ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಣ್ಣ ಮೇಷ್ಟ್ರ ಕೃಷಿ ಪಾಠಗಳು

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಎಚ್‌.ಜೆ.ಪದ್ಮರಾಜು

‘ಕಾಮಣ್ಣನವರ ಮನೆಗೆ ಹೋಗುವ ದಾರಿ ಯಾವುದು?’

ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಅಥವಾ ಮಧುಗಿರಿ ತಾಲ್ಲೂಕಿನ ಬಡನವನಹಳ್ಳಿ ಬಸ್‌ ನಿಲ್ದಾಣದಲ್ಲಿ ಈ ಪ್ರಶ್ನೆ ಕೇಳಿದವರಿಗೆ, ‘ರಂಗಾಪುರ ಕಾಮಣ್ಣನವರನ್ನು ಭೇಟಿಯಾಗಬೇಕೋ? ನೀವು ಹೊಸದಾಗಿ ಬೇಸಾಯ ಮಾಡಬೇಕು ಅಂತಾ ಇದ್ದೀರಾ? ನೀವು ಅಗ್ರಿ ಸ್ಟೂಡೆಂಟಾ?’ ಹೀಗೆ ಇನ್ನೆರೆಡು ಪ್ರಶ್ನೆಗಳೇ ಎದುರುಗೊಳ್ಳುತ್ತಿದ್ದವು. ತುಮಕೂರು ಜಿಲ್ಲೆಯಲ್ಲಿ ಕಾಮಣ್ಣನವರು ಅಷ್ಟರಮಟ್ಟಿಗೆ ಫೇಮಸ್.

ಮಧುಗಿರಿ ತಾಲ್ಲೂಕು ರಂಗಾಪುರ ಗ್ರಾಮದಲ್ಲಿದ್ದ ಕಾಮಣ್ಣ ಅವರ 10 ಎಕರೆ ತೋಟ ಹಲವು ಪ್ರಯೋಗಗಳಿಗೆ ನೆಲೆಯಾಗಿತ್ತು. ಜೀವನವಿಡೀ ಮಣ್ಣಿಗೆ ಬೆವರು ಬಸಿದಿದ್ದ ಈ ರೈತವಿಜ್ಞಾನಿಗೆ ಪ್ರಕೃತಿಯೂ ಬಲುಪ್ರೀತಿಯಿಂದ ತನ್ನ ಸೂಕ್ಷ್ಮಗಳನ್ನು ಬಿಟ್ಟುಕೊಟ್ಟಿತ್ತು. ಇದೇ ಕಾರಣಕ್ಕೆ ಕಾಮಣ್ಣನವರ ಮಾತುಗಳನ್ನು ಕೇಳಿಸಿಕೊಳ್ಳಲು ಕೃಷಿ ವಿವಿ ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಿದ್ದರು. ಕೆಲವರಂತೂ ಕೆಲ ಸಮಯ ಅವರ ಮನೆಯಲ್ಲಿಯೇ ಉಳಿದು ಕೃಷಿಲೋಕದ ಸೂಕ್ಷ್ಮಗಳನ್ನು ಅರಿತುಕೊಳ್ಳುತ್ತಿದ್ದರು.

ತೇಲುವ ಮೋಡಗಳ ಸಾಂದ್ರತೆ, ಬೀಸುವ ಗಾಳಿಯಲ್ಲಿರುವ ಪಸೆಯನ್ನು ಗಮನಿಸಿಯೇ ಕಾಮಣ್ಣ ‘ಇಂಥ ದಿನ ಮಳೆ ಶುರುವಾಗುತ್ತೆ’ ಎಂದು ಸ್ಪಷ್ಟವಾಗಿ ಭವಿಷ್ಯ ನುಡಿಯುತ್ತಿದ್ದರು. ಸರಿಯಾಗಿ ಅದೇ ದಿನ, ಅದೇ ಹೊತ್ತಿಗೆ ಶುರುವಾಗುತ್ತಿದ್ದ ಮಳೆ ಕೃಷಿ ಲೋಕಕ್ಕೆ ಪ್ರವೇಶ ಪಡೆದುಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಿದ್ದ ಹುಡುಗರಲ್ಲಿ ಬೆರಗು ಮೂಡಿಸುತ್ತಿತ್ತು.

ರಂಗಾಪುರದ ಸುತ್ತಮುತ್ತಲ ಹಳ್ಳಿಗಳಲ್ಲಿ ಯಾವುದೇ ತೋಟ ಅಥವಾ ಹೊಲಗಳಲ್ಲಿ ಬೆಳೆಗಳಿಗೆ ರೋಗಬಾಧೆ, ಕೀಟಬಾಧೆ ಕಾಣಿಸಿಕೊಂಡರೆ ರೈತರು ಮೊದಲು ಎಡತಾಕುತ್ತಿದ್ದುದು ಕಾಮಣ್ಣನವರ ಮನೆಯನ್ನು. ಬೆಳೆಗಳನ್ನು ಕಾಡುವ ಬಹುತೇಕ ತೊಂದರೆಗಳಿಗೆ ಕಾಮಣ್ಣ ದೇಸಿಮದ್ದು ಕೊಡುತ್ತಿದ್ದರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅವರನ್ನು ಪ್ರೀತಿಯಿಂದ ‘ಕೃಷಿ ಮೇಷ್ಟ್ರು’ ಎಂದೇ ಕರೆಯುತ್ತಿದ್ದರು. ಹುಣಸೆ ಬೆಳೆಯ ಕುರಿತು ಅವರಿಗೆ ಆಳವಾದ ಜ್ಞಾನವಿತ್ತು. ಕೃಷಿಮೇಳಗಳಲ್ಲಿ ಹುಣಸೆ ಕುರಿತು ಗಂಟೆಗಟ್ಟಲೆ ಮಾತನಾಡಿ ರೈತರ ಸಂದೇಹಗಳನ್ನು ಪರಿಹರಿಸುತ್ತಿದ್ದರು. ‘ಮಳೆಯನ್ನೇ ನೆಚ್ಚಿಕೊಂಡಿರುವ ಕರ್ನಾಟಕದ ಬಯಲುಸೀಮೆಗೆ ಹುಣಸೆ ಬೆಳೆಯೇ ಆಸರೆ. ಹುಣಸೆಯ ಮಹತ್ವ ಮುಂದೊಂದು ದಿನ ನಿಮಗೆ ಅರ್ಥವಾಗುತ್ತದೆ’ ಎಂದು ಆತ್ಮವಿಶ್ವಾಸದಿಂದ ಕಿವಿಮಾತು ಹೇಳುತ್ತಿದ್ದರು.

ಕಾಮಣ್ಣ ಮೇಷ್ಟ್ರು ಪದೇಪದೆ ಹೇಳುತ್ತಿದ್ದ ಕೆಲ ಮಾತುಗಳು ಮತ್ತು ಅವರು ಮಾಡಿದ್ದ ಯಶಸ್ವಿ ಪ್ರಯೋಗಗಳ ಪರಿಚಯ ಇಲ್ಲಿದೆ...

ಹುಣಸೆ ಬೆಳೆ ಜೋಪಾನ
ಹುಣಸೆ ಗಿಡ ಬೆಳೆಸಲು ಇಚ್ಛಿಸುವವರು ಸಸಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಸಸಿ ಆಯ್ಕೆಯಲ್ಲಿ ಎಡವಿದರೆ ನೆಟ್ಟ 10 ವರ್ಷದ ನಂತರ ಪರಿಣಾಮ ಅನುಭವಿಸಬೇಕಾಗುತ್ತದೆ. ನರ್ಸರಿಗಳವರು ಯಾವ ಮರದ, ಯಾವ ಬೀಜದಿಂದ ಹುಣಸೆ ಗಿಡ ಬೆಳೆಸಿದ್ದಾರೆ ಎನ್ನುವುದನ್ನು ತಿಳಿದುಕೊಂಡ ನಂತರವೇ ಗಿಡಗಳನ್ನು ಖರೀದಿಸಬೇಕು.

ಗಿಡ ಬೆಳೆಸಲು ಬೀಜ ಆರಿಸಿಕೊಳ್ಳುವ ಮರದಲ್ಲಿ 1 ಕೆ.ಜಿ. ಹುಣಸೆ ಬೀಜಕ್ಕೆ 2ರಿಂದ 2.5 ಕೆ.ಜಿ. ಹಣ್ಣು ಬರಬೇಕು. ಹಣ್ಣಿನ ಒಳಭಾಗ ಬಿಳುಪಾಗಿರಬೇಕು ಮತ್ತು ಆ ಮರವು ಪ್ರತಿ ವರ್ಷ ಫಸಲು ಕೊಡಬೇಕು. ಇಂಥ ಮರದ ಹುಣಸೆ ಭಲ್ಲೆಯ (ತೊಳೆ) ತುದಿಯಲ್ಲಿರುವ ಬೀಜಗಳನ್ನೇ ಸಂಗ್ರಹಿಸಿ ಬಿತ್ತನೆಗೆ ಆರಿಸಿಕೊಳ್ಳಬೇಕು. ಅದರಲ್ಲಿ ಮಾತ್ರ ತಾಯಿ ಮರದ ಸ್ವಭಾವ ದಾಟಿರುತ್ತದೆ. ತೊಟ್ಟಿನ ಸನಿಹಕ್ಕೆ ಬಂದಂತೆಯೂ ಬೀಜಗಳಲ್ಲಿ ತಾಯಿ ಮರದ ಸ್ವಭಾವ ಕಡಿಮೆಯಾಗುತ್ತದೆ. ಅಡಿಕೆಪಟ್ಟೆಯಲ್ಲಿ ಹುಣಸೆ ಹಣ್ಣು ಸಂಗ್ರಹಿಸಿಡುವುದು ಕ್ಷೇಮ.

ನಾಲ್ಕು ಹುಣಸೆ ಮರಗಳ ಮಧ್ಯ ಒಂದು ಗೇರು ಗಿಡ ನೆಡಿ. ಗೇರು ಗಿಡದ ಗಾಳಿಯು ಗುಳ್ಳೆ ರೋಗವನ್ನು ನಿವಾರಿಸುತ್ತದೆ ಎನ್ನುವುದು ಹುಣಸೆ ಕೃಷಿ ಕುರಿತು ಅವರ ಅನುಭವದ ಮಾತು.

ಹಲಸಿಗೆ ಭತ್ತದ ಹುಲ್ಲು
ನೆಟ್ಟ ಹಲಸಿನ ಮರ ಹತ್ತಾರು ವರ್ಷಗಳ ನಂತರವೂ ಫಲಕೊಡದಿದ್ದರೆ ಅನೇಕರು ಬೇಸತ್ತು ಕೊಡಲಿ ಮುಟ್ಟಿಸುತ್ತಾರೆ. ಇಂಥ ಸಮಸ್ಯೆಗೂ ಕಾಮಣ್ಣ ತಮ್ಮದೇ ಆದ ಉತ್ತರ ಕಂಡುಕೊಂಡಿದ್ದರು.

ಹಲಸಿನ ಮರದ ಸುತ್ತಳತೆ 2 ಅಡಿಯಷ್ಟು ಆದ ನಂತರವೂ ಫಲ ಬಿಡದಿದ್ದರೆ, ನೆಲದಿಂದ ಅರ್ಧ ಅಡಿ ಅಂತರ ಬಿಟ್ಟು ಒಂದು ಪುರುಷ ಪ್ರಮಾಣ (5 ಅಡಿ) ಭತ್ತದ ಹುಲ್ಲು ಸುತ್ತಬೇಕು. ಭತ್ತದ ಹುಲ್ಲನ್ನು ಹಗ್ಗದಂತೆ ಹೊಸೆದು, ಗೌರಿ ಹಬ್ಬದ ದಿನವೇ ಸುತ್ತಿದರೆ ಉತ್ತಮ ಪರಿಣಾಮ ಬೀರುತ್ತದೆ. ಗೌರಿ ಹಬ್ಬದ ನಂತರ ಬರುವ ಸೋನೆ ಮಳೆಯಲ್ಲಿ ಭತ್ತದ ಹುಲ್ಲು ನೆನೆದು, ಗಾಳಿ– ಬಿಸಿಲಿನ ಹದದಲ್ಲಿ ಮರದ ಬುಡಕ್ಕೆ ಶಾಖ ನೀಡುತ್ತದೆ. ಇದರಿಂದ ಮರದ ಪುರುಷತ್ವ ಜಾಗೃತಗೊಂಡು ಬಂಜೆತನ ನಿವಾರಣೆಯಾಗುತ್ತದೆ. ಕಾಮಣ್ಣನವರ ಈ ಪ್ರಯೋಗ ಮರಗಳಲ್ಲಿ ಫಲಿಸಿತ್ತು.


ಫಲ ಕೊಡದ ಹಲಸು ಮರಕ್ಕೆ ಭತ್ತದ ಹುಲ್ಲಿನ ಚಿಕಿತ್ಸೆ ಮಾಡುತ್ತಿರುವ ಕಾಮಣ್ಣ

ಮಣ್ಣಿಗೆ ಮುಚ್ಚಿಗೆ ಮುಖ್ಯ
ತೋಟಗಳಲ್ಲಿ ಮಣ್ಣನ್ನು ಮುಚ್ಚಿಗೆಯ ಮೂಲಕ ರಕ್ಷಿಸಿಕೊಳ್ಳುವುದು ಅತ್ಯಗತ್ಯ ಎಂದು ಕಾಮಣ್ಣನವರು ಒತ್ತಿ ಹೇಳುತ್ತಿದ್ದರು. ತೆಂಗಿನಗರಿ, ಅಡಿಕೆ ಸೋಗೆ, ಸಹಜ ಕಳೆಯನ್ನು ಮುಚ್ಚಿಗೆಗೆ ಬಳಸಬಹುದು. ಅಡಿಕೆ ಸಿಪ್ಪೆಯ ಬಗ್ಗೆ ಕಾಮಣ್ಣನವರಿಗೆ ವಿಶೇಷ ಒಲವು ಇತ್ತು. ಅಡಿಕೆ ಸಿಪ್ಪೆಯನ್ನು ತೋಟಗಳಿಗೆ ಹೇಗೆ ಬಳಸಬಹುದು ಎಂಬ ಬಗ್ಗೆ ತಮ್ಮ ತೋಟದಲ್ಲಿ ಪ್ರಾತ್ಯಕ್ಷಿಕೆ ಸಹಿತ ವಿವರಿಸುತ್ತಿದ್ದರು.

ಅಡಿಕೆ ಸಂಸ್ಕರಣೆಯ ನಂತರ ಸಿಪ್ಪೆ ನಿರುಪಯೋಗಿ ವಸ್ತುವಾಗಿ ರಸ್ತೆ ಬದಿ ರಾಶಿ ಬಿದ್ದು ಬೆಂಕಿಗೆ ಆಹುತಿಯಾಗುತ್ತದೆ. ತೋಟದ ಮಣ್ಣಿನ ಮೇಲೆ ಅಡಿಕೆ ಸಿಪ್ಪೆ ಹಾಕಿದರೆ ಅಣಬೆ ರೋಗ ಬರುತ್ತದೆ ಎಂದು ರೈತರು ಹೆದರುತ್ತಾರೆ. ಗೆದ್ದಲು ಹುಳುಗಳು ಹೆಚ್ಚಾಗಿರುವ ಕೆಂಪು ಮಣ್ಣಿನ ಭೂಮಿಯಲ್ಲಿ ಅಡಿಕೆ ಸಿಪ್ಪೆಯನ್ನು ಮುಚ್ಚಿಗೆಗೆ ಬಳಸಬಹುದು. ಆದರೆ ತೋಟಕ್ಕೆ ಹರಡುವ ಮೊದಲು 50 ದಿನ ಬಿಸಿಲಿನಲ್ಲಿ (ತೆರೆದ ಬಯಲಿನಲ್ಲಿ) ಚೆನ್ನಾಗಿ ಒಣಗಿಸಬೇಕು. ಅಡಿಕೆ ಸಿಪ್ಪೆಯ ಮುಚ್ಚಿಗೆ ಮಾಡಿದ ಅಡಿಕೆ– ತೆಂಗಿನ ತೋಟಕ್ಕೆ ತಿಂಗಳಿಗೆ ಎರಡು ಸಲ ನೀರು ಕೊಟ್ಟರೆ ಸಾಕು. ಇಲ್ಲದಿದ್ದರೆ ತಿಂಗಳಿಗೆ ನಾಲ್ಕು ಬಾರಿ ನೀರು ಕೊಡಬೇಕಾಗುತ್ತದೆ ಎಂದು ಕಾಮಣ್ಣ ಹೇಳುತ್ತಿದ್ದರು.

ತೆಂಗಿನ ತೋಟಕ್ಕೆ ಬಾಳೆ ಬೇಕು
‘ಬಾಳೆ ಇಲ್ಲದ ತೋಟ– ಮಜ್ಜಿಗೆ ಇಲ್ಲದ ಊಟ’ ಎಂಬ ಗಾದೆಯನ್ನು ಕಾಮಣ್ಣನವರು ಪದೇಪದೆ ನೆನಪು ಮಾಡಿಕೊಳ್ಳುತ್ತಿದ್ದರು. ‘ತೆಂಗಿನ ತೋಟಗಳಲ್ಲಿ ಹರಳು ಉದುರುವ ಬಾಧೆ ಕಾಣಿಸಿಕೊಂಡಿದ್ದರೆ ತೋಟದ ಮಣ್ಣಿನಲ್ಲಿ ರಂಜಕದ ಅಂಶ ಕಡಿಮೆಯಾಗಿದೆ ಎಂದು ಅರ್ಥ. ಇಂಥ ಸಂದರ್ಭ ಬಾಳೆ ನೆಡುವುದೇ ಪರಿಹಾರ’ ಎಂದು ಕಾಮಣ್ಣನವರು ಹೇಳುತ್ತಿದ್ದರು.
**
‘ಕಾಮಣ್ಣ ಮೇಷ್ಟ್ರು’ ಎಂದೇ ಸುತ್ತಮುತ್ತಲ ಹಳ್ಳಿಗಳ ರೈತರು, ಕೃಷಿ ವಿವಿ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಮಧುಗಿರಿ ತಾಲ್ಲೂಕು ಬಡವನಹಳ್ಳಿ ಸಮೀಪದ ಸಾವಯವ ಕೃಷಿಕ ಕಾಮಣ್ಣ (62) ಈಚೆಗೆ (ಮೇ 18) ನಿಧನರಾದರು. ನೂರಾರು ಕೃಷಿ ಕಾರ್ಯಾಗಾರಗಳಲ್ಲಿ ಅವರು ಪಾಲ್ಗೊಂಡಿದ್ದರು. ಕೃಷಿಗೆ ಮರಳಬೇಕು ಎಂದುಕೊಳ್ಳುತ್ತಿದ್ದ ಯುವಕರ ಪಾಲಿಗೆ ನೆಚ್ಚಿನ ಗುರು ಎನಿಸಿದ್ದರು.

ಎಸ್‌ಎಸ್‌ಎಲ್‌ಸಿ ಓದಿದ್ದ ಕಾಮಣ್ಣ ಅವರು 10 ಎಕರೆ ಜಮೀನಿನಲ್ಲಿ ಹುಣಸೆ, ಅಡಿಕೆ, ತೆಂಗು ಬೆಳೆಯುತ್ತಿದ್ದರು. ಹೊಸ ಹೊಸ ಪ್ರಯೋಗಗಳಿಂದಾಗಿ ಅವರ ಮನೆಯು ಕೃಷಿ ಜ್ಞಾನದ ದಾಸೋಹದ ನೆಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT