ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಸ್ ಏನ್ ಆಗುತ್ತೆ..?

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ ಪಂದ್ಯಗಳನ್ನು ನೋಡುವ ಬಹುತೇಕ ಜನರು  ಕೇಳುವ ಪ್ರಶ್ನೆ ಇದು. ಟೆಸ್ಟ್‌ ಕ್ರಿಕೆಟ್‌ ಹುಟ್ಟಿನಿಂದಲೂ ನಾಣ್ಯ ಚಿಮ್ಮಿ ಟಾಸ್ ನಿರ್ಧರಿಸುವ ಪದ್ಧತಿಯು ಹಾಸುಹೊಕ್ಕಾಗಿ ಬಂದಿದೆ.

ಆದರೆ, ಇದೀಗ ಟಾಸ್ ಹಾಕುವ ಪದ್ಧತಿಯನ್ನು ಕೈಬಿಡಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚಿಂತನೆ ನಡೆಸಿದೆ. ಇದಕ್ಕೆ ಹಲವು ಹಿರಿಯ ಆಟಗಾರರಿಂದ ಪರ–ವಿರೋಧದ ಚರ್ಚೆಗಳು ಆರಂಭವಾಗಿವೆ.

ಆತಿಥೇಯ ತಂಡಗಳು  ತವರು ನೆಲದ ಲಾಭ ಪಡೆಯುವುದನ್ನು ತಪ್ಪಿಸಲು ಐಸಿಸಿ ಈ ಕ್ರಮ ಕೈಗೊಳ್ಳುವತ್ತ ಚಿತ್ತ ಹರಿಸಿದೆ. ಮೇ 28 ಮತ್ತು 29ರಂದು ಮುಂಬೈನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ಸಮಿತಿಯ ಸಭೆಯಲ್ಲಿ ಟಾಸ್ ಪದ್ಧತಿ ಕೈಬಿಡುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಒಂದೊಮ್ಮೆ ಟಾಸ್ ಕೈಬಿಡುವ ನಿರ್ಧಾರವಾದರೆ, 2019ರ ಆ್ಯಶಸ್ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ  ಜಾರಿಗೆ ಬರಲಿದೆ.

1877 ರಲ್ಲಿ ಟೆಸ್ಟ್ ಆರಂಭವಾದಾಗಿನಿಂದಲೂ ಟಾಸ್ ಪದ್ಧತಿಯೂ ಇದೆ.  ಇದರಲ್ಲಿ  ಗೆದ್ದ ತಂಡಕ್ಕೆ ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಪಿಚ್ ಗುಣಮಟ್ಟ, ವಾತಾವರಣವನ್ನು ಅವಲೋಕಿಸಿ ಬ್ಯಾಟಿಂಗ್ ಅಥವಾ ಫೀಲ್ಡಿಂಗ್‌ನ ನಿರ್ಧಾರವಾವನ್ನು ತಂಡದ ನಾಯಕ ಪ್ರಕಟಿಸುವುದು ವಾಡಿಕೆ.

ಟಾಸ್ ರದ್ದಾದರೆ ಪ್ರವಾಸಿ ತಂಡಕ್ಕೆ  ಆದ್ಯತೆ ಸಿಗಲಿದೆ. ಆತಿಥೇಯ ತಂಡವು ತನಗೆ ಬೇಕಾದಂತೆ ಪಿಚ್ ಸಿದ್ಧಗೊಳಿಸಿಕೊಳ್ಳುವುದನ್ನು ತಪ್ಪಿಸಲು ಇದು ಅನುಕೂಲವಾಗಲಿದೆ ಎಂದು ಐಸಿಸಿಯ ಯೋಚಿಸುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ (ಇಸಿಬಿ) ಐಸಿಸಿಯನ್ನು ಈ ಬೆಂಬಲಿಸಿದೆ.  ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗರಾದ ರಿಕಿ ಪಾಂಟಿಂಗ್,  ಶೇನ್ ವಾರ್ನ್ ಮತ್ತು ಸ್ಟೀವ್ ವಾ, ಪಾಕ್ ತಂಡದ ಶೋಯಬ್ ಮಲಿಕ್, ಜಾವೇದ್ ಮಿಯಾಂದಾದ್ ಕೂಡ ಟಾಸ್ ರದ್ದು ಮಾಡಲು ಒಲವು ತೋರಿದ್ದಾರೆ. ಆದರೆ ಭಾರತದ ಸೌರವ್ ಗಂಗೂಲಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಉದ್ದೇಶ ಏನು?
ಟಾಸ್ ಕೈ ಬಿಟ್ಟು ಪ್ರವಾಸಿ ತಂಡದ ನಾಯಕನಿಗೇ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆ ಅವಕಾಶ ನೀಡುವುದು ಐಸಿಸಿ ಉದ್ದೇಶ. ಆತಿಥೇಯ ತಂಡಗಳು ತಾವು ಟಾಸ್ ಗೆದ್ದರೆ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ಪಿಚ್ ಸಿದ್ಧಗೊಳಿಸುವ ವಿಚಾರ ಗುಟ್ಟೇನಲ್ಲ. ಇದನ್ನು ತಪ್ಪಿಸಿದರೆ ಸ್ಪೋರ್ಟಿಂಗ್ ಪಿಚ್ ಸಿದ್ಧಗೊಳಿಸಲು ತಂಡಗಳು ಒಲವು ತೋರಿಸಬಹುದು ಎಂದು ಐಸಿಸಿ ಭಾವಿಸಿದೆ.

ಆದರೆ ಪ್ರತಿಯೊಂದು ದೇಶ, ಊರುಗಳ ವಾತಾವರಣವೇ ಬೇರೆ. ಅದಕ್ಕನುಗುಣವಾಗಿ ಪಿಚ್‌ ವರ್ತಿಸುತ್ತದೆ. ಅದರಲ್ಲೂ ಭಾರತದ ಪ್ರತಿಯೊಂದು ಊರಿನಲ್ಲಿಯೂ ವಿಭಿನ್ನವಾದ ವಾತಾವರಣ, ಭೌಗೋಳಿಕ ಗುಣವಿಶೇಷಗಳು ಇವೆ. ಅದಕ್ಕೆ ತಕ್ಕಂತೆ  ಇಲ್ಲಿಯ ಪ್ರತಿಯೊಂದು ಪಿಚ್ ಕೂಡ ವಿಭಿನ್ನವೇ. ಈ ನಿಟ್ಟಿನಲ್ಲಿ  ಭಾರತದ ನಿಲುವುನ್ನು ಬಿಸಿಸಿಐ ಇದುವರೆಗೂ ಪ್ರಕಟಿಸಿಲ್ಲ.

ಇಂಗ್ಲಿಷ್ ಕೌಂಟಿ ಕ್ರಿಕೆಟ್‌ ಟೂರ್ನಿಯಲ್ಲಿ 2016ರಿಂದಲೇ ಟಾಸ್ ಪದ್ಧತಿಯನ್ನು ಕೈಬಿಡಲಾಗಿದೆ. ಆದರೆ ಅದರಿಂದಾಗಿ ಆ ಪಂದ್ಯಗಳ ಮೇಲೆ ಗಾಢವಾದ ಪರಿಣಾಮವೇನೂ ಆಗಿಲ್ಲ ಎಂದು ತಜ್ಞರು ಹೇಳುತ್ತಾರೆ.

ಟಾಸ್ ಪದ್ಧತಿ ರದ್ದಾಗುವ ಮುನ್ನ, ಅಂದರೆ 2015ರಲ್ಲಿ ಪ್ರವಾಸಿ ತಂಡಗಳು 45 ಪಂದ್ಯಗಳನ್ನು ಗೆದ್ದಿದ್ದವು. ಟಾಸ್ ಕೈಬಿಟ್ಟ ನಂತರ 2016ರಲ್ಲಿ ಪ್ರವಾಸಿ ತಂಡಗಳು 33 ಪಂದ್ಯಗಳಲ್ಲಿ ಜಯಿಸಿದ್ದವು.  ಇದರಿಂದಾಗಿ ಬಹುತೇಕ ಪಂದ್ಯಗಳ ಫಲಿತಾಂಶದಲ್ಲಿ ಟಾಸ್ ಪಾತ್ರ ಅತ್ಯಲ್ಪ ಪ್ರಮಾಣದ್ದು.  ಆದ್ದರಿಂದ ಇರುವ ಪದ್ಧತಿಯನ್ನು ಮುಂದುವರಿಸುವುದು ಸೂಕ್ತ ಎಂದು ಕೆಲವರು ವಾದ ಮಾಡುತ್ತಿದ್ದಾರೆ.

ಮುಂಬೈನ ಸಭೆಯಲ್ಲಿ ಈ ವಿಷಯಕ್ಕೆ ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆ ಇದೆ. ಟಾಸ್ ಇರಬೇಕೋ, ಬೇಡವೋ  ಎಂಬ ಬಗ್ಗೆ ಟಾಸ್ ಮಾಡದಿದ್ದರೆ ಸಾಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT