವಿಲು ಜುಟ್ಲ, ತಾಮ್ರ ಬಣ್ಣದ ಬೇರು, ಮಹಿವರಶೆಕೆ, ಮರುಳು ಮಾತಂಗಿ, ಸೂರ್ಯಕಾಂತಿ, ಚಂದ್ರಕಾಂತಿ, ಪಿಲ್ಲಡಗು-ಪಿಟ್ಟಡಗು, ಆತಾಜೋಡು-ಪಾಯಪಡಿ, ಬೆಕ್ಕಿನ ಹೆಜ್ಜೆ, ನೊಣಸುತುಗ, ಮಂಗರೂಳಿ ತೊಪ್ಪಲು, ಹಸಿರು ಗುಲಗಂಜಿ... ಹೀಗೆ ಅನೇಕ ತರಹದ ಗಿಡಮೂಲಿಕೆಗಳು ದೊರೆಯುತ್ತವೆ.

ಆಂಧ್ರಪ್ರದೇಶದಲ್ಲಿ ಜಂಗಾಲರು, ಕಾಟಿಪಾಪಂ ಎಂದು ಕರೆಸಿಕೊಳ್ಳುವ ಇವರಲ್ಲಿ ಐದು ಗೋತ್ರಗಳು ಮುನ್ನೂರಕ್ಕೂ ಹೆಚ್ಚು ಬೆಡಗುಗಳನ್ನು ಹೊಂದಿದ್ದಾರೆ. ವಿಭೂತಿ, ರುದ್ರಾಕ್ಷಿ, ಗಂಟಿಯವರು, ಒಂಟೆತ್ತಿನವರು, ದೀಪಂ ಎಂಬ ಐದು ಗೋತ್ರಗಳಾದರೆ ಕರಿಯವರ್, ಪರಿಯವರ್, ಮಹಾದೇನ್, ಗಡ್ಡದ್, ಕೆನ್ನಾರಿ, ಎಣ್ಣೆ, ಎಡಬಿಲ್ಲೆ, ಕೊಂಡವ, ಪತ್ರಿ, ಕೋಮಾರಿ ಎಂಬಂತಹ ಮುಖ್ಯ ಬೆಡಗುಗಳನ್ನು ಇವರು ಹೊಂದಿದ್ದಾರೆ.

**
ಮೊರದ ತುಂಬ ಕಾಳು ಕಡಿ ಭಿಕ್ಷೆ ಮಾಡುತ್ತಿದ್ದ ಕಾಲ ಬದಲಾಗಿ, ಹತ್ತಾರು ಹಳ್ಳಿಗಳನ್ನು ಅಲೆದರೂ ಗೇಣು ಹೊಟ್ಟೆ ತುಂಬುತ್ತಿಲ್ಲದ ಅತಂತ್ರದ ಬದುಕು ನಮ್ಮದಾಗಿದೆ
- ಹನುಮಂತ, ರಾಮಕೊಂಡಾಡಿ

ಕಿಶನರಾವ್‌ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT