ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟೊಂದ್‌ ಹಣ್ಣುಗಳು!

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಮಣಭಾರದ ಪಾಟಿಚೀಲದ ನೆನಪನ್ನು ಮರೆಸುವ ಬೇಸಿಗೆ ರಜೆಯಷ್ಟು ಖುಷಿ ಮಕ್ಕಳಿಗೆ ಮತ್ತೊಂದಿಲ್ಲ. ‘ಹೋಮ್‌ವರ್ಕ್’ ಭೂತದ ಭಯವಿಲ್ಲದೇ ರೆಕ್ಕೆ ಬಲಿತ ಹಕ್ಕಿಗಳಂತೆ ಹಾರಾಡುವ ಮಕ್ಕಳಿಗೆ, ರಾತ್ರಿ ಕನಸಿನಲ್ಲೂ ಮುಳ್ಳಿನ ಗಿಡದಲ್ಲಿರುವ ಕರಿ ಗೋಲಿಯಂತಹ ಕವಳಿ ಹಣ್ಣು, ಮುತ್ತು ಪೋಣಿಸಿದಂತಿರುವ ಮುಳ್ಳೆ ಹಣ್ಣು, ಕವಚದೊಳಗೆ ಅವಿತಿರುವ ಬಿಕ್ಕೆ ಹಣ್ಣುಗಳೇ ಕಾಣುತ್ತವೆ !

ಪೇಟೆಯಲ್ಲಿರುವ ಮಕ್ಕಳು ಅಪ್ಪ–ಅಮ್ಮನಿಗೆ ದುಂಬಾಲು ಬಿದ್ದು, ಏಪ್ರಿಲ್, ಮೇ ತಿಂಗಳಲ್ಲಿ ಹಳ್ಳಿ ಮನೆಗೆ ಹೋಗಲು ಹಾತೊರೆಯುತ್ತಾರೆ. ಮಹಾನಗರದ ಮಾಲ್‌ಗಳು, ಚಾಟ್ಸ್‌, ಪಿಜ್ಜಾ, ಬರ್ಗರ್‌ ಸೆಂಟರ್‌ಗಳ ಆಕರ್ಷಣೆಯನ್ನು ಬದಿಗೆ ಸರಿಸಿ, ಹಳ್ಳಿಯ ಬೆಟ್ಟಗಳು ಈ ಮಕ್ಕಳನ್ನು ಸೆಳೆಯುತ್ತವೆ. ಗುಡ್ಡ– ಬೆಟ್ಟ ಹತ್ತಿ, ಬೀಳುತ್ತ ಏಳುತ್ತ, ಮಟ್ಟಿಯಲ್ಲಿರುವ ಗಿಡದೊಳಗೆ ನಾಜೂಕಾಗಿ ಕೈ ಒಳತೂರಿಸುವಾಗ, ಮುಳ್ಳಿನ ಗೀರುಗಳು ಬಿಡಿಸುವ ಮಿಂಚಿನ ಎಳೆಯಂತಹ ಚಿತ್ರಗಳನ್ನು ಲೆಕ್ಕಿಸದೇ, ಪುಟಾಣಿ ಹಣ್ಣನ್ನು ಕೊಯ್ದು ಬಾಯಿಗೆ ಎಸೆಯುವಾಗಿನ ಪುಳಕ ಅದು ಅನುಭವಿಸಿದವರಿಗೇ ಗೊತ್ತು.

ಮಲೆನಾಡಿನ ಬೆಟ್ಟಗಳು ಒಡಲ ತುಂಬ ತರಹೇವಾರಿ ಕಾಡುಹಣ್ಣಿನ ಗಿಡಗಳನ್ನು ಬೆಳೆಸಿವೆ. ಕೈತುತ್ತು ನೀಡುವ ಅಮ್ಮನಂತೆ, ಹೆಜ್ಜೆಗೊಂದು ಹೊಸ ಹಣ್ಣನ್ನು ಕೊಡುತ್ತವೆ. ಪರಗಿ, ಸಂಪೆ, ಹಾಲೆ, ರಂಜಲು, ಹಿಪ್ಪೆ, ಹಣಿಗೆರೆ, ನ್ಯಾವಳ, ನೆಕ್ಕರಿಕೆ, ತುಮರಿ, ಹಲಗೆ ಹಣ್ಣು, ಬಿಸಿಲ ಹಣ್ಣು, ನೇರಳೆ, ಪನ್ನೇರಳೆ, ಕುಂಟನೇರಳೆ, ಇಳ್ಳಿ, ಮುರುಗಲ, ಚಾಪೆ, ಸಳ್ಳೆ, ಜಂಬನೇರಳೆ ಹಣ್ಣಿನ ಗಿಡಗಳ ವನಗಳೇ ಇಲ್ಲಿವೆ.


ಸಂಪಿಗೆ ಹಣ್ಣು

‘ನಿಸರ್ಗದತ್ತವಾಗಿ ಬೆಳೆಯುವ ಗಿಡಗಳು ಫೆಬ್ರುವರಿ, ಮಾರ್ಚ್ ಹೊತ್ತಿಗೆ ಹೂ ಅರಳಿಸಿ, ಕಾಯಿ ಬಿಟ್ಟು, ಬೇಸಿಗೆಯಲ್ಲಿ ಹಣ್ಣಾಗುತ್ತವೆ. ಬಿಸಿಲ ಧಗೆಯಲ್ಲಿ ಮಾಗಿ ಹಣ್ಣಾಗುವುದೇ ಇವುಗಳ ವಿಶೇಷತೆ.

ಕಾಡುಹಣ್ಣಿನಲ್ಲಿರುವ ರಸಭರಿತ ಅಂಶಗಳು, ಪೋಷಕಾಂಶ, ಜೀವಸತ್ವ, ಖನಿಜಾಂಶಗಳು ಮಾನವ ಸಹಿತ ಸಕಲ ಜೀವರಾಶಿಗಳ ದೇಹವನ್ನು ತಣಿಸುವ ಪ್ರಯತ್ನ ಮಾಡುತ್ತವೆ. ಪಶ್ಚಿಮಘಟ್ಟದಲ್ಲಿ ಇಂತಹ ನೂರಾರು ಜಾತಿಯ ಕಾಡುಹಣ್ಣುಗಳಿವೆ’ ಎನ್ನುತ್ತಾರೆ ಶಿರಸಿಯ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಶ್ರೀಕಾಂತ ಗುನಗಾ.


ಹಿಪ್ಪೆ ಹಣ್ಣು

‘ಮುರುಗಲು, ಉಪ್ಪಾಗೆ, ದ್ಯಾವಣಿಗೆ ಹಣ್ಣುಗಳಲ್ಲಿ ಹೈಡ್ರಾಕ್ಸಿ ಸಿಟ್ರಿಕ್ ಆಮ್ಲವಿದೆ. ನೆಲ್ಲಿ, ನೇರಳೆ, ಅತ್ತಿ ಮಧುಮೇಹಕ್ಕೆ ರಾಮಬಾಣ. ಜಂಬು ನೇರಳೆ ಅತಿ ರಕ್ತದೊತ್ತಡ ಹಾಗೂ ಬಿಲ್ವ ಮೂಲವ್ಯಾಧಿ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಕಾಡು ಹಣ್ಣಿನ ವೃಕ್ಷಗಳು ಸರ್ವವ್ಯಾಧಿ ನಿವಾರಕಗಳಂತೆ ಕೆಲಸ ಮಾಡುತ್ತವೆ. ಹಳ್ಳಿಯ ಅಜ್ಜಿಯರು ಜ್ವರ, ವಾಂತಿ, ಭೇದಿಯಂತಹ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗದೇ, ಇದೇ ಹಣ್ಣಿನ ಗಿಡಗಳ ಬೇರು, ತೊಗಟೆ, ಎಲೆ, ಹೂವು, ಬೀಜ ಬಳಸಿ ಕಾಯಿಲೆ ಇನ್ನಿಲ್ಲದಂತೆ ಮಾಡುತ್ತಾರೆ. ಆದರೆ, ಯುವ ತಲೆಮಾರಿಗೆ ಇವುಗಳ ಮಹತ್ವ ಗೊತ್ತಿಲ್ಲ’ ಎನ್ನುತ್ತಾರೆ ಅವರು.


ಹೊಸ ಮಡಿಕೆ ಹಣ್ಣು

ಕಾಡಿನಲ್ಲಿರುವ ಹಣ್ಣಿನ ಗಿಡಗಳು ಕೊಡಲಿಗೆ ಬಲಿಯಾಗುತ್ತಿವೆ. ಅರಣ್ಯದಲ್ಲಿ ಆಹಾರ ಸಿಗದ ವನ್ಯಪ್ರಾಣಿಗಳು ಊರಿಗೆ ಬಂದು ಕೃಷಿ ಬೆಳೆಗಳನ್ನು ನಾಶ ಮಾಡುತ್ತಿವೆ. ಕಾಡುಹಣ್ಣಿನ ಗಿಡಗಳು ಹೆಚ್ಚಾದರೆ, ಪ್ರಾಣಿಗಳ ನೆಲೆಯಲ್ಲೇ ಅವುಗಳಿಗೆ ಹೊಟ್ಟೆತುಂಬ ತಿನ್ನಲು ಸಿಗುತ್ತದೆ. ಅವು, ಗದ್ದೆಯ ಬೆಳೆಗಳ ತಂಟೆಗೆ ಬರಲಾರವು. ಈ ಅರಿವು ರೈತರಲ್ಲಿ ಮೂಡಬೇಕಾಗಿದೆ. ಜತೆಗೆ ಜೀವವೈವಿಧ್ಯ ಸಂರಕ್ಷಣೆ, ಕಾಡುಹಣ್ಣುಗಳ ಮೌಲ್ಯವರ್ಧನೆಯಿಂದ ಆರ್ಥಿಕ ಉನ್ನತೀಕರಣ ಸಾಧ್ಯವಾಗುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ ಎನ್ನುತ್ತಾರೆ ಯೂತ್ ಫಾರ್ ಸೇವಾ ಸಂಘಟನೆಯ ಪ್ರಮುಖ ಉಮಾಪತಿ ಭಟ್ ಕೆ.ವಿ.

ಬೆಟ್ಟವೆಂಬ ಈ ಅಮ್ಮನ ಮಡಿಲು ಯಾವ ಮಕ್ಕಳು ಬಂದರೂ ಇಲ್ಲವೆನ್ನದೇ ರುಚಿಯಾದ ಹಣ್ಣನ್ನು ಕೊಟ್ಟು ಹೊಟ್ಟೆ ತುಂಬಿಸುತ್ತದೆ. ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.


ಹಾಲೆ ಹಣ್ಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT