ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಟುಂಬದ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ’

‘ಈಗಿನ ಮುಖ್ಯಮಂತ್ರಿ ಸ್ಥಾನ ಮುಳ್ಳಿನ ಹಾಸಿಗೆ'
Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ತಂದೆ ದೇವೇಗೌಡರು ಅಷ್ಟೇ ಅಲ್ಲ, ಕುಟುಂಬದ ಯಾವುದೇ ಸದಸ್ಯರು ಸರ್ಕಾರದ ಮೇಲೆ ಪ್ರಭಾವ ಬೀರುವುದಿಲ್ಲ. ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಸಮ್ಮಿಶ್ರ ಸರ್ಕಾರದ ಉಳಿವನ್ನು ಸಹಿಸದವರು ನಮ್ಮ ಕುಟುಂಬದವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ. ಹಾಗೆಂದು, ಈ ಸ್ಥಾನ ಮುಳ್ಳಿನ ಹಾಸಿಗೆ ಎಂಬುದು ನನಗೆ ಗೊತ್ತು. ಕ್ಷಣ ಕ್ಷಣಕ್ಕೂ ಎಚ್ಚರಿಕೆಯ ಹೆಜ್ಜೆಯನ್ನು ಇಟ್ಟು ಜನರ ವಿಶ್ವಾಸವನ್ನು ಗೆಲ್ಲಬೇಕಾದ ಸವಾಲು ನನ್ನ ಮುಂದಿದೆ. . .

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ‘ಪ್ರಜಾವಾಣಿ’ಗೆ ನೀಡಿದ ಮೊದಲ ಸಂದರ್ಶನದಲ್ಲಿ ತಮ್ಮ ಮುಂದಿರುವ ಇಕ್ಕಟ್ಟಿನ ಹಾದಿಯನ್ನು ಎಚ್.ಡಿ. ಕುಮಾರಸ್ವಾಮಿ ಬಿಡಿಸಿಟ್ಟರು. ಮಾತುಕತೆಯ ಪೂರ್ಣಪಾಠ ಇಲ್ಲಿದೆ.

* ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೀರಿ. ಪ್ರಮುಖ ಸವಾಲುಗಳೇನು?

ಈ ಬಾರಿ ದೊಡ್ಡ ಮಟ್ಟದ ಸವಾಲುಗಳಿವೆ. ಆವತ್ತು ಅನುಭವ ಇಲ್ಲದೇ ಇರುವ ಮಂತ್ರಿ ಮಂಡಲ ಇತ್ತು. ಇವತ್ತು ನನ್ನನ್ನೂ ಸೇರಿಸಿಕೊಂಡು ಅನುಭವಿಗಳು ಮಂತ್ರಿಮಂಡಲದಲ್ಲಿ ಇರುತ್ತಾರೆ. ಅಂದು ಜನರಿಗೆ ಯಾವುದೇ ಭರವಸೆ ಕೊಟ್ಟು ನಾನು ಮುಖ್ಯಮಂತ್ರಿಯಾಗಿರಲಿಲ್ಲ. ಈ ಚುನಾವಣೆಯಲ್ಲಿ ಜನರಿಗೆ ಹಲವಾರು ಭರವಸೆಗಳನ್ನು ಕೊಟ್ಟಿದ್ದೇನೆ. ಪೂರ್ಣ ಬಹುಮತ ನೀಡಿದರೆ ಮಾತ್ರ ಭರವಸೆ ಈಡೇರಿಸುವೆ ಎಂದು ಹೇಳಿದ್ದೆ. ಈಗ ಸ್ವತಂತ್ರ ಸರ್ಕಾರವಲ್ಲ ಎಂಬ ನೆಪವೊಡ್ಡಿ ಭರವಸೆಗಳಿಂದ ದೂರ ಸರಿಯಲಾಗದು.

ನಮ್ಮ ಎದುರಾಳಿ ಪಕ್ಷ (ಬಿಜೆಪಿ) ಈ ಕುರಿತ ನನ್ನ ನಡವಳಿಕೆಯನ್ನು ಪ್ರಶ್ನೆ ಮಾಡುತ್ತಾ ಸಮಾಜದಲ್ಲಿ ಸಂಶಯದ ಬೀಜ ಬಿತ್ತುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಭರವಸೆಗಳನ್ನು ಈಡೇರಿಸುವ ಅನಿವಾರ್ಯ ಪರಿಸ್ಥಿತಿ ಇದೆ.

* ‘ಮೈತ್ರಿ ಸರ್ಕಾರದ ಸೂತ್ರ ದೇವೇಗೌಡರ ಕೈಯಲ್ಲಿರುತ್ತದೆ’ ಎಂಬ ಟೀಕೆ ಇದೆಯಲ್ಲ?

ದೇವೇಗೌಡರು ಹಸ್ತಕ್ಷೇಪ ಮಾಡುತ್ತಾರೆ ಎಂಬ ಸುದ್ದಿಯಲ್ಲಿ ವಾಸ್ತವಾಂಶ ಇಲ್ಲ. ನಮ್ಮ ಸರ್ಕಾರ ಉಳಿವನ್ನು ಸಹಿಸದೇ, ಅದನ್ನು ಅಸ್ಥಿರಗೊಳಿಸಬೇಕು ಎಂಬ ಭಾವನೆಯಿಂದ ಇಂತಹ ಸುದ್ದಿಗಳನ್ನು ಹರಿಯಬಿಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಸಹಕಾರದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ. ‘ಸರ್ಕಾರ ರಚನೆಗೆ ದೇವೇಗೌಡರು ಹಲವಾರು ಷರತ್ತುಗಳನ್ನು ಹಾಕಿದ್ದಾರೆ, ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲರನ್ನು ಮಂತ್ರಿ ಮಾಡಬಾರದು ಎಂದು ಪಟ್ಟು ಹಿಡಿದಿದ್ದಾರೆ’ ಎಂಬ ಸುದ್ದಿ ಹಬ್ಬಿಸಲಾಗಿದೆ. ನನ್ನ ತಂದೆ ಅಥವಾ ನಾನು ಯಾವುದೇ ಷರತ್ತನ್ನು ವಿಧಿಸಿಲ್ಲ. ನನ್ನ ಕಾರ್ಯವೈಖರಿ, ಸರ್ಕಾರದ ನಡವಳಿಕೆಯ ಮೇಲೆ ದೇವೇಗೌಡರು ಮಧ್ಯ ಪ್ರವೇಶ ಮಾಡುವುದಿಲ್ಲ.

ರಾಜ್ಯವು ಅನೇಕ ನೀರಾವರಿ ವ್ಯಾಜ್ಯಗಳನ್ನು ಎದುರಿಸುತ್ತಿದೆ. ಈ ವಿಷಯದಲ್ಲಿ ಕಾನೂನು ತಜ್ಞರು ಎಷ್ಟೇ ಮಾಹಿತಿ ಸಂಗ್ರಹಿಸಿ, ಹೋರಾಟ ನಡೆಸಿದರೂ, ಸಮಸ್ಯೆ ಎದುರಾದಾಗ ದೇವೇಗೌಡರ ಅನುಭವ ಮತ್ತು ಜ್ಞಾನದ ಕಾರಣಕ್ಕೆ ಅವರ ಉಪಸ್ಥಿತಿ ಅಗತ್ಯ. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ಅನೇಕ ವಿಷಯಗಳಲ್ಲಿ ನನ್ನ ತಂದೆ ಜತೆಗೆ ಭಿನ್ನಾಭಿಪ್ರಾಯ ಇತ್ತು. ಆದರೆ, ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಸಲಹೆ ಪಡೆಯಲು ಅವರು ದೇವೇಗೌಡರ ಮನೆಗೆ ಹೋಗಿದ್ದರು. ಬೇರೆ ರಾಜಕೀಯ ಪಕ್ಷದವರಿಗೂ ಇದು ಅನ್ವಯವಾಗುತ್ತದೆ.
ಕುಟುಂಬದ ಸದಸ್ಯರ ಕೈಯಲ್ಲಿ ಸರ್ಕಾರ ಇದೆ ಎಂಬ ಭಾವನೆಯಿಂದ ವರ್ತಿಸಲು ಮುಂದಾದರೆ ಅವರು ತೊಂದರೆ ಎದುರಿಸಬೇಕಾಗುತ್ತದೆ ಎಂದು ನಿಷ್ಠುರವಾಗಿ ಹೇಳುವೆ.

* ಮೈತ್ರಿ ಹಗ್ಗ ಜಗ್ಗಾಟದಲ್ಲಿ ನಿಮ್ಮ ಕನಸಿನ ಆಡಳಿತ ಕೊಡಲು ಸಾಧ್ಯವೇ?

ಸಹಭಾಗಿ ಪಕ್ಷ ಕಾಂಗ್ರೆಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲವನ್ನೂ ಕಾರ್ಯರೂಪಕ್ಕೆ ತರುವ ವಿಶ್ವಾಸವಿದೆ. ಕಾಂಗ್ರೆಸ್‌ ನಾಯಕರು ನೆರವಿಗೆ ನಿಲ್ಲುತ್ತಾರೆ ಎಂಬ ನಂಬಿಕೆಯೂ ಇದೆ. ಜನರು ನನ್ನ ಮೇಲೆ ಅನುಮಾನ ಇಟ್ಟುಕೊಳ್ಳುವುದು ಬೇಡ. ನಾಡಿನ ಜನ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡದೇ ಇದ್ದರೂ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಭರವಸೆ ಈಡೇರಿಸಲು ಸಾಧ್ಯವಾಗದೇ ಇದ್ದರೆ ನಾನು ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ನಾನೇ ಹಿಂದೆ ಸರಿಯುತ್ತೇನೆ.

ಈ ಸ್ಥಾನ ಮುಳ್ಳಿನ ಹಾಸಿಗೆ ಎಂಬುದು ನನಗೆ ಗೊತ್ತಿದೆ. ಒಂದೊಂದು ಕ್ಷಣ ಕೆಲಸ ಮಾಡುವಾಗಲೂ ಕಷ್ಟ–ನೋವು, ಕಿರಿಕಿರಿ ಏನು ಎಂಬುದನ್ನು ಹಿಂದೆ ಮೈತ್ರಿ ಮಾಡಿಕೊಂಡಾಗ ಅನುಭವಿಸಿದ್ದೇನೆ. ನಿಮಗೋಸ್ಕರ, ನಿಮ್ಮ ಮಧ್ಯೆಯೇ ಇದ್ದು ಹಿಂದೆಯೂ ಕೆಲಸ ಮಾಡಿದ್ದೇನೆ. ಈಗಲೂ ನಿಮ್ಮ ಮನೆಯ ಮಗ
ನಂತೆ ಕೆಲಸ ಮಾಡುತ್ತೇನೆ.

* ಸಾಲ ಮನ್ನಾ ಹೊರೆ ಹೇಗೆ ಭರಿಸುತ್ತೀರಿ?

ಭರವಸೆ ಕೊಡುವ ಮುನ್ನವೇ ಸಾಲ ಮನ್ನಾಕ್ಕೆ ಬೇಕಾದ ಬೃಹತ್ ಪ್ರಮಾಣದ ಹಣವನ್ನು ಹೊಂದಿಸುವುದು ಹೇಗೆ ಎಂದು ನೀಲನಕ್ಷೆ ಸಿದ್ಧಪಡಿಸಿದ್ದೇನೆ. ಮಿತ್ರ ಪಕ್ಷದ ನಾಯಕರ ಸಹಕಾರ, ಹಿರಿಯ ಮುತ್ಸದ್ದಿಯಾಗಿರುವ ಸಿದ್ದರಾಮಯ್ಯ ಅವರಂತಹ ಆರ್ಥಿಕ ತಜ್ಞರ ಉಪಯುಕ್ತ ಸಲಹೆಗಳನ್ನು ಪಡೆಯುತ್ತೇನೆ.

* ಸರ್ಕಾರ ಆರು ತಿಂಗಳಿನಲ್ಲಿ ಪತನವಾಗಲಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ?

ಅದು ಅವರ ಭಾವನೆ. ಸರ್ಕಾರ ಬೀಳಿಸುವ ಕೆಲಸ ಬಿಜೆಪಿಯವರಿಂದ ಸಾಧ್ಯವೇ ಇಲ್ಲ. ಒಂದು ವೇಳೆ, ಭರವಸೆ ಈಡೇರಿಸಲಾಗದೇ ಇದ್ದರೆ ನಾನೇ ಹಿಂದೆ
ಸರಿದು ಸರ್ಕಾರ ಪತನವಾಗಬೇಕೇ ವಿನಾ ಬೇರೆ ಕಾರಣಕ್ಕೆ ಅಂತಹ ಅವಘಡ ಆಗುವುದಿಲ್ಲ. ಎರಡೂ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತೇನೆ. ಮಿತ್ರ ಪಕ್ಷದವರ ಸ್ಪಂದನೆ ಸಿಗಲಿದೆ ಎಂಬ ವಿಶ್ವಾಸವಿದೆ. ಐದು ವರ್ಷ ಸಂಪೂರ್ಣವಾಗಿ ನಾವು ಸರ್ಕಾರ ನಡೆಸುತ್ತೇವೆ. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಪಕ್ಷದ ಶಾಸಕರು ಹಾಗೂ ರಾಜ್ಯದ ಜನರಿಗೆ ಯಾವುದೇ ಸಂಶಯ ಬೇಡ.

* 1996ರಲ್ಲಿ ಆದ ಬೆಳವಣಿಗೆ ಮರುಕಳಿಸಿದರೆ, ನೀವು ಪ್ರಧಾನಿ ಹುದ್ದೆ ಆಕಾಂಕ್ಷಿಯೇ?

ಪ್ರಧಾನಿಯಾಗುವ ಅಪೇಕ್ಷೆ ಇಲ್ಲ. ರಾಜ್ಯದ ರೈತರು, ಬಡವರು, ಮಹಿಳೆಯರು ಅನವರತ ಅನುಭವಿಸುತ್ತಿರುವ ಸಮಸ್ಯೆಗಳು ನನ್ನ ಕಣ್ಣ ಮುಂದೆ ಕುಣಿಯುತ್ತಿವೆ. ಅವೆಲ್ಲವನ್ನೂ ಸಂಪೂರ್ಣವಾಗಿ ತೊಲಗಿಸಿ, ಜನರಿಗೆ ನೆಮ್ಮದಿಯ ಜೀವನ ಕಲ್ಪಿಸುವುದು ನನ್ನ ಪ್ರಥಮ ಆದ್ಯತೆ. ಹಾಗಾಗಿ ಅಂತಹ ಅವಕಾಶ ಒದಗಿ ಬಂದರೂ ಕನ್ನಡ ನಾಡಿನ ಜನರ ಋಣ ತೀರಿಸಲು ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ ವಿನಃ ರಾಷ್ಟ್ರ ರಾಜಕಾರಣಕ್ಕೆ ಹೋಗಲಾರೆ.

* ನೀವು ಮುಖ್ಯಮಂತ್ರಿಯಾಗಿದ್ದಾಗ 'ನೈಸ್' ಒಪ್ಪಂದ ರದ್ದು ಮಾಡ್ತೀನಿ ಎಂದಿದ್ದೀರಿ, ಈಗ?

ನೈಸ್‌ ಅಕ್ರಮದ ಕುರಿತ ಸದನ ಸಮಿತಿ ವರದಿ ಇದೆ. ವರದಿಯಲ್ಲಿ ಏನಿದೆ ಎಂಬುದು ಕಾಂಗ್ರೆಸ್‌ನವರಿಗೂ ಗೊತ್ತಿದೆ. ಈ ವಿಷಯದಲ್ಲಿ ಯಾವ ರಾಜಿಗೂ ಒಳಗಾಗುವುದಿಲ್ಲ. ಸಮ್ಮಿಶ್ರ ಸರ್ಕಾರದಎರಡೂ ಪಕ್ಷಗಳು ಸರ್ಕಾರದ ಆಸ್ತಿಯನ್ನು ಉಳಿಸುವ ವಿಷಯದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿವೆ. ಕಟ್ಟುನಿಟ್ಟಿನ ತೀರ್ಮಾನ ಕೈಗೊಳ್ಳುತ್ತೇವೆ.

* ವಿದ್ಯುತ್ ಖರೀದಿ ಅಕ್ರಮ, ಕೆರೆ ಒತ್ತುವರಿ ಅಕ್ರಮದ ವರದಿಗಳ ಹಣೆಬರಹ ಏನು?

ಅನೇಕ ವರ್ಷಗಳಲ್ಲಿ ಹಲವಾರು ರೀತಿಯ ನಿರ್ಧಾರಗಳು ಆಗಿವೆ. ಹಿಂದೆ ಆಗಿರುವ ತಪ್ಪುಗಳನ್ನು ಕೆದಕಿ, ಸರಿಪಡಿಸುವುದಕ್ಕೆ ಸಮಯ ಹಾಳು ಮಾಡಲು ನನಗೆ ಮನಸ್ಸಿಲ್ಲ. ಮುಂದೆ ಏನಾಗಬೇಕು, ಅಂತಹ ತಪ್ಪುಗಳು ಮರುಕಳಿಸದಂತೆ ಯಾವ ರೀತಿಯ ಕ್ರಮ ವಹಿಸಬೇಕು ಎಂಬ ಬಗ್ಗೆ ನಾನು ಆದ್ಯತೆ ನೀಡುತ್ತೇನೆ. ಈಗ ಕೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮೂರನೇ ಮಹಡಿಯಿಂದ (ಮುಖ್ಯಮಂತ್ರಿ ಕಚೇರಿ) ಆರಂಭವಾಗಬೇಕು ಎಂಬ ನಂಬಿಕೆ ನನ್ನದು. ಅದಕ್ಕೆ ಒತ್ತು ಕೊಡುವೆ.

* ರೈತರಿಗೆ ನೀಡುವ ನೀಡುವ ಭರವಸೆಯೇನು?

ಮುಖ್ಯಮಂತ್ರಿಯಾದ ಬಳಿಕ ಮೊದಲು ಸಹಿ ಹಾಕಿದ್ದು, ರೈತರಿಗೆ ನೀಡಬೇಕಾದ ಸಹಾಯಧನ ವಿತರಣೆಯ ಕಡತ. ಇದು ನನಗೆ ಖುಷಿ ತಂದಿದೆ. ರಾಜ್ಯದಲ್ಲಿ ಒಳ್ಳೆಯ ಮಳೆಯಾಗುತ್ತಿದೆ. ಸುದೀರ್ಘ ವರ್ಷ ಬರಗಾಲ ಅನುಭವಿಸಿದ ರಾಜ್ಯದಲ್ಲಿ ಸುಭಿಕ್ಷೆಯಯುಗ ಶುರುವಾಗಿದೆ. ರೈತರ ಬಾಳು ಹಸನಾಗಬೇಕಾದರೆ ಮಳೆಯ ಜತೆಗೆ, ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ಪೂರೈಸುವ ಕೆಲಸ ಆಗಬೇಕು. ಇದಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ. ಇಸ್ರೇಲ್ ಮಾದರಿ ಕೃಷಿ ಅಳವಡಿಸಲು ಯತ್ನಿಸುವೆ. ಇದಕ್ಕೆ ಮುನ್ನ ರಾಜ್ಯದ ವಿವಿಧ ಭಾಗಗಳಲ್ಲಿರುವ ಪ್ರಗತಿಪರ ರೈತರ ಸಭೆ ಕರೆದು ಸಮಾಲೋಚಿಸಿ, ರೈತ ನೀತಿ ಅನುಷ್ಠಾನ ಮಾಡುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT