ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಟ ದಾಖಲೆ ನಿರ್ಮಿಸಿದ ಸಂಜೀವನಿ

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೂರ ಅಂತರದ ಓಟದಲ್ಲಿ ಕೀನ್ಯಾ ಮತ್ತು ಇಥಿಯೋಪಿಯಾದ ಘಟಾನುಘಟಿ ಓಟಗಾರ್ತಿಯರಿಗೆ ‍ಪ್ರಬಲ ಪೈಪೋಟಿ ಒಡ್ಡುವ ಸಾಮರ್ಥ್ಯ ತಮ್ಮಲ್ಲಿದೆ ಎಂಬುದನ್ನು ಭಾನುವಾರ ಭಾರತದ ಸಂಜೀವನಿ ಜಾಧವ್‌ ನಿರೂಪಿಸಿದರು.

ವಿಶ್ವ 10 ಕೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 20ರ ಹರೆಯದ ಸಂಜೀವನಿ, ಭಾರತದ ಎಲೀಟ್‌ ಮಹಿಳಾ ವಿಭಾಗದಲ್ಲಿ ಕೂಟ ದಾಖಲೆ ನಿರ್ಮಿಸಿ ಉದ್ಯಾನನಗರಿಯ ಅಥ್ಲೆಟಿಕ್ಸ್‌ ಪ್ರಿಯರ ಮನ ಗೆದ್ದರು.

33 ನಿಮಿಷ 38 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದ ಅವರು ಒಂಬತ್ತು ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದರು. 2009ರಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಕವಿತಾ ರಾವತ್‌ ಅವರು 34 ನಿಮಿಷ 32 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಮಹಾರಾಷ್ಟ್ರದ ಸಂಜೀವನಿ, ಮಹಿಳೆಯರ ಎಲೀಟ್‌ ವಿಭಾಗದಲ್ಲಿ ಒಟ್ಟಾರೆ 10ನೇ ಸ್ಥಾನ ಗಳಿಸಿದ ಶ್ರೇಯಕ್ಕೂ ಪಾತ್ರರಾದರು.

ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಒಂದು ಸುತ್ತು ಹಾಕಿ ನಂತರ ರಸ್ತೆಗಿಳಿದ ಸಂಜೀವನಿ 2.5 ಕಿಲೊ ಮೀಟರ್ಸ್‌ವರೆಗೆ ಗುಂಪಿನಲ್ಲೇ ಓಡುತ್ತಿದ್ದರು. ಮಹಾತ್ಮ ಗಾಂಧಿ ರಸ್ತೆ ಸಮೀಪಿಸುತ್ತಿದ್ದಂತೆ ಕೀನ್ಯಾದ ಅಗ್ನೆಸ್‌ ತಿರೋಫ್‌, ಕ್ಯಾರೋಲಿನ್‌ ಕಿಪ್‌ಕಿರುಯಿ, ಇಥಿಯೋಪಿಯಾದ ಸೆನ್‌ಬೆರೆ ತೆಫೆರಿ, ನೆಟ್‌ಸಾನೆಟ್‌ ಗುಡೆಟಾ ಮತ್ತು ಜೀನೆಬಾ ಯಿಮರ್‌ ಅವರು ಗುಂಪಿನಿಂದ ಬೇರ್ಪಟ್ಟರು. ಅವರ ಹಿಂದೆಯೇ ಸಂಜೀವನಿ ಕೂಡ ಓಡುತ್ತಿದ್ದರು.

ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆಯ ಮೂಲಕ ಕಬ್ಬನ್‌ ಉದ್ಯಾನ ಪ್ರವೇಶಿಸುತ್ತಿದ್ದಂತೆ ವೇಗ ಹೆಚ್ಚಿಸಿಕೊಂಡ ಸಂಜೀವನಿ ಕೊನೆಯ ಒಂದು ಕಿಲೊ ಮೀಟರ್‌ ದೂರವನ್ನು ಮಿಂಚಿನ ಗತಿಯಲ್ಲಿ ಕ್ರಮಿಸಿ ಸಂಭ್ರಮದ ಅಲೆಯಲ್ಲಿ ತೇಲಿದರು.

ಸ್ವಾತಿ ಗಡವೆ (35.08ಸೆ.) ಮತ್ತು ಕಿರಣ್‌ಜೀತ್‌ ಕೌರ್‌ (35:25ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಅಗ್ನೆಸ್‌ ಮಿಂಚು: ಮಹಿಳೆಯರ ಎಲೀಟ್‌ ವಿಭಾಗದಲ್ಲಿ ಈ ಬಾರಿಯೂ ಕೀನ್ಯಾದ ಅಥ್ಲೀಟ್‌ಗಳು ಪ್ರಾಬಲ್ಯ ಮೆರೆದರು.

ಅಗ್ನೆಸ್‌ ತಿರೋಫ್‌ (31:19ಸೆ.) ಮೊದಲಿಗರಾಗಿ ಗುರಿ ಸೇರಿದರು. ಕೀನ್ಯಾದವರೇ ಆದ ಕ್ಯಾರೋಲಿನ್‌ ಕಿಪ್‌ಕಿರುಯಿ (31:28ಸೆ.) ಕಂಚು ಗೆದ್ದರು. ಇಥಿಯೋಪಿಯಾದ ಸೆನ್‌ಬೆರೆ ಥೆಪೆರಿ (31:22ಸೆ.) ಬೆಳ್ಳಿ ತಮ್ಮದಾಗಿಸಿಕೊಂಡರು.

ಈ ಬಾರಿ ಚಿನ್ನ ಗೆಲ್ಲುವ ನೆಚ್ಚಿನ ಓಟಗಾರ್ತಿ ಎನಿಸಿದ್ದ ಇಥಿಯೋಪಿಯಾದ ನೆಟ್‌ಸಾನೆಟ್‌ ಗುಡೆಟಾ ನಾಲ್ಕನೆಯವರಾಗಿ ಗುರಿ ಮುಟ್ಟಿದರು.

ಕಮವೊರೊರ್‌ಗೆ ಮೂರನೇ ಚಿನ್ನ: ಪುರುಷರ ಎಲೀಟ್‌ ವಿಭಾಗದಲ್ಲಿ ಚೀನಾದ ಜಿಯೊಫ್ರೆ ಕಮವೊರೊರ್‌ ಮೂರನೇ ಚಿನ್ನಕ್ಕೆ ಮುತ್ತಿಕ್ಕಿದರು.

ಅವರು 28 ನಿಮಿಷ 18 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. 2012 ಮತ್ತು 2014ರಲ್ಲಿ ನಡೆದಿದ್ದ ಸ್ಪರ್ಧೆಗಳಲ್ಲೂ ಅವರು ಚಿನ್ನ ಜಯಿಸಿದ್ದರು.

ವಿಶ್ವ ಹಾಫ್‌ ಮ್ಯಾರಥಾನ್‌ನಲ್ಲಿ ಎರಡು ಚಿನ್ನ ಗೆದ್ದ ಹೆಗ್ಗಳಿಕೆ ಹೊಂದಿರುವ ಜಿಯೊಫ್ರೆ ಏಳನೇ ಕಿಲೊ ಮೀಟರ್ಸ್‌ವರೆಗೆ ‍ಪ್ರತಿ ಸ್ಪರ್ಧಿಗಳಿಂದ ತೀವ್ರ ಪೈಪೋಟಿ ಎದುರಿಸಿದರು. ನಂತರ ಎಲ್ಲರನ್ನೂ ಹಿಂದಿಕ್ಕಿದರು.

ಇಥಿಯೋಪಿಯಾದ ಬಿರ್ಹಾನು ಲೆಗೆಸೆ (28:38) ಮತ್ತು ಮೋಸಿನೆಟ್‌ ಗೆರೆಮೆವ್‌ (28:39) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.

ಭಾರತದ ಎಲೀಟ್‌ ಪುರುಷರ ವಿಭಾಗದಲ್ಲಿ  ಭಾರತೀಯ ಸೇನೆಯ ಸುರೇಶ್‌ ಕುಮಾರ್‌ (30:12ಸೆ) ಚಿನ್ನ ತಮ್ಮದಾಗಿಸಿಕೊಂಡರು.

ಮಾನ್‌ ಸಿಂಗ್‌ (30:12) ಬೆಳ್ಳಿ ಗೆದ್ದರೆ, ಶಂಕರ್‌ ಮನ್‌ ಥಾಪಾ (30:41) ಕಂಚು ಜಯಿಸಿದರು.

‘ವಿಶ್ವ 10ಕೆ ಓಟದಲ್ಲಿ ಕೂಟ ದಾಖಲೆ ನಿರ್ಮಿಸಿದ್ದು ಅತೀವ ಖುಷಿ ನೀಡಿದೆ. ಕವಿತಾ ರಾವತ್‌ ಅವರ ದಾಖಲೆ ಮೀರಿ ನಿಂತಿದ್ದರಿಂದ ಸಂತಸ ಇಮ್ಮಡಿಸಿದೆ’

– ಸಂಜೀವನಿ ಜಾಧವ್‌, ಭಾರತದ ಅಥ್ಲೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT