ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಮೋಟ್ ಕಂಟ್ರೋಲ್ ಪಾರ್ಕಿಂಗ್‌

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಬ್ರಿಟನ್ ಸರ್ಕಾರ ವಾಹನಗಳ ರಿಮೋಟ್ ಕಂಟ್ರೋಲ್ ಪಾರ್ಕಿಂಗ್‌ಗಾಗಿ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ. 2021ರ ವೇಳೆಗೆ ಖಾಸಗಿ ಮತ್ತು ವಾಣಿಜ್ಯ ವಾಹನಗಳು ರಿಮೋಟ್ ಕಂಟ್ರೋಲ್ ಪಾರ್ಕಿಂಗ್ ವ್ಯಾಪ್ತಿಗೆ ಬರಲಿವೆ.

ಈ ಉದ್ದೇಶಕ್ಕೆ ವಾಹನ ಚಾಲನಾ ಕಾನೂನನ್ನು ಮತ್ತಷ್ಟು ಸುಧಾರಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಮೊಬೈಲ್ ಆ್ಯಪ್ ಮೂಲಕ ವಾಹನಗಳನ್ನು ಸುಲಭವಾಗಿ ಪಾರ್ಕ್ ಮಾಡಬಹುದು ಹಾಗೇ ಪಾರ್ಕಿಂಗ್ ಸ್ಥಳವನ್ನು ಸುಲಭವಾಗಿ ಗುರುತಿಸಬಹುದು ಎಂದು ಬ್ರಿಟನ್ ಸಾರಿಗೆ ಇಲಾಖೆ ತಿಳಿಸಿದೆ.

ವಾಹನ ತಯಾರಿಸುವ ಕಂಪ‍ನಿಗಳಿಗೆ ರಿಮೋಟ್ ಕಂಟ್ರೋಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಕಾನೂನು ರೂಪಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ನಿಸಾನ್‌, ಲ್ಯಾಂಡ್ ರೋವರ್ ಮತ್ತು ಜಾಗ್ವಾರ್ ಕಂಪನಿಗಳು ರಿಮೋಟ್ ಕಂಟ್ರೋಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಾಯೋಗಿಕವಾಗಿ ಜಾರಿಗೆ ತಂದಿವೆ. ಇದು ಯಶಸ್ವಿಯಾದ ಬಳಿಕ ಕಾನೂನು ರೂಪಿಸಲು ನಿರ್ಧರಿಸಲಾಗಿದೆ. ಸಮಯ ಉಳಿತಾಯ, ಸರಳ ಮತ್ತು ಸುಲಭ ಪಾರ್ಕಿಂಗ್ ವ್ಯವಸ್ಥೆಗೆ ಈ ಕಾನೂನು ಅನುವು ಮಾಡಿಕೊಡಲಿದೆ.

ಫೇಸ್‌ಬುಕ್‌ ಹೊಸ ಸ್ಟೋರಿ ಫಾರ್ಮ್ಯಾಟ್

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಭಾರತದ ಬಳಕೆದಾರರಿಗಾಗಿ ಸ್ಟೋರಿ ಫಾರ್ಮ್ಯಾಟ್ ಎಂಬ ಹೊಸ ಸೌಲಭ್ಯ ಪರಿಚಯಿಸಲು ಮುಂದಾಗಿದೆ.

ಸ್ಟೋರಿ ಫಾರ್ಮ್ಯಾಟ್ ಮಾದರಿಯು ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ತಡೆಯುತ್ತದೆ ಎಂದು ಫೇಸ್‌ಬುಕ್‌ ತಿಳಿಸಿದೆ. ಈ ಸೌಲಭ್ಯದ ಮೂಲಕ ಬಳಕೆದಾರರು ಫೇಸ್‌ಬುಕ್‌ ಕ್ಲೌಡ್‌ಗೆ ಲಾಗಿನ್ ಆಗಿ ಅದರಲ್ಲಿ ವಿಡಿಯೊ, ಚಿತ್ರಗಳು, ಆಡಿಯೊವನ್ನು ಸೇವ್ ಮಾಡಬಹುದು. ಇದರಿಂದ ಮೊಬೈಲ್‌ನಲ್ಲಿ ಫೇಸ್‌ಬುಕ್‌ ಬಳಕೆ ಮಾಡುವವರಿಗೆ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ. ಹಾಗೇ ಮೊಬೈಲ್ ವೇಗವು ಹೆಚ್ಚಾಗಲಿದೆ ಎಂದು ಫೇಸ್‌ಬುಕ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಕಾನರ್ ಹೇಯ್ಸ್ ತಿಳಿಸಿದ್ದಾರೆ.

ಸ್ಟೋರಿ ಫಾರ್ಮ್ಯಾಟ್‌ನ ಮತ್ತೊಂದು ವಿಶೇಷ ಏನೆಂದರೆ ವಾಯ್ಸ್ ಪೋಸ್ಟ್‌ಗಳನ್ನು ಮಾಡಬಹುದಾಗಿದೆ. ಇಲ್ಲಿಯತನಕ ಫೇಸ್‌ಬುಕ್‌, ವಾಯ್ಸ್ ಪೋಸ್ಟ್‌ಗಳ ಸೌಲಭ್ಯ ನೀಡಿರಲಿಲ್ಲ. ಇದರ ಜೊತೆಗೆ ಫೇಸ್‌ಬುಕ್‌ ಖಾತೆಯಲ್ಲೇ ಆರ್ಕೈವ್ ವಿಭಾಗವನ್ನು ಸೃಷ್ಟಿಸಲಾಗಿದೆ. ಬಳಕೆದಾರರು ತಾವು ಪೋಸ್ಟ್ ಮಾಡಿದ ವಿಡಿಯೊ, ಆಡಿಯೊ, ಚಿತ್ರಗಳು, ಸ್ಟೋರಿಗಳನ್ನು ಯಾವಾಗಬೇಕಾದರೂ ವೀಕ್ಷಣೆ ಮಾಡಬಹುದು. ಇದಕ್ಕೆ ಫೇಸ್‌ಬುಕ್‌ ಕ್ಲೌಡ್‌ನಲ್ಲಿ ಖಾತೆ ಹೊಂದಿರುವುದು ಅಗತ್ಯವಾಗಿದೆ.
**
ಸ್ವೋ ಟ್ರಿವಿಯಾ ಷೋ ಆ್ಯಪ್‌
ಮಧ್ಯ ಏಷ್ಯಾದಲ್ಲಿ ಜನಪ್ರಿಯವಾಗಿರುವ ಖ್ಯಾತನಾಮರು ನಡೆಸಿಕೊಡುವ ವಿಡಿಯೊ ಸ್ಟ್ರೀಮಿಂಗ್ ಗೇಮ್ ಆದ ‘ಸ್ವೋ ಟ್ರಿವಿಯಾ ಷೋ’ದ   (Swoo Trivia) ನೇರ ಪ್ರಸಾರವನ್ನು ಭಾರತದ ಬಳಕೆದಾರರಿಗಾಗಿ ಆರಂಭಿಸಿದೆ.

ಸ್ವೋ ಒಂದು ಬಳಕೆದಾರರ ಸ್ನೇಹಿ ಆ್ಯಪ್ ಆಗಿದ್ದು, ಆಂಡ್ರಾಯ್ಡ್/ಐಒಎಸ್/ಮತ್ತು ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ನೇರ ಪ್ರಸಾರದ ಗುಣಮಟ್ಟ ಹೊಂದಿದೆ. ಇದಲ್ಲದೇ, ಜಗತ್ತಿನಾದ್ಯಂತ ನಡೆಯುವ ವಿಶೇಷ ವಿದ್ಯಮಾನಗಳನ್ನು ಇಲ್ಲಿ ವೀಕ್ಷಿಸಬಹುದು. ಜನರು ತಮ್ಮ ಪ್ರತಿಭೆಯನ್ನು  ಲೈವ್ ವಿಡಿಯೊ ಕಳಿಸಿ ಪ್ರದರ್ಶನ ಮಾಡಲು ವೇದಿಕೆ ನು ಒದಗಿಸಿಕೊಡುತ್ತಿದೆ.

ಒಂದು ವರ್ಷದ ಹಿಂದೆ ಆರಂಭವಾದ ಸ್ವೋ ಅತ್ಯಂತ ಕಡಿಮೆ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ 60 ಲಕ್ಷ ಬಳಕೆದಾರರನ್ನು ಹೊಂದಿದೆ. ಈ ಪೈಕಿ ಭಾರತದ ಗ್ರಾಹಕರ ಸಂಖ್ಯೆ ಶೇ 30 ರಷ್ಟಿದೆ. ಈ ಆ್ಯಪ್‌ ಕ್ರಮೇಣ ಬಳಕೆದಾರರಲ್ಲಿ ಜನಪ್ರಿಯಗೊಳ್ಳುತ್ತಿದ್ದು, ಇದೇ ಜನಪ್ರಿಯತೆಯ ಹಿನ್ನೆಲೆಯಲ್ಲಿ ಸ್ವೋ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಳಕೆದಾರರು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಸಂಸ್ಥೆ ಹೇಳಿದೆ.

ಸ್ವೋ ಟ್ರಿವಿಯಾ ಷೋ ಭಾರತದ ಅತ್ಯಂತ ಜನಪ್ರಿಯ ಮತ್ತು ಅತಿದೊಡ್ಡ ಆನ್‍ಲೈನ್ ಗೇಮ್‍ಶೋ ಆಗಲಿದೆ. ಅಂಗೈನಲ್ಲೇ ಸೆಲೆಬ್ರಿಟಿ ಷೋ ನಡೆಯಲಿದೆ. ಈ ಸೆಲೆಬ್ರಿಟಿ ಷೋನಲ್ಲಿ 10 ಬಹುವಿಧದ ಪ್ರಶ್ನೆಗಳಿರಲಿದ್ದು, ಇವುಗಳಿಗೆ 3 ಆಯ್ಕೆಗಳು ಇರುತ್ತವೆ. ಈ ಮೂಲಕ ಇದರಲ್ಲಿ ಪಾಲ್ಗೊಳ್ಳಲಿರುವ ಸ್ಪರ್ಧಿಗಳ ಬುದ್ಧಿಮಟ್ಟ ಅಳೆಯಲಾಗುತ್ತದೆ.

ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು 10 ಸೆಕೆಂಡ್‍ಗಳ ಕಾಲಾವಕಾಶ ನೀಡಲಾಗುತ್ತದೆ. ಸಾವಿರಾರು ರೂಪಾಯಿಗಳ ಬಹುಮಾನ ಇರಲಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸರಿಯಾದ ಉತ್ತರ ಹೇಳಿದ  ಸ್ಪರ್ಧಿಗಳಿಗೆ  ಬಹುಮಾನ ನೀಡಲಾಗುತ್ತದೆ.

ಈ ಮೊತ್ತವನ್ನು ಪೇಟಿಎಂ ಸೇರಿದಂತೆ ವಿವಿಧ ಮೊಬೈಲ್‌ ವ್ಯಾಲೆಟ್‍ಗಳ ಮೂಲಕ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳಬಹುದು.

‘ಭಾರತವು ವಿಶ್ವದ ಅತಿದೊಡ್ಡ ಸ್ಮಾರ್ಟ್‍ಫೋನ್ ಬಳಕೆದಾರರ ದೇಶವಾಗಲಿದೆ. ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ವಿವಿಧ ವೇದಿಕೆಗಳ ಹುಡುಕಾಟದಲ್ಲಿ ಇರುವ ಯುವ ಜನರ ಪಾಲಿಗೆ ಈ ಆ್ಯಪ್‌ ನೆರವಿಗೆ ಬರಲಿದೆ’ ಎಂದು ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿವ್ಯೇಶ್ ಮಹಾಜನ್ ಹೇಳಿದ್ದಾರೆ.

ಈ ಆ್ಯಪ್ ಮೂಲಕ ಗ್ರಾಹಕರು ಹಲವಾರು ಬಗೆಯ  ಕಾರ್ಯಕ್ರಮಗಳು, ಚಾಕ್‍ಟಾಕ್, ರಿವ್ಯೂ, ಸಾಧನೆಗಳು, ಧಾರಾವಾಹಿಗಳು, ಹಾಡುಗಳು, ಉಪನ್ಯಾಸಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಆ್ಯಪಲ್ (ಐಸ್ಟೋರ್) ಮತ್ತು ಆಂಡ್ರಾಯ್ಡ್ (ಗೂಗಲ್ ಪ್ಲೇಸ್ಟೋರ್ನಲ್ಲಿ ) ಸ್ವೋ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT