ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠೆಯ ಕಣದಲ್ಲಿ ಮತದಾನ ಇಂದು

Last Updated 27 ಮೇ 2018, 20:06 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಮತದಾನ ಸೋಮವಾರ ನಡೆಯಲಿದೆ.

ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 104, ಕಾಂಗ್ರೆಸ್‌ 78 ಹಾಗೂ ಜೆಡಿಎಸ್‌ 37 ಶಾಸಕರನ್ನು ಹೊಂದಿದೆ. ಬಿಜೆಪಿ ಅಭ್ಯರ್ಥಿ ಬಿ.ಎನ್‌. ವಿಜಯಕುಮಾರ್‌ ನಿಧನರಾದ ಕಾರಣಕ್ಕೆ ಜಯನಗರ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು.

ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ಎಚ್‌.ಡಿ.ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಉಪಚುನಾವಣೆ ನಡೆಯಲಿದೆ. ಕ್ಷೇತ್ರವನ್ನು ಗೆದ್ದು ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳುವುದು ಬಿಜೆಪಿ ಗುರಿ. ಮೈತ್ರಿಕೂಟದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಇಲ್ಲಿ ಪರಸ್ಪರ ಎದುರಾಳಿಗಳು. ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ.

₹1 ಲಕ್ಷ ಜಪ್ತಿ; ಕಾರು ಚಾಲಕ ಬಂಧನ 

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನಲಾದ ₹ 1 ಲಕ್ಷ ನಗದನ್ನು ಚುನಾವಣಾ ಅಧಿಕಾರಿಗಳು ಭಾನುವಾರ ಜಪ್ತಿ ಮಾಡಿದ್ದಾರೆ.

ಯಶವಂತಪುರ ಬಳಿಯ ಮುತ್ತ್ಯಾಲ ನಗರದಲ್ಲಿ ಸುತ್ತಾಡುತ್ತಿದ್ದ ಕಾರು (ಕೆಎ 51 ಎಂಸಿ 2181) ತಪಾಸಣೆ ನಡೆಸಿದ ಸಂಚಾರ ದಳದ ಅಧಿಕಾರಿಗಳು, ಅದರಲ್ಲಿ ಹಣವಿರುವುದನ್ನು ಪತ್ತೆ ಹಚ್ಚಿದರು. ಹಣ ಪತ್ತೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾರಿನ ಚಾಲಕ ಪ್ರಶಾಂತ್ ರೆಡ್ಡಿ ಎಂಬುವರನ್ನು ಬಂಧಿಸಿ ಜಾಮೀದದನು ಮೇಲೆ ಬಿಡುಗಡೆ ಮಾಡಿದ್ದಾರೆ.

ಸೋಮವಾರ ಚುನಾವಣೆ ಇದೆ. ಅದರ ಮುನ್ನಾದಿನವೇ ಬಿಜೆಪಿ ಅಭ್ಯರ್ಥಿ ಪರವಾಗಿ ಮತದಾರರಿಗೆ ಹಣ ಹಂಚಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರೊಬ್ಬರು ನೀಡಿದ್ದ ಮಾಹಿತಿ ಆಧರಿಸಿ ಸಂಚಾರ ದಳದ ಅಧಿಕಾರಿಗಳು ದಾಳಿ ಮಾಡಿದ್ದರು ಎಂದು ಯಶವಂತಪುರ ಠಾಣೆಯ ಪೊಲೀಸರು ತಿಳಿಸಿದರು.

‘ಅಧಿಕಾರಿ ನೀಡಿದ್ದ ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ಕಾರು ಹಾಗೂ ನಗದು ಜಪ್ತಿ ಮಾಡಿದ್ದೇವೆ. ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಆರೋಪಿ ಪ್ರಶಾಂತ್ ರೆಡ್ಡಿ, ಎಚ್‌ಎಎಲ್‌ ಬಳಿಯ ವಿನಾಯಕ ನಗರದ ನಿವಾಸಿ’ ಎಂದರು.

ವ್ಯಾಪಾರಿಗೆ ಸೇರಿದ್ದ ಹಣ; ಪ್ರಶಾಂತ್ ಬಂಧನದ ಸುದ್ದಿ ತಿಳಿದು ಠಾಣೆ ಎದುರು ಸೇರಿದ್ದ ಯಶವಂತಪುರ ಎಪಿಎಂಸಿಯ ಹಲವು ವ್ಯಾಪಾರಿಗಳು, ‘ಅದು ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಹಣವಲ್ಲ. ಕೃಷಿ ಉತ್ಪನ್ನ ಮಾರಾಟದಿಂದ ಸಂಪಾದಿಸಿದ್ದ ಹಣ’ ಎಂದು ಹೇಳಿದರು.

‘ಎಪಿಎಂಸಿಯಲ್ಲಿ ಮಳಿಗೆ ಹೊಂದಿರುವ ವ್ಯಾಪಾರಿಯೊಬ್ಬರಿಗೆ ಸೇರಿದ್ದ ಹಣವಿದು. ಅದನ್ನು ಪ್ರಶಾಂತ್‌ ಅವರು ತೆಗೆದುಕೊಂಡು ಹೋಗುತ್ತಿದ್ದರು. ಯಾರೋ ತಪ್ಪು ಮಾಹಿತಿ ನೀಡಿ, ಅಧಿಕಾರಿಗಳ ದಾರಿ ತಪ್ಪಿಸಿದ್ದಾರೆ. ಈ ಪ್ರಕರಣವನ್ನು ಕೈಬಿಟ್ಟು ಹಣ ವಾಪಸ್‌ ನೀಡಬೇಕು’ ಎಂದು ವ್ಯಾಪಾರಿಗಳು ಆಗ್ರಹಿಸಿದರು.

ಪೊಲೀಸರು, ‘ತನಿಖೆ ಪೂರ್ಣಗೊಂಡ ಬಳಿಕ ಹಣ ಯಾರಿಗೆ ಸೇರಿದ್ದು ಎಂಬುದು ಗೊತ್ತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT