ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಜ್ಞತಾ ಸಭೆಯಲ್ಲಿ ಕಣ್ಣೀರು ಹಾಕಿದ ವಿನಯ ಕುಲಕರ್ಣಿ

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಧಾರವಾಡ: ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಮಾಜಿ ಸಚಿವ ವಿನಯ ಕುಲಕರ್ಣಿ, ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಲೆಂದು ಭಾನುವಾರ ಇಲ್ಲಿ ಕರೆದಿದ್ದ ಸಭೆಯಲ್ಲಿ ಮತದಾರರ ಕ್ಷಮೆಯಾಚಿಸಿ ಕಣ್ಣೀರು ಹಾಕಿದರು.

‘ನನ್ನಿಂದ ತಪ್ಪಾಗಿರಬಹುದು. ಆದರೆ, ಯಾರೂ ಆ ತಪ್ಪುಗಳನ್ನು ತಿದ್ದುವ ಪ್ರಯತ್ನ ಮಾಡಲಿಲ್ಲ. ನನ್ನಿಂದ ಮನಸ್ಸಿಗೆ ನೋವಾಗಿ ಹಲವರು ಮತ ನೀಡದಿರಬಹುದು. ಆದರೂ, ಜನರ ತೀರ್ಪಿಗೆ ತಲೆಬಾಗುತ್ತೇನೆ. ಸೋಲಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ’ ಎಂದು ಹೇಳಿದರು.

‘ನಾನು ಸೋತಿದ್ದರಿಂದ ಹೆಚ್ಚು ದುಃಖ ಆಗಲಿಲ್ಲ. ಆದರೆ ಹಲವಾರು ‘ಭಾಗ್ಯ’ಗಳ ಮೂಲಕ ಸಿದ್ದರಾಮಯ್ಯ ಅವರು ಮಾಡಿದ ಜನಪರ ಕೆಲಸಗಳನ್ನು ಜನರು ಗುರುತಿಸಲಿಲ್ಲ ಎಂಬ ಬೇಸರ ಕಾಡುತ್ತಿದೆ. ನನ್ನ ಮನೆಗೆ ಬರುವ ಯಾರೊಬ್ಬರ ಜಾತಿ, ವರ್ಗ, ಪಕ್ಷ ಯಾವುದನ್ನೂ ನೋಡದೇ ನಾನು ಕೆಲಸ ಮಾಡಿದ್ದೇನೆ. ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇನೆ. 700ಕ್ಕೂ ಅಧಿಕ ಕುಟುಂಬಗಳಿಗೆ 2 ಆಕಳು ಕೊಡಿಸಿದ್ದೇನೆ. ಹೀಗಿದ್ದರೂ ನನ್ನ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

‘ನನಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಯಾವುದೂ ಬೇಡ. ಸೋಲಿಗೆ ಎಂದೂ ಬೆನ್ನು ತೋರಿಸುವುದಿಲ್ಲ. ಕ್ಷೇತ್ರದ ಜನರ ಬಳಿ ಮತ್ತೆ ಹೋಗಿ ಅವರ ಸೇವೆ ಮಾಡುತ್ತೇನೆ. ನನ್ನ ಅವಧಿಯಲ್ಲಾಗಿರುವ ಕೆಲಸಗಳ ಮನವರಿಕೆ ಮಾಡಿಕೊಡುತ್ತೇನೆ. ನನ್ನ ಅವಧಿಯಲ್ಲಿ ವಿವಿಧ ಯೋಜನೆಯಲ್ಲಿ ಮಂಜೂರಾದ ಮೊತ್ತದಲ್ಲಿ ಇನ್ನೂ ₹66 ಕೋಟಿ ಮೊತ್ತದ ಕಾಮಗಾರಿ ಬಾಕಿ ಇದೆ. ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

‘ಎಲೆಕ್ಟ್ರಾನಿಕ್ ಮತಯಂತ್ರ ಕುರಿತು ಜನರಲ್ಲಿ ಅನುಮಾನ ಹಾಗೂ ಆಕ್ರೋಶ ಇದೆ. ಆದರೆ ನನ್ನಿಂದ ಆಗಿರಬಹುದಾದ ತಪ್ಪಿಗೆ ನಾನು ಕ್ಷಮೆ ಕೋರುತ್ತೇನೆ’ ಎಂದು ಹೇಳುತ್ತಲೇ ಗದ್ಗದಿತರಾಗಿ ಮಾತು ಮೊಟಕುಗೊಳಿಸಿದರು.

ಬಿಜೆಪಿ ಕಾರ್ಯಕರ್ತರನ್ನು ನೋಡಿ ಕಲಿಯಬೇಕು

‘ಬಿಜೆಪಿ ಕಾರ್ಯಕರ್ತರು ತಮಗೆ ನೀಡಿದ 10 ಮನೆಗಳ ಮತದಾರರ ಮನವೊಲಿಸುವ ಕಡೆ ಗಮನ ನೀಡಿದರು. ಆದರೆ ನಮ್ಮ ಕಾರ್ಯಕರ್ತರು ನಾನು ಇದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ನನಗೆ ಮುಖ ತೋರಿಸಿ ಹೋಗುತ್ತಿದ್ದರು. ಬೇರುಮಟ್ಟದಲ್ಲಿ ಕೆಲಸ ಮಾಡಲಿಲ್ಲ. ಇಂಥ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ನೋಡಿ ನಮ್ಮವರು ಕಲಿಯಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT