ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಕ್ ಕನಸುಗಳ ‘ಏಸ್’

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ದಾವಣಗೆರೆಯ ಅಲೋಕ್‌ ಆರಾಧ್ಯ ಅವರಿಗೆ ಟೆನಿಸ್‌ ಆಟವೇ ಬದುಕು. ಭಾರದ ರ‍್ಯಾಕೆಟ್‌ ಚಲನೆಗೆ ಕಸುವು ತುಂಬಿ ತುಂಬಿ ಹುರಿಗಟ್ಟಿದ ಅವರ ನರನಾಡಿಯಲ್ಲಿ ಕನವರಿಕೆಗಳಿಗೆ ಕೊರೆಯಿಲ್ಲ. ಹೀಗಾಗಿಯೇ ಅವರು ಕರ್ನಾಟಕದ ಟೆನಿಸ್‌ ಲೋಕದ ‘ಆಶಾಕಿರಣ’.

ತವರಿನಲ್ಲಿ ಮೇ 21ರಿಂದ ನಡೆದ ಐದು ದಿನಗಳ ಪುರುಷರ 50ಕೆ ಟೆನಿಸ್‌ ಟೂರ್ನಿಯಲ್ಲಿ ಅವರದ್ದೇ ಹವಾ. ಸಿಂಗಲ್ಸ್‌, ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡು ‘ಟ್ರಿಪಲ್‌ ಸಾಧನೆ’ಗೆ ಭಾಜನರಾಗಿದ್ದಾರೆ.

ಅಲೋಕ್ ಅವರಿಗೀಗ ಇಪ್ಪತ್ಮೂರು ವರ್ಷ. ವ್ಯಾಪಾರಿ ಐ.ಪಿ. ಸಚಿನ್‌ ಅವರ ತಂದೆ. ತಾಯಿ ಕೋಮಲಾ. ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವ ಅವರು, ಇಂಟರ್‌ನ್ಯಾಷನಲ್‌ ಟೆನಿಸ್‌ ಫೆಡರೇಷನ್‌ (ಐ.ಟಿ.ಎಫ್‌)ನ ಪಂದ್ಯಗಳಲ್ಲಿ ಆಡುವ ಕನಸಿಗೆ ನೀರೆರೆಯುತ್ತಾ ಇದ್ದಾರೆ.

ಟೆನಿಸ್‌ನತ್ತ ಒಲವು
ಬಾಲ್ಯದಲ್ಲಿ ಅಲೋಕ್‌ ಕ್ರಿಕೆಟ್‌, ಸ್ಕೇಟಿಂಗ್‌ ಮಾತ್ರ ಆಡುತ್ತಿದ್ದರು. ಕುಟುಂಬದ ವೈದ್ಯ ಡಾ. ಶರತ್‌ ಅವರ ಒತ್ತಾಯಕ್ಕೆ ಮಣಿದು 10ನೇ ವಯಸ್ಸಿನಲ್ಲಿ ದಾವಣಗೆರೆಯಲ್ಲಿ ಟೆನಿಸ್‌ ತರಬೇತಿಗೆ ಸೇರಿಕೊಂಡರು. ಒಂದು ವರ್ಷದ ಬಳಿಕ ಮೊದಲ ಬಾರಿ ಟೂರ್ನಿಯಲ್ಲಿ ಆಡಿದಾಗ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದರು. ಅದರಲ್ಲಿ ಗೆಲುವು ಸಿಗದಿದ್ದರೂ, ಆಟದ ಪ್ರೀತಿಯನ್ನು ಹೆಚ್ಚಿಸಿತು.

ಎಸ್‌ಎಸ್‌ಎಲ್‌ಸಿ ಓದುತ್ತಿರುವಾಗಲೇ ಟೆನಿಸ್‌ ತರಬೇತಿ ಪಡೆಯಲು ಬೆಂಗಳೂರಿಗೆ ವಲಸೆ ಹೋದರು. ಪರೀಕ್ಷೆ ಸಂದರ್ಭದಲ್ಲಿ ದಾವಣಗೆರೆಗೆ ವಾಪಸಾಗಿ ಅಂತೂ ಎಸ್‌ಎಸ್‌ಎಲ್‌ಸಿ ಓದನ್ನು ಪೂರೈಸಿದರು. ದೂರ ಶಿಕ್ಷಣದಡಿ ಬಿ.ಎ ಮೊದಲನೇ ವರ್ಷ ಪೂರೈಸಿ ಎರಡು ವರ್ಷಗಳಿಂದ ಓದಿಗೆ ಬ್ರೇಕ್‌ ನೀಡಿದ್ದಾರೆ. ಓದು ಹಾಗೂ ಆಟ ಎರಡನ್ನೂ ಏಕಕಾಲಕ್ಕೆ ನಿಭಾಯಿಸುವುದು ಕಷ್ಟ ಎಂಬುದು ಅವರ ಅಭಿಪ್ರಾಯ. ಸದ್ಯ ಬೆಂಗಳೂರಿನ ರೋಹನ್‌ ಬೋಪಣ್ಣ ಟೆನಿಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಬಡವರಿಗೆ ಕೈಗೆಟುಕದ ಆಟ
‘ಟೆನಿಸ್‌ ದುಬಾರಿ ಆಟವಾಗಿದ್ದು, ಬಡವರ ಕೈಗೆಟುಕುವುದಿಲ್ಲ. ಇದೂ ಒಂದು ರೀತಿಯಲ್ಲಿ ಜೂಜಾಟ ಇದ್ದಂತೆ. ಆಟದಲ್ಲಿ ಕ್ಲಿಕ್‌ ಆದರೆ ನಾವು ಹೂಡಿದ ಹಣ ಬರುತ್ತದೆ; ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಂಡು ಬರಿದಾಗುತ್ತೇವೆ’ ಎಂಬುದು ಅಲೋಕ್‌ ಅಭಿಪ್ರಾಯ.

‘ನನಗೆ ತರಬೇತಿ ಪಡೆಯಲು ವರ್ಷಕ್ಕೆ ₹ 5 ಲಕ್ಷ ಖರ್ಚಾಗುತ್ತಿದೆ. ಸುಮಾರು ₹ 2 ಲಕ್ಷ ಉಳಿದ ಖರ್ಚಿಗೆ ಬೇಕು. ಈ ಆಟಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತಿದ್ದರೂ ಅಪ್ಪ–ಅಮ್ಮ ಬೇಸರಿಸಿಕೊಳ್ಳದೇ ನನಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಪಾಲಕರ ಕೊಡುಗೆಯನ್ನು ಸ್ಮರಿಸಿದರು.

‘ಭಾರತದಲ್ಲಿ ಎಐಟಿಎಯ 20 ರ‍್ಯಾಂಕಿಂಗ್‌ ಕೆಳಗಿನವರಿಗೆ ಒಳ್ಳೆಯ ಕಂಪನಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಆಟವಾಡಲು ಅವಕಾಶ ಸಿಗುತ್ತದೆ. ಐ.ಟಿ.ಎಫ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಪ್ರಾಯೋಜಕತ್ವವೂ ಸಿಗಲಿದೆ. ಮುಂದಿನ ಎರಡು–ಮೂರು ವರ್ಷಗಳಲ್ಲಿ 300ರಿಂದ 400 ಎಟಿಪಿ (ಅಸೋಸಿಯೇಷನ್‌ ಆಫ್‌ ಟೆನಿಸ್‌ ಪ್ಲೇಯರ್ಸ್‌) ರ‍್ಯಾಂಕಿಂಗ್‌ ಗಳಿಸಬೇಕು ಎಂಬ ಗುರಿ ಇದೆ. ಈ ವರ್ಷದ ಜುಲೈ– ಆಗಸ್ಟ್‌ನಲ್ಲಿ ವಿದೇಶಗಳಲ್ಲಿ ನಡೆಯುವ ಐಟಿಎಫ್‌ ಟೂರ್ನಿಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ತಮ್ಮ ಮುಂದಿನ ಯೋಜನೆಗಳ ವಿವರ ನೀಡಿದರು.

‘ಕಠಿಣ ಪರಿಶ್ರಮ, ಶಿಸ್ತಿನ ಜೊತೆಗೆ ಟೆನಿಸ್‌ ಅನ್ನೇ ಬದುಕು ಎಂದು ಪ್ರೀತಿಸಿದರೆ ಈ ಆಟದಲ್ಲೂ ಯಶಸ್ಸು ಗಳಿಸಲು ಸಾಧ್ಯ. ನಾವು ಆಟಕ್ಕೆ ಎಷ್ಟು ಹೆಚ್ಚು ಗಮನ ನೀಡುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗಲಿದೆ’ ಎಂದು ಯಶಸ್ಸಿನ ಗುಟ್ಟು ಬಿಚ್ಚಿಟ್ಟರು.

‘ನಿತ್ಯ ಬೆಳಿಗ್ಗೆ ಎರಡು ತಾಸು ಹಾಗೂ ಸಂಜೆ ಒಂದೂವರೆ ತಾಸು ಟೆನಿಸ್‌ ಆಡುತ್ತೇನೆ. ಈ ಆಟದಲ್ಲೇ ಬದುಕು ರೂಪಿಸಿಕೊಳ್ಳುವ ಕನಸು ಕಂಡಿದ್ದೇನೆ’ ಎಂದು ನಗೆ ಬೀರಿದರು.

2016ರಲ್ಲಿ ಭುಜದ ನೋವು ತೀವ್ರವಾಗಿ ಕಾಡಿದ್ದರಿಂದ ಎಂಟು ತಿಂಗಳು ಆಟವನ್ನೇ ನಿಲ್ಲಿಸಿದ್ದರು. ಬಳಿಕ ಮತ್ತೆ ಅಭ್ಯಾಸಕ್ಕೆ ಒತ್ತು ನೀಡಿದ ಅಲೋಕ್‌, ಈಗ ರಾಜ್ಯದ ಭರವಸೆಯ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. v

ಸಾಧನೆಯ ಹಾದಿ...

* 14 ವರ್ಷದೊಳಗಿನ ರಾಷ್ಟ್ರೀಯ ಟೂರ್ನಿಯ ಸಿಂಗಲ್ಸ್‌ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ

* 16 ವರ್ಷದೊಳಗಿನ ರಾಷ್ಟ್ರೀಯ ಟೂರ್ನಿಯ ಸಿಂಗಲ್ಸ್‌ನಲ್ಲಿ ಮೂರು ರನ್ನರ್ಸ್‌ ಅಪ್‌ ಪ್ರಶಸ್ತಿ; ಡಬಲ್ಸ್‌ನಲ್ಲಿ ಎರಡು ಪ್ರಶಸ್ತಿ

* 18 ವರ್ಷದೊಳಗಿನ ರಾಷ್ಟ್ರೀಯ ಟೂರ್ನಿಯ ಸಿಂಗಲ್ಸ್‌ನಲ್ಲಿ ಮೂರು ರನ್ನರ್ಸ್‌ ಅಪ್‌ ಪ್ರಶಸ್ತಿ; ಡಬಲ್ಸ್‌ನಲ್ಲಿ 4 ಪ್ರಶಸ್ತಿ

* ರಾಷ್ಟ್ರೀಯ ಟೂರ್ನಿಯ ಪುರುಷರ ವಿಭಾಗದಲ್ಲಿ 1 ಪ್ರಶಸ್ತಿ; ಡಬಲ್ಸ್‌ನಲ್ಲಿ 6 ಪ್ರಶಸ್ತಿ

* ಎಐಟಿಎ ನಡೆಸಿದ ಆಲ್‌ ಇಂಡಿಯಾ ಇಂಟರ್‌ ಸ್ಟೇಟ್‌ ಟೂರ್ನಿಯಲ್ಲಿ ಕಂಚಿನ ಪದಕ

* ಶ್ರೀಲಂಕಾದಲ್ಲಿ ನಡೆದ 18 ವರ್ಷದೊಳಗಿನ ಐಟಿಎಫ್‌ ಟೂರ್ನಿಯಲ್ಲಿ ಭಾಗಿ

* ಈಜಿಪ್ಟ್‌ನಲ್ಲಿ ನಡೆದ ಪುರುಷರ ಐಟಿಎಫ್‌ ಟೂರ್ನಿಯಲ್ಲಿ ಭಾಗಿ

**

ಭಾರತದಲ್ಲಿ ಟೆನಿಸ್‌ ಈಗಷ್ಟೇ ಮುಂಚೂಣಿಗೆ ಬರುತ್ತಿದೆ. ಕ್ರಿಕೆಟ್‌, ಕಬಡ್ಡಿಯಲ್ಲಿ ಪ್ರೀಮಿಯರ್‌ ಲೀಗ್‌ ನಡೆಸಿದಂತೆ ಟೆನಿಸ್‌ನಲ್ಲೂ ನಡೆದರೆ ಪ್ರತಿಭಾವಂತ ಆಟಗಾರರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ
– ಅಲೋಕ್‌ ಆರಾಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT