ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಪ್ರವೇಶ: ಕೃಷಿಕರಲ್ಲಿ ಹರ್ಷ

Last Updated 30 ಮೇ 2018, 12:24 IST
ಅಕ್ಷರ ಗಾತ್ರ

ನಾಪೋಕ್ಲು: ಮಂಗಳವಾರ ಬೆಳಿಗ್ಗೆಯಿಂದಲೇ ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿಯಲಾರಂಭಿಸಿದ್ದು, ಮುಂಗಾರು ಮಳೆಯ ಲಕ್ಷಣ ಗೋಚರಿಸಿತು. ಪಟ್ಟಣ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ನಿರಂತರ ಮಳೆಸುರಿಯಿತು.

ಸಮೀಪದ ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪುಲಿಕೋಟು, ಕಕ್ಕಬ್ಬೆ, ನಾಲಡಿ ಗ್ರಾಮ ವ್ಯಾಪ್ತಿಗಳಲ್ಲಿ ಉತ್ತಮ ಮಳೆಯಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ನಡುನಡುವೆ ರಭಸದ ಮಳೆಯಾಗಿದ್ದು ದಿನವಿಡೀ ನಿರಂತರ ಮಳೆ ಸುರಿಯಿತು. ತಲಕಾವೇರಿ ಭಾಗಮಂಡಲ ವ್ಯಾಪ್ತಿಗಳಲ್ಲೂ ಬಿರುಸಿನ ಮಳೆಯಾಗಿದ್ದು ನಿರಂತರ ಸುರಿದ ಮಳೆಯ ಪರಿಣಾಮ ಕಾವೇರಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ.

ಕಳೆದ ಒಂದು ವಾರದಿಂದ ನಾಪೋಕ್ಲು ಹಾಗೂ ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿದಿನ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿಯಿತು. ಮುಂಗಾರು ಪ್ರವೇಶದಿಂದಾಗಿ ರೈತರಲ್ಲಿ ಸಂತಸ ಮೂಡಿದ್ದು ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಹಲವೆಡೆ ಕಾಫಿ ತೋಟದ ಕೆಲಸ ಕಾರ್ಯಗಳು ಚುರುಕಿನಿಂದ ಸಾಗಿದ್ದು, ರೈತರು ತೋಟಕ್ಕೆ ರಾಸಾಯನಿಕ ಗೊಬ್ಬರ ಒದಗಿಸುವಲ್ಲಿ ತೊಡಗಿಸಿಕೊಂಡಿದ್ದರು. ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗುತ್ತಿತ್ತು. ಈ ವರ್ಷ ಏಳೆಂಟು ದಿನಗಳಿಂದ ನಿತ್ಯ ಮಳೆಯಾಗುತ್ತಿದ್ದು, ಮಳೆಗಾಲಕ್ಕೆ ಪೂರ್ಣ ಸಿದ್ಧತೆ ಆಗದಿರುವ ಬಗ್ಗೆ ಹಲವು ರೈತರು ಆತಂಕ ತೋಡಿಕೊಂಡರು.

ಹೋಬಳಿ ವ್ಯಾಪ್ತಿಯ ಹಲವು ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಮಂಗಳವಾರ ನಡೆಯಿತು. ಶಾಲೆಗಳಿಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಮಧ್ಯಾಹ್ನದ ಬಿಸಿಯೂಟದೊಂದಿಗೆ ವಿದ್ಯಾರ್ಥಿಗಳಿಗೆ ಪಾಯಸ ವಿತರಿಸಲಾಯಿತು. ರಂಜಾನ್‌ ಮಾಸದ ಹಿನ್ನೆಲೆಯಲ್ಲಿ ವಿವಿಧ ಶಾಲೆಗಳಲ್ಲಿ ಮಕ್ಕಳು ಕಡಿಮೆ ಪ್ರಮಾಣದಲ್ಲಿ ಹಾಜರಾಗಿದ್ದಾರೆ ಎಂದು ಸರ್ಕಾರಿ ಶಾಲೆಗಳ ಶಿಕ್ಷಕರು ಅಭಿಪ್ರಾಯಪಟ್ಟರು. ನಿರಂತರ ಮಳೆಯಿಂದಾಗಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT