ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶಕ್ಕಾಗಿ ಕಾದವರು...

Last Updated 27 ಮೇ 2018, 19:30 IST
ಅಕ್ಷರ ಗಾತ್ರ

‘ಐಪಿಎಲ್‌ನಲ್ಲಿ ಆಯ್ಕೆ ಆಗುವ ಭರವಸೆಯೇ ಇರಲಿಲ್ಲ. ಆಯ್ಕೆಯಾದ ವಿಷಯವನ್ನು ತಾಯಿ ದೂರವಾಣಿ ಮೂಲಕ ತಿಳಿಸಿದಾಗ ಆದ ಸಂಭ್ರಮವನ್ನು ಬಣ್ಣಿಸಲಾರೆ. ಆಡಲು ಅವಕಾಶ ಸಿಕ್ಕಿದರೆ ಖಂಡಿತಾ ನನ್ನ ಸಾಮರ್ಥ್ಯ ಸಾಬೀತು ಮಾಡುತ್ತೇನೆ...’ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಸ್ಥಾನ ಗಳಿಸಿದ ಕನ್ನಡಿಗ ಪವನ್‌ ದೇಶಪಾಂಡೆ ಅಂದು ಆಡಿದ ಮಾತು ಇದು.

ಕಳೆದ ಕ್ರಿಕೆಟ್ ಋತುವಿನ ವಿವಿಧ ದೇಶಿ ಟೂರ್ನಿಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದ ದೇಶಪಾಂಡೆ ಹರಾಜಾದ ನಂತರ ಭಾರಿ ನಿರೀಕ್ಷೆಯಲ್ಲಿದ್ದರು. ತಮ್ಮ ವೃತ್ತಿಜೀವನದ ಮಹತ್ವದ ಹಂತ ಇದು ಎಂಬುದು ಅವರ ಅನಿಸಿಕೆಯಾಗಿತ್ತು. ಆದರೆ ಟೂರ್ನಿಯಲ್ಲಿ ಅವರಿಗೆ ಲಭಿಸಿದ್ದು ಕೇವಲ ಡ್ರೆಸಿಂಗ್ ಕೊಠಡಿ ಹಂಚಿಕೊಳ್ಳುವ ಅವಕಾಶ ಮಾತ್ರ.

ಆರ್‌ಸಿಬಿಯಲ್ಲಿ ಸ್ಥಾನ ಗಳಿಸಿದ್ದ ಮತ್ತೊಬ್ಬ ಕನ್ನಡಿಗ ಅನಿರುದ್ಧ ಜೋಶಿ ಅವರದೂ ಇದೇ ಕಥೆ. ಮೊದಲ ಬಾರಿ ಐಪಿಎಲ್‌ಗೆ ಆಯ್ಕೆಯಾದಾಗ ಅವರಲ್ಲಿ ಕನಸಿನ ಹಕ್ಕಿ ಗರಿಗೆದರಿತ್ತು. ಆದರೆ ಅವರ ಕನಸು ಕೈಗೂಡಲಿಲ್ಲ. ದೇಶ–ವಿದೇಶದ ಪ್ರತಿಭಾವಂತರ ಜೊತೆ ಕಲೆಯಲು ಅವಕಾಶ ಲಭಿಸಿತೇ ಹೊರತು ಅಂಗಣಕ್ಕೆ ಇಳಿಯಲು ಸಾಧ್ಯವಾಗಲಿಲ್ಲ.

ಈ ಇಬ್ಬರು ಯುವ ಆಟಗಾರರಂತೆಯೇ 40ಕ್ಕೂ ಹೆಚ್ಚು ಮಂದಿ ಈ ಬಾರಿ ಲೆಕ್ಕಕ್ಕಿದ್ದು ಆಟಕ್ಕಿಲ್ಲದೆ ಉಳಿದಿದ್ದರು. ಫ್ರಾಂಚೈಸ್‌ಗಳು ಲಕ್ಷಗಟ್ಟಲೆ ಹಣ ತೆತ್ತು ಇವರನ್ನು ಹರಾಜಿನಲ್ಲಿ ಕೊಂಡುಕೊಂಡಿದ್ದವು. ಈ ಪೈಕಿ ಅನೇಕರಿಗೆ ಹಣ ಮುಖ್ಯವಾಗಿರಲಿಲ್ಲ. ಸಾವಿರಾರು ಪ್ರೇಕ್ಷಕರ ಮುಂದೆ ಅಂಗಣಕ್ಕೆ ಇಳಿದು ಅಮೋಘ ಆಟ ಆಡುವ ಆಸೆ ಅವರಲ್ಲಿತ್ತು. ಅದು ಕೈಗೂಡದ ಕಾರಣ ಸಹಜವಾಗಿ ನಿರಾಸೆ ಕಾಡಿದೆ. ಕೋಟ್ಯಧಿಪತಿ ಕುಮಾರಮಂಗಲಂ ಬಿರ್ಲಾ ಅವರ ಪುತ್ರ, 18 ವರ್ಷದ ಆರ್ಯಮನ್‌ ಬಿರ್ಲಾ ಇಂಥವರಲ್ಲಿ ಒಬ್ಬರು. ಮೂಲಬೆಲೆಗೆ ಅವರನ್ನು ಖರೀದಿಸಿದ್ದ ರಾಜಸ್ಥಾನ್ ರಾಯಲ್ಸ್‌ ಒಂದು ಪಂದ್ಯದಲ್ಲಿ ಕೂಡ ಕಣಕ್ಕೆ ಇಳಿಸಲಿಲ್ಲ. ಈ ಮೂಲಕ ‘ಅನುಭವ ಸಂಪತ್ತು’ ಗಳಿಸುವ ಅವರ ಆಸೆ ಈಡೇರದೇ ಹೋಗಿದೆ.

ಹಿಂದಿನ ಆವೃತ್ತಿಗಳಲ್ಲಿ ಆಡಿದ ಅನುಭವ ಇರುವ ಕೆಲವರಿಗೂ ಈ ಬಾರಿ ಅವಕಾಶ ಲಭಿಸಲಿಲ್ಲ. ಕೆಲ ಹೊಸ ಆಟಗಾರರಿಗೆ ಒಂದೆರಡು ಅವಕಾಶಗಳು ಲಭಿಸಿವೆ. ಆದರೆ ಅಷ್ಟರಲ್ಲಿ ತಮ್ಮ ಪ್ರತಿಭೆ ತೋರಿಸಲು ಆಗಲಿಲ್ಲ ಎಂಬ ಕೊರಗು ಅವರದು.

ಅಮೋಘ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ಮನೋಜ್ ತಿವಾರಿ, ಆಲ್‌ರೌಂಡರ್‌ ಜಯಂತ್ ಯಾದವ್‌, ಪಂಜಾಬ್ ಬ್ಯಾಟ್ಸ್‌ಮನ್ ಗುರುಕೀರತ್ ಸಿಂಗ್ ಮಾನ್‌, ಮುಂಬೈನ ಸಿದ್ದೇಶ್‌ ಲಾಡ್‌, ಆದಿತ್ಯ ತಾರೆ, ಎಡಗೈ ಸ್ಪಿನ್ನರ್ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ಬಿಪುಲ್‌ ಶರ್ಮಾ, ಕೇರಳದ ಸಚಿನ್ ಬೇಬಿ, ತಮಿಳುನಾಡಿನ ಟಿ.ನಟರಾಜನ್ ಮುಂತಾದವರು ಅವಕಾಶ ದಕ್ಕದ ಪ್ರತಿಭಾವಂತರು.

ದೆಹಲಿಯ ಧ್ರುವ್ ಶೋರೆ, ಆಲ್‌ರೌಂಡರ್‌ ಕೆ.ಎಂ. ಆಸಿಫ್‌ ಮುಂತಾದವರಿಗೆ ಒಂದೆರಡು ಅವಕಾಶಗಳು ಲಭಿಸಿವೆ. ದೇಶಿ ಕ್ರಿಕೆಟ್‌ನಲ್ಲಿ ಅನೇಕ ವರ್ಷಗಳಿಂದ ಉತ್ತಮ ಹೆಸರು ಮಾಡುತ್ತಿದ್ದು ಐಪಿಎಲ್‌ನಲ್ಲಿ ಈ ವರೆಗೆ ಪದಾರ್ಪಣೆ ಮಾಡಲು ಆಗದೇ ಇರುವ ದೆಹಲಿಯ ನವದೀಪ್ ಸೈನಿ ಅವರಂಥ ಪ್ರತಿಭಾನ್ವಿತ ಆಟಗಾರರು ಕೂಡ ಇದ್ದಾರೆ.

ಇದೆಲ್ಲದರ ನಡುವೆ ಕೊನೆಯವರೆಗೆ ಕಾದು, ತಂಡ ಪ್ಲೇ ಆಫ್‌ ಹಂತಕ್ಕೆ ಏರಲು ಸಾಧ್ಯವಿಲ್ಲ ಎಂದಾದಾಗ ಅವಕಾಶ ಪಡೆದು ಮಿಂಚಿದ ನೇಪಾಳದ ಸಂದೀಪ್ ಲುಮಿಚಾನೆ ಅವರಂಥ ಅದೃಷ್ಟವಂತರನ್ನೂ ಐಪಿಎಲ್‌ ಕಾಣಿಕೆ ನೀಡಿದೆ.

ಮುಂಬೈಯಲ್ಲಿ ಹೆಚ್ಚು; ಕೆಕೆಆರ್‌ನಲ್ಲಿ ಕಡಿಮೆ
ಆಟಗಾರರನ್ನು ಖರೀದಿಸಿ ಬೆಂಚು ಕಾಯಿಸಿದ ಫ್ರಾಂಚೈಸ್‌ಗಳ ಪೈಕಿ ಮುಂಬೈ ಇಂಡಿಯನ್ಸ್‌ ಮುಂದೆ ಇದೆ. ಕಳೆದ ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಒಟ್ಟು 10 ಮಂದಿಯನ್ನು ಈ ಬಾರಿ ಸುಮ್ಮನೆ ಕೂರಿಸಿದೆ. ಈ ತಂಡ 25 ಮಂದಿಯನ್ನು ಈ ಬಾರಿ ಪಡೆದುಕೊಂಡಿತ್ತು. 19 ಮಂದಿಯನ್ನು ಖರೀದಿಸಿದ್ದ ಕೋಲ್ಕತ್ತ ನೈಟ್ ರೈಡರ್ಸ್‌ ಕೇವಲ ಮೂವರು ಆಟಗಾರರಿಗೆ ಮಾತ್ರ ಅವಕಾಶ ನೀಡಿರಲಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಅವಕಾಶ ಕಳೆದುಕೊಂಡವರಲ್ಲಿ ಯುವ ವಿಕೆಟ್ ಕೀಪರ್‌ ಜಗದೀಶನ್ ಸತೀಶನ್‌ ಮತ್ತು ಜಾರ್ಖಂಡ್‌ನ ಬ್ಯಾಟ್ಸ್‌ಮನ್‌ ಮೋನು ಕುಮಾರ್‌ ಪ್ರಮುಖರು. ಪಂದ್ಯ ಗೆಲ್ಲಿಸಿಕೊಡುವ ಪ್ರತಿಭೆ ಹೊಂದಿರುವ ಕೇದಾರ್ ಜಾಧವ್‌ಗೆ ಈ ಬಾರಿ ಲೀಗ್‌ ಹಂತದಲ್ಲಿ ಒಂದು ಅವಕಾಶವೂ ಸಿಗಲಿಲ್ಲ ಎಂಬುದು ಅಚ್ಚರಿ.

ಈ ಬಾರಿಯ19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಫೈನಲ್‌ನಲ್ಲಿ ಶತಕ ಸಿಡಿಸಿ ಭಾರತಕ್ಕೆ ಪ್ರಶಸ್ತಿ ದೊರಕಿಸಿಕೊಟ್ಟಿದ್ದ ಮನ್‌ಜೋತ್ ಕಾರ್ಲಾ ಐಪಿಎಲ್‌ನಲ್ಲಿ ನಿರಾಸೆ ಕಂಡರು. ಅವರ ಮೇಲೆ ಡೆಲ್ಲಿ ಡೇರ್‌ಡೆವಿಲ್ಸ್‌ ಆಡಳಿತ ವಿಶ್ವಾಸ ಇರಿಸಲಿಲ್ಲ. ಆದ್ದರಿಂದ ಒಂದು ಪಂದ್ಯದಲ್ಲಿ ಆಡುವುದಕ್ಕೂ ಅವರಿಗೆ ಸಾಧ್ಯವಾಗಲಿಲ್ಲ. 22 ವರ್ಷದ ಮಯಂಕ್ ಡಗಾರ್‌ ಅವರಿಗೆ ಕಿಂಗ್ಸ್ ಇಲೆವನ್ ಪಂಜಾಬ್‌ ಬೇಸರ ಮೂಡಿಸಿತ್ತು. ಕೆಕೆಆರ್‌ನಲ್ಲಿ ವಿದರ್ಭದ ಅಪೂರ್ವ ವಾಂಖೆಡೆ ನಿರಾಸೆ ಅನುಭವಿಸಿದ್ದರು. 19 ವರ್ಷದರೊಳಗಿನವರ ವಿಶ್ವಕಪ್‌ನಲ್ಲಿ ಮಿಂಚಿದ್ದ ಅನುಕೂಲ್ ರಾಯ್‌, 16 ವರ್ಷದ ಬ್ಯಾಟ್ಸ್‌ಮನ್‌ ತಜಿಂದರ್ ಸಿಂಗ್, ಶರದ್‌ ಲುಂಬಾ, ಎಡಗೈ ಬ್ಯಾಟ್ಸ್‌ಮನ್ ಮೊಹ್ಸಿನ್ ಖಾನ್‌, ಎಂ.ಡಿ.ನಿದೀಶ್‌ ಮುಂತಾದವರು ಮುಂಬೈ ಪಾಳಯದಲ್ಲಿ ಅನುಭವಿಗಳ ಆಟ ನೋಡಿ ಖುಷಿಪಟ್ಟಿದ್ದೇ ಬಂತು!

ಕೇರಳದ ಬ್ಯಾಟ್ಸ್‌ಮನ್‌, 24 ವರ್ಷದ ಸುದೀಶನ್ ಮಿಥುನ್‌ ರಾಜಸ್ಥಾನ್ ರಾಯಲ್ಸ್‌ನಲ್ಲಿ ಆಡುವ ಕನಸು ಕಂಡಿದ್ದರು. ಆದರೆ ಅದು ಕೈಗೂಡಲಿಲ್ಲ. ಈ ಬಾರಿಯ ರಣಜಿ ಟೂರ್ನಿ ಪಂದ್ಯದಲ್ಲಿ ಚೊಚ್ಚಲ ತ್ರಿಶತಕ ಗಳಿಸಿದ ಪ್ರಶಾಂತ್ ಚೋಪ್ರಾ ಅವರ ಚೊಚ್ಚಲ ಐಪಿಎಲ್‌ ಪಂದ್ಯ ಆಡುವ ಕನಸಿಗೂ ರಾಯಲ್ಸ್ ಬಣ್ಣ ತುಂಬಲಿಲ್ಲ.

ಸನ್‌ರೈಸರ್ಸ್ ಹೈದರಾಬಾದ್‌ ಪರ ಮಿಂಚುವ ಆಸೆ ಹೊತ್ತಿದ್ದ 23 ವರ್ಷದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ತನ್ಮಯ್ ಅಗರವಾಲ್‌, 19ರ ಹರಯದ ಎಡಗೈ ವೇಗದ ಬೌಲರ್‌ ಖಲೀಲ್ ಅಹಮ್ಮದ್ ಅವರು ಕೂಡ ನಿರಾಸೆಗೊಂಡಿದ್ದಾರೆ.

ಅನಗತ್ಯ ಆಟಗಾರರು ಬೇಕೇ?
ಐಪಿಎಲ್‌ ಕೇವಲ ಆಟವಾಡಿ ಮಿಂಚುವ ಟೂರ್ನಿ ಮಾತ್ರವಲ್ಲ. ಹಿರಿಯರ ಜೊತೆ ಕಲೆತು ಹೊಸ ವಿಷಯಗಳನ್ನು ಕಲಿಯಲು ಯುವ ಆಟಗಾರರಿಗೆ ಅವಕಾಶ ನೀಡುವ ವೇದಿಕೆ ಆಗಿದೆ.

ಹೀಗಾಗಿ ತಂಡದಲ್ಲಿ 15ಕ್ಕೂ ಹೆಚ್ಚು ಆಟಗಾರರು ಇರುವಂತೆ ಐಪಿಎಲ್ ಆಡಳಿತ ನಿಯಮ ರೂಪಿಸಿದೆ. ಈ ಹಿಂದೆ ಪ್ರತಿ ತಂಡ ಖರೀದಿಸಬಹುದಾಗಿದ್ದ ಆಟಗಾರರ ಗರಿಷ್ಠ ಸಂಖ್ಯೆ 27 ಆಗಿತ್ತು. ಈ ಬಾರಿ ಅದನ್ನು 25ಕ್ಕೆ ಇಳಿಸಲಾಗಿದೆ. ಪ್ರತಿ ತಂಡದಲ್ಲಿ ಇರಬೇಕಾದ ಆಟಗಾರರ ಕನಿಷ್ಠ ಸಂಖ್ಯೆ 18 ಆಗಿದೆ. ಗರಿಷ್ಠ ಸಂಖ್ಯೆಯನ್ನು ಕಡಿಮೆ ಮಾಡಲು ಕೆಲವು ಫ್ರಾಂಚೈಸ್‌ಗಳು ಈ ಬಾರಿ ಪ್ರಯತ್ನಿಸಿದ್ದವು. ಅದರಲ್ಲಿ ಯಶಸ್ಸೂ ಕಂಡಿದ್ದವು. ಅನಗತ್ಯವಾಗಿ ಆಟಗಾರರನ್ನು ಖರೀದಿಸಿ ಕೂರಿಸುವ ಕುರಿತ ಬೇಸರವೇ ಫ್ರಾಂಚೈಸ್‌ಗಳ ಈ ಪ್ರಯತ್ನಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT