ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾನಟಿ’ ಕೀರ್ತಿ ಪತಾಕೆ

Last Updated 17 ಅಕ್ಟೋಬರ್ 2019, 6:41 IST
ಅಕ್ಷರ ಗಾತ್ರ

ನಿರ್ದೇಶಕ ಪ್ರಿಯದರ್ಶನ್ ಫೋನ್ ಮಾಡಿದರು. ಫ್ಯಾಷನ್ ಡಿಸೈನಿಂಗ್ ಪದವಿ ಓದುತ್ತಿದ್ದ ಕೀರ್ತಿ ಸುರೇಶ್ ಚಕಿತಗೊಳ್ಳಲಿಲ್ಲ. ಅಪ್ಪ ಸುರೇಶ್ ಮಲಯಾಳಂ ಸಿನಿಮಾ ನಿರ್ಮಾಪಕ. ಮೇಲಾಗಿ ಪ್ರಿಯದರ್ಶನ್ ವಾರಗೆಯವರು. ಹೀಗಾಗಿ ಮೊದಲಿನಿಂದಲೂ ಪರಿಚಯವಿತ್ತು. ಲಂಡನ್‌ನಲ್ಲಿ ಕಲಿಕೆಯ ಕೊಡು–ಕೊಳುವಿಕೆಯ ಕಾರ್ಯಕ್ರಮಕ್ಕೆಂದು ಹೋಗಿದ್ದ ಕೀರ್ತಿ ಅಲ್ಲಿಂದ ಮರಳಿದವರೇ ಚರ್ಚೆಗೆ ಕುಳಿತರು. ಮೋಹನ್‌ಲಾಲ್, ಪ್ರಿಯದರ್ಶನ್, ಸುರೇಶ್ ಒಟ್ಟಿಗೆ ಕಲಿತಿದ್ದವರು.

ಮೂವರೂ ಸಿನಿಮಾ ಕ್ಷೇತ್ರವನ್ನೇ ಆರಿಸಿಕೊಂಡದ್ದು ಕಾಕತಾಳೀಯ. ಪ್ರಿಯದರ್ಶನ್ ನಿರ್ದೇಶನದ ಮೊದಲ ಸಿನಿಮಾ ನಿರ್ಮಿಸಿದ್ದು ಸುರೇಶ್. ಅದರ ನಾಯಕ ಮೋಹನ್‌ಲಾಲ್. ‘ನಿಮ್ಮಪ್ಪ ನನಗೆ ಮೊದಲ ಸಿನಿಮಾ ಕೊಟ್ಟಿದ್ದ. ನಿನಗೆ ನಾನು ಮೊದಲ ಸಿನಿಮಾ ಕೊಡುವೆ’ ಎಂದು ಪ್ರಿಯದರ್ಶನ್ ಹೇಳಿದಾಕ್ಷಣ ಕೀರ್ತಿ ಹೆಚ್ಚೇನೂ ಪುಳಕಿತರಾಗಲಿಲ್ಲ.

ಬಾಲನಟಿಯಾಗಿಯೂ ಕೀರ್ತಿ ತೆರೆ ಮೇಲೆ ಕಾಣಿಸಿಕೊಂಡಿದ್ದಿದೆ. ಕುಟುಂಬ ಚೆನ್ನೈನಲ್ಲಿ ವಾಸವಿತ್ತು. ರಜೆ ಬಂದರೆ ಅಪ್ಪನ ಜೊತೆ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಸಹಜವಾಗಿಯೇ ಹೋಗುತ್ತಿದ್ದ ಕೀರ್ತಿಗೆ ಸಣ್ಣ ಪುಟ್ಟ ಪಾತ್ರಗಳ ಅವಕಾಶ ಒದಗಿಬಂದವಷ್ಟೆ. ಅದರಲ್ಲಿ ತನ್ನ ಹೆಚ್ಚುಗಾರಿಕೆ ಏನೂ ಇಲ್ಲ ಎನ್ನುವುದು ಅವರ ನಮ್ರ ನುಡಿ.

ಕೀರ್ತಿ ಸುರೇಶ್
ಕೀರ್ತಿ ಸುರೇಶ್

ಒಂಬತ್ತನೇ ತರಗತಿ ಓದುವಾಗಲೇ ಕೀರ್ತಿ ಸ್ಫುರದ್ರೂಪ ಕಂಡು ಸಿನಿಮಾ ಅವಕಾಶಗಳು ಹರಿದಬರಲಾರಂಭಿಸಿದವು. ಆದರೆ, ಅಪ್ಪ ಸುರೇಶ್ ಹಾಗೂ ಖುದ್ದು ನಟಿಯೂ ಆದ ಅಮ್ಮ ಮೇನಕಾ ಸಾವಧಾನದಿಂದ ಇರುವಂತೆ ಸೂಚಿಸಿದರು. ಎಲ್ಲ ಅಪ್ಪ–ಅಮ್ಮಂದಿರಂತೆ ಅವರಿಗೂ ಮಗಳು ಎಂಜಿನಿಯರ್ ಆಗಲಿ ಎಂಬ ಆಸೆ ಇತ್ತು. ಆದರೆ, ಸಿನಿಮಾ ಪ್ರೀತಿ ರಕ್ತದಲ್ಲೇ ಇದ್ದಿದ್ದರಿಂದ ಫ್ಯಾಷನ್ ಡಿಸೈನಿಂಗ್ ಆಯ್ಕೆ ಮಾಡಿಕೊಂಡರು.

ನಟಿಯಾಗುವ ಅದರಲ್ಲೂ ನಾಯಕಿಯಾಗುವ ಅವಕಾಶ ಒದಗಿಬಂದರೆ ಓದಿಗೆ ತಿಲಾಂಜಲಿ ಇಡುವವರೇ ಹೆಚ್ಚು. ಕೀರ್ತಿ ಹಾಗೆ ಮಾಡಲಿಲ್ಲ.

ಚೆನ್ನೈನ ಪರ್ಲ್ ಅಕಾಡೆಮಿಯ ಗಂಭೀರ ವಿದ್ಯಾರ್ಥಿನಿಯಾದರು. ಹಾಗೆ ಕಲಿಯುವಾಗಲೇ ಪ್ರಿಯದರ್ಶನ್ ಅವಕಾಶವನ್ನು ತಟ್ಟೆಯಲ್ಲಿಟ್ಟು ಕೊಟ್ಟಿದ್ದು. ತನ್ನ ಮೇಲೆ ದಿಗ್ಗಜ ನಿರ್ದೇಶಕನಿಗೆ ಇದ್ದ ವಿಶ್ವಾಸ ಕಂಡು ಕೀರ್ತಿ ಕರಗಿದರು. ಓದಿನ ನಡುವೆ ಇದ್ದ ಬಿಡುವಿನ ದಿನಗಳಲ್ಲೇ ಚಿತ್ರೀಕರಣ ಮುಗಿಸಬೇಕು ಎಂದು ಷರತ್ತು ಹಾಕಿದರು. ‘ಗೀತಾಂಜಲಿ’ ಮಲಯಾಳಂ ಸಿನಿಮಾದಲ್ಲಿ ನಟಿಯಾದದ್ದು ಹಾಗೆ.

ಆ ಸಿನಿಮಾದಲ್ಲಿ ಮೋಹನ್‌ಲಾಲ್ ಕೂಡ ಇದ್ದರು. ಅವರೊಟ್ಟಿಗೆ ಕ್ಯಾಮೆರಾ ಎದುರಿಸುವಾಗ ಕೀರ್ತಿಗೆ ತುಸುವೂ ಭಯ ಇರಲಿಲ್ಲ. ಬೇರೆ ನಟ–ನಟಿಯರು ಬಂದರೆ ಮಾತ್ರ ಕಂಪಿಸುತ್ತಿದ್ದರು. ವರ್ಷಗಳ ಕಾಲ ಅವರ ಜೊತೆಗೆ ಇದ್ದ ಸಲುಗೆ ಅಂಥದೊಂದು ವಿಶ್ವಾಸ ತುಂಬಿತ್ತು. ಒಂಬತ್ತನೇ ತರಗತಿಯಿಂದ ಈ ಹುಡುಗಿಯ ಮೇಲೆ ಕಣ್ಣಿಟ್ಟಿದ್ದ ನಿರ್ಮಾಪಕರೆಲ್ಲ ಮತ್ತೆ ಮನೆಯ ಬೆಲ್ ಒತ್ತಲಾರಂಭಿಸಿದರು. ಅದರ ಫಲವೇ ‘ರಿಂಗ್ ಮಾಸ್ಟರ್’ ಎಂಬ ಇನ್ನೊಂದು ಸಿನಿಮಾದಲ್ಲಿ ಅಭಿನಯಿಸುವ ಅನಿವಾರ್ಯ ಎದುರಾದದ್ದು.

ಎರಡೂ ಸಿನಿಮಾಗಳನ್ನು ಓದಿಗೆ ತೊಂದರೆ ಇಲ್ಲದಂತೆ ಪೂರೈಸಿದ ಕೀರ್ತಿ, ಪದವೀಧರೆಯೂ ಆದರು. ತಮ್ಮ ಪಾತ್ರಕ್ಕೆ ತಕ್ಕ ವಸ್ತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅದು ಅರ್ಹತೆಯನ್ನು ದಕ್ಕಿಸಿಕೊಟ್ಟಿತು. ಕೀರ್ತಿಗೆ ಬಟ್ಟೆ ಮೆಚ್ಚಿಸುವುದು ವಿನ್ಯಾಸಕರಿಗೆ ಕಷ್ಟವಾಗತೊಡಗಿತು. ಅದಕ್ಕೆ ಪರಿಹಾರವನ್ನು ಈ ನಟಿಯೇ ಸೂಚಿಸಿದ ಮೇಲಷ್ಟೇ ಅವರೆಲ್ಲ ನಿರಾಳವಾದದ್ದು.

ಮಲಯಾಳಂ ನಟ ದಿಲೀಪ್‌ಗೆ ಮಗಳಾಗಿ ಅಭಿನಯಿಸಿದ್ದ ಈ ಹುಡುಗಿ ಅವರಿಗೇ ನಾಯಕಿ ಆದಾಗ ಪ್ರೇಕ್ಷಕ ಪ್ರಭು ಚಕಿತಗೊಂಡಿದ್ದಿದೆ. ಈಗ ಸಾಕಷ್ಟು ಜನಮನ್ನಣೆ ಗಳಿಸಿರುವ ತೆಲುಗಿನ ‘ಮಹಾನಟಿ’ಯ (ನಟಿ ಸಾವಿತ್ರಿ ಬದುಕಿನ ಕಥೆ ಆಧರಿಸಿದ ಸಿನಿಮಾ) ನಾಯಕಿ ಇದೇ ಕೀರ್ತಿ. ನಿರ್ಮಾಪಕನ ಮಗಳು ಹೀಗೂ ಬೆಳೆಯಬಹುದು ಎನ್ನುವುದಕ್ಕೆ ಅವರ ಬದುಕಿನ ಕಥಾನಕವೇ ಸ್ಫೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT