ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವು ರಷ್ಯಾದಿಂದ ಎಸ್‌–400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಅಮೆರಿಕಾ ಅಸಮಾಧಾನ

Last Updated 29 ಮೇ 2018, 10:36 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾದಿಂದ ಎಸ್‌–400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಭಾರತ ಮುಂದಾಗಿರುವುದಕ್ಕೆ ಅಮೆರಿಕಾ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ.

‘ಈ ಖರೀದಿಯು ಭವಿಷ್ಯದಲ್ಲಿನ ಪರಸ್ಪರ ಸಹಕಾರಕ್ಕೆ ಬೇದರಿಕೆ ಒಡ್ಡಿದಂತಾಗುತ್ತದೆ. ಅಲ್ಲದೇ ಸೂಕ್ಷ್ಮ ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳಲು ಅಡೆತಡೆಗಳನ್ನು ಸೃಷ್ಟಿಸಲಿದೆ’ ಎಂದು ಅಮೆರಿಕಾ ಶಾಸನಸಭೆಯ ಸಶಸ್ತ್ರ ಸೇವೆಗಳ ಸಮಿತಿಯ ಅಧ್ಯಕ್ಷ ವಿಲಿಯಂ ಥೊರ್ನ್‌ಬೆರ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಈ ವ್ಯವಸ್ಥೆ ಖರೀದಿಯಿಂದ ಅಮೆರಿಕದ ಸುಧಾರಿತ ರಕ್ಷಣಾ ಸಾಧನಗಳು, ಪಾಕಿಸ್ತಾನದಲ್ಲಿನ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಬಳಸಬಹುದಾದ ಕಣ್ಗಾವಲು ಡ್ರೋನ್‌ಗಳನ್ನು ಪಡೆಯುವಿಕೆಯಿಂದಲೂ ಭಾರತ ವಂಚಿತವಾಗಬಹುದು’ ಎಂದು ಥೊರ್ನ್‌ಬೆರ್ರಿ ಎಚ್ಚರಿಸಿದ್ದಾರೆ.

ಟ್ರಂಪ್‌ ಸರ್ಕಾರ ಕಳೆದ ಗುರುವಾರ ಅಂಗೀಕರಿಸಿದ ‘ನ್ಯಾಷನಲ್‌ ಡಿಫೆನ್ಸ್‌ ಅಥರೈಜೆಷನ್‌ ಆ್ಯಕ್ಟ್‌’ನಲ್ಲಿ(ಎನ್‌ಡಿಎಎ) ರಷ್ಯಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶಗಳೊಂದಿಗೆ ವ್ಯವಹರಿಸುವ ಕುರಿತು ವಿಶೇಷ ನಿಯಮಗಳನ್ನು ರೂಪಿಸಲಾಗಿದೆ.

ಎಸ್‌–400 ವ್ಯವಸ್ಥೆ ಅಮೆರಿಕದ ಎಫ್–35 ಮತ್ತು ಎಫ್‌–22 ಅತ್ಯಾಧುನಿಕ ಯುದ್ಧವಿಮಾನಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಏಕಕಾಲದಲ್ಲಿ 32 ಕಡೆ ಗುರಿಯಿಟ್ಟು ಕಾರ್ಯಾಚರಣೆ ನಡೆಸಬಹುದಾದ ಈ ರಕ್ಷಣಾ ವ್ಯವಸ್ಥೆ ಖರೀದಿಯ ಅಂದಾಜು ಮೌಲ್ಯ ₹ 32 ಸಾವಿರ ಕೋಟಿ ಎನ್ನಲಾಗುತ್ತಿದೆ.

ಈ ರಕ್ಷಣಾ ವ್ಯವಸ್ಥೆಯನ್ನು ಪಂಜಾಬಿನ ಮಧ್ಯಭಾಗದಲ್ಲಿ ಅಳವಡಿಸಿ ಪಾಕಿಸ್ತಾನದ ವಾಯುಪಡೆಯಿಂದ ಆಗಬಹುದಾದ ಎಲ್ಲ ಆಕ್ರಮಣಗಳನ್ನು ನಿಗ್ರಹಿಸಬಹುದಾಗಿದೆ. ತನ್ನ ದಕ್ಷಿಣದ ಸಾಗರದಲ್ಲಿ ವಾಯುನೆಲೆಗಳನ್ನು ವಿಸ್ತರಿಸುತ್ತಿರುವ ಚೀನಾದ ಮೇಲೂ ಹದ್ದಿನ ಕಣ್ಣಿಡಬಹುದಾಗಿದೆ ಎಂದು ಹೇಳಲಾಗುತ್ತಿದೆ.

**
ಎಸ್‌–400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ವೈಶಿಷ್ಟ್ಯ:

* ಎಸ್‌–400 ಅಥವಾ ಟ್ರಯಂಫ್: ಇದು ಜಗತ್ತಿನ ಭಾರಿ ಸಾಮರ್ಥ್ಯದ ದೂರಗಾಮಿ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ

* ನುಗ್ಗಿ ಬರುವ ಶತ್ರು ವಿಮಾನಗಳು, ರಹಸ್ಯ ಕಾರ್ಯಾಚರಣೆ ವಿಮಾನಗಳು, ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ

* ಹಲವು ಹಂತದ ರಕ್ಷಣಾ ವ್ಯವಸ್ಥೆ ರೂಪಿಸುತ್ತದೆ

* ವಿಭಿನ್ನ ಸಾಮರ್ಥ್ಯಗಳಿರುವ ಮೂರು ಕ್ಷಿಪಣಿಗಳನ್ನು ಇದು ಹೊಂದಿದೆ

* ಪ್ರತೀ ಎಸ್‌–400 ಘಟಕವು ಬಹುಕ್ರಿಯಾ ರೇಡಾರ್, ಬೆಂಕಿ ನಿಯಂತ್ರಣ ಸೌಲಭ್ಯ, ಸ್ವಯಂಚಾಲಿತ ಪತ್ತೆ ವ್ಯವಸ್ಥೆ, ಗುರಿ ವ್ಯವಸ್ಥೆ, ಉಡಾವಣಾ ವ್ಯವಸ್ಥೆ, ಆದೇಶ ಮತ್ತು ನಿಯಂತ್ರಣಾ ಸೌಲಭ್ಯ ಹಾಗೂ ಕ್ಷಿಪಣಿಗಳನ್ನು ಹೊಂದಿರುತ್ತದೆ.

* ಸೂಪರ್‌ಸಾನಿಕ್ ಮತ್ತು ಹೈಪರ್‌ಸಾನಿಕ್ ವೇಗದಲ್ಲಿ (ಶಬ್ದಾತೀತಿ ವೇಗ) 120ರಿಂದ 400 ಕಿ.ಮೀ. ವ್ಯಾಪ್ತಿಯಲ್ಲಿರುವ ವೈರಿಯನ್ನು ಛಿದ್ರಗೊಳಿಸುತ್ತದೆ.

*  ಇತರ ರಕ್ಷಣಾ ವ್ಯವಸ್ಥೆಗಳ ಜತೆ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆಯಿದೆ

* ರೇಡಾರ್‌ ಲಾಕ್ ಮತ್ತು ಶೂಟ್‌ ಡೌನ್‌ ವ್ಯವಸ್ಥೆಯಿರುವ 5ನೇ ತಲೆಮಾರಿನ  ಆತ್ಯಾಧುನಿಕ ಸೌಲಭ್ಯ

* ಇದು ಅಮೆರಿಕದ ಎಫ್–35 ಯುದ್ಧವಿಮಾನದ ಸಾಮರ್ಥ್ಯಕ್ಕೆ ಸಮ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT