ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಸಂರಕ್ಷಣೆಗೆ ಮಾನವ ಸರಪಳಿ

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಟ್ಟಂದೂರು ಅಗ್ರಹಾರ ಕೆರೆ ಪ್ರದೇಶದ ಒತ್ತುವರಿ ಯತ್ನ ವಿರೋಧಿಸಿ ಸ್ಥಳೀಯರು ಭಾನುವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಕಣ್ಮುಂದೆಯೇ ಒತ್ತುವರಿಯಾಗುತ್ತಿರುವ ಕೆರೆಯನ್ನು ಉಳಿಸಿಕೊಳ್ಳಬೇಕು. ಒತ್ತುವರಿಗೆ ಮುಂದಾದವರ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಕಾಡುಗೊಡಿ ವಾರ್ಡ್‌ನ ಪಾಲಿಕೆ ಸದಸ್ಯ ಎಸ್‌.ಮುನಿಸ್ವಾಮಿ ಮಾತನಾಡಿ, ‘ಕೆರೆ ಪ್ರದೇಶವನ್ನು ರಾಜಕೀಯ ಪ್ರಭಾವಿಗಳಿಗೆ ಒತ್ತುವರಿ ಮಾಡಿಕೊಳ್ಳಲು ಅಧಿಕಾರಿಗಳು ಅನುವು ಮಾಡಿಕೊಡುತ್ತಿದ್ದಾರೆ. ಸರ್ಕಾರವೇ ಕೆರೆ ಒತ್ತುವರಿಗೆ ಪ್ರೋತ್ಸಾಹ ನೀಡುತ್ತಿದೆ’ ಎಂದು ದೂರಿದರು.

ಗ್ರಾಮದ ಸರ್ವೆ ನಂ.52ರ 12.30 ಎಕರೆ ವಿಸ್ತಾರದ ಕೆರೆ ಪ್ರದೇಶಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವ ಯತ್ನ ನಡೆಸಲಾಗುತ್ತಿದೆ. 150 ವರ್ಷಗಳ ಅಧಿಕೃತ ದಾಖಲೆಯಲ್ಲಿ ಕೆರೆ ಎಂದು ಗುರುತಿಸಿರುವ ಪ್ರದೇಶವನ್ನು ಖಾಸಗಿಯವರ ಸ್ವತ್ತು ಎಂಬಂತೆ ಬಿಂಬಿಸಲು ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಬೇಲಿ ಅಳವಡಿಸುವುದಾಗಿ ಹೇಳಿ ಇತ್ತ ತಲೆಯೂ ಹಾಕದೆ ಉಳಿದಿದ್ದಾರೆ. ಸ್ಥಳೀಯರು ಹೈಕೋರ್ಟ್‌ನಲ್ಲಿ ಕೆರೆ ರಕ್ಷಣೆ ಕುರಿತಂತೆ ದಾವೆ ಹೂಡಿದ್ದು ಸಾಕ್ಷ್ಯ ಒದಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

* ಕೆರೆ ಒತ್ತುವರಿ ತಡೆ ಸಮಿತಿಯ ಸದಸ್ಯರಾಗಿದ್ದ ಹಾಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಹಿಂದೆ ಪಟ್ಟಂದೂರು ಕೆರೆ ಕುರಿತಂತೆ ದನಿ ಎತ್ತಿದ್ದರು, ಸದ್ಯ ಅವರೇ ಕ್ರಮಕ್ಕೆ ಮುಂದಾಗಬೇಕು.

– ಸಂದೀಪ್‌ ಪಟ್ಟಂದೂರು ನಿವಾಸಿ

ಕಗ್ಗದಾಸಪುರ ಕೆರೆ ಪರಿಶೀಲಿಸಿದ ಮೇಯರ್‌

ನೊರೆ ಸಮಸ್ಯೆ ಕಾಣಿಸಿಕೊಂಡಿರುವ ಕುರಿತು ಸ್ಥಳೀಯರಿಂದ ಸಾಕಷ್ಟು ದೂರು ಕೇಳಿಬಂದ ಕಾರಣ ಮೇಯರ್‌ ಆರ್‌.ಸಂಪತ್ ರಾಜ್ ಅವರು ಕಗ್ಗದಾಸಪುರ ಕೆರೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿ.ವಿರಾಮನ್ ನಗರದ 45 ಎಕರೆ ವಿಸ್ತೀರ್ಣದ ಕೆರೆಯ ಸುತ್ತಮುತ್ತಲಿನ ಪ್ರದೇಶ ಕಲುಷಿತಗೊಂಡಿದೆ. ಇದರಿಂದ ಜನಜೀವನಕ್ಕೆ ತೊಂದರೆಯಾಗಿದೆ ಎಂದು ಇಲ್ಲಿನ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳು ಹಾಗೂ ಕೊಳಗೇರಿ ನಿವಾಸಿಗಳು ಈ ಬಗ್ಗೆ ದೂರು ನೀಡಿದ್ದರು.

‘ಕರೆ ಪುನಶ್ಚೇತನಗೊಳಿಸುವುದಾಗಿ ಮೇಯರ್ ಭರವಸೆ ನೀಡಿದ್ದಾರೆ’ ಎಂದು ‘ಕಗ್ಗದಾಸಪುರ ಕೆರೆ ಉಳಿಸಿ’ ಸಂಸ್ಥೆ ಹೇಳಿಕೆ ನೀಡಿದೆ.

‘ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರನ್ನು ಮಾತನಾಡಿಸಿದ್ದೇನೆ. ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆದಷ್ಟು ಬೇಗ ಕರೆಯನ್ನು ಪುನಶ್ಚೇತನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದೇನೆ’ ಎಂದು ಮೇಯರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT